
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು (ಡಿ.3): ಕೇಂದ್ರ ಸರ್ಕಾರದ ಆದಾಯ ತೆರಿಗೆ ಇಲಾಖೆಯ ಮಾದರಿಯಲ್ಲಿ ನ.10 ರಿಂದ ಬೆಂಗಳೂರಿನಲ್ಲಿ ಇ-ಖಾತಾ ವಿತರಣೆಗೆ ಆರಂಭಿಸಲಾಗಿದ್ದ ಆನ್‌ಲೈನ್ ಫೇಸ್ ಲೆಸ್ ವ್ಯವಸ್ಥೆಯನ್ನು ಕೇವಲ 20 ದಿನದಲ್ಲಿ ರದ್ದುಗೊಳಿಸಲಾಗಿದ್ದು, ಬುಧವಾರದಿಂದ ಹಳೇ ಪದ್ಧತಿಯೇ ಮರು ಜಾರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ನಿರ್ಧರಿಸಿದೆ.
ಆಸ್ತಿ ಮಾಲೀಕ ಖಾತಾ ಪಡೆಯಲು ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಭೇಟಿ ನೀಡುವುದು, ಮಧ್ಯವರ್ತಿಗಳ ಹಾವಳಿ, ಪ್ರಭಾವ ಮತ್ತು ಭ್ರಷ್ಟಾಚಾರ ತಪ್ಪಿಸುವುದು, ಆಸ್ತಿ ಮಾಲೀಕರು ಮಧ್ಯವರ್ತಿ ಮತ್ತು ಅಧಿಕಾರಿಗಳ ಮೇಲೆ ಅವಲಂಬನೆ ತಪ್ಪಿಸುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಂದಾಯ ವಿಭಾಗದಿಂದ ಫೇನ್‌ಲೆಸ್, ಸಂಪರ್ಕ ರಹಿತ ಮತ್ತು ಆನ್‌ಲೈನ್ ಇ-ಖಾತಾ ವಿತರಣೆಯ ಕ್ರಾಂತಿಕಾರಿ ವ್ಯವಸ್ಥೆಯನ್ನು ನ.10 ರಂದು ಜಾರಿಗೊಳಿಸಲಾಗಿತ್ತು. ಅಧಿಕಾರಿ, ಸಿಬ್ಬಂದಿಯಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ರದ್ದುಪಡಿಸುವುದಕ್ಕೆ ಮುಂದಾಗಿದೆ.
ಫೇಸ್‌ಲೆಸ್ ವ್ಯವಸ್ಥೆಯಡಿ ಎಫ್‌ಐಎಫ್‌ಓ (ಮೊದಲು-ಸ್ವೀಕರಿಸಿದ-ಮೊದಲು-ವಿಲೇವಾರಿ) ಮತ್ತು ಸ್ವಯಂಚಾಲಿತ ಅನುಮೋದನೆ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗಿತ್ತು. ಜತೆಗೆ, ಆನ್‌ಲೈನ್ ಮೂಲಕ ಇ ಖಾತಾ ಪಡೆಯುವುದಕ್ಕೆ ಸಲ್ಲಿಕೆಯಾದ ಅರ್ಜಿಗಳನ್ನು ರೌಂಡ್ ರಾಬಿನ್ ಪದ್ಧತಿ ಮೂಲಕ ಕಂದಾಯ ಉಪವಿಭಾಗದ ಹೊರಗಿನ ಅಧಿಕಾರಿಗಳಿಗೆ ಹಂಚಿಕೆ ಮಾಡುತ್ತದೆ. ಎಲ್ಲಾ ಅಧಿಕಾರಿಗಳಿಗೆ ಸಮಾನವಾಗಿ ಅರ್ಜಿ ವಿತರಿಸಲಾಗುತ್ತಿತ್ತು. ಎಲ್ಲಾ ಅಧಿಕಾರಿಗಳಿಗೆ ಸಮಾನ ಹೊರೆಯ ಕೆಲಸ ಹಂಚಿಕೆ ಮಾಡಲಾಗುತ್ತಿತ್ತು. ಆ ಎಲ್ಲವೂ ರದ್ದುಗೊಳ್ಳುತ್ತಿದ್ದು, ಬುಧವಾರದಿಂದ ಈ ಹಿಂದಿನ ವ್ಯವಸ್ಥೆಯೇ ಜಾರಿಗೆ ಬರಲಿದೆ.
\Bಆಯಾ ವ್ಯಾಪ್ತಿ ಅಧಿಕಾರಿಗಳೇ ಅರ್ಜಿ ವಿಲೇ: \Bಇ-ಖಾತಾ ಪಡೆಯುವುದಕ್ಕೆ ಆನ್‌ಲೈನ್ ಮೂಲಕ ಸಲ್ಲಿಕೆಯಾಗುವ ಅರ್ಜಿಯು ಆಸ್ತಿ ಇರುವ ಯಾವ ವಾರ್ಡ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಕೆಯಾಗಲಿದೆ. ಸಂಬಂಧಪಟ್ಟ ಕಂದಾಯ ವಿಭಾಗದ ಅಧಿಕಾರಿಗಳಿಗೆ ಅರ್ಜಿ ಪರಿಶೀಲನೆ ನಡೆಸಿ ಇ ಖಾತಾ ಅನುಮೋದನೆ ನೀಡಲಿದ್ದಾರೆ.
ಅರ್ಜಿ ವಿಲೇವಾರಿಗೆ ಕೇಸ್ ವರ್ಕರ್, ಸಹಾಯಕ ಕಂದಾಯ ಅಧಿಕಾರಿ, ಕಂದಾಯ ಅಧಿಕಾರಿಗೆ ನಿರ್ದಿಷ್ಟ ಕಾಲಾವಧಿ ನಿಗದಿ ಪಡಿಸಲಾಗಿದೆ. ಆ ಕಾಲಾವಧಿಯಲ್ಲಿ ವಿಲೇವಾರಿ ಮಾಡಬೇಕು. ಇಲ್ಲವಾದರೆ, ಅರ್ಜಿಯು ಮುಂದಿನ ಹಂತಕ್ಕೆ ಸ್ವಯಂ ಚಾಲಿತವಾಗಿ ವಿಲೇವಾರಿ ಆಗಲಿದೆ.
ಫೇಸ್ ಲೆಸ್ ಹಾಗೂ ರೌಂಡ್ ರಾಬಿನ್ ಪದ್ಧತಿಯು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಾಯ್ದೆಯಲ್ಲಿ ಇಲ್ಲ. ಸಲ್ಲಿಕೆಯಾಗುವ ಇ ಖಾತಾ ಅರ್ಜಿಗಳ ದಾಖಲೆಗಳನ್ನು ಪರಿಶೀಲನೆ ಮಾಡಬೇಕಾಗಲಿದೆ. ಕೆಲವು ಪ್ರಕರಣದಲ್ಲಿ ಸ್ಥಳ ಪರಿಶೀಲನೆ ಅಗತ್ಯವಿದ್ದು, ಫೇಸ್ ಲೆಸ್ ಮತ್ತು ರೌಂಡ್ ರಾಬಿನ್ ಪದ್ಧತಿಯಿಂದ ಸಮಸ್ಯೆ ಉಂಟಾಗಲಿದೆ. ಕೆಲವು ಪ್ರಕರಣದಲ್ಲಿ ಕಾನೂನು ಸಮಸ್ಯೆ ಇರುವ ಆಸ್ತಿಗಳಿಗೆ ಇ-ಖಾತಾ ಅನುಮೋದನೆ ನೀಡಿದ ಅಧಿಕಾರಿಗಳು ತೊಂದರೆ ಒಳಗಾಗಬೇಕಾಗಲಿದೆ. ಹಾಗಾಗಿ, ಈ ಪದ್ಧತಿ ಕೈಬಿಡಬೇಕೆಂದು ಒತ್ತಾಯಿಸಿದ್ದರು.
ಈ ಕುರಿತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿ-ನೌಕರರ ಕ್ಷೇಮಾಭಿವೃದ್ಧಿ ಸಂಘ ಸಹ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಫೇಸ್ ಲೆಸ್ ಮತ್ತು ರೌಂಡ್ ರಾಬಿನ್ ಪದ್ಧತಿ ಕೈಬಿಡುವುದಕ್ಕೆ ತೀರ್ಮಾನಿಸಲಾಗಿದೆ.
ಫೇಸ್‌ಲೆಸ್ ಮತ್ತು ರೌಂಡ್ ರಾಬಿನ್ ಪದ್ಧತಿಯಿಂದ ಇ ಖಾತಾ ಅರ್ಜಿ ವಿಲೇವಾರಿಗೆ ಸಾಕಷ್ಟು ಸಮಯ ವ್ಯರ್ಥವಾಗುತ್ತಿದ್ದು, ಭಾರಿ ಪ್ರಮಾಣದ ಅರ್ಜಿ ವಿಲೇವಾರಿ ಬಾಕಿ ಉಳಿದ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗುತ್ತಿದೆ. ಬುಧವಾರದಿಂದ ಅದಕ್ಕಿಂತ ಉತ್ತಮ ವ್ಯವಸ್ಥೆ ಜಾರಿಗೊಳಿಸಲಾಗುವುದು.\B\B
- ಮಹೇಶ್ವರ್ ರಾವ್, ಮುಖ್ಯ ಆಯುಕ್ತರು, ಜಿಬಿಎ
ಫೇಸ್‌ಲೆಸ್ ಮತ್ತು ರೌಂಡ್ ರಾಬಿನ್ ಪದ್ಧತಿಯಿಂದ ಇ-ಖಾತಾ ವಿತರಣೆ ಕಾರ್ಯಕ್ಕೆ ಅಡ್ಡಿಯಾಗಿತ್ತು. ಕೋರ್ಟ್, ಲೋಕಾಯುಕ್ತದಲ್ಲಿ ಕೇಸ್ ಇರುವ ಆಸ್ತಿಗಳಿಗೆ ಇ-ಖಾತಾ ಪಡೆಯಲು ಅರ್ಜಿ ಸಲ್ಲಿಕೆ ಆಗುತ್ತಿದ್ದವು. ಅವುಗಳನ್ನು ವ್ಯವಸ್ಥಿತವಾಗಿ ಪರಿಶೀಲನೆ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ರದ್ದುಪಡಿಸಬೇಕೆಂದು ಮನವಿ ಮಾಡಲಾಗಿತ್ತು.\B\B
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ