ಇಪಿಎಫ್ಒ ಸೊಸೈಟಿಯಲ್ಲಿ ನೌಕರರ ದುಡ್ಡೇ ಮಾಯ, 70 ಕೋಟಿ ನಾಪತ್ತೆ! ಮಗನ ಮದುವೆಗೆ ಇಟ್ಟ ದುಡ್ಡು ಇಲ್ಲದೆ ಕಂಗಾಲಾದ ಅಪ್ಪ

Published : Oct 31, 2025, 03:55 PM IST
EPFO

ಸಾರಾಂಶ

ಬೆಂಗಳೂರಿನ ಇಪಿಎಫ್ಒ ನೌಕರರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ 70 ಕೋಟಿ ರೂಪಾಯಿಗೂ ಹೆಚ್ಚು ಹಣ ನಾಪತ್ತೆಯಾಗಿದೆ. ಈ ಸಂಬಂಧ ಸೊಸೈಟಿಯ ಸಿಇಒ ಮತ್ತು ಅಕೌಂಟೆಂಟ್ ವಿರುದ್ಧ ದೂರು ದಾಖಲಾಗಿದ್ದು, ನೂರಾರು ನೌಕರರು ತಮ್ಮ ಜೀವಮಾನದ ಉಳಿತಾಯವನ್ನು ಕಳೆದುಕೊಂಡು ಆತಂಕಕ್ಕೊಳಗಾಗಿದ್ದಾರೆ.

ಬೆಂಗಳೂರು: ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO)ಯ ನೌಕರರೇ ನಡೆಸುತ್ತಿದ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿನ ಹಣ ನಾಪತ್ತೆಯಾಗಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಸೊಸೈಟಿ ಖಾತೆಯಿಂದ 70 ಕೋಟಿ ರೂಪಾಯಿಗಿಂತ ಹೆಚ್ಚು ಹಣ ಮಾಯವಾಗಿರುವ ಈ ಪ್ರಕರಣ ಇದೀಗ ದೊಡ್ಡ ಆರ್ಥಿಕ ದಂಧೆಯ ಶಂಕೆಗೆ ಕಾರಣವಾಗಿದೆ. ರಿಚ್ಮಂಡ್ ಸರ್ಕಲ್ ಬಳಿಯ ಇಪಿಎಫ್ಒ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಪಿಎಫ್ಒ ಎಂಪ್ಲಾಯೀಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ನೂರಾರು ನೌಕರರು ತಮ್ಮ ತಿಂಗಳ ಆದಾಯದ ಒಂದು ಭಾಗವನ್ನು ಭವಿಷ್ಯ ಉದ್ದೇಶದಿಂದ ಠೇವಣಿ ಇಡುತ್ತಿದ್ದರು. ಆದರೆ ಇದೀಗ ಆ ಸೊಸೈಟಿ ಅಕೌಂಟ್‌ನಲ್ಲಿದ್ದ ಹಣ ನಾಪತ್ತೆಯಾಗಿದ್ದು, ನೌಕರರ ಜೀವಮಾನ ಇಡೀ ದುಡಿದ ಹಣ ಸಂಗ್ರಹವೇ ಇಲ್ಲದೆ ಭವಿಷ್ಯದ ಬಗ್ಗೆ ಚಿಂತೆ ಆರಂಭವಾಗಿದೆ.

70 ಕೋಟಿ ನಾಪತ್ತೆ, ಸಿಇಒ, ಅಕೌಂಟೆಂಟ್ ವಿರುದ್ಧ ದೂರು

ಈ ಪ್ರಕರಣದಲ್ಲಿ ಸೊಸೈಟಿ ಸಿಇಒ ಗೋಪಿ ಹಾಗೂ ಅಕೌಂಟೆಂಟ್ ಜಗದೀಶ್ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಗಳ ಮೇಲೆ ದೊಡ್ಡ ಮಟ್ಟದ ಹಣದ ದುರುಪಯೋಗ ಮತ್ತು ವಂಚನೆಯ ಆರೋಪ ಇದ್ದು, ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸೊಸೈಟಿಯಲ್ಲಿ ಸುಮಾರು 300 ಮಂದಿ ಸದಸ್ಯರಿದ್ದು, ಇವರಲ್ಲಿ ಹಲವರು ದಶಕಗಳ ಕಾಲ ತಮ್ಮ ದುಡಿಮೆ ಹಣವನ್ನು ಠೇವಣಿ ಇಟ್ಟಿದ್ದರು. ಇದೀಗ ಖಾತೆ ಶೂನ್ಯವಾಗಿದೆ ಎಂಬ ಸುದ್ದಿ ತಿಳಿದ ತಕ್ಷಣ ನೌಕರರಲ್ಲಿ ಆಕ್ರೋಶ ಮತ್ತು ಆತಂಕ ಹರಡಿದೆ.

“ಮಗನ ಮದುವೆ ಇದೆ ಸರ್, ನಾನು ಏನು ಮಾಡಲಿ? ಎಂದು ಹಣ ಠೇವಣಿ ಇಟ್ಟಿದ್ದ ನೌಕರರಲ್ಲಿ ಒಬ್ಬರು ಅಳುತ್ತಾ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. “ನನ್ನ ಮಗನ ಮದುವೆ ಇದೆ ಸರ್. ಸೊಸೈಟಿಯಲ್ಲಿ 25 ಲಕ್ಷ ರೂಪಾಯಿ ಠೇವಣಿ ಇಟ್ಟಿದ್ದೆ. ಆ ಹಣದಿಂದ ಮದುವೆ ವ್ಯವಸ್ಥೆ ಮಾಡಬೇಕಿತ್ತು. ಆದರೆ ಸೊಸೈಟಿ ಅಕೌಂಟ್‌ನಲ್ಲಿ ದುಡ್ಡೇ ಇಲ್ಲ ಅಂತ ಗೊತ್ತಾಯ್ತು. ಈಗ ಮದುವೆ ಹೇಗೆ ಮಾಡಲಿ? ನಮ್ಮ ಬದುಕು ಮುಗಿದಂತಾಗಿದೆ ಎಂದು ಕಣ್ಣೀರಿಟ್ಟರು.

ಇಂತಹ ಹಲವಾರು ನೌಕರರು ತಮ್ಮ ಮಕ್ಕಳ ಶಿಕ್ಷಣ, ಮನೆ ಸಾಲ, ಮತ್ತು ವೈದ್ಯಕೀಯ ವೆಚ್ಚಗಳಿಗಾಗಿ ಸೊಸೈಟಿಯ ಮೇಲೆ ಭರವಸೆ ಇಟ್ಟು ಹಣ ಇಟ್ಟಿದ್ದರು. ಆದರೆ ಹಣ ನಾಪತ್ತೆಯಾಗಿರುವ ಸುದ್ದಿ ಕೇಳಿ ಎಲ್ಲರೂ ಆಘಾತದಲ್ಲಿದ್ದಾರೆ.

ಪೊಲೀಸರ ತನಿಖೆ ಪ್ರಾರಂಭ

ದೂರು ದಾಖಲಿಸಿಕೊಂಡಿರುವ ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ. ಬ್ಯಾಂಕ್ ಖಾತೆ ವಿವರಗಳು, ಟ್ರಾನ್ಸಕ್ಷನ್ ದಾಖಲೆಗಳು ಹಾಗೂ ಸೊಸೈಟಿ ಆಡಳಿತ ಮಂಡಳಿಯ ಚಟುವಟಿಕೆಗಳ ಪರಿಶೀಲನೆ ನಡೆಯುತ್ತಿದೆ. ಪ್ರಾಥಮಿಕ ತನಿಖೆಯಲ್ಲಿ ಕೆಲವು ಖಾತೆಗಳಿಂದ ಹಣವನ್ನು ಅನಧಿಕೃತವಾಗಿ ವರ್ಗಾಯಿಸಿರುವುದು ಬಹಿರಂಗವಾಗಿದೆ ಎಂಬ ಮಾಹಿತಿ ದೊರೆತಿದೆ.

ನೌಕರರ ನಂಬಿಕೆಗೆ ದೊಡ್ಡ ಹೊಡೆತ

ನೌಕರರೇ ನೌಕರರನ್ನೇ ವಂಚಿಸಿದ್ದಾರೆ ಎಂಬ ವಾದಗಳು ಎದ್ದಿವೆ. ಸರ್ಕಾರಿ ನೌಕರರಿಗೆ ಸುರಕ್ಷಿತವಾದ ಹೂಡಿಕೆ ಸ್ಥಳವೆಂದು ಕಂಡಿದ್ದ ಈ ಸೊಸೈಟಿ ಈಗ ಆ ನೌಕರರ ಬದುಕಿನ ನಂಬಿಕೆಯನ್ನು ಕಳೆದುಕೊಂಡಿದೆ. ಹಲವು ವರ್ಷಗಳ ವಿಶ್ವಾಸ, ಶ್ರಮದ ಸಂಗ್ರಹ ಒಂದು ಕ್ಷಣದಲ್ಲಿ ನಾಶವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌