ಬೆಂಗಳೂರು ವಿಶ್ವವಿದ್ಯಾಲಯದ ಜೀವ ವೈವಿದ್ಯ ಪಾರ್ಕ್‌ಗೆ ಕುತ್ತು?

By Kannadaprabha NewsFirst Published Oct 3, 2020, 8:11 AM IST
Highlights

ಯೋಗ ಸೆಂಟರ್‌ ನಿರ್ಮಾಣಕ್ಕಾಗಿ 15 ಎಕರೆ ಯುಜಿಸಿಗೆ ಹಸ್ತಾಂತರ| ಡಾಕ್ಟರೇಟ್‌ ತಿರಸ್ಕರಿಸಿ ರಾಜ್ಯಪಾಲರಿಗೆ ಪತ್ರ ಬರೆದ ಯಲ್ಲಪ್ಪರೆಡ್ಡಿ| ಬೆಂಗಳೂರಿಗೆ ಜೀವವಾಯು ನೀಡುವ ಕೆಲವೇ ಸಸ್ಯಕಾಶಿಗಳಲ್ಲಿ ಬೆಂಗಳೂರು ವಿವಿಯ ಕ್ಯಾಂಪಸ್‌ ಕೂಡ ಒಂದು| 

ಬೆಂಗಳೂರು(ಅ.03): ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಅಭಿವೃದ್ಧಿಪಡಿಸಲಾಗಿರುವ ಬಯೋಡೈವರ್ಸಿಟಿ ಪಾರ್ಕ್ ವ್ಯಾಪ್ತಿಯಲ್ಲಿ 15 ಎಕರೆ ಭೂಮಿಯನ್ನು ಸರ್ಕಾರ ಯುಜಿಸಿಯ ‘ಇಂಟರ್‌ ಯೂನಿವರ್ಸಿಟಿ ಯೋಗ ಸೆಂಟರ್‌’ ನಿರ್ಮಾಣಕ್ಕೆ ನೀಡಿರುವುದಕ್ಕೆ ಪರಿಸರ ವಾದಿಗಳು ಹಾಗೂ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಅಲ್ಲದೆ, ಸರ್ಕಾರದ ಈ ಕ್ರಮ ಖಂಡಿಸಿ ಪರಿಸರತಜ್ಞ ಡಾ.ಎ.ಎನ್‌.ಯಲ್ಲಪ್ಪರೆಡ್ಡಿ ಬೆಂ. ವಿಶ್ವವಿದ್ಯಾಲಯ ತಮಗೆ ಈ ಹಿಂದೆ ನೀಡಿದ್ದ ಗೌರವ ಡಾಕ್ಟರೇಟ್‌ಅನ್ನು ವಾಪಸ್‌ ಪಡೆಯುವಂತೆ ರಾಜ್ಯಪಾಲ ವಜುಬಾಯಿ ವಾಲ ಅವರಿಗೆ ಪತ್ರ ಬರೆದಿದ್ದಾರೆ.

ಈ ಸಂಬಂಧ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಯಲ್ಲಪ್ಪರೆಡ್ಡಿ, ಬೆಂಗಳೂರಿಗೆ ಜೀವವಾಯು ನೀಡುವ ಕೆಲವೇ ಸಸ್ಯಕಾಶಿಗಳಲ್ಲಿ ಬೆಂಗಳೂರು ವಿವಿಯ ಕ್ಯಾಂಪಸ್‌ ಕೂಡ ಒಂದು. ಇಲ್ಲಿನ ನೂರಾರು ಎಕರೆ ಜಾಗದಲ್ಲಿ ಲಕ್ಷಾಂತರ ಜೀವವೈವಿದ್ಯ ಸಸಿಗಳನ್ನು ನೆಟ್ಟು ಬೆಳೆಸಲಾಗಿದೆ. ಶ್ರೀಗಂಧದ ವನ ನಿರ್ಮಿಸಲಾಗಿದೆ. ನಿತ್ಯ ಸಾವಿರಾರು ಜನ ಇಲ್ಲಿ ವಾಯುವಿಹಾರಕ್ಕೆ ಬರುತ್ತಾರೆ. ವಿವಿಗೆ ನ್ಯಾಕ್‌ನ ಅತ್ಯುತ್ತಮ ಮಾನ್ಯತೆ ದೊರೆಯಲು ಇದೂ ಒಂದು ಕಾರಣ. ವಿವಿಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಸಹಕಾರದೊಂದಿಗೆ ವಿವಿಯ ನೂರಾರು ಎಕರೆ ಪ್ರದೇಶದಲ್ಲಿ ಜೀವ ವೈವಿದ್ಯಮಯ ಪಾರ್ಕ್ ಅಭಿವೃದ್ಧಿಪಡಿಸಿದ್ದೆ. ಅದಕ್ಕಾಗಿ ವಿಶ್ವವಿದ್ಯಾಲಯ ನನಗೆ ಗೌರವ ಡಾಕ್ಟರೇಟ್‌ ನೀಡಿತ್ತು. ಅಂತಹ ಪಾರ್ಕ್ ಜಾಗದಲ್ಲಿ ಈಗ ಯುಜಿಸಿ ಕಟ್ಟಡ ನಿರ್ಮಿಸಲು ಹೊರಡಿದೆ. ಈಗ ಆ ಪಾರ್ಕ್ ಅನ್ನೇ ನೆಲಸಮ ಮಾಡುತ್ತಾರೆ ಎಂದಾದ ಮೇಲೆ ಡಾಕ್ಟರೇಟ್‌ ಏಕೆ. ಹಾಗಾಗಿ ವಾಪಸ್‌ ಪಡೆಯಲು ಪತ್ರ ಬರೆದಿದ್ದೇನೆ ಎಂದು ಹೇಳಿದ್ದಾರೆ.

ಕಳೆದ ವರ್ಷವಷ್ಟೇ ಆರಂಭಿಸಿದ್ದ ಆನ್‌ಲೈನ್ ಕಾಲೇಜು ಸಂಯೋಜನೆ ಕೈಬಿಟ್ಟಿದ್ದೇಕೆ..?

ಬೆಂಗಳೂರು ಸುತ್ತಮುತ್ತ ಸಾವಿರಾರು ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿರುವುದನ್ನು ತೆರವುಗೊಳಿಸಿ ಭೂಮಿ ನೀಡಬಹುದಿತ್ತು. ಬಿಬಿಎಂಪಿ ಭೂಮಿಯನ್ನು ಗುತ್ತಿಗೆ ಪಡೆದಿರುವವರಿಗೇ ಮಾರಲು ಹೊರಟಿದ್ದಾರೆ. ಅಂತಹ ಭೂಮಿಯಲ್ಲಿ ಈ ಯೋಗ ಕೇಂದ್ರಕ್ಕೆ ಜಾಗ ಕೊಡಬಹುದಿತ್ತು. ಜೀವ ವೈವಿದ್ಯ ಪಾರ್ಕ್ ಏಕೆ ಹಾಳು ಮಾಡಬೇಕು ಎಂದು ಅವರು ಪ್ರಶ್ನಿಸಿದ್ದಾರೆ.

ಸರ್ಕಾರದ ಆದೇಶದಂತೆ ಯುಜಿಸಿಯ ಇಂಟರ್‌ ಯೂನಿವರ್ಸಿಟಿ ಯೋಗ ಕೇಂದ್ರಕ್ಕೆ ವಿವಿ ಕ್ಯಾಂಪಸ್‌ನಲ್ಲಿ 15 ಎಕರೆ ಭೂಮಿಯನ್ನು ನೀಡಲಾಗಿದೆ. ಶಿಕ್ಷಣಿಕ ಅಭಿವೃದ್ಧಿಗಾಗಿ ವಿಶ್ವವಿದ್ಯಾಲಯಕ್ಕೆ ನೀಡಿರುವ ಭೂಮಿಯನ್ನೆಲ್ಲಾ ಬಯೋಡೈವರ್ಸಿಟಿ ಪಾರ್ಕ್ ಅಂದರೆ ಹೇಗೆ. ಯೂನಿರ್ವರ್ಸಿಟಿ ಅಂದ ಮೇಲೆ ಶಿಕ್ಷಣದ ಜೊತೆ ಬಯೋಡೈವರ್ಸಿಟಿ ಇರಬೇಕು. 15 ಎಕರೆಯಲ್ಲೂ ಯುಜಿಸಿ ಕಟ್ಟಡ ಕಟ್ಟುವುದಿಲ್ಲ. ಯುಜಿಸಿಯೂ ಬಯೋಡೈವರ್ಸಿಟಿ ಪಾರ್ಕ್ ಅನ್ನು ನಿರ್ವಹಣೆ ಮಾಡುತ್ತದೆ ಎಂದು ಬೆಂ.ವಿವಿ ಕುಲಪತಿ ಪ್ರೊ.ಕೆ.ಆರ್‌.ವೇಣುಗೋಪಾಲ್‌ ಅವರು ಹೇಳಿದ್ದಾರೆ. 
 

click me!