
ಅಕ್ರಮ ಹಣ ವರ್ಗಾವಣೆ ಹಾಗೂ ಕಾನೂನುಬಾಹಿರ ಬೆಟ್ಟಿಂಗ್ ದಂಧೆ ಆರೋಪದ ಹಿನ್ನೆಲೆ ಇಡಿ (ED) ಅಧಿಕಾರಿಗಳು ಶಾಸಕ ವೀರೇಂದ್ರ ಪಪ್ಪಿ ಅವರನ್ನು ಬಂಧಿಸಿ ಐದು ದಿನಗಳ ಕಾಲ ವಶದಲ್ಲಿಟ್ಟಿದ್ದರು. ಇಂದಿಗೆ ಆ ಕಸ್ಟಡಿ ಅವಧಿ ಅಂತ್ಯಗೊಂಡಿದ್ದು, ಪ್ರಕರಣವನ್ನು ವಿಚಾರಣೆಗಾಗಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ಕೋರ್ಟ್ 6 ದಿನಗಳ ಕಾಲ ಶಾಸಕ ವೀರೇಂದ್ರ ಪಪ್ಪಿ ಇಡಿ ವಶಕ್ಕೆ ನೀಡಿ ಆದೇಶ ಹೊರಡಿಸಿದೆ. ಜೊತೆಗೆ ನಿದ್ರೆ ಸಮಯ ನೀಡುವುದು ಸೇರಿದಂತೆ ಕನಿಷ್ಠ ಸೌಲಭ್ಯ ನೀಡಬೇಕು. ವಕೀಲರ ಭೇಟಿಗೆ ಅವಕಾಶ ನೀಡಬೇಕು. 24ಗಂಟೆಗೆ ಒಮ್ಮೆ ವೈದ್ಯಕೀಯ ತಪಾಸಣೆ ಮಾಡಬೇಕು, ಅಗತ್ಯ ವೈದ್ಯಕೀಯ ಸೌಲಭ್ಯ ನೀಡಬೇಕು. ಐಜನಿಕ್ ಫುಡ್, ವಾಟರ್, ಮೆಡಿಸಿನ್ ಹಾಗೂ ರೆಸ್ಟ್ ಗೆ ಅವಕಾಶ ನೀಡಬೇಕು. ಪ್ರತಿ ದಿನ 30ನಿಮಿಷ ವಕೀಲ ಭೇಟಿಗೆ ಅವಕಾಶ ನೀಡಬೇಕು ರಾತ್ರಿ 9 ಗಂಟೆ ನಂತರ ವಿಚಾರಣೆ ನಡೆಸದಂತೆ ಇಡಿ ಅಧಿಕಾರಿಗಳಿಗೆ ಕೋರ್ಟ್ ಸೂಚನೆ ನೀಡಿದೆ. ಪಪ್ಪಿ ಪರವಾಗಿ ಹಿರಿಯ ವಕೀಲರು ಕಿರಣ್ ಜವಳಿ ಮತ್ತು ಚಂದ್ರಮೌಳಿ ವಾದ ಮಂದಿಸಿದರೆ, ಇಡಿ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕ (SPP) ಪ್ರಮೋದ್ ಚಂದ್ರ ಅವರು ವಾದಿಸಿದರು.
ಇಡಿ ವಶದಲ್ಲಿ ಮಾನವೀಯ ಹಕ್ಕುಗಳ ಉಲ್ಲಂಘನೆಯಾಗಿದೆ. ಇಡಿ ಕಸ್ಟಡಿ ಅಂತ್ಯಗೊಂಡ ಬಳಿಕ, ವೀರೇಂದ್ರ ಪಪ್ಪಿ ನ್ಯಾಯಾಲಯದಲ್ಲಿ ಗಂಭೀರ ಆರೋಪಗಳನ್ನು ಹೊರ ಹಾಕಿದರು. ಕಸ್ಟಡಿಯಲ್ಲಿ ಕುಡಿಯಲು ಮಿನರಲ್ ವಾಟರ್ ನೀಡದೆ, ಒಂದೇ ಪ್ಲಾಸ್ಟಿಕ್ ಬಾಟಲಿನಲ್ಲಿ ನೀರು ನೀಡಲಾಗಿದೆ. ಸರಿಯಾದ ಆಹಾರ ನೀಡದೆ, ನಾನು ಶಾಕಾಹಾರಿ (vegetarian) ಆಗಿದ್ದರೂ ಮೊಸರು ಕೊಡಲಾಗಿಲ್ಲ. ಗಾಳಿ ಸರಿಯಾಗದ ಕಿಟಕಿಯನ್ನು ಹಾಕಿದ ಕೊಠಡಿಯಲ್ಲಿ ಇಟ್ಟಿದ್ದಾರೆ, ಇದರಿಂದ ನನಗೆ suffocation ಉಂಟಾಗಿದೆ. ಕಸ್ಟಡಿಯಲ್ಲಿದ್ದಾಗ ಏನಾದರೂ ಅಘಟನ ಸಂಭವಿಸಿದರೆ ಅದಕ್ಕೆ ಇಡಿ ಅಧಿಕಾರಿಗಳೇ ಹೊಣೆಗಾರರು ಎಂದು ಪಪ್ಪಿ ಕೋರ್ಟ್ ಮುಂದೆ ಹೇಳಿದರು.
ಇಡಿ ಪರವಾಗಿ ವಾದಿಸಿದ ವಿಶೇಷ ಸಾರ್ವಜನಿಕ ಅಭಿಯೋಜಕ (SPP) ಪ್ರಮೋದ್ ಚಂದ್ರ ಅವರು, ತನಿಖೆಗೆ ಇನ್ನೂ ಹೆಚ್ಚಿನ ಸಮಯ ಬೇಕು. ಆರೋಪಿ ಕಾನೂನು ಬಾಹಿರ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದಾರೆ. ವಿದೇಶಿ ವ್ಯವಹಾರಗಳ ದಾಖಲೆಗಳು ಲಭ್ಯವಾಗಿವೆ. ದಾಳಿ ಸಂದರ್ಭದಲ್ಲಿ ಕೋಟ್ಯಂತರ ನಗದು ಹಾಗೂ ವಿದೇಶಿ ಕರೆನ್ಸಿ ಪತ್ತೆಯಾಗಿದೆ. ಬೆಟ್ಟಿಂಗ್ ಆ್ಯಪ್ ಅವ್ಯವಹಾರದಲ್ಲಿ ಸಾಕಷ್ಟು ಜನ ಭಾಗಿಯಾಗಿದ್ದಾರೆ, ಕೆಲವರು ಪರಾರಿಯಾಗಿದ್ದಾರೆ. ಹೀಗಾಗಿ, ಹಣದ ಮೂಲ ಹಾಗೂ ನೆಟ್‌ವರ್ಕ್ ಪತ್ತೆಹಚ್ಚಲು ಆರೋಪಿ ಇನ್ನೂ ವಶದಲ್ಲಿರಬೇಕು ಎಂದು ಮನವಿ ಸಲ್ಲಿಸಿದರು. ಇದಕ್ಕಾಗಿ ಇಡಿಗೆ ಹೆಚ್ಚುವರಿ 15 ದಿನಗಳ ಕಸ್ಟಡಿ ನೀಡುವಂತೆ ಮನವಿ ಮಾಡಲಾಯಿತು.
ಪಪ್ಪಿ ಪರವಾಗಿ ವಾದಿಸಿದ ಹಿರಿಯ ವಕೀಲರು ಕಿರಣ್ ಜವಳಿ ಮತ್ತು ಚಂದ್ರಮೌಳಿ, ಇಡಿ ತನಿಖೆಯಲ್ಲಿ ಗಂಭೀರ ಲೋಪವಿದೆ ಎಂದರು. ಇಡಿಗೆ ಬಂಧಿಸುವ ಹಕ್ಕಿಲ್ಲದ ಪ್ರಕರಣಗಳನ್ನು ಆಧಾರ ಮಾಡಿಕೊಂಡು ಪಪ್ಪಿಯನ್ನು ಬಂಧಿಸಲಾಗಿದೆ. 2016ರಲ್ಲಿ ದಾಖಲಾದ ಚಳ್ಳಕೆರೆ ಠಾಣೆಯ 420 ಸೆಕ್ಷನ್ ಕೇಸ್ ಮತ್ತು ಸಿಬಿಐ ಪ್ರಕರಣಗಳನ್ನು ಉಲ್ಲೇಖಿಸಲಾಗಿದೆ. ಆದರೆ ಈ ಕೇಸ್‌ಗಳು ಈಗಾಗಲೇ ಮುಕ್ತಾಯಗೊಂಡಿವೆ. ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಪಾಲಿಸದೆ ಗ್ರೌಂಡ್ಸ್ ಆಫ್ ಅರೆಸ್ಟ್ ನೀಡಿದ್ದಾರೆ. ಇಡಿ ಅಧಿಕಾರಿಗಳು ಕೋರ್ಟ್‌ಗೆ ತಪ್ಪು ಮಾಹಿತಿ ನೀಡಿದ್ದಾರೆ. ಬೆಳಗಿನಜಾವ 3 ಗಂಟೆಯವರೆಗೂ ವಿಚಾರಣೆ ನಡೆಸಿ ಮಾನಸಿಕ ಹಿಂಸೆ ನೀಡಿದ್ದಾರೆ. ಹೀಗಾಗಿ ಈ ಬಂಧನ ಅಸಂವಿಧಾನಿಕವಾಗಿದ್ದು, ಆರೋಪಿಗೆ ಜಾಮೀನು ನೀಡಬೇಕು ಎಂದು ವಾದಿಸಿದರು.
ಇದಕ್ಕೆ ಕೋರ್ಟ್ ಜಡ್ಜ್ ಇಡಿಗೆ ಸ್ಪಷ್ಟನೆ ಕೇಳಿದರು. ನ್ಯಾಯಾಧೀಶರು ಇಡಿ ಅಧಿಕಾರಿಗಳಿಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದರು. “ಬಂಧಿಸುವಾಗ ನೀವು ಉಲ್ಲೇಖಿಸಿದ ಯಾವುದೇ ಪ್ರಕರಣಗಳು ಪ್ರಸ್ತುತ ಅಸ್ತಿತ್ವದಲ್ಲಿಲ್ಲ. ಹಾಗಾದರೆ ಯಾವ ಆಧಾರದ ಮೇಲೆ ಇಸಿಐಆರ್ ದಾಖಲಿಸಿದ್ದೀರಿ?” ಎಂದು ಕೋರ್ಟ್ ಪ್ರಶ್ನಿಸಿತು. ಸಿಬಿಐ ಕೇಸ್ ಬಹಳ ಹಿಂದೆಯೇ ಕ್ಲೋಸ್ ಆಗಿದೆ. ಹಾಗಿದ್ದರೂ ಕೋರ್ಟ್‌ಗೆ ತಪ್ಪು ಮಾಹಿತಿ ನೀಡಿರುವುದು ಯಾಕೆ? ಎಂದು ತರಾಟೆಗೆ ತೆಗೆದುಕೊಂಡರು. ಆರೋಪಿ ಬಂಧನದ ನಂತರ ಪ್ರಕರಣಗಳನ್ನು ಉಲ್ಲೇಖಿಸುವುದು ಕಾನೂನುಬಾಹಿರ ಎಂದು ಕೋರ್ಟ್ ಎಚ್ಚರಿಕೆ ನೀಡಿತು. ಮಧ್ಯಾಹ್ನದ ಬಳಿಕ ಈ ಕುರಿತು ವಾದ–ಪ್ರತಿವಾದ ನಡೆಯದು ಪಪ್ಪಿಯನ್ನು 6 ದಿನಗಳ ಕಾಲ ಇಡಿ ವಶದಲ್ಲಿಡಲು ಅಂತಿಮ ತೀರ್ಮಾನ ಪ್ರಕಟಿಸಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ