ಜನಸಾಮಾನ್ಯರಲ್ಲಿನ ಅಪೌಷ್ಠಿಕತೆ ಹೋಗಲಾಡಿಸಿ, ಆರೋಗ್ಯ ವೃದ್ಧಿಸುವ ಉದ್ದೇಶದಿಂದ ಸಾರ್ವಜನಿಕ ವಿತರಣಾ ಪದ್ಧತಿಯ ಅನ್ನಭಾಗ್ಯ ಯೋಜನೆಯಡಿ ವಿತರಣೆ ಮಾಡಲಾಗುವ ಪ್ರತಿ 50 ಕೆ.ಜಿ. ಅಕ್ಕಿಯ ಚೀಲದಲ್ಲಿ ಅರ್ಧ ಕೆ.ಜಿ. ಸಾರವರ್ಧಿತ ಅಕ್ಕಿಯನ್ನು ಬೆರೆಸಲಾಗುತ್ತಿದೆ.
ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್
ಧಾರವಾಡ (ಫೆ.22): ದಿನನಿತ್ಯದ ಆಹಾರದಲ್ಲಿ ಸಂಪೂರ್ಣ ಪೋಷಕಾಂಶಗಳು ಲಭ್ಯವಾಗದೇ ಇರುವ ಕಾರಣದಿಂದಾಗಿ, ಅಶಕ್ತತೆ (ಅನೀಮಿಯ), ಇರುಳು ಕುರುಡುತನ ಅಂತಹ ರೋಗಗಳು ಬರಬಹುದಾಗಿದೆ. ಅಲ್ಲದೇ ಹೆಚ್ಚಾಗಿ ಮಹಿಳೆಯರು ಹಾಗೂ ಮಕ್ಕಳು ಅಪೌಷ್ಠಿಕತೆಗೆ ಬಲಿಯಾಗುತ್ತಾರೆ. ಇದನ್ನು ತಪ್ಪಿಸಲು ಹೆಚ್ಚಿನ ಪೋಷಕಾಂಶದ ಅಗತ್ಯತೆ ಇರುತ್ತದೆ.
ಈ ನಿಟ್ಟಿನಲ್ಲಿ ಜನಸಾಮಾನ್ಯರಲ್ಲಿನ ಅಪೌಷ್ಠಿಕತೆ ಹೋಗಲಾಡಿಸಿ, ಆರೋಗ್ಯ ವೃದ್ಧಿಸುವ ಉದ್ದೇಶದಿಂದ ಸಾರ್ವಜನಿಕ ವಿತರಣಾ ಪದ್ಧತಿಯ ಅನ್ನಭಾಗ್ಯ ಯೋಜನೆಯಡಿ ವಿತರಣೆ ಮಾಡಲಾಗುವ ಪ್ರತಿ 50 ಕೆ.ಜಿ. ಅಕ್ಕಿಯ ಚೀಲದಲ್ಲಿ ಅರ್ಧ ಕೆ.ಜಿ.ಯಷ್ಟು ಪೋಷಕಾಂಶ (ವಿಟಾಮಿನ್ ಎ ಮತ್ತು ಡಿ, ಐರನ್, ಫೋಲಿಕ್ ಆಸಿಡ್, ಬಿಕಾಂಪ್ಲೇಕ್ಸ, ಜಿಂಕ್ ಹಾಗೂ ಐಯೋಡಿನ್) ಭರಿತ ಸಾರವರ್ಧಿತ ಅಕ್ಕಿಯನ್ನು ಬೆರೆಸಿ ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದೆ.
ಪ್ಲಾಸ್ಟಿಕ್ ಅಕ್ಕಿ ಎಂದು ಸಾರವರ್ಧಿತ ಅಕ್ಕಿ ಪಡೆಯಲು ಗ್ರಾಮಸ್ಥರು ಹಿಂದೇಟು
ಪ್ಲಾಸ್ಟಿಕ್ ಅಕ್ಕಿ ಎಂದು ತಪ್ಪು ಭಾವನೆ: ಸಾರವರ್ಧಿತಗೊಳಿಸಿರುವ (ಪೋರ್ಟಿಫೈಡ್) ಅಕ್ಕಿಯಲ್ಲಿ ಕೆಲವೊಂದು ಅಕ್ಕಿಯ ಕಾಳುಗಳು ಹೊಳಪಿನಿಂದ ನೋಡಲು ಪ್ಲಾಸ್ಟಿಕ್ ರೀತಿಯಲ್ಲಿ ಕಾಣಿಸುತ್ತಿದ್ದು, ಸಾರ್ವಜನಿಕರು ಆತಂಕಗೊಳ್ಳಬಾರದು ವಿತರಣೆ ಮಾಡಲಾಗುತ್ತಿರುವ ಸಾರವರ್ಧಿತ ಅಕ್ಕಿಯನ್ನು ಉಪಯೋಗಿಸಿ, ಆರೋಗ್ಯವಂತರಾಗಲು ಕೋರಿದೆ. ಸಾರ್ವಜನಿಕ ವಿತರಣಾ ಪದ್ಧತಿಯಡಿ ಬಿಡುಗಡೆ ಮಾಡುವ ಅಕ್ಕಿಯನ್ನು ಸ್ವಂತಕ್ಕೆ ಉಪಯೋಗಿಸತಕ್ಕದ್ದು, ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ಕಂಡುಬಂದಲ್ಲಿ ಅಂತಹ ಕುಟುಂಬಕ್ಕೆ ನೀಡಿದ ಬಿಪಿಎಲ್ ಪಡಿತರ ಚೀಟಿಯನ್ನು ರದ್ದುಪಡಿಸಲಾಗುವುದೆಂದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ವಿನೋದಕುಮಾರ ಹೆಗ್ಗಳಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಕ್ಷ್ಮೇಶ್ವರದಲ್ಲಿ ಅಕ್ಕಿ ಪಡೆಯಲು ಜನರು ಹಿಂದೇಟು: ಲಕ್ಷ್ಮೇಶ್ವರ : ಪಟ್ಟಣದ ನ್ಯಾ ಬೆಲೆ ಅಂಗಡಿಯಲ್ಲಿ ಗುರುವಾರ ಸಾರವರ್ಧಿತ ಅಕ್ಕಿ ಪೂರೈಸಿದ್ದು, ಇದು ಪ್ಲಾಸ್ಟಿಕ್ ಅಕ್ಕಿ ಎಂದು ಫಲಾನುಭವಿಗಳು ಅಕ್ಕಿ ಪಡೆಯಲು ನಿರಾಕರಿಸಿದ ಘಟನೆ ನಡೆದಿದೆ. ಬಳಿಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಾರವರ್ಧಿತ ಅಕ್ಕಿ ಎಂದು ತಿಳಿಸಿ ಗೊಂದಲ ದೂರ ಮಾಡಿದರು. ಸರ್ಕಾರದ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ವಿತರಣೆ ಮಾಡುವ ಪಡಿತರದಲ್ಲಿ ಪ್ಲಾಸ್ಟಿಕ್ ಅಕ್ಕಿ ಬಂದಿದೆ ಎಂಬ ತಪ್ಪು ಮಾಹಿತಿ ಮತ್ತು ಮಾಹಿತಿ ಕೊರತೆಯಿಂದ ಪಡಿತರ ಫಲಾನುಭವಿಗಳು ಆತಂಕಕ್ಕೀಡಾಗಿದ್ದರು. ಪಡಿತರ ಅಕ್ಕಿಯಲ್ಲಿ ಸೌತೆ ಬೀಜದಂತಹ ಅಕ್ಕಿ ಕಂಡುಬಂದ ಹಿನ್ನೆಲೆ ಇದು ಪ್ಲಾಸ್ಟಿಕ್ ಅಕ್ಕಿಯೇ ಎಂಬ ಗುಮಾನಿ ಹರಡಿ ಪಡಿತರ ಪಡೆಯಲು ಸಾಲುಗಟ್ಟಿನಿಂತ ಫಲಾನುಭವಿಗಳು ಪರಸ್ಪರ ಆತಂಕದಿಂದ ಮಾತನಾಡಿಕೊಳ್ಳುತ್ತ ನ್ಯಾಯಬೆಲೆ ಅಂಗಡಿಯವರಿಗೆ ನಮಗೆ ಈ ಅಕ್ಕಿ ಬೇಡ ಎಂದು ನಿರಾಕರಿಸಿದ ಪ್ರಸಂಗ ನಡೆಯಿತು.
ಮನವರಿಕೆ ಮಾಡಿಕೊಟ್ಟ ಸರ್ಕಾರಿ ಅಧಿಕಾರಿ: ಈ ಸುದ್ದಿ ತಿಳಿದ ಆಹಾರ ನಿರೀಕ್ಷಕ ಜಗದೀಶ ಕುರುಬರ ಹಾಗೂ ಮಂಜುಳಾ ಆಕಳದ ಸ್ಥಳಕ್ಕೆ ಆಗಮಿಸಿ ಮಾಹಿತಿ ನೀಡಿ, ಜನಸಾಮಾನ್ಯರಲ್ಲಿನ ಅಪೌಷ್ಟಿಕತೆ ಹೋಗಲಾಡಿಸಿ ಆರೋಗ್ಯ ವೃದ್ಧಿಸುವ ಉದ್ದೇಶದಿಂದ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಸಾರಯುಕ್ತ ಅಕ್ಕಿ ವಿತರಣೆ ಮಾಡುತ್ತಿದೆ. ಪ್ರತಿ 50 ಕೆಜಿ ಅಕ್ಕಿಯ ಚೀಲದಲ್ಲಿ ಅರ್ಧ ಕೆಜಿಯಷ್ಟು ಪೋಷಕಾಂಶ (ವಿಟಾಮಿನ್ ಎ ಮತ್ತು ಡಿ ಐರನ್, ಫೋಲಿಕ್ ಆಸಿಡ್, ಬಿ ಕಾಂಪ್ಲೆಕ್ಸ್, ಜಿಂಕ್ ಹಾಗೂ ಐಯೋಡಿನ್) ಭರಿತ ಸಾರವರ್ಧಿತ ಅಕ್ಕಿ ಬೆರೆಸಿ ವಿತರಣೆ ಮಾಡಲಾಗುತ್ತಿದೆ.
ಬಡವರ ಅನ್ನಕ್ಕೆ ವಿಷ: ಪಡಿತರ ಅಕ್ಕಿಯಲ್ಲಿ ರಸಗೊಬ್ಬರದ ಹರಳು ಪತ್ತೆ!
ಗರ್ಭಿಣಿಯರು, ಮಕ್ಕಳಿಗೆ ಅನುಕೂಲ: ಸಾರವರ್ಧಿತಗೊಳಿಸಿರುವ (ಪೋರ್ಟಿಫೈಡ್) ಅಕ್ಕಿಯಲ್ಲಿ ಕೆಲವೊಂದು ಅಕ್ಕಿಯ ಕಾಳುಗಳು ನೆನೆದು ಉಬ್ಬಿದ ರೀತಿಯಲ್ಲಿರುವುದು ಆತಂಕ ಮೂಡಿಸುತ್ತದೆ. ಆದರೆ, ಇದು ರಕ್ತ ಹೀನತೆ, ಅಪೌಷ್ಟಿಕತೆ ನಿವಾರಣೆ, ಮಧುಮೇಹ, ಬಿಪಿಯಂತಹ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಗರ್ಭಿಣಿಯರಿಗೆ, ಬಾಣಂತಿಯರಿಗೆ, ಚಿಕ್ಕಮಕ್ಕಳಿಗೆ ಈ ಪಡಿತರ ಅಕ್ಕಿ ಪೌಷ್ಟಿಕತೆಯನ್ನು ಹೆಚ್ಚಿಸುತ್ತದೆ. ಜೊತೆಗೆ ದೇಹವನ್ನು ತಂಪಾಗಿಡುತ್ತದೆ. ಆದ್ದರಿಂದ ಯಾರೂ ಆತಂಕಕ್ಕೀಡಾಬಾರದು. ಈ ಬಗ್ಗೆ ನ್ಯಾಯಬೆಲೆ ಅಂಗಡಿಯವರಿಗೆ ಮತ್ತು ಫಲಾನುಭವಿಗಳಿಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.