ಗೋಕಾಕ್‌ನಲ್ಲಿ ಇಂಗ್ಲೆಂಡ್ ಮಾದರಿ ಕೊರೋನಾ ಚಿಕಿತ್ಸೆ!

By Suvarna NewsFirst Published May 8, 2021, 5:56 PM IST
Highlights

ರಾಜ್ಯದಲ್ಲಿ ಇಸ್ರೇಲ್‌ ಮಾದರಿ ಕೃಷಿ ಪದ್ಧತಿ ಎನ್ನುವ ಸುದ್ದಿ ಕೇಳಿರಬಹುದು. ಇದೀಗ ಇಂಗ್ಲೆಂಡ್ ಮಾದರಿಯಲ್ಲಿ ಕೊರೋನಾ ಚಿಕಿತ್ಸೆ ನೀಡಲಾಗುತ್ತಿದೆ.

ಗೋಕಾಕ್, (ಮೇ.08): ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಿರುವುದರಿಂದ ಸೋಂಕಿತರಿಗೆ ಸೂಕ್ತ ಸಮಯಕ್ಕೆ ಬೆಡ್, ಆಕ್ಸಿಜನ್ ಸಿಗುತ್ತಿಲ್ಲ. ಇದರಿಂದ ಕೆಲವರು ನರಳಿ-ನರಳಿ ಪ್ರಾಣಬಿಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ್‌ನಲ್ಲಿ ಇಂಗ್ಲೆಂಡ್ ಮಾದರಿಯಲ್ಲಿ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ.

ಹೌದು... ಇಂಗ್ಲೆಂಡ್ ಮಾದರಿಯಲ್ಲಿ ಗೋಕಾಕ್ ನಗರದಲ್ಲಿ ವೈದ್ಯರ ತಂಡ ಸೋಂಕಿತರ ಮನೆಯಲ್ಲಿಯೇ ಚಿಕಿತ್ಸೆ ನೀಡಲು ಮುಂದಾಗಿದೆ.
 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೆ ಸೋಂಕು ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ಮನೆಯಲ್ಲೇ ಚಿಕಿತ್ಸೆಗೆ ಮುಂದಾಗಿದ್ದಾರೆ.

ಆಕ್ಸಿಜನ್ ಇಲ್ಲದ ಹೊತ್ತಲ್ಲಿ ಡಿಆರ್‌ಡಿಒದ ಹೊಸ ಔಷಧಿ.. ತುರ್ತು ಬಳಕೆ ಅನುಮತಿ

ಬೆಳಗಾವಿ ಜಿಲ್ಲಿಯೆ ಗೋಕಾಕ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚಿಕ್ಕ ಮಕ್ಕಳ ತಜ್ಞರಾದ ಡಾ.ಜಗದೀಶ ಜಿಂಗಿ ನೇತೃತ್ವದಲ್ಲಿ ಅವರ ಸಹೋದ್ಯೋಗಿಗಳಾದ ರಾಷ್ಟ್ರೀಯ ಬಾಲ್ಯ ಸ್ವಾಸ್ಥ್ಯ ಕಾರ್ಯಕ್ರಮದ ವೈದ್ಯಾಧಿಕಾರಿಗಳಾದ (ಆರ್‌ಬಿಎಸ್‌ಕೆ) ಡಾ.ಶ್ವೇತಾ ಪಾಟೀಲ, ಡಾ.ಮಮತಾ ಹಡಗಿನಾಳ ಹಾಗೂ ಸಿಬ್ಬಂದಿ ಗುರುಸಿದ್ದ ಇವರ ತಂಡ ಇಂಗ್ಲೆಂಡ್ ಮಾದರಿಯಂತೆ ಗೋಕಾಕ್ ನಗರದಲ್ಲಿ ಸೋಂಕಿನ ವಿರುದ್ಧ ಹೋರಾಟ ನಡೆಸಿದೆ.

ಕಳೆದ ವರ್ಷ ಕೊರೋನಾದಿಂದ ತತ್ತರಿಸಿದ್ದ ಇಂಗ್ಲೆಂಡ್ ದೇಶವು ಅದರಿಂದ ಹೊರಬಂದು ಯಶಸ್ವಿಯಾದ ಯಶೋಗಾಥೆಯ ಮಾದರಿಯಲ್ಲಿಯೇ ಬೆಳಗಾವಿ ಜಿಲ್ಲೆಯ ಗೋಕಾಕನಲ್ಲಿ ವೈದ್ಯರ ತಂಡವೊಂದು ಕಾರ್ಯನಿರ್ವಹಿಸುತ್ತಿದೆ. ಜೊತೆಗೆ ಕೊರೋನಾವನ್ನು ಹೊಡೆದೊಡಿಸಲು ಇಂಗ್ಲೆಂಡ್ ಮಾದರಿಯನ್ನು ಅನುಸರಿಸುತ್ತಿದೆ.

ಇದುವರೆಗೂ 100ಕ್ಕೂ ಅಧಿಕ ಸೋಂಕಿತರ ಮನೆಗಳಿಗೆ ಹೋಗಿ ಚಿಕಿತ್ಸೆ ನೀಡಿದ್ದು,ಈ ಮೂಲಕ ಸೋಂಕಿತ ಆರೋಗ್ಯದೊಂದಿಗೆ ಮನೋಬಲ ವೃದ್ಧಿಸುವಲ್ಲಿ ವೈದ್ಯರ ತಂಡ ಯಶಸ್ವಿಯಾಗಿದೆ.
 
ತಂಡದಲ್ಲಿರುವ ವೈದ್ಯರು ಹಾಗೂ ಸಿಬ್ಬಂದಿಗಳು ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗುವ ಮೊದಲು ಹಾಗೂ ಸಂಜೆ ಕರ್ತವ್ಯ ಮುಗಿದ ನಂತರ ಸೋಂಕಿತ ಸೇವೆಗೆ ಈ ತಂಡ ಶ್ರಮಿಸುತ್ತಿದೆ.

ಏನಿದು ಇಂಗ್ಲೆಂಡ್ ಮಾದರಿ?:
ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿದರೇ ಸೋಂಕು ನಿವಾರಣೆಗಿಂತ ಹೆಚ್ಚಾಗುವ ಸಾಧ್ಯತೆ ಅಧಿಕ. ಇದನ್ನು ಅರಿತ ಇಂಗ್ಲೆಂಡ್ ಸರ್ಕಾರವು ವಯಸ್ಸಾದವರು ಸೇರಿದಂತೆ ಇನ್ನಿತರ ದೀರ್ಘ ಕಾಯಿಲೆ ಉಳ್ಳವರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡುವ ವ್ಯವಸ್ಥೆ ಜಾರಿಗೆ ತಂದಿತು. ಅಂದರೇ ಸೋಂಕಿತರ ಮನೆ ಮನೆಗೆ ವೈದ್ಯರ ತಂಡ ಹೋಗಿ ಅಲ್ಲಿಯೇ ಚಿಕಿತ್ಸೆ ನೀಡುವುದು. ಇದು ಇಂಗ್ಲೆಂಡ್ ಮಾದರಿಯ ವ್ಯವಸ್ಥೆಯಾಗಿತ್ತು.

ಗೋಕಾಕಿನಲ್ಲಿಯೂ ಇಂಗ್ಲೆಂಡ್ ಮಾದರಿ:
ಗೋಕಾಕ ಸರ್ಕಾರಿ ಆಸ್ಪತ್ರೆಯ ಚಿಕ್ಕ ಮಕ್ಕಳ ತಜ್ಞ ಡಾ. ಜಗದೀಶ ಜಿಂಗಿ ಅವರು ಇಂಗ್ಲೆಂಡ್ ಮಾದರಿಯ ಚಿಕಿತ್ಸಾ ವಿಧಾನವನ್ನು ತಿಳಿದುಕೊಂಡು ಅದೇ ಮಾದರಿಯಲ್ಲಿ ಗೋಕಾಕನಲ್ಲಿ ಜಾರಿಗೆ ತರಬೇಕೆಂದು ನಿರ್ಧರಿಸಿದರು. ಅದರಂತೆಯೇ ರಾಷ್ಟ್ರೀಯ ಬಾಲ್ಯ ಸ್ವಾಸ್ಥ್ಯ ಕಾರ್ಯಕ್ರಮದ ವೈದ್ಯಾಧಿಕಾರಿಗಳಾದ ಡಾ.ಶ್ವೇತಾ ಪಾಟೀಲ, ಡಾ.ಮಮತಾ ಹಡಗಿನಾಳ ಹಾಗೂ ಸಿಬ್ಬಂದಿ ಗುರುಸಿದ್ದ ಒಳಗೊಂಡ ತಂಡವನ್ನು ರಚನೆ ಮಾಡಿಕೊಂಡು ಸೋಂಕಿತರನ್ನು ಮನೆಯಲ್ಲಿಯೇ ಇಟ್ಟು ಚಿಕಿತ್ಸೆ ನೀಡುತ್ತಿದ್ದಾರೆ. ಇದುವರೆಗೂ ೧೦೦ಕ್ಕೂ ಅಧಿಕ ಸೋಂಕಿತರ ಮನೆಗಳಿಗೆ ಹೋಗಿ ಚಿಕಿತ್ಸೆ ನೀಡಿದ್ದಾರೆ.

ತೀವ್ರ ಸೋಂಕಿತರ ಜೀವ ರಕ್ಷಣೆಯ ಸಂಕಲ್ಪ:
ಸೋಂಕಿತರ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಂಚರಿಸುವುದರಿಂದ ಸೋಂಕು ಹೆಚ್ಚಾಗುತ್ತದೆ. ಹಾಗೆಯೇ ಸೋಂಕಿತರು ಆಸ್ಪತ್ರೆಗೆ ಬಂದಾಗ ಅವರಲ್ಲಿರುವ ಮನೋಬಲ ದಿನದಿಂದ ದಿನಕ್ಕೆ ಕುಗ್ಗುತ್ತದೆ ಎಂಬ ಹತ್ತಾರು ಕಾರಣಗಳನ್ನು ಗ್ರಹಿಸಿದ ವೈದ್ಯರ ತಂಡವು ಸೋಂಕಿತರ ಮನೆಗೆ ಹೋಗಿಯೇ ಉಪಚಾರ ಹಾಗೂ ಚಿಕಿತ್ಸೆ ಮುಂದುವರೆಸಿದ್ದಾರೆ. ಇದರಿಂದ ಸೋಂಕಿತರು ಬೇಗ ಗುಣಮುಖವಾಗುವುದಲ್ಲದೇ ಅನಗತ್ಯ ಇನ್ನೊಬ್ಬರಿಗೆ ಸೋಂಕು ಹರಡುವುದನ್ನು ತಡೆಯಬಹು. ಅಲ್ಲದೇ ತೀವ್ರ ಸೋಂಕಿತರಿಗೆ ವಿಶೇಷ ಚಿಕಿತ್ಸೆ ಹಾಗೂ ಆರೈಕೆ ಮಾಡುವ ಮೂಲಕ ಜೀವಹಾನಿ ತಪ್ಪಿಸುತ್ತಿದ್ದಾರೆ. ಜೊತೆಗೆ ಆಕ್ಸಿಜನ್, ವೆಂಟಿಲೆಟರ್ ಹಾಗೂ ಬೆಡ್ ಕೊರತೆಗಳಂತ ಸಮಸ್ಯೆಗಳನ್ನು ಇಂತಹ ಇಂಗ್ಲೆಂಡ್ ಚಿಕಿತ್ಸಾ ಮಾದರಿ ಮೂಲಕ ಬಗೆಹರಿಸಬಹುದು ಎಂಬುವುದನ್ನು ಡಾ.ಜಗದೀಶ ಜಿಂಗಿ ವೈದ್ಯರ ತಂಡ ಸಾಧಿಸಿ ತೊರಿಸಿದೆ.

click me!