
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಭಾರಿ ಕಾರ್ಯಾಚರಣೆ ನಡೆಸಿದ್ದಾರೆ. ಅಂತರರಾಷ್ಟ್ರೀಯ ಭಯೋತ್ಪಾದಕ ಸಂಘಟನೆ ಸಿರಿಯಾದ 'ಐಸಿಸ್' (ISIS) ಶಿಬಿರಗಳಿಗೆ ಭಾರತದಿಂದ ಯುವಕರನ್ನು ನೇಮಕಾತಿ ಮಾಡುತ್ತಿದ್ದ ಹಾಗೂ ಅವರಿಗೆ ಆರ್ಥಿಕ ನೆರವು ನೀಡುತ್ತಿದ್ದ ಜಾಲವನ್ನು ಬೆನ್ನಟ್ಟಿರುವ ಇಡಿ ಅಧಿಕಾರಿಗಳು, ನಗರದ ಒಟ್ಟು 8 ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ದಾಖಲಿಸಿದ್ದ ಎಫ್‌ಐಆರ್ (FIR) ಮತ್ತು ತನಿಖಾ ವರದಿಯ ಆಧಾರದ ಮೇಲೆ ಜಾರಿ ನಿರ್ದೇಶನಾಲಯವು ಈ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿದೆ.
ಎನ್‌ಐಎ ತನಿಖೆಯ ವೇಳೆ ಅತ್ಯಂತ ಆಘಾತಕಾರಿ ವಿಚಾರಗಳು ಬೆಳಕಿಗೆ ಬಂದಿವೆ. ಬೆಂಗಳೂರಿನಲ್ಲಿ ಸಕ್ರಿಯವಾಗಿದ್ದ 'ಇಕ್ರಾ ವೆಲ್ಫೇರ್ ಟ್ರಸ್ಟ್' (Ikra Welfare Trust) ಮತ್ತು 'ಜಿಎಫ್‌ಎಂ ಟ್ರಸ್ಟ್' (GFM Trust) ಎಂಬ ಎರಡು ಸಂಸ್ಥೆಗಳ ಮೂಲಕ ಸಿರಿಯಾದಲ್ಲಿರುವ ಐಸಿಸ್ ಉಗ್ರರ ಶಿಬಿರಗಳಿಗೆ ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ. ಮುಗ್ಧ ಮುಸ್ಲಿಂ ಯುವಕರನ್ನು ಬ್ರೈನ್ ವಾಶ್ ಮಾಡಿ, ಅವರನ್ನು ಐಸಿಸ್ ಸಂಘಟನೆಗೆ ನೇಮಕ ಮಾಡಿಕೊಳ್ಳಲು ಹಾಗೂ ಅವರಿಗೆ ಬೇಕಾದ ಹಣಕಾಸಿನ ನೆರವು ಒದಗಿಸಲು ಈ ಎರಡು ಟ್ರಸ್ಟ್‌ಗಳ ಬ್ಯಾಂಕ್ ಖಾತೆಗಳನ್ನು ಬಳಸಿಕೊಳ್ಳಲಾಗಿತ್ತು ಎಂಬ ಅಂಶ ಬಹಿರಂಗವಾಗಿದೆ.
ಈ ಇಡೀ ಹಣಕಾಸು ಜಾಲದ ಪ್ರಮುಖ ಕೊಂಡಿಯಾಗಿದ್ದ ಜಿಎಫ್‌ಎಂ ಟ್ರಸ್ಟ್‌ನ ಅಧಿಕೃತ ಅಡಿಟರ್ ಶಬೀರ್ ಖಾನ್ ಎಂಬಾತನನ್ನು ಗುರಿಯಾಗಿಸಿಕೊಂಡು ಇಡಿ ದಾಳಿ ನಡೆಸಿದೆ. ಫ್ರೇಜರ್ ಟೌನ್‌ನಲ್ಲಿರುವ 'ಟಾಸ್ಕಿನ್ ಅಪಾರ್ಟ್ಮೆಂಟ್'ನಲ್ಲಿರುವ ಶಬೀರ್ ಖಾನ್ ನಿವಾಸ ಮತ್ತು ಕಚೇರಿಯ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು, ತಡರಾತ್ರಿಯವರೆಗೂ ಹಣಕಾಸಿನ ದಾಖಲೆಗಳ ತೀವ್ರ ಪರಿಣಾಮಕಾರಿ ಪರಿಶೀಲನೆ ನಡೆಸಿದ್ದಾರೆ. ವಿದೇಶಗಳಿಂದ ಟ್ರಸ್ಟ್‌ಗೆ ಬಂದಿರುವ ದೇಣಿಗೆ ಹಾಗೂ ಅವುಗಳು ಎಲ್ಲೆಲ್ಲಿಗೆ ವರ್ಗಾವಣೆಯಾಗಿವೆ ಎಂಬ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದ ಹಿನ್ನೆಲೆಯನ್ನು ಕೆದಕಿದಾಗ, ಈ ಜಾಲವು 2012 ರಿಂದಲೇ ಸಕ್ರಿಯವಾಗಿರುವುದು ಕಂಡುಬಂದಿದೆ. ಬೆಂಗಳೂರಿನಿಂದ ಒಟ್ಟು 6 ಯುವಕರನ್ನು ಆರ್ಥಿಕ ಸಹಾಯ ನೀಡಿ ಸಿರಿಯಾದಲ್ಲಿರುವ ಐಸಿಸ್ ಶಿಬಿರಕ್ಕೆ ಕಳುಹಿಸಿಕೊಡಲಾಗಿತ್ತು. ಈ 6 ಯುವಕರಲ್ಲಿ ಇಬ್ಬರು ಸಿರಿಯಾ ಯುದ್ಧಭೂಮಿಯಲ್ಲಿ ಸಾವನ್ನಪ್ಪಿದ್ದು, ಉಳಿದ ನಾಲ್ವರು ತೀವ್ರವಾಗಿ ಗಾಯಗೊಂಡು ಅಲ್ಲಿಯೇ ವಾಸವಾಗಿದ್ದರು. ಈ ಸರಣಿ ದೇಶದ್ರೋಹದ ಚಟುವಟಿಕೆಗೆ ಸಂಬಂಧಿಸಿದಂತೆ 2013 ರಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಎನ್‌ಐಎ ಅಧಿಕಾರಿಗಳು ಭಾರಿ ತನಿಖೆ ನಡೆಸಿದ್ದರು.
ಎನ್‌ಐಎ ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇರ್ಫಾನ್ ನಾಸೀರ್, ಮೊಹಮದ್ ತಾಕೀರ್, ಜುಹೈಬ್ ಮನ್ನ ಮತ್ತು ಅಬ್ದುಲ್ ಖಾದಿರ್ ಎಂಬ ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸಿದೆ. ಸದ್ಯ ಈ ನಾಲ್ವರೂ ಆರೋಪಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಈ ಪ್ರಕರಣದ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ನ್ಯಾಯಾಲಯದಲ್ಲಿ ಪ್ರಕರಣದ ಟ್ರಯಲ್ ನಡೆಯುತ್ತಿದೆ.
ಬಂಧಿತ ಆರೋಪಿಗಳ ಮನೆಗಳು ಮತ್ತು ಟ್ರಸ್ಟ್ ಕಚೇರಿಗಳ ಮೇಲೆ ಇಡಿ ಈಗ ದಾಳಿ ಮುಂದುವರಿಸಿದೆ. ಈ ಟ್ರಸ್ಟ್‌ಗಳು ಮತ್ತು ಆರೋಪಿಗಳು ಯುಎಇ (UAE), ಲಂಡನ್ ಮತ್ತು ದುಬೈ ಸೇರಿದಂತೆ ವಿದೇಶಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಗಳನ್ನು ಹೊಂದಿರುವುದನ್ನು ಇಡಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ