ಬಹುತ್ವ ಇದ್ದರೆ ಭಾರತ ಬದುಕುತ್ತೆ, ಜಾತಿ ವ್ಯವಸ್ಥೆಯ ಬಗ್ಗೆ ಡಾ.ರಹಮತ್ ತರೀಕೆರೆ ಮಾತು

Published : Mar 07, 2025, 08:01 AM ISTUpdated : Mar 07, 2025, 08:58 AM IST
ಬಹುತ್ವ ಇದ್ದರೆ ಭಾರತ ಬದುಕುತ್ತೆ, ಜಾತಿ ವ್ಯವಸ್ಥೆಯ ಬಗ್ಗೆ ಡಾ.ರಹಮತ್ ತರೀಕೆರೆ ಮಾತು

ಸಾರಾಂಶ

ಚಿಂತಕ ಡಾ. ರಹಮತ್ ತರೀಕೆರೆ ಅವರು ಭಾರತದ ಬಹುತ್ವ ಮತ್ತು ಅದರ ಮಹತ್ವದ ಬಗ್ಗೆ ಮಾತನಾಡಿದರು. ಹಾಲುಮತ ಸಾಹಿತ್ಯ ಸಂಸ್ಕೃತಿ ಅಧ್ಯಯನ ಕಮ್ಮಟದಲ್ಲಿ, ಸಮುದಾಯಗಳ ಅಧ್ಯಯನದ ಅಗತ್ಯತೆ ಮತ್ತು ಅಳಿವಿನಂಚಿನಲ್ಲಿರುವ ಸಂಸ್ಕೃತಿಗಳ ರಕ್ಷಣೆ ಕುರಿತು ಅವರು ಅಭಿಪ್ರಾಯಪಟ್ಟರು.

ಭಾರತವು ಬಹುತ್ವಗಳ ರಾಷ್ಟ್ರವಾಗಿದ್ದು, ಬಹುತ್ವವನ್ನು ಗೌರವಿಸಿದರೆ ಭಾರತ ಬದುಕುತ್ತದೆ. ಇಲ್ಲವಾದರೆ ನೆಮ್ಮದಿ ಇಲ್ಲವಾಗುತ್ತದೆ ಎಂದು ಚಿಂತಕ ಡಾ. ರಹಮತ್ ತರೀಕೆರೆ ಹೇಳಿದರು.

ಕನ್ನಡ ವಿಶ್ವವಿದ್ಯಾಲಯದ ಪಂಪ ಸಭಾಂಗಣದಲ್ಲಿ ಹಾಲುಮತ ಅಧ್ಯಯನ ಪೀಠ ವತಿಯಿಂದ ಹಮ್ಮಿಕೊಂಡಿದ್ದ ಹಾಲುಮತ ಸಾಹಿತ್ಯ ಸಂಸ್ಕೃತಿ ಅಧ್ಯಯನ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮತ ಎಂದರೆ ಲೋಕ ದೃಷ್ಟಿ ತತ್ವಶಾಸ್ತ್ರ ಎಂದು ಅರ್ಥವಾಗುತ್ತದೆ. ಕರ್ನಾಟಕದ ಎಷ್ಟೋ ಸಮುದಾಯಗಳಿಗೆ ಅವುಗಳನ್ನು ಅರಿಯುವ ಕೆಲಸ ಇನ್ನೂ ಆಗಿಲ್ಲ. ಪ್ರತಿಯೊಂದು ಜಾತಿ ಒಳಗೆ ಮತ್ತೊಂದು ಪಂಗಡ ಇದೆ. ಸಮೃದ್ಧಿಯನ್ನು ಉತ್ತೇಜಿಸುವುದು ಹಾಲುಮತ, ಪಶುಗಾಯಿ ಪಂಥಗಳ ಮೇಲೆ ಅಧ್ಯಯನಗಳು ನಡೆಯಬೇಕು ಎಂದರು.

ಇನ್ನೂ ಪಶುಪಾಲನೆ ಮಾಡುವವರು ಶ್ರೇಷ್ಠ ಎಂದರೆ, ಹಂದಿ, ಕುದುರೆ, ಕತ್ತೆ ಇವುಗಳನ್ನು ಸಾಕುವವರನ್ನು ಏಕೆ ಇದರಿಂದ ಹೊರಗಡೆ ಇಟ್ಟಿದ್ದೀವಿ ಒಮ್ಮೆ ಆಲೋಚನೆ ಮಾಡಬೇಕು.

ಇದನ್ನೂ ಓದಿ: Palace Grounds Land Case:: ಮೈಸೂರು ರಾಜರಿಗೆ TDR ತಪ್ಪಿಸುವ ಮಸೂದೆ ಪಾಸ್!

ಪ್ರಮುಖವಾಗಿ ಸಮುದಾಯಗಳ ಅಧ್ಯಯನ ವರ್ತಮಾನಗಳಿಂದ ಕೂಡಿರಬೇಕು. ಪ್ರಾದೇಶಿಕ ನೆಲೆಯಲ್ಲಿ ಅಧ್ಯಯನ ಮಾಡಬೇಕಾಗಿದೆ. ಬಹುಮುಖ್ಯವಾಗಿ ದಲಿತ ಎಂಬ ಪದ ರಾಜಕೀಯ, ಸಾಮಾಜಿಕವಾಗಿ ಬಳಕೆಯಲ್ಲಿರುವುದರಿಂದ ಪರಿಚಿತವಾಗಿದ್ದು, ಭಾರತದಲ್ಲಿ ಪದರ ರೂಪದಲ್ಲಿ ಶ್ರೇಣಿಕೃತ ವ್ಯವಸ್ಥೆಯಲ್ಲಿ ದ್ವೇಷವನ್ನು ಕಾಣಬಹುದು. ಅದರಲ್ಲೂ ಮುಸ್ಲಿಮರಲ್ಲಿಯೂ ಅಸ್ಪೃಶ್ಯತೆ ಇದ್ದು, ಇದು ಅಷ್ಟಾಗಿ ಬೆಳಕಿಗೆ ಬಂದಿಲ್ಲ. ಇಂತಹ ಸಮುದಾಯಗಳ ಮೂಲ ನೆಲೆಯಲ್ಲಿ ಹರಿಯಬೇಕಾದರೆ ಏಕರೂಪಿ ಪರಿಭಾಷೆಯನ್ನು ತ್ಯಜಿಸಬೇಕು, ಹಾಗೆಯೇ ಜಾತಿ ಸಮೂಹದ ಕಲ್ಪನೆಯಿಂದ ಹೊರಬಂದು ಸಂಶೋಧನೆ ನಡೆಯಬೇಕು ಎಂದರು.
ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಹಾಲುಮತ ಸಂಸ್ಕೃತಿ ಬಹಳ ವಿಶಾಲವಾದ ಅರ್ಥದಲ್ಲಿ ಬಳಕೆಯಲ್ಲಿರುವ ಸಂಸ್ಕೃತಿ, ಅನೇಕ ಆಚರಣೆಗಳು ಈ ಸಂಸ್ಕೃತಿಯಲ್ಲಿ ಒಳಗಾಗಿವೆ. ಇಂದು ಅನೇಕ ಕಾರಣಗಳಿಗಾಗಿ ಅನಾದಿ ಕಾಲದಲ್ಲಿ ಇದ್ದಂತಹ ಆಚರಣೆ ಮತ್ತು ಸಂಪ್ರದಾಯಗಳು ಅನ್ಯಸಂಸ್ಕೃತಿಗೆ ಪ್ರಭಾವಕ್ಕೆ ಒಳಗಾಗಿವೆ. ಇನ್ನು ಕೆಲವೇ ದಿನಗಳಲ್ಲಿ ಮೂಲ ಆಚರಣೆಗಳ ಲಕ್ಷಣಗಳು ಮರೆಯಾಗುವುದರಲ್ಲಿ ಅನುಮಾನವಿಲ್ಲ. ಈ ನಿಟ್ಟಿನಲ್ಲಿ ಇಂತಹ ಅಧ್ಯಯನ ಕಮ್ಮಟಗಳ ಮೂಲಕ ಅಂತಹ ಅಳಿವಿನ ಅಂಚಿನಲ್ಲಿರುವ ಸಂಸ್ಕೃತಿಯನ್ನು ರಕ್ಷಿಸಬೇಕು ಎಂದರು.

ಹಾಲುಮತ ಅಧ್ಯಯನ ಪೀಠದ ಸಂಚಾಲಕ ಡಾ. ಎಫ್.ಟಿ. ಹಳ್ಳಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಬೋಧಕ ಬೋಧಕೇತರ ಸಿಬ್ಬಂದಿ, ಸಂಶೋಧನಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ
ಚುಂಚ ಶ್ರೀ ಬಳಿ ಕೈ ಮುಗಿದು ಎಚ್‌ಡಿಕೆ ಕ್ಷಮೆ