ಕಾದಂಬರಿ ಜಗತ್ತಿನ ಅನಭಿಷಿಕ್ತ ಸಾಮ್ರಾಟ ಡಾ। ಎಸ್‌.ಎಲ್‌.ಭೈರಪ್ಪ

Kannadaprabha News   | Kannada Prabha
Published : Sep 25, 2025, 05:14 AM IST
SL Bhyrappa Novels

ಸಾರಾಂಶ

ಸರಸ್ವತಿ ಸಮ್ಮಾನ್‌, ಪದ್ಮಭೂಷಣ, ಡಾ। ಎಸ್‌.ಎಲ್‌.ಭೈರಪ್ಪನವರ ನಿಧನಕ್ಕೆ ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ ಅವರ ನುಡಿನಮನ.

ಜೋಗಿ

ಗಿರಡ್ಡಿ ಗೋವಿಂದರಾಜು ಸಾರಥ್ಯದಲ್ಲಿ ನಡೆಯುತ್ತಿದ್ದ ಧಾರವಾಡ ಸಾಹಿತ್ಯ ಸಂಭ್ರಮದ ಸಭಾಂಗಣದಲ್ಲಿ ಯು.ಆರ್. ಅನಂತಮೂರ್ತಿ, ಚಂದ್ರಶೇಖರ ಪಾಟೀಲರು ಮುಂತಾದ ಹಿರಿಯ ಸಾಹಿತಿಗಳೆಲ್ಲ ಕುಳಿತಿದ್ದರು. ವೇದಿಕೆಯ ಮೇಲೆ ಮಾತನಾಡುತ್ತಿದ್ದವರ ಮಾತಿನ ನಡುವೆ ಎಸ್‌.ಎಲ್. ಭೈರಪ್ಪನವರ ಪ್ರಸ್ತಾಪ ಬಂತು. ಅಲ್ಲಿದ್ದವರಲ್ಲಿ ಬಹುತೇಕರು ನವ್ಯ ಚಳವಳಿಯಿಂದ ಬಂದ ಲೇಖಕರೇ ಆಗಿದ್ದರು. ಹೀಗಾಗಿ ಭೈರಪ್ಪನವರ ಹೆಸರು ಪ್ರಸ್ತಾಪವಾಗುತ್ತಿದ್ದಂತೆ ಅವರನ್ನು ಟೀಕಿಸಲು ಆರಂಭಿಸಿದರು. ವೇದಿಕೆಯ ಮೇಲಿದ್ದವರ ಜತೆ, ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದ ಗಣ್ಯರೂ ಎಸ್.ಎಲ್. ಭೈರಪ್ಪನವರ ಬಗ್ಗೆ ಒಂದೆರಡು ಟೀಕೆಗಳನ್ನು ಮಾಡಿದರು.

ಈ ಪ್ರಸಂಗ ನಡೆಯುತ್ತಿರುವಾಗಲೇ, ವೇದಿಕೆಯ ಸಮೀಪ ಇದ್ದ ಮುಖ್ಯದ್ವಾರದಿಂದ ಸ್ವತಃ ಎಸ್‌.ಎಲ್. ಭೈರಪ್ಪ ಸಭೆಗೆ ಪ್ರವೇಶಿಸಿದರು. ಭೈರಪ್ಪನವರು ಒಳಗೆ ಕಾಲಿಡುತ್ತಿದ್ದಂತೆ ವೇದಿಕೆಯ ಮೇಲೆ ಕುಳಿತವರು ಮಾತು ನಿಲ್ಲಿಸಿದರು. ಯು.ಆರ್. ಅನಂತಮೂರ್ತಿ ಎದ್ದು ಹೋಗಿ ಅವರ ಕೈ ಹಿಡಿದು ಕರೆದುಕೊಂಡು ಬಂದರು. ಭೈರಪ್ಪನವರನ್ನು ಅಷ್ಟೂ ಹೊತ್ತು ಟೀಕಿಸುತ್ತಿದ್ದವರು ಥಟ್ಟನೆ ಸುಮ್ಮನಾದರು. ಮಾತುಕತೆ ಬೇರೆಯೇ ದಿಕ್ಕಿನತ್ತ ಸಾಗಿತು.

ಭೈರಪ್ಪನವರು ಇದ್ದದ್ದೇ ಹಾಗೆ. ಅವರದು ಸ್ಪುಟವಾದ ವ್ಯಕ್ತಿತ್ವ, ತೆಳುವಾಗದ ನಿಲುವು, ನಿಷ್ಠುರ ಮಾತು, ತನ್ನ ಬರಹದ ಮೇಲೆ ಅತೀವ ಗೌರವ, ತಾನು ಹೇಳುತ್ತಿರುವುದು ಸತ್ಯ ಎಂಬ ಗಾಢನಂಬುಗೆ. ಭೈರಪ್ಪ ಸುಲಭವಾಗಿ ಮಾತಿಗೆ ಸಿಗುತ್ತಿರಲಿಲ್ಲ. ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಅವರ ಸಂವಾದ ಇತ್ತು. ಯಾರು ತನ್ನ ಜತೆ ಮಾತಾಡಬೇಕು ಅನ್ನುವುದನ್ನು ಅವರೇ ಸೂಚಿಸಿದ್ದರು. ಅದರ ಕೊನೆಯಲ್ಲಿ ಪ್ರೇಕ್ಷಕರ ಪ್ರಶ್ನೆಗಳಿಗೆ ಉತ್ತರಿಸುವ ಕಾರ್ಯಕ್ರಮ ಇತ್ತು. ಆ ಪ್ರಶ್ನೆಗಳನ್ನೂ ಅವರು ಮೊದಲೇ ತರಿಸಿಕೊಂಡಿದ್ದರು. ಯಾರಿಗೂ ನೇರವಾಗಿ ಪ್ರಶ್ನೆ ಕೇಳುವ ಅವಕಾಶವೇ ಇರಲಿಲ್ಲ.

ಸಿದ್ಧತೆ ಇಲ್ಲದೆ ಏನನ್ನೂ ಮಾಡುವುದಿಲ್ಲ ಎಂಬ ಮಾತಿಗೆ ಭೈರಪ್ಪ ಬದ್ಧರಾಗಿದ್ದರು. ಅದು ಪ್ರಶ್ನೆಯಾಗಲೀ, ಉತ್ತರವಾಗಲೀ, ಲೇಖನವಾಗಲೀ, ಮಾತುಕತೆಯಾಗಲೀ, ಕಾದಂಬರಿಯೇ ಆಗಲೀ, ಅವರು ಪೂರ್ವಸಿದ್ಧತೆ ಬೇಕು ಎನ್ನುತ್ತಿದ್ದರು. ಅವರನ್ನು ಸಂದರ್ಶನ ಮಾಡಲು ಹೋಗುವಾಗ ಕೂಡ, ವಾರದ ಮೊದಲೇ ಪ್ರಶ್ನೆ ಕಳುಹಿಸಬೇಕಿತ್ತು. ಆ ಪ್ರಶ್ನೆಗಳನ್ನು ಓದಿದ ನಂತರ ಸಂದರ್ಶನ ಬೇಕೇ ಬೇಡವೇ ಎಂದು ಅವರು ನಿರ್ಧರಿಸುತ್ತಿದ್ದರು.

ಅತಿ ಹೆಚ್ಚು ಓದುಗರ ಹೊಂದಿದ ಸಾಹಿತಿ

ಕನ್ನಡ ಸಾಹಿತ್ಯ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಓದುಗರನ್ನು ಹೊಂದಿದ್ದವರು ಎಸ್.ಎಲ್. ಭೈರಪ್ಪ. ಅವರ ಕಾದಂಬರಿಗಳಿಗಾಗಿ ಓದುಗರು ಕಾಯುತ್ತಿದ್ದರು. ಮೊದಲ ಮುದ್ರಣವೇ ಐದು ಸಾವಿರ ಪ್ರತಿ ಅಚ್ಚಾಗುತ್ತಿದ್ದ ಏಕೈಕ ಕಾದಂಬರಿಕಾರ ಭೈರಪ್ಪ. ಅವರ ಬಹುತೇಕ ಕಾದಂಬರಿಗಳು ಇಪ್ಪತ್ತೈದಕ್ಕಿಂತ ಹೆಚ್ಚು ಮುದ್ರಣಗಳನ್ನು ಕಂಡಿವೆ. ಹತ್ತಕ್ಕಿಂತ ಹೆಚ್ಚು ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ. ಇವತ್ತು ಸಿನಿಮಾ ಜಗತ್ತಿನಲ್ಲಿ ಜನಪ್ರಿಯವಾಗಿರುವ ಪಾನ್ ಇಂಡಿಯಾ ಎಂಬ ಪದ, ಎಸ್.ಎಲ್. ಭೈರಪ್ಪನವರಿಗೆ ದಶಕಗಳ ಹಿಂದೆಯೇ ಒಪ್ಪುತ್ತಿತ್ತು. ಅವರು ಕರ್ನಾಟಕದಲ್ಲಿ ಮಾತ್ರವಲ್ಲ, ಭಾರತಾದ್ಯಂತ ಇರುವ ಓದುಗರನ್ನು ತಲುಪುತ್ತಿದ್ದರು.

ಪ್ರತಿಯೊಂದು ಕಾದಂಬರಿಯನ್ನೂ ತನ್ನ ಮೊದಲ ಕಾದಂಬರಿ ಮತ್ತು ಕೊನೆಯ ಕಾದಂಬರಿ ಎಂಬಷ್ಟು ತೀವ್ರತೆಯಲ್ಲಿ ಅವರು ಬರೆಯುತ್ತಿದ್ದರು. ಪ್ರತಿ ಕಾದಂಬರಿಗೂ ಸೂಕ್ತ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ‘ಆವರಣ’ ಕಾದಂಬರಿಗೋಸ್ಕರ ದೇಶಾದ್ಯಂತ ಸುತ್ತಾಡಿದ್ದರು. ‘ಮಂದ್ರ’ ಕಾದಂಬರಿ ಬರೆಯುವ ಮೊದಲು ಸಂಗೀತಗಾರರ ಜತೆ ಹಲವು ತಿಂಗಳುಗಳನ್ನು ಕಳೆದಿದ್ದರು. ‘ಆವರಣ’ ಕಾದಂಬರಿ ಬರೆಯುವುದಕ್ಕೆ ಬೇಕಾದ ಮಾಹಿತಿ ಸಂಗ್ರಹಿಸಲು ಕೆಲವು ದಿನಗಳ ಕಾಲ ಬುಕರ್ ಪುರಸ್ಕೃತೆ ಬಾನು ಮುಷ್ತಾಕ್ ಮನೆಯಲ್ಲಿ ಠಿಕಾಣಿ ಹೂಡಿದ್ದರು.

ಅವರ ಆಪ್ತರೂ ಮೊದಲ ಓದುಗರೂ ಆಗಿದ್ದ, ಕನ್ನಡದ ಮಹತ್ವದ ಕತೆಗಾರ ಎಂ.ಎಸ್.ಕೆ. ಪ್ರಭು ಅವರು ಭೈರಪ್ಪನವರ ಕುರಿತು ಹೇಳುತ್ತಿದ್ದ ಮಾತು ಇದು: ‘ಭೈರಪ್ಪನವರಷ್ಟು ಸಿದ್ಧತೆ ಮಾಡಿಕೊಂಡು ಕಾದಂಬರಿ ಬರೆಯುವ ಲೇಖಕರು ಇಂಡಿಯಾದಲ್ಲೇ ಮತ್ತೊಬ್ಬರಿಲ್ಲ. ಒಂದು ಪಿಎಚ್‌ಡಿ ಪ್ರಬಂಧಕ್ಕೆ ಬೇಕಾದಷ್ಟು ಮಾಹಿತಿ ಸಂಗ್ರಹಿಸುತ್ತಾರೆ. ಅದು ಸರಿಯಾಗಿದೆಯೇ ಎಂದು ವಿವಿಧ ಮೂಲಗಳ ಮೂಲಕ ಪರಿಶೀಲಿಸುತ್ತಾರೆ. ನಂತರ ಅದನ್ನು ಎಷ್ಟು ಬೇಕೋ ಅಷ್ಟು ಕಾದಂಬರಿಯೊಳಗೆ ತರುತ್ತಾರೆ. ಅವರ ಜಗತ್ತಿನಲ್ಲಿ ಬರಹ ಬಿಟ್ಟು ಬೇರೇನೂ ಇಲ್ಲ. ಅವರಿಗೆ ಹೊರಗೆ ಏನೇನು ನಡೆಯುತ್ತಿದೆ ಅನ್ನುವುದೂ ಗೊತ್ತಾಗುವುದಿಲ್ಲ.’

ಡಾ। ರಾಜ್‌ ಪತ್ನಿ ಹೇಳಿದ್ದ ಭೈರಪ್ಪ ಪ್ರಸಂಗ

ಈ ಮಾತು ಸುಳ್ಳಲ್ಲ ಅನ್ನುವುದಕ್ಕೆ ಪಾರ್ವತಮ್ಮ ರಾಜ್‌ಕುಮಾರ್ ಹೇಳಿದ ಒಂದು ಪ್ರಸಂಗ ಸಾಕ್ಷಿ. ಭೈರಪ್ಪ ಅವರ ‘ನಿರಾಕರಣ’ ಕಾದಂಬರಿಯನ್ನು ಸಿನಿಮಾ ಮಾಡಲು ಪಾರ್ವತಮ್ಮ ನಿರ್ಧರಿಸಿದ್ದರು. ಕಾದಂಬರಿಯ ಹಕ್ಕು ಪಡೆಯಲು ಭೈರಪ್ಪನವರ ಬಳಿಗೆ ಚಿ. ಉದಯ ಶಂಕರ್ ಮತ್ತು ವರದಪ್ಪನವರು ಹೋಗಿದ್ದರು. ಕಾದಂಬರಿಯನ್ನು ಸಿನಿಮಾ ಮಾಡುವ ಮಾತು ಬರುತ್ತಿದ್ದಂತೆ ಎಸ್.ಎಲ್. ಭೈರಪ್ಪ ಯಾರು ನಟಿಸುತ್ತಿದ್ದಾರೆ ಎಂದು ಕೇಳಿದ್ದಾರೆ. ರಾಜ್‌ಕುಮಾರ್ ಅಂದ ತಕ್ಷಣ, ಅವರು ಚೆನ್ನಾಗಿ ನಟಿಸುತ್ತಾರೆಯೇ ಎಂದು ಮರುಪ್ರಶ್ನೆ ಹಾಕಿದ್ದಾರೆ. ಭೈರಪ್ಪನವರು ಕಾದಂಬರಿಗಳಲ್ಲಿ ಎಷ್ಟು ತಲ್ಲೀನರಾಗಿದ್ದರು ಎಂದರೆ ಆ ಕಾಲದ ಜನಪ್ರಿಯ ನಟರ ಪರಿಚಯ ಕೂಡ ಅವರಿಗೆ ಇರಲಿಲ್ಲ. ಕೊನೆಗೂ ಅವರ ಕಾದಂಬರಿ ‘ನಿರಾಕರಣ’ ಸಿನಿಮಾ ಆಗಲಿಲ್ಲ.

ಲೇಖಕ ಯಾವತ್ತೂ ಉತ್ಸವ ಮೂರ್ತಿ ಆಗಬಾರದು. ಅವನು ಗರ್ಭಗುಡಿಯೊಳಗಿನ ಮೂಲಮೂರ್ತಿಯಾಗಿಯೇ ಇರಬೇಕು. ಮೂಲದೇವರು ಊರಾಡಿದರೆ ಮಹಿಮೆ ಕಡಿಮೆ ಆಗುತ್ತದೆ ಎನ್ನುತ್ತಿದ್ದ ಭೈರಪ್ಪ, ಸಾರ್ವಜನಿಕ ಕಾರ್ಯಕ್ರಮಗಳಿಗೆ ಅಷ್ಟಾಗಿ ಹೋಗುತ್ತಿರಲಿಲ್ಲ. ಯಾರ ಕಣ್ಣಿಗೂ ಬೀಳದಂತೆ, ಯಾರ ಜತೆಗೂ ಬೆರೆಯದಂತೆ ಇದ್ದುಬಿಟ್ಟಿದ್ದರು. ಮೈಸೂರಿನಲ್ಲಿದ್ದವರೂ ಅವರನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ.

ಕನಕಪುರದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಎಸ್‌.ಎಲ್. ಭೈರಪ್ಪ ಸಂವಾದದಲ್ಲಿ ಉತ್ತರಿಸುತ್ತಾ ‘ಶುದ್ಧ ಸಾಹಿತ್ಯದ ಪ್ರೀತಿ ನಿಧಾನವಾಗಿ ಕಡಿಮೆಯಾಗುತ್ತಿದೆ. ಸಾಹಿತ್ಯಕ್ಕೆ ಸಾಮಾಜಿಕ ಜವಾಬ್ದಾರಿ ಇರಬೇಕು ಅಂತ ವಾದಿಸುವುದು ಕಮ್ಯೂನಿಸ್ಟ್‌ ನಿಲುವು. ಅದೇ ಸಾಹಿತ್ಯದ ಶತ್ರು’ ಎಂದಿದ್ದರು. ಆ ಮಾತಿಗೆ ಸಾಕಷ್ಟು ವಿರೋಧವೂ ವ್ಯಕ್ತವಾಗಿತ್ತು.

ಎಲ್ಲರ ಕಾದಂಬರಿಕಾರರಾಗಿದ್ದ ಎಸ್.ಎಲ್. ಭೈರಪ್ಪ ಕ್ರಮೇಣ ಒಂದು ಪಂಥದವರು ಮೆಚ್ಚುವ, ಮತ್ತೊಂದು ಪಂಥದವರು ವಿರೋಧಿಸುವ ಲೇಖಕರೆಂದು ಬಿಂಬಿತರಾದರು. ಕೊನೆಯ ಕೆಲವು ವರ್ಷಗಳಲ್ಲಿ ಅವರ ಕಾದಂಬರಿಗಳನ್ನು ವಿರೋಧಿಸಿ ಪುಸ್ತಕಗಳು ಅಚ್ಚಾದವು. ಗಿರೀಶ ಕಾರ್ನಾಡ ಮತ್ತು ಭೈರಪ್ಪನವರ ನಡುವೆ ಪತ್ರಿಕಾ ಸಮರವೂ ನಡೆಯಿತು.

ಪ್ರಸಿದ್ಧಿಯಂತೆ ವಿವಾದವನ್ನೂ ಮೈಗೆ ಅಂಟಿಸಿಕೊಳ್ಳದೇ ಇದ್ದ ಭೈರಪ್ಪ ಕೊನೆಯ ತನಕವೂ ತನ್ನಿಚ್ಛೆಯಂತೆಯೇ ಬದುಕಿದರು. ಕೊನೆಯ ದಿನಗಳಲ್ಲಿ ಅವರಿಗೆ ಮಾತು ಕೇಳಿಸುತ್ತಿರಲಿಲ್ಲ. ನೆನಪು ಮಂದವಾಗಿತ್ತು. ಮಾತಿಗೆ ಕುಳಿತರೆ ಯೌವನದ ದಿನಗಳ ನೆನಪುಗಳನ್ನು ಮೆಲುಕು ಹಾಕುತ್ತಿದ್ದರು. ನಡುನಡುವೆ ನೆನಪು ಕೈಕೊಟ್ಟಾಗ ತಬ್ಬಲಿಯಾದಂತೆ ಕಾಣಿಸುತ್ತಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!