8, 9ನೇ ತರಗತಿಗೂ 10ನೇ ಕ್ಲಾಸ್‌ ರೀತಿಯೇ ಪರೀಕ್ಷೆ

By Kannadaprabha NewsFirst Published Feb 8, 2020, 8:34 AM IST
Highlights

2019-20ನೇ ಸಾಲಿನಲ್ಲಿ 8 ಮತ್ತು 9ನೇ ತರಗತಿಗಳಿಗೂ 10ನೇ ತರಗತಿ ಮಾದರಿಯಲ್ಲಿ ಪರೀಕ್ಷೆ ನಡೆಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಆದರೆ ಕೆಲವೆಡೆ ಗೊಂದಲ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸ್ಪಷ್ಟನೆ ನೀಡಲಾಗುತ್ತಿದೆ.

ಬೆಂಗಳೂರು [ಫೆ.08]:  ಎಂಟನೇ ತರಗತಿಗೆ ಸಂಕಲನಾತ್ಮಕ ಮೌಲ್ಯಮಾಪನ-2 ಅಂದರೆ, ಎರಡನೇ ಸೆಮಿಸ್ಟರ್‌ಗೆ ನಿಗದಿಗೊಳಿಸಿದ ಪಠ್ಯ ಭಾಗ ಹಾಗೂ 9ನೇ ತರಗತಿಗೆ ಪ್ರಥಮ ಭಾಷೆಯನ್ನು 100 ಅಂಕಗಳಿಗೆ ಮತ್ತು ದ್ವಿತೀಯ, ತೃತೀಯ ಮತ್ತು ಕೋರ್‌ ವಿಷಯಗಳಿಗೆ 80 ಅಂಕಗಳಿಗೆ ಪರೀಕ್ಷೆ ನಡೆಸುವಂತೆ ಪ್ರೌಢಶಿಕ್ಷಣ ನಿರ್ದೇಶರು ನಿರ್ದೇಶನ ನೀಡಿದ್ದಾರೆ.

2019-20ನೇ ಸಾಲಿನಲ್ಲಿ 8 ಮತ್ತು 9ನೇ ತರಗತಿಗಳಿಗೂ 10ನೇ ತರಗತಿ ಮಾದರಿಯಲ್ಲಿ ಪರೀಕ್ಷೆ ನಡೆಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಆದರೆ ಕೆಲವೆಡೆ ಗೊಂದಲ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸ್ಪಷ್ಟನೆ ನೀಡಲಾಗುತ್ತಿದೆ.

8ನೇ ತರಗತಿ ಪರೀಕ್ಷೆ:  ಪ್ರಸ್ತುತ 8ನೇ ತರಗತಿಗೆ ಸೆಮಿಸ್ಟರ್‌ ಪದ್ಧತಿಯಲ್ಲಿ ಪರೀಕ್ಷೆ ನಡೆಸಿ ಮೌಲ್ಯಮಾಪನ ಮಾಡಲಾಗುತ್ತಿದೆ. ಸಂಕಲನಾತ್ಮಕ ಮೌಲ್ಯಮಾಪನ-1 ಮತ್ತು 2 ಪದ್ಧತಿಯಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಆದರೆ, ಈಗ ಮಧ್ಯಂತರ ರಜೆಯ ನಂತರದಲ್ಲಿ ಸಂಕಲನಾತ್ಮಕ ಮೌಲ್ಯಮಾಪನ-2(ಎಸ್‌ಎ-2) ಅಂದರೆ ಎರಡನೇ ಸೆಮಿಸ್ಟರ್‌ಗೆ ನಿಗದಿಗೊಳಿಸಿದ ಪಠ್ಯ ಭಾಗಕ್ಕೆ ಮಾತ್ರ 10ನೇ ತರಗತಿ ಪ್ರಶ್ನೆಪತ್ರಿಕೆ ವಿನ್ಯಾಸ ಅಳವಡಿಸಿಕೊಂಡು 40 ಅಂಕಗಳಿಗೆ ಲಿಖಿತ ಪರೀಕ್ಷೆ ಹಾಗೂ 10 ಅಂಕಗಳಿಗೆ ಮೌಖಿಕ ಪರೀಕ್ಷೆ ನಡೆಸಬೇಕು. ನಂತರ 50 ಅಂಕದ ಪರೀಕ್ಷೆಯನ್ನು 30 ಅಂಕಗಳಿಗೆ ಪರಿವರ್ತಿಸಿಕೊಂಡು ವಿದ್ಯಾರ್ಥಿಗಳಿಗೆ ಗ್ರೇಡ್‌ ನೀಡಬೇಕು.

ಹಿರಿಯೂರು ತರಕಾರಿ ವ್ಯಾಪಾರಿ ಮಗಳಿಗೆ ಚಿನ್ನದ ಪದಕ, ಸಾಧನೆಗೆ ಸಲಾಂ!

ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 8ನೇ ತರಗತಿ ಶಿಕ್ಷಕರಿಗೆ ಬದಲಾವಣೆಯಾಗಿರುವ ಪ್ರಶ್ನೆಪತ್ರಿಕೆ ಸ್ವರೂಪ ಕುರಿತು ಹೆಚ್ಚಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಆಯಾ ಡಯಟ್‌ ಉಪ ನಿರ್ದೇಶಕರು ಜಿಲ್ಲಾ ಮಟ್ಟದಲ್ಲಿ ಪುನಶ್ಚೇತನ ತರಬೇತಿ ಕಾರ್ಯಾಗಾರ ಏರ್ಪಡಿಸುವಂತೆ ಸೂಚನೆ ನೀಡಲಾಗಿದೆ.

9ನೇ ತರಗತಿ ಹೇಗೆ?:  9ನೇ ತರಗತಿ ವಿದ್ಯಾರ್ಥಿಗಳಿಗೆ 10ನೇ ತರಗತಿ ಪ್ರಶ್ನೆಪತ್ರಿಕೆ ಮಾದರಿಯಲ್ಲಿ ಪ್ರಥಮ ಭಾಷೆಯನ್ನು 100 ಅಂಕಗಳಿಗೆ, ದ್ವಿತೀಯ, ತೃತೀಯ ಭಾಷೆಗಳು ಹಾಗೂ ಉಳಿದ ಕೋರಿ ವಿಷಯಗಳಿಗೆ 80 ಅಂಕಗಳಿಗೆ ಪರೀಕ್ಷೆ ನಡೆಸಬೇಕು. ನಂತರ ಅದನ್ನು 60 ಅಂಕಗಳಿಗೆ ಪರಿವರ್ತಿಸಿಕೊಂಡು ಗ್ರೇಡ್‌ ನೀಡಬೇಕು ಎಂದು ತಿಳಿಸಿದ್ದಾರೆ. ಮುಂದಿನ ಶೈಕ್ಷಣಿಕ ಸಾಲಿನಿಂದ (2020-21ನೇ) 8,9 ಮತ್ತು 10ನೇ ತರಗತಿಗಳಿಗೆ ಏಕರೂಪದ ಪ್ರಶ್ನೆಪತ್ರಿಕೆ ಮತ್ತು ಮೌಲ್ಯಮಾಪನ ಪದ್ಧತಿ ಜಾರಿಗೆ ತರುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಲಾಗುತ್ತದೆ ಎಂದು ಪ್ರೌಢಶಿಕ್ಷಣ ನಿರ್ದೇಶಕರು ಸ್ಪಷ್ಟತೆ ನೀಡಿದ್ದಾರೆ.

click me!