
ಬೆಂಗಳೂರು (ಆ.22): ಅಕ್ರಮ ಹಣ ವರ್ಗಾವಣೆ (ಮನಿ ಲಾಂಡರಿಂಗ್) ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಶಾಸಕ ವೀರೇಂದ್ರ ಪಪ್ಪಿ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಸಿಕ್ಕಿಂನಲ್ಲಿ ವಶಕ್ಕೆ ಪಡೆದಿದ್ದಾರೆ. ಕೋಲ್ಕತ್ತಾ ಇ.ಡಿ. ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದು, ಸದ್ಯ ವಿಚಾರಣೆ ನಡೆಸುತ್ತಿದ್ದಾರೆ.
ದಾಳಿ ಮತ್ತು ವಶದ ಹಿನ್ನೆಲೆ:
ಶಾಸಕ ವೀರೇಂದ್ರ ಪಪ್ಪಿ ಅವರಿಗೆ ಸೇರಿದ ಬೆಂಗಳೂರು, ಚಳ್ಳಕೆರೆ, ಗೋವಾ ಮತ್ತು ಚಿತ್ರದುರ್ಗ ಸೇರಿದಂತೆ ಒಟ್ಟು 17 ಕಡೆಗಳಲ್ಲಿ ಇತ್ತೀಚೆಗೆ ಇ.ಡಿ. ದಾಳಿ ನಡೆಸಿತ್ತು. ಈ ದಾಳಿಯ ಸಂದರ್ಭದಲ್ಲಿ ಇ.ಡಿ. ಅಧಿಕಾರಿಗಳು ಶಾಸಕರ ಮನೆಯಲ್ಲಿ ಒಂದು ಕೆ.ಜಿ. ಬಂಗಾರವನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಚಿತ್ರದುರ್ಗ ಮತ್ತು ಚಳ್ಳಕೆರೆಯಲ್ಲಿ ಗೇಮಿಂಗ್ ಆ್ಯಪ್‌ಗಳಿಗೆ ಸಂಬಂಧಿಸಿದಂತೆ ದಾಖಲಾದ ದೂರುಗಳ ಆಧಾರದ ಮೇಲೆ ಇ.ಡಿ. ಈ ತನಿಖೆಯನ್ನು ಕೈಗೊಂಡಿತ್ತು. ಇಸಿಐಆರ್ (Enforcement Case Information Report) ದಾಖಲಿಸಿಕೊಂಡು ಕರ್ನಾಟಕ ಮತ್ತು ಗೋವಾದ ಹಲವೆಡೆ ದಾಳಿ ನಡೆಸಿತ್ತು.
ಶಾಸಕ ವೀರೇಂದ್ರ ಪಪ್ಪಿ ಅವರು ತಮ್ಮ ವಿವಿಧ ಕಂಪನಿಗಳಾದ ‘ರತ್ನ ಗೇಮಿಂಗ್ ಸಲ್ಯೂಷನ್ಸ್, ರತ್ನ ಗೋಲ್ಡ್ ಕಂಪನಿ, ರತ್ನ ಮಲ್ಟಿ ಸೋರ್ಸ್ ಕಂಪನಿ, ಪಪ್ಪಿ ಟೆಕ್ನಾಲಜೀಸ್ ಕಂಪನಿ, ಪಪ್ಪಿ ಟೂರ್ಸ್ & ಟ್ರಾವೆಲ್ಸ್ ಮತ್ತು ಪಪ್ಪಿ ಬೇರ್ ಬಾಕ್ಸ್’ ಮೂಲಕ ಅಕ್ರಮ ಹಣ ವರ್ಗಾವಣೆ ನಡೆಸಿದ್ದಾರೆ ಎಂದು ಇ.ಡಿ. ಆರೋಪಿಸಿದೆ. ಸಿಕ್ಕಿಂನಲ್ಲಿ ಪಪ್ಪಿ ಅವರನ್ನು ವಶಕ್ಕೆ ಪಡೆದಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಇ.ಡಿ. ಅಧಿಕಾರಿಗಳ ತಂಡ ಸಿಕ್ಕಿಂಗೆ ತೆರಳಿದ್ದು, ಹೆಚ್ಚಿನ ವಿಚಾರಣೆಗಾಗಿ ಅವರನ್ನು ಬೆಂಗಳೂರಿಗೆ ಕರೆತರಲಿದೆ ಎಂದು ತಿಳಿದುಬಂದಿದೆ. ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ