* ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ 50% ಮನೆಗಳಿಗೆ ಬೀಗ
* ಉಳಿದವರಿಂದ ಭಜನೆ, ಜಾಗರಣೆ
* ನಿನ್ನೆ ಕೂಡ 3 ಬಾರಿ ಭೂಕಂಪ, ಜನ ಕಂಗಾಲು
* ಟ್ರ್ಯಾಕ್ಟರ್, ಬಸ್, ಬೈಕ್‌ಗಳಲ್ಲೇ ವಲಸೆ
* ಭೂಕಂಪನಕ್ಕೆ ಹೆದರಿ ಕಲಬುರಗಿ ಗ್ರಾಮಸ್ಥರ ಗುಳೆ
ಚಿಂಚೋಳಿ(ಅ.13): ಒಂದೇ ವಾರದಲ್ಲಿ 7 ಬಾರಿ ಭೂಕಂಪವಾಗಿರುವ(Earthquake) ಕಲಬುರಗಿ ಜಿಲ್ಲೆ ಚಿಂಚೋಳಿ(Chincholi) ತಾಲೂಕಿನ ಗಡಿಕೇಶ್ವರದಲ್ಲಿ ಮಂಗಳವಾರ ಮತ್ತೆ 3 ಬಾರಿ ಭೂಮಿ ಕಂಪಿಸಿದ್ದು, ಗ್ರಾಮಸ್ಥರು ಜೀವ ಭಯದಲ್ಲಿ ಊರನ್ನೇ ತೊರೆಯುತ್ತಿದ್ದಾರೆ. ಗಂಟು ಮೂಟೆ ಕಟ್ಟಿಕೊಂಡು ಬಸ್, ಟ್ರ್ಯಾಕ್ಟರ್, ಆಟೋ, ಎತ್ತಿನಬಂಡಿಗಳಲ್ಲಿ ತಮ್ಮ ಸಂಬಂಧಿಕರ, ಮಿತ್ರರ ಮನೆಗಳಿಗೆ ದಾಂಗುಡಿಯಿಡುತ್ತಿದ್ದಾರೆ. ಏತನ್ಮಧ್ಯೆ ಗ್ರಾಮಕ್ಕೆ ಚಿಂಚೋಳಿ ತಹಸೀಲ್ದಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಭೇಟಿ ನೀಡಿ ಜನರಲ್ಲಿ ಧೈರ್ಯ ತುಂಬುವ ಪ್ರಯತ್ನ ನಡೆಸಿದ್ದಾರೆ.
2015ರಿಂದಲೇ ಇಲ್ಲಿ ಆಗಾಗ ಭೂಮಿ ನಡುಗುತ್ತಿದೆ. ಕಳೆದ ಒಂದು ವಾರದಲ್ಲೇ 7 ಬಾರಿ ಭೂಕಂಪನವಾಗಿದೆ. ಅದರಲ್ಲೂ ಸೋಮವಾರ ರಾತ್ರಿಯಷ್ಟೇ ಆಗಿರುವ ಭೂಕಂಪನ(Earthquake) ರಿಕ್ಟರ್ ಮಾಪಕದಲ್ಲಿ 4.1 ದಾಖಲಾಗಿತ್ತು. ಬಳಿಕ ಮಂಗಳವಾರ ಬೆಳಗಿನ ಜಾವವೂ ಭೂಕಂಪನವಾಗಿದ್ದು ರಿಕ್ಟರ್ ಮಾಪಕದಲ್ಲಿ ಇದರ ಪ್ರಮಾಣ 3.5 ದಾಖಲಾಗಿದೆ. ಹಗಲು ರಾತ್ರಿಯೆನ್ನದೆ ನಿರಂತರ ಸಂಭವಿಸಿರುವ ಭೂಕಂಪನ ಇಲ್ಲಿನ ಜನರ ಜಂಘಾಬಲವನ್ನೇ ಉಡುಗುವಂತೆ ಮಾಡಿದೆ.
undefined
ಮಂಗಳವಾರ ಈ ಊರಿನ ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ ಜನ ದಟ್ಟಣೆ ಹೆಚ್ಚಿತ್ತು. ಎಲ್ಲರು ಮಕ್ಕಳು, ಮರಿಗಳ ಸಮೇತ ಗಂಟುಮೂಟೆ ಸಹಿತರಾಗಿ ವಾಹನಗಳನ್ನು ಹತ್ತಿ ಬಂಧು-ಬಳಗದವರ ಊರುಗಳಿಗೆ ಹೋಗುತ್ತಿದ್ದ ನೋಟಗಳು ಕಂಡವು. ಈಗಾಗಲೇ ಊರಿನ ಶೇ.50ರಷ್ಟುಮನೆಗಳು ಬೀಗ ಜಡಿಯಲ್ಪಟ್ಟಿವೆ.
ಭಜನೆ- ಜಾಗರಣೆಯಲ್ಲೇ ಕಾಲಹರಣ:
ಗಡಿಕೇಶ್ವರದಲ್ಲಿ ಸೋಮವಾರಾತ್ರಿಯ ಕಂಪನದಿಂದ ಜನ ಭಜನೆ, ಜಾಗರಣೆ ಮಾಡಿ ಕಾಲಹರಣ ಮಾಡಿದರು. ಮಂಗಳವಾರ ಮತ್ತೆ ಕಂಪನ ಕಾಡಿದಾಗ ಮನೆಯಿಂದ ಕಾಲ್ಕಿತ್ತಿದ್ದಾರೆ. ಕೆಲವರು ತಮ್ಮ ಮನೆಯಲ್ಲಿದ್ದ ಆಹಾರ ಧಾನ್ಯಗಳನ್ನು ಹಾಗೇ ಬಿಟ್ಟು ಹೋಗುತ್ತಿದ್ದರೆ ಇನ್ನು ಕೆಲವರು ರಾತ್ರಿಯೇ ಮನೆ ಖಾಲಿ ಮಾಡಿ ಮನೆಗಳ ಬೀಗ ಹಾಕಿಕೊಂಡು ಹೋಗಿದ್ದಾರೆ. ಪಕ್ಕದ ಕೊಡಳ್ಳಿ, ಹೊಸಳ್ಳಿ, ಹಲಚೇರಾ, ಕೊರವಿ, ಕೂಡಹಳ್ಳಿ, ತೇಗಲತಿಪ್ಪಿ , ಬೆನಕನಳ್ಳಿ, ಕೆರೋಳ್ಳಿ ಗ್ರಾಮಗಳಲ್ಲಿಯೂ ಕಂಪನದ ಭೀತಿ ಕಾಡುತ್ತಿದೆ.
ಪರಿಹಾರ ಬೇಡ, ಜೀವ ಉಳಿದರೆ ಸಾಕು:
ನಮ್ಮ ಗ್ರಾಮದಲ್ಲಿ ಕಳೆದ ಆರು ವರ್ಷಗಳಿಂದ ಭೂಮಿಯಿಂದ ಭಾರಿ ಶಬ್ದ ಉಂಟಾಗಿ ನಂತರ ಕಂಪನ ಆಗುತ್ತಿದೆ. ಗ್ರಾಮಸ್ಥರು ಹಗಲು ರಾತ್ರಿಯಲ್ಲಿ ಜೀವದ ಭಯದ ನೆರಳಿನಲ್ಲಿ ಜೀವನ ಸಾಗಿಸಬೇಕಾಗಿದೆ. ಗಡಿಕೇಶ್ವರ ಗ್ರಾಮದಲ್ಲಿ ಆಗುತ್ತಿರುವ ಭೂ ಕಂಪನದ ಬಗ್ಗೆ ಯಾರಿಗೂ ಕಾಳಜಿ ಇಲ್ಲ. ಸದ್ದು- ಕಂಪನಕ್ಕೇನು ಕಾರಣವೆಂದು ನಮಗೆ ಹೇಳಲಿ, ನಮಗೇನು ಪರಿಹಾರ ಬೇಕಿಲ್ಲ. ನಮ್ಮ ಜೀವ ಕಾಪಾಡಿದರೆ ಸಾಕೆಂದು ಊರವರಾದ ಸುರೇಶ ಪಾಟೀಲ, ರಾಜಶೇಖರ ರೆಮ್ಮಣ್ಣಿ, ನಾಗರಾಜ ಚಕ್ರವರ್ತಿ, ಪ್ರಕಾಶ ರಂಗನೂರ, ಸಂತೋಷ ಬಳಿ, ಮಂಗಳಮೂರ್ತಿ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಗಡಿಕೇಶ್ವರದಲ್ಲಿ 6 ವರ್ಷದಿಂದ ಆತಂಕ
- 2015ರಲ್ಲಿ ಮೊದಲ ಬಾರಿ ಭೂಮಿಯಿಂದ ಭಾರಿ ಸದ್ದು, ಬೆನ್ನಲ್ಲೇ ಕಂಪನದ ಅನುಭವ
- 2020ರ ಮಳೆಗಾಲದಲ್ಲಿ ಮತ್ತೆ ಹಲವು ಬಾರಿ ಸದ್ದು, ಭೂಕಂಪನದ ಅನುಭವ
- 2021ರ ಆಗಸ್ಟಲ್ಲಿ 4 ಬಾರಿ, ಸೆಪ್ಟೆಂಬರ್ 6, ಅಕ್ಟೋಬರ್‌ನಲ್ಲಿ 7 ಬಾರಿ ಸದ್ದು, ಕಂಪನ
- ಅ.11ರ ರಾತ್ರಿ 9.58ಕ್ಕೆ ಭೂಕಂಪನ ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆಯ ಭೂಕಂಪ
- ಅ.12ರ ಬೆಳಗ್ಗೆ 8.7ಕ್ಕೆ, 8.17ಕ್ಕೆ ರಾತ್ರಿ 8 ಗಂಟೆಗೆ ಒಟ್ಟು 3 ಬಾರಿ ಭೂಕಂಪನ
ಭಯ ಬೇಡ: ಜಿಲ್ಲಾಧಿಕಾರಿ ಜೋತ್ಸ್ನಾ
ಗಡಿಕೇಶ್ವರದಲ್ಲಿ ಅದಾಗಲೇ ಭೂ ವಿಜ್ಞಾನಿಗಳ ತಂಡ, ಪ್ರಕೃತಿ ವಿಕೋಪ ಪರಿಹಾರ ಕೋಶದ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ಮಾಡಿವೆ. ಮಳೆ, ಚಳಿಗಾಲದಲ್ಲಿ ಭೂಗರ್ಭದ ಒಳ ಪದರಲ್ಲಿನ ಬದಲಾವಣೆಗಳಿಂದಾಗಿ ಇಂತಹ ಸದ್ದು, ಕಂಪನಗಳು ಸಾಮಾನ್ಯ. ಇವೆಲ್ಲವೂ ಲಘು ಕಂಪನಗಳಾಗಿರೋದರಿಂದ ತೊಂದರೆ ಆಗೋದಿಲ್ಲವೆಂದು ಹೇಳಿದ್ದಾರೆ. ಮತ್ತೆ ತಜ್ಞರನ್ನ ಆಹ್ವಾನಿಸಿದ್ದು ಜನರೊಂದಿಗೆ ಕಾಲ ಕಳೆದು ಅರಿವು ಮೂಡಿಸುವಂತೆ ಕೋರಿದ್ದೇವೆ. ನಾನು ಸಹ ಈ ಊರಲ್ಲಿ ಶೀಘ್ರ ವಾಸ್ತ್ಯ ವ ಮಾಡುವ ಮೂಲಕ ಜನರಲ್ಲಿ ಆತ್ಮ್ಮವಿಶ್ವಾಸ ಮೂಡಿಸುವ ಕೆಲಸ ಮಾಡುವೆ ಎಂದು ಕಲಬುರಗಿ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸಾ$್ನ ತಿಳಿಸಿದ್ದಾರೆ.