ವಿದ್ಯುತ್‌ ದರ ಏರಿಕೆ ಶಾಕ್‌: ಯೂನಿಟ್‌ಗೆ 24 ಪೈಸೆಯಿಂದ 43 ಪೈಸೆವರೆಗೆ ಏರಿಕೆ

By Govindaraj S  |  First Published Sep 24, 2022, 1:01 AM IST

ರಾಜ್ಯ ವಿದ್ಯುತ್‌ ಗ್ರಾಹಕರು ಕಳೆದ ಏಪ್ರಿಲ್‌ ತಿಂಗಳಲ್ಲಿ ಆಗಿದ್ದ ವಿದ್ಯುತ್‌ ದರ (35 ಪೈಸೆ) ಹೆಚ್ಚಳ ಶಾಕ್‌ನಿಂದ ಚೇತರಿಸಿಕೊಳ್ಳುವ ಮೊದಲೇ ‘ಇಂಧನ ಹೊಂದಾಣಿಕೆ ವೆಚ್ಚ’ ಹೆಸರಿನಲ್ಲಿ ಮತ್ತೊಂದು ಶಾಕ್‌ ತಗುಲಿದೆ.


ಬೆಂಗಳೂರು (ಸೆ.24): ರಾಜ್ಯ ವಿದ್ಯುತ್‌ ಗ್ರಾಹಕರು ಕಳೆದ ಏಪ್ರಿಲ್‌ ತಿಂಗಳಲ್ಲಿ ಆಗಿದ್ದ ವಿದ್ಯುತ್‌ ದರ (35 ಪೈಸೆ) ಹೆಚ್ಚಳ ಶಾಕ್‌ನಿಂದ ಚೇತರಿಸಿಕೊಳ್ಳುವ ಮೊದಲೇ ‘ಇಂಧನ ಹೊಂದಾಣಿಕೆ ವೆಚ್ಚ’ ಹೆಸರಿನಲ್ಲಿ ಮತ್ತೊಂದು ಶಾಕ್‌ ತಗುಲಿದ್ದು, ಅ.1 ರಿಂದ ಅನ್ವಯವಾಗುವಂತೆ ಪ್ರತಿ ಯೂನಿಟ್‌ಗೆ 24 ಪೈಸೆಯಿಂದ 43 ಪೈಸೆವರೆಗೆ ವಿದ್ಯುತ್‌ ದರ ಹೆಚ್ಚಳ ಮಾಡಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಆದೇಶ ಹೊರಡಿಸಿದೆ.

ಕಳೆದ ಏಪ್ರಿಲ್‌ ತಿಂಗಳಲ್ಲಿ ಏ.1ರಿಂದ ಅನ್ವಯವಾಗುವಂತೆ ಎಲ್ಲಾ ಎಸ್ಕಾಂಗಳ ವ್ಯಾಪ್ತಿಯ ಗ್ರಾಹಕರಿಗೂ ಪ್ರತಿ ಯುನಿಟ್‌ಗೆ ಸರಾಸರಿ 35 ಪೈಸೆ ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿತ್ತು. ಇದೀಗ ಮೂರು ತಿಂಗಳಲ್ಲೇ ಮತ್ತೊಮ್ಮೆ ವಿದ್ಯುತ್‌ ದರ ಹೆಚ್ಚಳ ಮಾಡಲಾಗಿದ್ದು, ಈ ಬಾರಿ ಬೆಸ್ಕಾಂ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 43 ಪೈಸೆ, ಮೆಸ್ಕಾಂ (ಮಂಗಳೂರು) ಗ್ರಾಹಕರಿಗೆ ಪ್ರತಿ ಯುನಿಟ್‌ಗೆ 24 ಪೈಸೆ, ಚಾಮುಂಡೇಶ್ವರಿ- ಮೈಸೂರು ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 34 ಪೈಸೆ, ಹೆಸ್ಕಾಂ (ಹುಬ್ಬಳ್ಳಿ) ವ್ಯಾಪ್ತಿಯಲ್ಲಿ 35 ಪೈಸೆ, ಜೆಸ್ಕಾಂ (ಕಲಬುರಗಿ) ವ್ಯಾಪ್ತಿಯಲ್ಲಿ 35 ಪೈಸೆ ಹೆಚ್ಚಳ ಮಾಡಿ ಅ. 1 ರಿಂದಲೇ ಪರಿಷ್ಕೃತ ದರ ಅನ್ವಯವಾಗುವಂತೆ ಆದೇಶ ಹೊರಡಿಸಲಾಗಿದೆ.

Tap to resize

Latest Videos

Tumakuru: ವಿದ್ಯುತ್‌ ಉತ್ಪಾದನೆಯಲ್ಲಿ ಸುಧಾರಣೆಯಾಗಬೇಕು: ಡಾ.ಜಿ.ಪರಮೇಶ್ವರ್‌

6 ತಿಂಗಳ ಅವಧಿವರೆಗೆ ದರ ಹೆಚ್ಚಳ ಅನ್ವಯ: ಇಂಧನ ಹೊಂದಾಣಿಕೆ ವೆಚ್ಚದ ಹೆಸರಿನಲ್ಲಿ ವಿದ್ಯುತ್‌ ದರ ಹೆಚ್ಚಳಕ್ಕೆ ಸಮ್ಮತಿಸಿದ ಕೆಇಆರ್‌ಸಿ ಇಷ್ಟೂ ಮೊತ್ತವನ್ನು ಮೂರು ತಿಂಗಳಲ್ಲೇ ಸಂಗ್ರಹಿಸಿದರೆ ಗ್ರಾಹಕರ ಮೇಲೆ ಹೊರೆ ಹೆಚ್ಚಾಗಲಿದೆ. ಹೀಗಾಗಿ ಮೂರು ತಿಂಗಳ ಬದಲಾಗಿ ವಿವಿಧ ಎಸ್ಕಾಂಗಳಿಗೆ 24 ಪೈಸೆಯಿಂದ 43 ಪೈಸೆಯಂತೆ ಆರು ತಿಂಗಳ ಕಾಲ ಮಾಸಿಕ ವಿದ್ಯುತ್‌ ಬಿಲ್‌ನಲ್ಲಿ ಹೆಚ್ಚುವರಿ ಶುಲ್ಕ ವಿಧಿಸಬಹುದು. ತನ್ಮೂಲಕ ಇಂಧನ ಹೊಂದಾಣಿಕೆ ವೆಚ್ಚವನ್ನು ಸಂಗ್ರಹಿಸಬಹುದು ಎಂದು ಆದೇಶ ನೀಡಿದೆ.

ಏಪ್ರಿಲ್‌ನಿಂದ ಜೂನ್‌ವರೆಗೆ ಎಸ್ಕಾಂಗಳು ಖರೀದಿಸಿರುವ ವಿದ್ಯುತ್‌ ದರದಲ್ಲಿ ತೀವ್ರ ಹೆಚ್ಚಳ ಉಂಟಾಗಿದೆ. ಇದರಿಂದ ಎಸ್ಕಾಂಗಳಿಗೆ ಹೊರೆಯಾಗಿದ್ದು, ಪ್ರತಿ ಯುನಿಟ್‌ಗೆ ಸರಾಸರಿ 75 ಪೈಸೆಯಷ್ಟು ದರ ಹೆಚ್ಚಳ ಮಾಡಬೇಕು ಎಂದು ಕೆಇಆರ್‌ಸಿಗೆ ಎಸ್ಕಾಂಗಳು ಆಗಸ್ಟ್‌ನಲ್ಲಿ ಮನವಿ ಸಲ್ಲಿಸಿದ್ದವು.

ಮನವಿ ಪತ್ರದಲ್ಲಿ ಬೆಸ್ಕಾಂ ಪ್ರತಿ ಯೂನಿಟ್‌ 80.04 ಪೈಸೆ, ಮೆಸ್ಕಾಂ 55.68 ಪೈಸೆ, ಸೆಸ್ಕ್‌ (ಮೈಸೂರು) 70.61 ಪೈಸೆ, ಹೆಸ್ಕಾಂ 81.78 ಪೈಸೆ, ಜೆಸ್ಕಾಂ 57.96 ಪೈಸೆಯಷ್ಟು ಹೆಚ್ಚಳ ಮಾಡುವಂತೆ ಮನವಿ ಮಾಡಿತ್ತು. ಜತೆಗೆ, ಏಪ್ರಿಲ್‌ 2022ರಿಂದ ಜೂನ್‌ವರೆಗೆ 19,921 ದಶಲಕ್ಷ ಯೂನಿಟ್‌ ವಿದ್ಯುತ್‌ ಖರೀದಿ ಮಾಡಿದ್ದು, ಈ ವೇಳೆ 544.96 ಕೋಟಿ ರು. ಹೆಚ್ಚುವರಿ ಹೊರೆ ಬಿದ್ದಿದೆ. ಪ್ರತಿ ಯುನಿಟ್‌ಗೆ ಇಂಧನ ಖರೀದಿ ವೆಚ್ಚ 27 ಪೈಸೆ ಹೆಚ್ಚಳವಾಗಿದೆ. ಸರಬರಾಜು ಮತ್ತಿತರ ವೆಚ್ಚಗಳು ಸೇರಿ ಸರಾಸರಿ 75 ಪೈಸೆಯಷ್ಟು ಹೆಚ್ಚಳ ಕಂಡಿದ್ದು, ಈ ಮೊತ್ತವನ್ನು ಅ.1 ರಿಂದ ಡಿ.31ರವರೆಗಿನ ಅವಧಿಯಲ್ಲಿ ಹೊಂದಾಣಿಕೆ ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಿತ್ತು.

ಪರಿಶಿಷ್ಟ ಸಮುದಾಯಕ್ಕೆ ಉಚಿತ ವಿದ್ಯುತ್‌ ರದ್ದುಗೊಳಿಸಿಲ್ಲ: ಸಚಿವ ಸುನೀಲ್‌

ದರ ಹೆಚ್ಚಳ ವಿವರ
ವಿದ್ಯುತ್‌ ಸರಬರಾಜು ನಿಗಮ - ವಿದ್ಯುತ್‌ ದರ ಹೆಚ್ಚಳ (ಪ್ರತಿ ಯೂನಿಟ್‌ಗೆ)

ಬೆಸ್ಕಾಂ - 43 ಪೈಸೆ
ಮೆಸ್ಕಾಂ - 24 ಪೈಸೆ
ಸೆಸ್ಕ್‌ (ಮೈಸೂರು) - 34 ಪೈಸೆ
ಹೆಸ್ಕಾಂ (ಹುಬ್ಬಳ್ಳಿ) - 35 ಪೈಸೆ
ಜೆಸ್ಕಾಂ (ಕಲಬುರಗಿ) - 35 ಪೈಸೆ

click me!