ದಸರೆಗೆ ತವರಿಗೆ ತೆರಳುವವರಿಗೆ ಭರ್ಜರಿ ಬಿಸಿ

Published : Oct 17, 2018, 09:07 AM IST
ದಸರೆಗೆ ತವರಿಗೆ ತೆರಳುವವರಿಗೆ ಭರ್ಜರಿ ಬಿಸಿ

ಸಾರಾಂಶ

ದಸರೆಗೆ ತವರಿನತ್ತ ತೆರಳುವವರಿಗೆ ಶಾಕ್ ಕಾದಿದೆ. ರಾಜಧಾನಿಯಿಂದ ತಮ್ಮೂರಿಗೆ ತೆರಳುವವರಿಗೆ ಬಸ್ ಗಳ ದರ ಏರಿಕೆ ಭರ್ಕರಿ ಬಿಸಿ ಮುಟ್ಟಿಸುತ್ತಿದೆ. 

ಬೆಂಗಳೂರು: ಆಯುಧ ಪೂಜೆ ಹಾಗೂ ದಸರಾ ಹಿನ್ನೆಲೆಯಲ್ಲಿ ಸಾಲು ರಜೆಗಳು ಸಿಕ್ಕಿರುವುದರಿಂದ ಬುಧವಾರ ರಾತ್ರಿಯಿಂದಲೇ ರಾಜಧಾನಿಯ  ಮಂದಿ ಭಾರಿ ಸಂಖ್ಯೆಯಲ್ಲಿ ನಗರದಿಂದ ವಿವಿಧ ಸ್ಥಳಗಳಿಗೆ ತೆರಳಲಿದ್ದಾರೆ. ಆದರೆ ಅಗತ್ಯ ಪ್ರಮಾಣದಲ್ಲಿ ಬಸ್‌ಗಳು ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಪರಿಸ್ಥಿತಿಯ ದುರ್ಲಾಭ ಮಾಡಿಕೊಳ್ಳಲು ಬಹುತೇಕ ಖಾಸಗಿ ಬಸ್ ಆಪರೇಟರ್‌ಗಳು ಎಂದಿನಂತೆ ಎರಡು-ಮೂರು ಪಟ್ಟು ಪ್ರಯಾಣ ದರ ಏರಿಸಿ ಪ್ರಯಾಣಿಕರ ಸುಲಿಗೆ ಮುಂದುವರಿಸಿದ್ದಾರೆ.

ಉದ್ಯೋಗ ಸೇರಿದಂತೆ ನಾನಾ ಕಾರಣಗಳಿಂದ ರಾಜ್ಯ ಹಾಗೂ ಹೊರರಾಜ್ಯದ ಲಕ್ಷಾಂತರ ಮಂದಿ ಐಟಿ ನಗರ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇದೀಗ ಗುರುವಾರದಿಂದ ಭಾನುವಾರದವರೆಗೆ ನಾಲ್ಕು ದಿನಗಳ ಕಾಲ ಸಾಲು ರಜೆಗಳು ಸಿಕ್ಕಿರುವುದರಿಂದ ಊರುಗಳತ್ತ ಮುಖ ಮಾಡಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಸಾರ್ಟಿಸಿ) ಈ ಸಾಲು ರಜೆಗಳ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ವಿವಿಧೆಡೆ ಪ್ರಯಾಣಿಕರು ತೆರಳಲು ಬುಧವಾರದಿಂದ 2500 ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಿದೆ. 

ದೂರದ ಊರುಗಳಿಗೆ ತೆರಳುವವರು ವಾರದ ಹಿಂದೆಯೇ ಕೆಎಸ್ಸಾರ್ಟಿಸಿ ಮುಂಗಡ ಟಿಕೆಟ್ ಕಾಯ್ದಿರಿಸಿರುವುದರಿಂದ ನಿಗಮದ ಬಸ್‌ಗಳ ಬಹುತೇಕ ಆಸನಗಳು ಭರ್ತಿಯಾಗಿವೆ. ಜತೆಗೆ ನಗರದಿಂದ ಸಂಚರಿಸುವ ರೈಲುಗಳ ಮುಂಗಡ ಟಿಕೆಟ್ ಬುಕ್ಕಿಂಗ್ ಮುಕ್ತಾಯವಾಗಿದೆ. ಖಾಸಗಿ ಬಸ್‌ಗಳಲ್ಲಿ ಮಂಗಳವಾರದ ವೇಳೆಗೆ ಶೇ.95ರಷ್ಟು ಆಸನಗಳು ಭರ್ತಿಯಾಗಿವೆ.

ಖಾಸಗಿ ಬಸ್‌ಗಳ ದರ್ಬಾರ್: ಇಷ್ಟಾದರೂ ಬಸ್‌ಗಳ ಸಂಖ್ಯೆ ಕೊರತೆ ಜಾಸ್ತಿಯಾಗಿದೆ, ಇಂತಹ ಪರಿಸ್ಥಿತಿಯ ಲಾಭ ಪಡೆಯಲು ಬಹುತೇಕ ಖಾಸಗಿ ಬಸ್ ಆಪರೇಟರ್‌ಗಳು ಪ್ರಯಾಣ ದರವನ್ನು ಮನ ಬಂದಂತೆ ಹೆಚ್ಚಳ ಮಾಡಿದ್ದು, ಗ್ರಾಹಕರ ಸುಲಿಗೆಗೆ ಮುಂದಾಗಿದ್ದಾರೆ. ಖಾಸಗಿಯವರ ಈ ಹಗಲು ದರೋಡೆ ಮರುಕಳಿಸುತ್ತಿದ್ದರೂ ಪೊಲೀಸ್ ಇಲಾಖೆ ಅಥವಾ ಸಾರಿಗೆ ಇಲಾಖೆ ಕಡಿವಾಣ ಹಾಕುವಲ್ಲಿ ವಿಫಲವಾಗುತ್ತಿದೆ. ಸಾಮಾನ್ಯ ದಿನಗಳಲ್ಲಿ ಪ್ರಯಾಣಿಕರ ಕೊರತೆ ಇರುತ್ತದೆ. 

ನಷ್ಟದ ನಡುವೆಯೂ ನಿಗದಿತ ಮಾರ್ಗದಲ್ಲಿ ಬಸ್ ಕಾರ್ಯಾಚರಣೆ ಮಾಡುತ್ತೇವೆ. ಸಾಲು ರಜೆಗಳ ಸಂದರ್ಭದಲ್ಲಿ ಪ್ರಯಾಣದ ಏರಿಸಿ ನಷ್ಟ ಸರಿದೂಗಿಸಲು ಪ್ರಯತ್ನಿಸುತ್ತೇವೆ. ದರ ಏರಿಸದಿದ್ದರೆ ಬಸ್ ಕಾರ್ಯಾಚರಣೆ ಮಾಡುವುದು ಕಷ್ಟ. ದರ ಏರಿಕೆ ಪ್ರಯಾಣಿಕರಿಗೆ ಹೊರೆಯಾಗುತ್ತದೆ. ಆದರೆ, ಎಲ್ಲ ದಿನಗಳಲ್ಲೂ ಇದೇ ದರ ಇರುವುದಿಲ್ಲ ಎನ್ನುತ್ತಾರೆ ಖಾಸಗಿ ಬಸ್ ಸಿಬ್ಬಂದಿಯೊಬ್ಬರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Karnataka News Live: 1.8 ಲಕ್ಷ ಮಂದಿ ತೆರಿಗೆದಾರರು ‘ಗೃಹಲಕ್ಷ್ಮೀ’ ಫಲಾನುಭವಿಗಳು!
Karnataka High court: ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!