'ಕೋವಿಡ್‌ ನಡುವೆ ಮದ್ಯದಿಂದ ಭಾರೀ ಆದಾಯ'

By Kannadaprabha NewsFirst Published Mar 31, 2021, 10:04 AM IST
Highlights

ಕೋವಿಡ್‌ ಸಂಕಟದ ನಡುವೆಯೂ ಅಬಕಾರಿ ಇಲಾಖೆ ಹೆಚ್ಚಿನ ಆದಾಯ ಪಡೆದಿದೆ ಎಂದು ಸಚಿವ ಗೋಪಾಲಯ್ಯ ಹೇಳಿದ್ದಾರೆ. ಗುರಿ ಮೀರಿ ತೆರಿಗೆ ಸಂಗ್ರಹ ಮಾಡಿದೆ. 

 ಬೆಂಗಳೂರು (ಮಾ.31):  ಕೋವಿಡ್‌ ಸಂಕಟದ ನಡುವೆಯೂ ಅಬಕಾರಿ ಇಲಾಖೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಗುರಿ ಮೀರಿ ತೆರಿಗೆ ಸಂಗ್ರಹಿಸಿದ್ದು, ಮಾರ್ಚ್ ಮಾಸಾಂತ್ಯದ ವೇಳೆಗೆ ಹೆಚ್ಚುವರಿಯಾಗಿ 200-300 ಕೋಟಿ ರು. ತೆರಿಗೆ ಸಂಗ್ರಹಿಸುವ ನಿರೀಕ್ಷೆಯಿದೆ ಎಂದು ಅಬಕಾರಿ ಸಚಿವ ಕೆ. ಗೋಪಾಲಯ್ಯ ಹೇಳಿದ್ದಾರೆ.

ಮಾರ್ಚ್ 31ಕ್ಕೆ ಕೊನೆಗೊಳ್ಳಲಿರುವ ಆರ್ಥಿಕ ವರ್ಷಕ್ಕೆ 22,700 ಕೋಟಿ ರು. ಅಬಕಾರಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿತ್ತು. ಕಳೆದ ಐದು ದಿನದ ಹಿಂದೆಯೇ ಈ ಗುರಿ ಮುಟ್ಟಲಾಗಿದೆ. 31ರೊಳಗೆ ಇನ್ನೂ 200-300 ಆದಾಯ ಸಂಗ್ರಹಿಸುವ ನಿರೀಕ್ಷೆ ಇದೆ ಎಂದರು.

ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕು..! ...

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅಬಕಾರಿ ಇಲಾಖೆಗೆ ಇನ್ನಷ್ಟುಸುಸಜ್ಜಿತ ಸೌಲಭ್ಯ ನೀಡಲು ಮುಂದಿನ ತಿಂಗಳು ಹೊಸದಾಗಿ 77 ಜೀಪ್‌ಗಳನ್ನು ಖರೀದಿಸಲು ಉದ್ದೇಶಿಸಲಾಗಿದೆ. ಇನ್ಸ್‌ಪೆಕ್ಟರ್‌ ಹಾಗೂ ಸರ್ಕಲ್‌ ಇನ್‌ಸ್ಪೆಕ್ಟರ್‌ಗಳಿಗೆ ನೀಡಲು 300 ಬೈಕ್‌ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಪ್ರತಿ ಡಿ.ಸಿ. ಕಚೇರಿಗೆ ನಾಲ್ಕು ರಿವಾಲ್ವರ್‌ ನೀಡಲು ತೀರ್ಮಾನಿಸಲಾಗಿದೆ ಎಂದರು.

ನಗರ ಹಾಗೂ ಗ್ರಾಮೀಣ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಗಾಂಜಾ ಬೆಳೆಯುತ್ತಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಪೊಲೀಸರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಅದೇ ರೀತಿ ಗಾಂಜಾ, ಅಫೀಮು ಮುಂತಾದ ಮಾದಕ ವಸ್ತುಗಳ ಮಾರಾಟ ತಡೆಯಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಪೊಲೀಸರ ಜೊತೆ ಅಬಕಾರಿ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಹೇಳಿದರು.

ಜಾರಕಿಹೊಳಿ ಜತೆ ಇದ್ದೇವೆ :  ಸಿ.ಡಿ. ಪ್ರಕರಣದ ಸಂಬಂಧ ಪ್ರತಿಕ್ರಿಯೆ ನೀಡಲು ಈ ಸಂದರ್ಭದಲ್ಲಿ ನಿರಾಕರಿಸಿದ ಸಚಿವ ಗೋಪಾಲಯ್ಯ ಅವರು, ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಜಾರಕಿಹೊಳಿ ಪರ ನಿಲ್ಲುತ್ತೇವೆ. ರಾಜಕೀಯದಲ್ಲಿ ನಾನಿನ್ನೂ ಚಿಕ್ಕವನು. ಈ ಬಗ್ಗೆ ಬಹಿರಂಗ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.

click me!