ಶಾಲೆ ಶುರುವಾದರೂ ಶಿಕ್ಷಕರಿಗೆ ‘ಕೋವಿಡ್‌ ಡ್ಯೂಟಿ’!

By Kannadaprabha NewsFirst Published Jan 1, 2021, 12:16 PM IST
Highlights

ಅನೇಕ ಕಡೆ ಇನ್ನೂ ಶಿಕ್ಷಕರಿಗೆ ಸೋಂಕು ನಿಯಂತ್ರಣ ಹೊಣೆ | ಬೆಂಗಳೂರು ಒಂದರಲ್ಲೇ 5 ಸಾವಿರ ಶಿಕ್ಷಕರಿಗೆ ಈ ಕರ್ತವ್ಯ | ಹೀಗಾಗಿ ಇವರು ಶಾಲೆಗೆ ಬಾರದೇ ಮಕ್ಕಳಿಗೆ ತೊಂದರೆ ಸಾಧ್ಯತೆ

ಬೆಂಗಳೂರು(ಜ.01): ಜ.1ರಿಂದ ಶಾಲೆ, ಪಿಯು ಕಾಲೇಜುಗಳು ಆರಂಭಗೊಳ್ಳುವ ಹಿನ್ನೆಲೆಯಲ್ಲಿ ಕೋವಿಡ್‌ ನಿಯಂತ್ರಣ ಕಾರ್ಯಗಳಿಗೆ ನಿಯೋಜಿಸಲಾಗಿದ್ದ ಶಿಕ್ಷಕರನ್ನು ಬಿಡುಗಡೆ ಮಾಡುವಂತೆ ಶಿಕ್ಷಣ ಇಲಾಖೆಯು ಆರೋಗ್ಯ ಇಲಾಖೆಗೆ ಮನವಿ ಮಾಡಿದ್ದರೂ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸಾವಿರಾರು ಶಿಕ್ಷಕರನ್ನು ಬಿಡುಗಡೆ ಮಾಡದೇ ಇರುವುದರಿಂದ ಮಕ್ಕಳ ಕಲಿಕೆಗೆ ತೊಂದರೆಯಾಗುವ ಸಾಧ್ಯತೆ ಕಂಡು ಬಂದಿದೆ.

ಜನವರಿಯಿಂದ ಶಾಲೆ, ಪಿಯು ಕಾಲೇಜುಗಳನ್ನು ಆರಂಭಿಸಲು ಸರ್ಕಾರ ನಿರ್ಧರಿಸಿದ ಬೆನ್ನಲ್ಲೇ ಶಿಕ್ಷಣ ಇಲಾಖೆಯು ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿಗೆ ಪತ್ರ ಬರೆದು ಕೋವಿಡ್‌ ಕಾರ್ಯಕ್ಕೆ ನಿಯೋಜಿಸಿರುವ ಶಿಕ್ಷಕರನ್ನು ಕೂಡಲೇ ಬಿಡುಗಡೆಗೊಳಿಸಿ ಶಾಲೆಗಳಿಗೆ ವಾಪಸಾಗಲು ಸಹಕರಿಸುವಂತೆ ಕೋರಿತ್ತು.

ಹಳಿತಪ್ಪಿದ ಇಂಟರ್‌ಸಿಟಿ ರೈಲು: ಪ್ರಯಾಣಿಕರು ಅಪಾಯದಿಂದ ಪಾರು

ಆದರೆ, ಶಾಲಾರಂಭದ ದಿನ ಹತ್ತಿರವಾದರೂ ಶಿಕ್ಷಕರನ್ನು ಬಿಡುಗಡೆ ಮಾಡಿಲ್ಲ. ಬೆಂಗಳೂರಿನಲ್ಲೇ ಸುಮಾರು 5 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲಾ ಶಿಕ್ಷಕರನ್ನು ಕೋವಿಡ್‌ ಕಾರ್ಯಕ್ಕೆ ನಿಯೋಜಿಸಲಾಗಿದೆ. ಬೇರೆ ಬೇರೆ ಜಿಲ್ಲೆಗಳಲ್ಲೂ ನೂರಾರು ಶಿಕ್ಷಕರನ್ನು ನಿಯೋಜಿಸಲಾಗಿದೆ. ಆಯಾ ಜಿಲ್ಲಾಡಳಿತ ಅಥವಾ ಜಿಲ್ಲಾ ಆರೋಗ್ಯ ಘಟಕ ಅವರನ್ನು ಬಿಡುಗಡೆ ಮಾಡಬೇಕಿದೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಇಲಾಖೆ ಆಯುಕ್ತ ವಿ.ಅನ್ಬುಕುಮಾರ್‌ ಅವರು, ಶಿಕ್ಷಕರ ಬಿಡುಗಡೆಗೆ ಈಗಾಗಲೇ ಸಂಬಂಧಿಸಿದ ಇಲಾಖೆಗಳಿಗೆ ಮನವಿ ಮಾಡಲಾಗಿದೆ. ಯಾವುದೇ ಜಿಲ್ಲೆಯಲ್ಲಿ ಶಿಕ್ಷಕರು ಬಿಡುಗಡೆಯಾಗಿಲ್ಲದಿದ್ದಲ್ಲಿ ಕೂಡಲೇ ಬಿಡುಗಡೆ ಮಾಡಲು ಕ್ರಮ ವಹಿಸುವಂತೆ ಮತ್ತೊಮ್ಮೆ ಇಲಾಖಾ ಮುಖ್ಯಸ್ಥರ ಜೊತೆಗೆ ಮುಖ್ಯ ಕಾರ್ಯದರ್ಶಿ ಅವರಿಗೂ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

click me!