ರಾಜ್ಯದ ಜೈಲು ಕಾಯಲು ಮಾಜಿ ಸೈನಿಕರ ನೇಮಕ; 550 ಮಾಜಿ ಯೋಧರ ನೇಮಕಕ್ಕೆ ಸರ್ಕಾರ ಓಕೆ, ಜೈಲಿನಲ್ಲಿ ರಾಜಾತಿಥ್ಯ ವಿವಾದ ಬೆನ್ನಲ್ಲೇ ಮಹತತ್ವದ ನಿರ್ಧಾರ!

Kannadaprabha News   | Kannada Prabha
Published : Apr 14, 2026, 04:29 AM IST
Ex Servicemen Guard Karnataka Prisons Govt Approves 550 Veterans Following

ಸಾರಾಂಶ

ರಾಜ್ಯದ ಕಾರಾಗೃಹಗಳಲ್ಲಿನ ಅಕ್ರಮ ಚಟುವಟಿಕೆಗಳನ್ನು ತಡೆಯಲು, ಬಂದೀಖಾನೆ ಇಲಾಖೆಯು 550 ಮಾಜಿ ಯೋಧರನ್ನು ಗುತ್ತಿಗೆ ಆಧಾರದ ಮೇಲೆ ಭದ್ರತೆಗೆ ನೇಮಿಸಿಕೊಳ್ಳಲು ನಿರ್ಧರಿಸಿದೆ. ಈ ಪ್ರಸ್ತಾಪಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಮಾಸಿಕ 1.87 ಕೋಟಿ ರೂ. ವೆಚ್ಚಕ್ಕೆ ಸಮ್ಮತಿಸಿದೆ. 

ಗಿರೀಶ್ ಮಾದೇನಹಳ್ಳಿ

 ಬೆಂಗಳೂರು (ಏ.14) ಅಕ್ರಮ ಚಟುವಟಿಕೆಯಿಂದ ಟೀಕೆಗೆ ಗುರಿಯಾಗುವ ನಾಡಿನ ಸೆರೆಮನೆಗಳ ಕಾವಲಿಗೆ ಮಾಜಿ ಯೋಧರನ್ನು ನೇಮಿಸಿಕೊಳ್ಳಲು ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಮಾಜಿ ಸೈನಿಕರ ನೇಮಿಸುವ ಸಂಬಂಧ ಬಂದೀಖಾನೆ ಇಲಾಖೆ ಸಲ್ಲಿಸಿದ್ದ ಪ್ರಸ್ತಾಪಕ್ಕೆ ರಾಜ್ಯ ಸರ್ಕಾರವು ಹಸಿರು ನಿಶಾನೆ ತೋರಿಸಿದೆ. ಈ ಬೆನ್ನಲ್ಲೇ ಈ ನೇಮಕಾತಿ ಪ್ರಕ್ರಿಯೆ ಕೈಗೆತ್ತಿಕೊಳ್ಳುವ ವಿಚಾರವಾಗಿ ರಾಜ್ಯ ಮಾಜಿ ಸೈನಿಕರ ಕಲ್ಯಾಣ ಸಮಾಜದ ನಿರ್ದೇಶಕರಿಗೆ ಬಂದೀಖಾನೆ ಇಲಾಖೆಯ ಮುಖ್ಯಸ್ಥ ಹಾಗೂ ಡಿಜಿಪಿ ಅಲೋಕ್ ಕುಮಾರ್ ಪತ್ರ ಬರೆದಿದ್ದಾರೆ. ಈ ನೇಮಕಾತಿ ಸಲುವಾಗಿ ವಿಶೇಷ ವಿನಾಯತಿ ಹಾಗೂ ಮಾಸಿಕ 1.87 ಕೋಟಿ ರು. ವೆಚ್ಚಕ್ಕೆ ಸಹ ಸರ್ಕಾರ ಸಮ್ಮತಿಸಿದೆ. ಇದೇ ಮೊದಲ ಬಾರಿಗೆ ಕಾರಾಗೃಹ ಹಾಗೂ ಪೊಲೀಸರ ಹೊರತಾಗಿ ಮಾಜಿ ಸೈನಿಕರು ಜೈಲುಗಳ ಭದ್ರತೆಗೆ ನೇಮಕವಾಗಲಿದ್ದಾರೆ.

ಕೈದಿಗಳಿಗೆ ಡ್ರಗ್ಸ್, ಮೊಬೈಲ್‌ ಹಾಗೂ ಮದ್ಯ ಪೂರೈಕೆ ಸೇರಿದಂತೆ ಕಾರಾಗೃಹಗಳಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪಗಳು ಪದೇ ಪದೇ ಕೇಳಿ ಬರುತ್ತಿವೆ. ಇದಕ್ಕೆ ಪೂರಕವಾಗಿ ವಿಡಿಯೋಗಳು ಹಾಗೂ ಫೋಟೋಗಳು ಸದ್ದು ಮಾಡುತ್ತವೆ. ಜೈಲುಗಳ ಭದ್ರತಾ ವ್ಯವಸ್ಥೆ ಲೋಪವೇ ಅಕ್ರಮ ಚಟುವಟಿಕೆಗಳಿಗೆ ಮೂಲ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕಾವಲು ಬಿಗಿಗೊಳಿಸಲು ಮುಂದಾಗಿರುವ ಡಿಜಿಪಿ ಅಲೋಕ್ ಕುಮಾರ್ ಅವರು, ಈಗ ಕಾರಾಗೃಹಗಳ ಭದ್ರತೆಗೆ 550 ಮಾಜಿ ಸೈನಿಕರನ್ನು ಗುತ್ತಿಗೆ ಆಧಾರದಡಿ ನೇಮಕಕ್ಕೆ ನಿರ್ಧರಿಸಿದ್ದಾರೆ. ದೇಶದ ಗಡಿ ಕಾದು ಮರಳಿರುವ ಮಾಜಿ ಯೋಧರು, ಕೆಲವೇ ದಿನಗಳಲ್ಲಿ ಕರುನಾಡಿನ ಸೆರೆಮನೆಗಳ ಕಾವಲಿಗೆ ನಿಲ್ಲಲಿದ್ದಾರೆ. ಈ ಸಂಬಂಧ ಪ್ರತಿ ತಿಂಗಳು 1.87 ಕೋಟಿ ರು. ವೆಚ್ಚಕ್ಕೆ ಸರ್ಕಾರ ಸಹ ಅನುಮೋದನೆ ನೀಡಿದೆ ಎಂದು ತಿಳಿದು ಬಂದಿದೆ.

ಪ್ರಸುತ್ತ ಜೈಲಿನ ಭದ್ರತೆಗೆ ಕಾರಾಗೃಹ ಇಲಾಖೆ ಜತೆ ರಾಜ್ಯ ಕೈಗಾರಿಕಾ ಭದ್ರತಾ ಪಡೆ (ಕೆಎಸ್‌ಐಎಸ್‌ಎಫ್‌)ಯ ಸಿಬ್ಬಂದಿ ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಮಾಜಿ ಸೈನಿಕರು ಸಹ ಜೈಲುಗಳ ರಕ್ಷಣೆಯಲ್ಲಿ ಹೆಗಲು ಕೊಡಲಿದ್ದಾರೆ.

ತಾತ್ಕಾಲಿಕ ವ್ಯವಸ್ಥೆಯೇ?:

ಕಳೆದ ವರ್ಷ ನವೆಂಬರ್‌ನಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೈದಿಗಳಿಗೆ ವಿಶೇಷ ಆತಿಥ್ಯದ ವಿಡಿಯೋಗಳು ವೈರಲ್ ಆಗಿ ರಾಜ್ಯ ಸರ್ಕಾರ ವಿರುದ್ಧ ಸಾರ್ವಜನಿಕ ವಲಯದಲ್ಲಿ ಕಟುಟೀಕೆಗಳು ವ್ಯಕ್ತವಾಗಿದ್ದವು. ಈ ವಿವಾದ ಬಳಿಕ ಕಾರಾಗೃಹ ಭದ್ರತೆ ಬಿಗಿಗೊಳಿಸಲು ಹೊಸದಾಗಿ 300 ಜೈಲರ್ ಹಾಗೂ ವೀಕ್ಷಕರನ್ನು ನೇಮಿಸಲಾಗುತ್ತದೆ ಸರ್ಕಾರ ಘೋಷಿಸಿತ್ತು. ಆದರೆ ಈ ನೇಮಕಾತಿ ಸಂಬಂಧ ಇದುವರೆಗೆ ಅಧಿಕೃತವಾಗಿ ಪ್ರಕ್ರಿಯೆ ಆರಂಭವಾಗಿಲ್ಲ. ಹೀಗಾಗಿ ಈಗ ಮಾಜಿ ಸೈನಿಕರ ಗುತ್ತಿಗೆ ಆಧಾರದ ಮೇರೆಗೆ ನೇಮಕಕ್ಕೆ ಇಲಾಖೆ ಮುಂದಾಗಿದೆ. ಇದಕ್ಕೆ ನಿಯಮದಲ್ಲಿ ವಿನಾಯಿತಿ ಕೊಟ್ಟಿದೆ.

ಕಾರಾಗೃಹ ಇಲಾಖೆಯಲ್ಲಿ ಖಾಲಿಯಿರುವ ವೀಕ್ಷಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ತಾತ್ಕಾಲಿಕವಾಗಿ 550 ಮಾಜಿ ಸೈನಿಕರನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯದನ್ವಯ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಸರ್ಕಾರ ಅನುಮಿತಿಸಿದೆ. ಅಲ್ಲದೆ ಮಾಜಿ ಸೈನಿಕರ ಸೇವೆಯನ್ನು ಕರ್ನಾಟಕ ಮಾಜಿ ಸೈನಿಕರ ಕಲ್ಯಾಣ ಸಮಾಜದಿಂದ ನೇರವಾಗಿ ಪಡೆಯಲು ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯದನ್ವಯ-1999ರ ಕಲಂ 4(ಜಿ)ರಡಿ ವಿನಾಯತಿಯನ್ನು ಬಂದೀಖಾನೆ ಇಲಾಖೆಗೆ ಸರ್ಕಾರ ನೀಡಿದೆ.

ಗುತ್ತಿಗೆ ಷರತ್ತುಗಳೇನು?

ವಯಮೋತಿ-45 ವರ್ಷಗಳಿಗಿಂತ ಕಡಿಮೆ ಇರಬೇಕು.

ದೈಹಿಕ ಸಾಮರ್ಥ್ಯ- 3 ಕಿ.ಮೀ ಅಂತರವನ್ನು 20 ನಿಮಿಷದೊಳಗೆ ಪೂರ್ಣಗೊಳಿಸಬೇಕು.

ದೇಹದಾರ್ಢ್ಯತೆB ಶೇಪ್‌ ಒನ್‌ ದೇಹದಾರ್ಢ್ಯತೆ ಹೊಂದಿರಬೇಕು

ವೈಯಕ್ತಿಕ ಹಿನ್ನಲೆ ಯಾವುದೇ ನ್ಯಾಯಿಕ (ಕ್ರಿಮಿನಲ್‌) ಪ್ರಕರಣಗಳು ಇರಬಾರದು.

ಯಾವ್ಯಾವ ಜೈಲಿಗೆ?

ಪರಪ್ಪನ ಅಗ್ರಹಾರ ಬೆಂಗಳೂರು-250, ಬೆಳಗಾವಿ ಹಿಂಡಲಗಾ-30, ಬಳ್ಳಾರಿ-35, ಧಾರವಾಡ-10, ಕಲಬುರಗಿ-55, ಮೈಸೂರು-45, ಶಿವಮೊಗ್ಗ-30, ಬೀದರ-15, ಮಂಗಳೂರು-20, ಮಂಡ್ಯ, ರಾಮನಗರ, ತುಮಕೂರು, ಉಡುಪಿ, ಹಾಸನ ಹಾಗೂ ಮಡಿಕೇರಿ ತಲಾ 10 ಸೇರಿದಂತೆ ಒಟ್ಟು 550 ಹುದ್ದೆಗಳು ಮಂಜೂರಾಗಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿದ್ಯಾರ್ಥಿಗಳ ಕನಸಿಗೆ ಫೀಸು ಕಂಟಕ, ಕರ್ನಾಟಕದ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಶೇ.7.5ರಷ್ಟು ಹೆಚ್ಚಳ!
ಹೆಗಡೆ ಪುತ್ರನ ಪಾಸ್‌ಪೋರ್ಟ್‌: ಬಡ ಮಕ್ಕಳ ಬಗ್ಗೆ ಕನಿಕರ ತೋರಿಸಿದ್ದಾರಾ? ಪ್ರಿಯಾಂಕ್ ಖರ್ಗೆ