
ಬೆಂಗಳೂರು (ಮೇ.17) : ‘ಪಕ್ಷದ ಸೋಲಿಗೆ ಸಾಮಾನ್ಯ ಕಾರ್ಯಕರ್ತನಿಂದ ಹಿಡಿದು ರಾಷ್ಟ್ರೀಯ ನಾಯಕರವರೆಗೆ ಎಲ್ಲರೂ ಜವಾಬ್ದಾರರೇ. ವಿಪರ್ಯಾಸ ಏನೆಂದರೆ ಸೋಲಿನ ವಿಷವನ್ನು ಕೇವಲ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರಿಗೆ ಮಾತ್ರ ನೀಡುತ್ತಿರುವುದು ಸರಿಯಲ್ಲ’ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿಯೂ ಆಗಿರುವ ವಿಧಾನಪರಿಷತ್ ಸದಸ್ಯ ತುಳಸಿ ಮುನಿರಾಜುಗೌಡ ತೀಕ್ಷ$್ಣವಾಗಿ ಹೇಳಿದ್ದಾರೆ.
ಸಾಮಾನ್ಯವಾಗಿ ಚುನಾವಣೆಯಲ್ಲಿ ಗೆದ್ದಾಗ ಆ ಗೆಲುವಿನ ಕಾರಣಕರ್ತರು ಎಂದು ಅನೇಕರಿಗೆ ಅಭಿನಂದನೆಗಳು ಮತ್ತು ಸನ್ಮಾನಗಳು ನಡೆಯುತ್ತದೆ. ಆದರೆ ಸೋಲು ಅನಾಥ. ಅದನ್ನು ಸ್ವೀಕರಿಸಲು ಯಾರೂ ಇರುವುದಿಲ್ಲ. ಗೆಲುವಿನ ಸನ್ಮಾನ ಸ್ವೀಕರಿಸುವವರು ಸಹ ಸೋಲಿನ ಹೊಣೆ ಹೊರುವುದಿಲ್ಲ ಎಂದೂ ಅವರು ಮಾರ್ಮಿಕವಾಗಿ ತಿಳಿಸಿದ್ದಾರೆ.
ಬಿಎಸ್‌ವೈ ಅಧಿಕಾರ ಬಿಡಲು ಬಿಎಲ್ ಸಂತೋಷ್ ಕಾರಣ: ಜಗದೀಶ ಶೆಟ್ಟರ್
ಈ ಸಂಬಂಧ ಮುನಿರಾಜುಗೌಡ ಅವರು ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ‘ಇಡೀ ಚುನಾವಣೆಯಲ್ಲಿ ಅತೀ ಹೆಚ್ಚು ಕೆಲಸ ಮಾಡಿದ ಮತ್ತು ಬಹುಮತದ ಸರ್ಕಾರ ರಚಿಸಲೇಬೇಕು ಎಂದು ಹಗಲು ರಾತ್ರಿಯೆನ್ನದೆ ಕಾರ್ಯ ನಿರ್ವಹಿಸಿದ ವ್ಯಕ್ತಿಯೇ ಚುನಾವಣಾ ಸೋಲು ಎಂಬ ಅನಾಥ ಮಗುವನ್ನು ಸಹ ಸ್ವೀಕರಿಸಿದರು. ಅದು ನಮ್ಮ ಹೆಮ್ಮೆಯ ಸಂತೋಷ್‌ಜಿ’ ಎಂದಿದ್ದಾರೆ.
‘ಹೊಸ ಪ್ರಯೋಗ ಮಾಡಿ ಅಭ್ಯರ್ಥಿಗಳ ಆಯ್ಕೆ ಮಾಡಿದರು ಎಂದು ಹೇಳುವವರಿದ್ದಾರೆ. ಆದರೆ ಅಭ್ಯರ್ಥಿಗಳ ಆಯ್ಕೆಯನ್ನು ಮಂಡಲ, ಜಿಲ್ಲಾ, ರಾಜ್ಯ ಕೋರ್ ಕಮಿಟಿ ಹಾಗೂ ಕೇಂದ್ರ ಸಂಸದೀಯ ಸಮಿತಿಯಲ್ಲಿ ಆಯ್ಕೆ ಮಾಡಲಾಗುತ್ತದೆ ಎಂಬ ಕನಿಷ್ಠ ವಿಷಯ ನಾವು ತಿಳಿಯದೆ ಇರುವುದು ವಿಪರ್ಯಾಸ. ಇಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಸೋತಿರುವ ಅಭ್ಯರ್ಥಿಗಳಲ್ಲಿ 54 ಹಾಲಿ ಶಾಸಕರಿದ್ದರು. ಅವರ ಮೇಲೆ ಯಾವುದೇ ಪ್ರಯೋಗ ಮಾಡಿರಲಿಲ್ಲ. ಆದರೂ ಅವರು ಸೋತರು. ಈ ಬಗ್ಗೆ ಯಾರೂ ಚಕಾರ ಎತ್ತಲಿಲ್ಲ. ಹೊಸ ಪ್ರಯೋಗ ಮಾಡಿ ಅಭ್ಯರ್ಥಿಯಾದವರಲ್ಲಿ ಅನೇಕರು ಗೆದ್ದಿದ್ದಾರೆ. ಈ ಬಗ್ಗೆಯೂ ಮಾತನಾಡುವುದಿಲ್ಲ.’
ಬಿ.ಎಲ್.ಸಂತೋಷ್ ಕುರಿತು ಹಗುರ ಮಾತು ಸಹಿಸಲ್ಲ: ಯಡಿಯೂರಪ್ಪ ಗುಡುಗು
‘ಪಕ್ಷದ ಸೋಲಿಗೆ ಸಾಮಾನ್ಯ ಕಾರ್ಯಕರ್ತನಿಂದ ಹಿಡಿದು ರಾಷ್ಟ್ರೀಯ ನಾಯಕರವರೆಗೆ ಎಲ್ಲರೂ ಜವಾಬ್ದಾರರೇ. ವಿಪರ್ಯಾಸ ಏನೆಂದರೆ ಸೋಲಿನ ವಿಷವನ್ನು ಕೇವಲ ಸಂತೋಷ್ ಅವರಿಗೆ ನೀಡುತ್ತಿರುವುದು. ಆ ನೀಲಕಂಠನ ರೀತಿಯಲ್ಲಿ ಎಲ್ಲ ವಿಷವನ್ನು ತಣ್ಣಗೆ ತಮ್ಮ ಕಂಠದಲ್ಲಿಯೇ ಇರಿಸಿಕೊಂಡಿದ್ದಾರೆ. ಪ್ರಬುದ್ಧ ವ್ಯಕ್ತಿತ್ವ ಇರುವ ಸಂತೋಷ್ ಅವರು ಇವೆಲ್ಲವನ್ನೂ ಮೀರಿ ರಾಷ್ಟ್ರಕ್ಕಾಗಿ ತಮ್ಮ ಜೀವನ ಮುಡುಪಾಗಿಸಿದ್ದಾರೆ. ಸ್ವಾರ್ಥ ರಾಜಕಾರಣದಲ್ಲಿ ಮುಳುಗಿರುವ ಕೆಲವರು ಮಾತನಾಡುತ್ತಲೇ ಇದ್ದಾರೆ. ಚರೈವೇತಿ ಚರೈವೇತಿ’ ಎಂದು ಗೌಡರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ