
ಬೆಂಗಳೂರು (ಜು.24): ತಾವೆಷ್ಟೇ ಕಷ್ಟ ಅನುಭವಿಸಿದರೂ ಮಕ್ಕಳು ತಮ್ಮ ಹಾಗೆ ಕಷ್ಟ ಅನುಭವಿಸಬಾರದೆಂದೇ ಪ್ರತಿ ತಂದೆ ತಾಯಿಗಳು ಬಯಸುತ್ತಾರೆ. ಅಂಥದ್ದೊಂದು ಮನಕಲುಕುವ ಘಟನೆ ಬೆಂಗಳೂರಿನ ಮಂಜುನಾಥನಗರದಲ್ಲಿ ನಡೆದಿದೆ. ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬೆಳೆಸಿ, ಅವರ ಭವಿಷ್ಯಕ್ಕಾಗಿ ಬದುಕಿಡೀ ಶ್ರಮಿಸಿದ ಆ ವೃದ್ಧ ದಂಪತಿಗಳು ಕೊನೆಯ ಕ್ಷಣದಲ್ಲೂ ತಮ್ಮ ಬಗ್ಗೆ ಯೋಚಿಸಲಿಲ್ಲ ಎಂಬ ವಿಷಯವೇ ಮನಸು ಭಾರವಾಗಿಸುತ್ತೆ.
ಅನಾರೋಗ್ಯದಿಂದ ನೊಂದು ದಂಪತಿ ತಂಪು ಪಾನೀಯದಲ್ಲಿ ವಿಷ ಬೆರೆಸಿ ಕುಡಿದು ಆತ್ಮ೧ಹತ್ಯೆ ಮಾಡಿಕೊಂಡಿರುವ ಘಟನೆ ಬಸವೇಶ್ವರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಂಜುನಾಥ ನಗರದಲ್ಲಿ ನಡೆದಿದೆ.
ಮಂಜುನಾಥನಗರದ ನಿವಾಸಿ ಈಶ್ವರ್ ಆಚಾರಿ (77), ಅವರ ಪತ್ನಿ ಗೌರಿ (64) ಆತ್ಮಹತ್ಯೆ ಮಾಡಿಕೊಂಡವರು. ಬುಧವಾರ ತಡರಾತ್ರಿ ಈ ಘಟನೆ ನಡೆದಿದೆ. ಗುರುವಾರ ಮುಂಜಾನೆ ಕೆಲಸದಾಕೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ದಂಪತಿ ಅಕ್ಕಸಾಲಿಗ ಕೆಲಸ ಮಾಡಿಕೊಂಡಿದ್ದರು. ಆದರೆ, ವಯೋಸಹಜವಾದ ಬಿಪಿ, ಶುಗರ್, ಅಸ್ತಮಾ ಆರೋಗ್ಯ ಸಮಸ್ಯೆಯಿಂದ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಮಂಜುನಾಥ ನಗರದಲ್ಲಿ ಮನೆಯೊಂದನ್ನು ಭೋಗ್ಯಕ್ಕೆ ಪಡೆದು ವಾಸವಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಇಬ್ಬರಿಗೂ ಮದುವೆಯಾಗಿ ಬೇರೆಡೆ ವಾಸವಾಗಿದ್ದಾರೆ. ತಂದೆ-ತಾಯಿ ನೋಡಿಕೊಳ್ಳಲು ಕೆಲಸದಾಕೆಯನ್ನು ಇರಿಸಿ, ಮಾಸಿಕ ಇಂತಿಷ್ಟು ಹಣ ಕೊಡುತ್ತಿದ್ದರು. ಆರೋಗ್ಯ ತಪಾಸಣೆಯೂ ಮಾಡಿಸುತ್ತಿದ್ದರು. ಆಗಾಗ್ಗೆ ಮನೆಗೆ ಬಂದು ನೋಡಿಕೊಂಡು ಹೋಗುತ್ತಿದ್ದರು.
ಸೊಂಟ ನೋವಿನಿಂದ ಖಿನ್ನತೆ:
ಈ ಮಧ್ಯೆ ಗೌರಿ ಅವರು ಬಿದ್ದು ಸೊಂಟ ನೋವು ಮಾಡಿಕೊಂಡಿದ್ದರು. ಇದು ದಂಪತಿಗೆ ಇನ್ನಷ್ಟು ಮಾನಸಿಕ ಖಿನ್ನತೆಗೆ ಒಳಗಾಗುವಂತೆ ಮಾಡಿತ್ತು. ಪುತ್ರಿಯರಿಂದ ಹಣ ಪಡೆದು ಜೀವನ ನಿರ್ವಹಣೆ ಮಾಡುತ್ತಿದ್ದರಿಂದ ಬೇಸರಗೊಂಡು ಬುಧವಾರ ರಾತ್ರಿ ತಂಪು ಪಾನೀಯಗೆ ವಿಷ ಬೆರೆಸಿ ಕುಡಿದು ಮಲಗಿದ್ದ ಜಾಗದಲ್ಲೇ ಮೃತಪಟ್ಟಿದ್ದಾರೆ. ಮುಂಜಾನೆ ಎಂದಿನಿಂತೆ ಕೆಲಸದಾಕೆ ಮನೆಗೆ ಬಂದಾಗ ಎಚ್ಚರಗೊಂಡಿಲ್ಲ. ಕೂಡಲೇ ಅವರ ಪುತ್ರಿಯರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಅವರಿಗೆ ತಂದೆ-ತಾಯಿ ಆತ್ಮ೧ಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಸ್ಥಳದಲ್ಲಿ ವಿಷ ಬೆರೆಸಿ ಕುಡಿದ ತಂಪು ಪಾನೀಯದ ಬಾಟಲಿ ಪತ್ತೆಯಾಗಿದೆ. ಆದರೆ, ಯಾವುದೇ ಡೆತ್‌ನೋಟ್ ಪತ್ತೆಯಾಗಿಲ್ಲ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಅಸಹಜ (ಯುಡಿಆರ್) ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ