ರೋಹಿಣಿ ಸಿಂಧೂರಿ ಕಡತಕ್ಕೆ ಸಿಎಂ ಅಸ್ತು, ವರ್ಷಗಳಿಂದ ಠಿಕಾಣಿ ಹೂಡಿದ್ದ 80% ಗಣಿ ಇಲಾಖೆ ಸಿಬ್ಬಂದಿಗೆ ವರ್ಗಾವಣೆ ಶಾಕ್!

Published : Jul 20, 2026, 05:11 PM IST
Karnataka Mining Department

ಸಾರಾಂಶ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ 'ಮೇಜರ್ ಸರ್ಜರಿ' ಮಾಡಿದ್ದು, ದಶಕಗಳಿಂದ ಒಂದೇ ಸ್ಥಳದಲ್ಲಿದ್ದ ಸುಮಾರು 160 ಅಧಿಕಾರಿಗಳನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡಿದ್ದಾರೆ. ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿ, ಇಲಾಖೆಯ ಆದಾಯ ಹೆಚ್ಚಿಸುವ ಉದ್ದೇಶದಿಂದ ಈ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ.

ಬೆಂಗಳೂರು: ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ದಶಕಗಳಿಂದ ಒಂದೇ ಸ್ಥಳದಲ್ಲಿ ಬೀಡುಬಿಟ್ಟಿದ್ದ ಅಧಿಕಾರಿಗಳ ದರ್ಬಾರ್‌ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾರಿ ಬ್ರೇಕ್ ಹಾಕಿದ್ದಾರೆ. ಇಲಾಖೆಯ ಇತಿಹಾಸದಲ್ಲೇ ಅತ್ಯಂತ ದೊಡ್ಡದಾದ ಆಡಳಿತಾತ್ಮಕ ಪುನರ್‌ ವ್ಯವಸ್ಥೆಗೆ ಕೈಹಾಕಿರುವ ಸಿಎಂ, ಒಂದೇ ಸೂಕ್ಷ್ಮ ಹುದ್ದೆಗಳಲ್ಲಿ ಠಿಕಾಣಿ ಹೂಡಿದ್ದ ಸುಮಾರು ಶೇ. 80 ರಷ್ಟು ಸಿಬ್ಬಂದಿಯನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡುವ ಮೂಲಕ ಇಲಾಖೆಗೆ 'ಮೇಜರ್ ಸರ್ಜರಿ' ಮಾಡಿದ್ದಾರೆ.

ಅನಧಿಕೃತ ಗಣಿಗಾರಿಕೆಗೆ ಸಂಪೂರ್ಣ ಕಡಿವಾಣ ಹಾಕುವುದು, ಸ್ಥಳೀಯ ಪ್ರಭಾವಿ ರಾಜಕಾರಣಿಗಳ ಒಡನಾಟಕ್ಕೆ ಬ್ರೇಕ್ ಹಾಕುವುದು ಮತ್ತು ಇಲಾಖೆಯ ಆದಾಯವನ್ನು ಹೆಚ್ಚಿಸುವ ಜವಾಬ್ದಾರಿಯೊಂದಿಗೆ ಸರ್ಕಾರ ಈ ಮಹತ್ವದ ಆದೇಶ ಹೊರಡಿಸಿದೆ.

160 ಅಧಿಕಾರಿಗಳ ಬೃಹತ್ ವರ್ಗಾವಣೆ

ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ಆದೇಶದನ್ವಯ ಇಲಾಖೆಯ ವಿವಿಧ ವೃಂದದ ಒಟ್ಟು 160 ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬೇರೆ ಬೇರೆ ಸ್ಥಳಗಳಿಗೆ ವರ್ಗಾಯಿಸಲಾಗಿದೆ. ವರ್ಗಾವಣೆಗೊಂಡವರ ವಿವರ ಈ ಕೆಳಗಿನಂತಿದೆ:

  • ಭೂ ವಿಜ್ಞಾನಿಗಳು: 131 ಅಧಿಕಾರಿಗಳು
  • ಹಿರಿಯ ಭೂ ವಿಜ್ಞಾನಿಗಳು: 23 ಅಧಿಕಾರಿಗಳು
  • ಉಪನಿರ್ದೇಶಕರು (Deputy Directors): 06 ಅಧಿಕಾರಿಗಳು

ದಶಕಗಳ ಕಾಲ ಒಂದೇ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ, ತಮ್ಮ ಸ್ವಂತ ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳಲ್ಲೇ ರಾಜಕೀಯ ಪ್ರಭಾವ ಬಳಸಿ ಹುದ್ದೆ ಗಿಟ್ಟಿಸಿಕೊಂಡಿದ್ದ ಅಧಿಕಾರಿಗಳನ್ನು ಈ ಬಾರಿ ಕಡ್ಡಾಯವಾಗಿ ದೂರದ ಜಿಲ್ಲೆಗಳಿಗೆ ಸ್ಥಳಾಂತರಿಸಲಾಗಿದೆ.

ರೋಹಿಣಿ ಸಿಂಧೂರಿ ಸಭೆಯಲ್ಲಿ ಪ್ರಸ್ತಾಪಿಸಿದ್ದ ಕಡತಕ್ಕೆ ಸಿಎಂ ಅಸ್ತು!

ಜುಲೈ 1 ರಂದು ನಡೆದಿದ್ದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರು ಅಧಿಕಾರಿಗಳ ಸುದೀರ್ಘ ಕಾಲದ ವಾಸ್ತವ್ಯದ ಬಗ್ಗೆ ಪ್ರಸ್ತಾಪಿಸಿದ್ದರು. ಇಲಾಖೆಯಲ್ಲಿ ಪಾರದರ್ಶಕತೆ ಬರಬೇಕಾದರೆ ತಳಮಟ್ಟದಿಂದ ಬದಲಾವಣೆ ಅಗತ್ಯ ಎಂದು ಅವರು ವಿವರಿಸಿದ್ದರು.

ವಿಷಯದ ಗಂಭೀರತೆಯನ್ನು ಅರಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಸ್ಥಳೀಯ ಪ್ರಭಾವ ಹಾಗೂ ಅಧಿಕಾರಿಗಳ ಶಾಮೀಲಾಗಿರುವಿಕೆಯನ್ನು ಮುರಿಯಲು ತಕ್ಷಣವೇ ವರ್ಗಾವಣೆಯ ಸಮಗ್ರ ಕಡತವನ್ನು ಮಂಡಿಸುವಂತೆ ಸಭೆಯಲ್ಲೇ ರೋಹಿಣಿ ಸಿಂಧೂರಿ ಅವರಿಗೆ ಖಡಕ್ ಸೂಚನೆ ನೀಡಿದ್ದರು. ಸಿಎಂ ಸೂಚನೆ ನೀಡಿದ ಕೆಲವೇ ದಿನಗಳಲ್ಲಿ ಈ ಬೃಹತ್ ಆಡಳಿತಾತ್ಮಕ ಮರುಹಂಚಿಕೆ ಪ್ರಕ್ರಿಯೆ ಚಾಲನೆ ಪಡೆದುಕೊಂಡಿದೆ.

ಸರ್ಕಾರದ ಈ ಕಠಿಣ ಕ್ರಮದ ಹಿಂದಿನ ಪ್ರಮುಖ ಉದ್ದೇಶಗಳು

ಒಂದೇ ಸ್ಥಳದಲ್ಲಿದ್ದ ಅಧಿಕಾರಿಗಳು ಸ್ಥಳೀಯ ಅಕ್ರಮ ಗಣಿಗಾರಿಕೆ ದಂಧೆಕೋರರೊಂದಿಗೆ ಶಾಮೀಲಾಗುವುದನ್ನು ತಡೆಯುವುದು. ರಾಜಕೀಯ ಮತ್ತು ಪ್ರಾದೇಶಿಕ ಒತ್ತಡಗಳಿಗೆ ಮಣಿಯದೆ ಅಧಿಕಾರಿಗಳು ಮುಕ್ತವಾಗಿ ಕೆಲಸ ಮಾಡಲು ವಾತಾವರಣ ನಿರ್ಮಿಸುವುದು. ಇಲಾಖೆಯ ಇತಿಹಾಸದಲ್ಲೇ ಇಷ್ಟು ದೊಡ್ಡ ಮಟ್ಟದ ವರ್ಗಾವಣೆ ನಡೆದಿರುವುದು ಇದೇ ಮೊದಲು. ಇದರ ನೇರ ಉದ್ದೇಶ ಸರ್ಕಾರದ ಖಜನೆಗೆ ಬರುವ ಗಣಿಗಾರಿಕೆ ಆದಾಯವನ್ನು ಗಣನೀಯವಾಗಿ ಹೆಚ್ಚಿಸುವುದಾಗಿದೆ. ಸೂಕ್ಷ್ಮ ಮತ್ತು ಆಯಕಟ್ಟಿನ ಹುದ್ದೆಗಳಲ್ಲಿದ್ದ ಅಧಿಕಾರಿಗಳನ್ನು ಬದಲಾಯಿಸುವ ಮೂಲಕ ಇಲಾಖೆಯಲ್ಲಿ ಪಾರದರ್ಶಕತೆ ಹಾಗೂ ಜವಾಬ್ದಾರಿಯನ್ನು ತರುವುದು ಮುಖ್ಯ ಉದ್ದೇಶವಾಗಿದೆ. ಮುಖ್ಯಮಂತ್ರಿಗಳ ಈ ದಿಟ್ಟ ಕ್ರಮದಿಂದಾಗಿ ಗಣಿ ದಂಧೆಕೋರರಿಗೆ ಹಾಗೂ ಅವರಿಗೆ ಸಾಥ್ ನೀಡುತ್ತಿದ್ದ ಅಧಿಕಾರಿ ವಲಯಕ್ಕೆ ತೀವ್ರ ನಡುಕ ಉಂಟಾಗಿದ್ದು, ಇಲಾಖೆಯಲ್ಲಿ ಹೊಸ ಆಡಳಿತ ಪರ್ವ ಆರಂಭವಾದಂತಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದೆಹಲಿ ಅಧಿಕೃತ ಪ್ರಧಾನಿ ನಿವಾಸದಲ್ಲಿ ಕನ್ನಡದ ಕಂಪು, ತುಳಸಿ ಕಟ್ಟೆ ಕಟ್ಟಿಸಿದ ಪ್ರಪ್ರಥಮ ಮಹಿಳೆ ಚೆನ್ನಮ್ಮ ದೇವೇಗೌಡ!
ಬೆಳಗಾವಿಯಲ್ಲಿ ಕನ್ನಡಿಗರ SIR ಫಾರ್ಮ್ ಮರಾಠಿಯಲ್ಲಿ ಕೊಡಬೇಕಂತೆ; ಎಂಇಎಸ್ ಪುಂಡಾಟಿಕೆಗೆ ಶಿವಸೇನೆ ಸಂಸದನ ಸಾಥ್!