ಮತ್ತೆ ಟಿಪ್ಪು ಜಯಂತಿ ವಿವಾದ ಶುರು

By Web DeskFirst Published Oct 17, 2018, 9:28 AM IST
Highlights

 ಟಿಪ್ಪು ಜಯಂತಿಯನ್ನು ಸರ್ಕಾರವು ಯಾವುದೇ ಕಾರಣಕ್ಕೂ ಆಚರಣೆ ಮಾಡಬಾರದು ಎಂದು ಬಿಜೆಪಿ ಆಗ್ರಹಿಸಿದೆ. ಇದರಿಂದ ಹಿಂದೂ ಮುಸ್ಲಿಂ ಸಂಬಂಧ ಹಾಳಾಗುತ್ತದೆ ಎಂದು ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. 

ಬೆಂಗಳೂರು :  ಟಿಪ್ಪು ಜಯಂತಿ ಸಮೀಪಿಸುತ್ತಿದ್ದಂತೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಪ್ರತಿವರ್ಷದಂತೆ ಈ ಬಾರಿಯೂ ಟೀಕಾಪ್ರಹಾರ ಪ್ರಾರಂಭವಾಗಿದ್ದು, ಟಿಪ್ಪು ಜಯಂತಿಯನ್ನು ಸರ್ಕಾರವು ಯಾವುದೇ ಕಾರಣಕ್ಕೂ ಆಚರಣೆ ಮಾಡಬಾರದು ಎಂದು ಬಿಜೆಪಿ ಆಗ್ರಹಿಸಿದೆ.

ಟಿಪ್ಪು ಜಯಂತಿ ಆಚರಣೆಯಿಂದಾಗಿ ಸಂತೋಷವಾಗಿದ್ದ ಹಿಂದೂ-ಮುಸ್ಲಿಮರ ನಡುವಿನ ಸಂಬಂಧ ಹಾಳಾಗುವಂತೆ ಮಾಡಲಾಗಿದೆ. ಮತ್ತೆ ಸೌಹಾರ್ದತೆ ಮೂಡಬೇಕಾದರೆ ಟಿಪ್ಪು ಜಯಂತಿ ಆಚರಣೆಯನ್ನು ಮಾಡಬಾರದು ಎಂದು ಬಿಜೆಪಿ ಮುಖಂಡ ಕೆ.ಎಸ್‌.ಈಶ್ವರಪ್ಪ ಒತ್ತಾಯಿಸಿದರು.

ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಟಿಪ್ಪು ಜಯಂತಿಯನ್ನು ಆಚರಿಸಿದರೆ ಬಿಜೆಪಿ ಅದನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ. ವೋಟ್‌ ಬ್ಯಾಕ್‌ ರಾಜಕಾರಣಕ್ಕಾಗಿ ಪದೇ ಪದೇ ಟಿಪ್ಪು ಜಯಂತಿ ಆಚರಣೆ ಮಾಡಲಾಗುತ್ತಿದೆ. ಈ ಬಾರಿ ಟಿಪ್ಪು ಜಯಂತಿ ಆಚರಣೆ ಮಾಡುವುದು ಬೇಡ. ಮೈತ್ರಿ ಸರ್ಕಾರವು ಬಲವಂತವಾಗಿ ಆಚರಣೆ ಮಾಡಲು ಮುಂದಾದರೆ ಪ್ರತಿಪಕ್ಷವಾಗಿ ಬಿಜೆಪಿ ಏನು ಮಾಡಬೇಕೋ, ಅದನ್ನು ಮಾಡಲಿದೆ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್‌ ಮಾತನಾಡಿ, ಟಿಪ್ಪುವಿನಿಂದ ಕೊಡಗಿನಲ್ಲಿ ಜನರ ಮಾರಣ ಹೋಮವಾಗಿದೆ. ಹಿಂದೂಗಳ ಮೇಲೆ ದೌರ್ಜನ್ಯವಾಗಿದೆ. ಟಿಪ್ಪು ಖಡ್ಗವನ್ನು ತಂದವರು ಮತ್ತು ಟಿಪ್ಪುವಿನ ಸಿನಿಮಾ ಮಾಡಿದವರು ಏನಾದರು ಎಂಬುದು ಗೊತ್ತಿದೆ. ಇದೆಲ್ಲಾವನ್ನು ಮನಸ್ಸಿನಲ್ಲಿಟ್ಟುಕೊಂಡು ಸಮ್ಮಿಶ್ರ ಸರ್ಕಾರ ನಡೆದುಕೊಳ್ಳಬೇಕು. ವಿವಾದಾತ್ಮಕ ವ್ಯಕ್ತಿಯ ಜಯಂತಿ ಮಾಡಿ ಜನರ ಭಾವನೆಯನ್ನು ಕೆರಳಿಸಬಾರದು. ಟಿಪ್ಪು ಜಯಂತಿ ಆಚರಿಸಿದರೆ ಮೈತ್ರಿ ಸರ್ಕಾರ ಪತನದ ಅಧ್ಯಯನ ಪ್ರಾರಂಭವಾಗುತ್ತದೆ ಎಂದು ಹೇಳಿದರು.

ರಾಜಕೀಯ ಸಲ್ಲದು - ಕಾಂಗ್ರೆಸ್‌:  ಬಿಜೆಪಿ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್‌ ನಾಯಕ, ಮಾಜಿ ಸಚಿವ ತನ್ವೀರ್‌ ಸೇಠ್‌, ಪ್ರತಿಬಾರಿಯೂ ಟಿಪ್ಪು ಸುಲ್ತಾನ್‌ ಇತಿಹಾಸವನ್ನು ತಿರುಚುವ ಕೆಲಸ ಮಾಡಲಾಗುತ್ತಿದೆ ಮತ್ತು ಟಿಪ್ಪು ಜಯಂತಿ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ. ಇಂತಹ ಕೆಲಸ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಟಿಪ್ಪು ಅವಧಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹಲವು ಬದಲಾವಣೆಗಳನ್ನು ತರಲಾಗಿದೆ. ಸಾರಾಯಿ ನಿಷೇಧ ಸೇರಿದಂತೆ ಹಲವು ಒಳ್ಳೆಯ ಕೆಲಸಗಳು ಟಿಪ್ಪು ಕಾಲದಲ್ಲಿ ನಡೆದಿವೆ. ಆತನ ಉತ್ತಮ ಆಡಳಿತದ ಬಗ್ಗೆ ವಾಸ್ತವಾಂಶ ತಿಳಿದುಕೊಳ್ಳಬೇಕಾದರೆ ಅಳವಾಗಿ ಅಧ್ಯಯನ ಮಾಡಬೇಕು. ಒಳ್ಳೆಯ ಸಂಗತಿಗಳನ್ನು ಮುಂದಿಟ್ಟುಕೊಂಡು ಟಿಪ್ಪುವನ್ನು ನಾವೆಲ್ಲಾ ಸ್ಮರಿಸಬೇಕು. ಟಿಪ್ಪು ಜಯಂತಿ ಆಚರಣೆ ಸಂದರ್ಭದಲ್ಲಿ ಗೊಂದಲಗಳು, ಕೊಲೆಗಳು ನಡೆದಿವೆ ಎಂಬುದು ಬಿಜೆಪಿಯವರ ವಾದವಾಗಿದೆ. ಆದರೆ, ಇದನ್ನು ಮಾಡಿದವರು ಯಾರು ಎಂಬುದನ್ನು ಅವರೇ ಹೇಳಬೇಕು. ಟಿಪ್ಪು ಜಯಂತಿ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುವುದು ಸರಿಯಲ್ಲ ಎಂದರು.

ಟಿಪ್ಪು ಜಯಂತಿ ಆಚರಿಸದಂತೆ ಟಿಪ್ಪು ವಿರೋಧಿ ಸಮಿತಿ ಮನವಿ ಸಲ್ಲಿಸಿದ್ದು, ಸರ್ಕಾರವು ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ. ಆ ಬಗ್ಗೆ ನಾನು ಹೇಳಲು ಸಾಧ್ಯವಿಲ್ಲ. ಕಾಂಗ್ರೆಸ್‌ ಸರ್ಕಾರ ಆಚರಣೆ ಮಾಡಿಕೊಂಡು ಬಂದಂತೆ ಸಮ್ಮಿಶ್ರ ಸರ್ಕಾರ ಮುಂದುವರಿಸಲಿದೆ ಎಂದು ಹೇಳಿದರು.

click me!