‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಸಚಿವ ಈಶ್ವರ್‌ ಖಂಡ್ರೆ

Published : Aug 22, 2025, 06:13 AM IST
Karnataka forest minister Eshwar Khandre

ಸಾರಾಂಶ

ನಾವು ಶ್ರದ್ಧೆಯಿಂದ ಆಚರಿಸುವ ಗಣೇಶೋತ್ಸವದಿಂದ ಜಲಚರಗಳಿಗೆ ಮಾರಕವಾಗಬಾರದು. ಆ ನಿಟ್ಟಿನಲ್ಲಿ ಪಿಒಪಿ ಗಣಪತಿ ಮೂರ್ತಿ ಬಳಕೆಗೆ ಕಡಿವಾಣ ಹಾಕಲಾಗುತ್ತಿದೆ.

ಬೆಂಗಳೂರು (ಆ.22): ರಾಜ್ಯದಲ್ಲಿ ಪಿಒಪಿ ಗಣೇಶ ಮೂರ್ತಿ ಬಳಕೆಗೆ ಕಡಿವಾಣ ಹಾಕಲು ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡುವ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿಯಿಂದ ಪಿಒಪಿ ಗಣೇಶ ಮೂರ್ತಿ ಬಳಸುವುದಿಲ್ಲ ಎಂದು ಮುಚ್ಚಳಿಕೆ ಬರೆಸಿಕೊಳ್ಳಲು ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್‌ ಖಂಡ್ರೆ ತಿಳಿಸಿದರು.

ವಿಕಾಸಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾವು ಶ್ರದ್ಧೆಯಿಂದ ಆಚರಿಸುವ ಗಣೇಶೋತ್ಸವದಿಂದ ಜಲಚರಗಳಿಗೆ ಮಾರಕವಾಗಬಾರದು. ಆ ನಿಟ್ಟಿನಲ್ಲಿ ಪಿಒಪಿ ಗಣಪತಿ ಮೂರ್ತಿ ಬಳಕೆಗೆ ಕಡಿವಾಣ ಹಾಕಲಾಗುತ್ತಿದೆ. ಗಣೇಶೋತ್ಸವ ಸಮಿತಿ ಮತ್ತು ಸಾರ್ವಜನಿಕರು ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿಗಳನ್ನು ಪೂಜಿಸಿ, ವಿಸರ್ಜಿಸುವಂತೆ ಮನವಿ ಮಾಡಲಾಗುವುದು. ಅಲ್ಲದೆ, ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡುವ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿಯಿಂದ ಪಿಒಪಿ ಗಣೇಶ ಮೂರ್ತಿ ಬಳಸುವುದಿಲ್ಲ ಎಂದು ಮುಚ್ಚಳಿಕೆ ಬರೆಸಿಕೊಳ್ಳಲಾಗುತ್ತಿದೆ ಎಂದರು.

ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಶೇ. 90ರಷ್ಟು ಮಣ್ಣಿನ ಗಣಪತಿಯನ್ನೇ ಪೂಜಿಸುತ್ತಾರೆ. ಉಳಿದ 28 ಜಿಲ್ಲೆಗಳಲ್ಲೂ ಅದೇ ರೀತಿ ಮಣ್ಣಿನ ಗಣಪತಿಗೆ ಒತ್ತು ನೀಡಬೇಕು. ಅದಕ್ಕಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತ, ತಾಲೂಕು ಆಡಳಿತ ಮತ್ತು ಸ್ಥಳೀಯ ಸಂಸ್ಥೆಗಳು ಜಾಗೃತಿ ಮೂಡಿಸಬೇಕು. ಅದರಲ್ಲೂ ಬೆಂಗಳೂರು ನಗರದಲ್ಲಿ ಶಾಲಾ, ಕಾಲೇಜುಗಳಲ್ಲಿ ಮಕ್ಕಳಲ್ಲಿ ಪರಿಸರ ಸ್ನೇಹಿ ಗಣಪತಿ ಮೂರ್ತಿ ಕುರಿತಂತೆ ಅರಿವು ಮೂಡಿಸಬೇಕು ಎಂದು ಹೇಳಿದರು.

ಗಣೇಶೋತ್ಸವದ ಸಂದರ್ಭದಲ್ಲಿ ಪರಿಸರಕ್ಕೆ ಮಾರಕವಾಗುವ ಪಟಾಕಿ ಬಳಸುವುದಕ್ಕೂ ನಿಬಂಧನೆ ವಿಧಿಸಲಾಗುತ್ತಿದೆ. ಸುಪ್ರೀಂಕೊರ್ಟ್‌ ಆದೇಶದಂತೆ 125 ಡೆಸಿಬಲ್‌ಗಿಂತ ಹೆಚ್ಚು ಶಬ್ದ ಮಾಡುವ ಪಟಾಕಿ ಸಿಡಿಸಬಾರದು ಮತ್ತು ರಾತ್ರಿ 8ರಿಂದ 10 ಗಂಟೆಯೊಳಗೆ ಮಾತ್ರ ಪಟಾಕಿ ಸಿಡಿಸಬೇಕು ಎಂದು ಸೂಚಿಸಲಾಗುತ್ತಿದೆ. ಪರಿಸರಕ್ಕೆ ಮಾರಕವಾಗುವ ಪಟಾಕಿ ಬಳಸದೆ ಹಸಿರು ಪಟಾಕಿ ಸಿಡಿಸಬೇಕು ಎಂದು ತಿಳಿಸಿದರು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರ ಸ್ವಾಮಿ ಇದ್ದರು.

207 ಘಟಕಗಳ ಮೇಲೆ ದಾಳಿ: ಪಿಒಪಿ ಗಣೇಶ ಮೂರ್ತಿ ಉತ್ಪಾದನೆ ಮತ್ತು ಮಾರಾಟ ಘಟಕಗಳ ಮೇಲೂ ದಾಳಿ ಮಾಡಲಾಗುತ್ತಿದೆ. ಅದರಂತೆ ರಾಜ್ಯದಲ್ಲಿ 207 ಘಟಕಗಳ ಮೇಲೆ ದಾಳಿ ಮಾಡಲಾಗಿದೆ. ಅದರಲ್ಲಿ ಕುಂಬಳಗೋಡು ಬಳಿಯ ಒಂದೇ ಘಟಕದಲ್ಲಿ 11 ಸಾವಿರ ಪಿಒಪಿ ಗಣೇಶ ಮೂರ್ತಿಗಳು ಇರುವುದು ಕಂಡುಬಂದಿದೆ. ಪಿಒಪಿ ಗಣೇಶ ಮೂರ್ತಿ ತಯಾರಿಕೆ ಮತ್ತು ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಈಶ್ವರ್‌ ಖಂಡ್ರೆ ವಿವರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್