
ಮಂಗಳೂರು (ಮೇ.11): ದೇಶ ಕಾಯುವ ಸೈನಿಕರ ಅಭಿವೃದ್ಧಿಗಾಗಿ 3 ಕೋಟಿ ರು.ನೀಡುವುದಾಗಿ ‘ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್’ ಸಂಸ್ಥಾಪಕ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ‘ಸಹಕಾರ ರತ್ನ’ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಘೋಷಿಸಿದ್ದಾರೆ. ಮಂಗಳೂರು ಹೊರವಲಯದ ಬಂಗ್ರಕೂಳೂರಿನ ಗೋಲ್ಡ್‌ಫಿಂಚ್ ಸಿಟಿಯಲ್ಲಿ ಶನಿವಾರ ‘ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್’ ಆಶ್ರಯದಲ್ಲಿ ನವೋದಯ ಸ್ವಸಹಾಯ ಗುಂಪುಗಳ ‘ರಜತ ಸಂಭ್ರಮ-2025’ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ರಾಜೇಂದ್ರ ಕುಮಾರ್, ಭಯೋತ್ಪಾದನೆ ವಿರುದ್ಧ ದೇಶದ ಸೈನಿಕರು ಗಡಿ ಪ್ರದೇಶದಲ್ಲಿ ವೀರಾವೇಶದಿಂದ ಹೋರಾಡುತ್ತಿದ್ದಾರೆ. ಅವರಿಗೆ ನೈತಿಕ ಶಕ್ತಿ ತುಂಬಲು ಪ್ರಾರ್ಥನೆ ನಡೆಸುವುದರೊಂದಿಗೆ ಸೈನಿಕರ ಅಭಿವೃದ್ಧಿಗಾಗಿ 3 ಕೋಟಿ ರು.ನೀಡಲಾಗುವುದು ಎಂದರು. ಇದೇ ವೇಳೆ ಸೈನಿಕರಿಗೆ ಬೆಂಬಲ ನೀಡಲು ‘ಭಾರತ್ ಮಾತಾ ಕೀ ಜೈ..’ ಘೋಷಣೆ ಕೂಗಲಾಯಿತು.
ಸಂಘ ವಿಸ್ತರಣೆ: ಇನ್ನೂ ಒಂದೆರಡು ಜಿಲ್ಲೆಗಳಿಗೆ ನವೋದಯ ಸಂಘಗಳನ್ನು ವಿಸ್ತರಿಸಲಾಗುವುದು. ನವೋದಯ ಸ್ವಸಹಾಯ ಗುಂಪುಗಳ ಮೂಲಕ ಪುರುಷರಿಗೆ ಸರಿಸಮಾನವಾಗಿ ಮಹಿಳೆಯರೂ ಬೆಳೆಯುವಂತಾಗಿದೆ. ಈ ಮೂಲಕ ಮಹಿಳಾ ಶಕ್ತಿ ಏನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ನವೋದಯ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರನ್ನು ಇನ್ನಷ್ಟು ಸ್ವಾವಲಂಬಿಯಾಗಿಸುವ ಕೆಲಸವನ್ನು ನಾವು ಮಾಡಲಿದ್ದೇವೆ ಎಂದು ಅವರು ಹೇಳಿದರು. ‘30 ವರ್ಷಗಳ ಹಿಂದೆ ನಾನು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷನಾದಾಗ ಮಹಿಳೆಯರು ಮನೆಯಿಂದ ಹೊರಗೆ ಬರುವ ಪರಿಸ್ಥಿತಿ ಇರಲಿಲ್ಲ.
ಮಹಿಳೆಯರೂ ಪುರುಷರಂತೆ ಸ್ವಾವಲಂಬಿ ಜೀವನ ಸಾಗಿಸುವಂತಾಗಬೇಕು ಎಂದು ನಿಶ್ಚಯ ಮಾಡಿ 25 ವರ್ಷಗಳ ಹಿಂದೆ ನವೋದಯ ಸ್ವಸಹಾಯ ಗುಂಪುಗಳನ್ನು ರಚನೆ ಮಾಡಿದೆ. ಆಗಿನ ಸಹಕಾರ ಸಚಿವ ಡಿ.ಕೆ.ಶಿವಕುಮಾರ್, ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ನಾನು ಸೇರಿಕೊಂಡು ಕಾರ್ಕಳದಲ್ಲಿ ಇದಕ್ಕೆ ಚಾಲನೆ ನೀಡಿದ್ದೆವು. ಆರಂಭದಲ್ಲಿ ಎರಡು ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನವೋದಯ ಸಂಘಗಳು ಇಂದು 9 ಜಿಲ್ಲೆಗಳಿಗೆ ವಿಸ್ತರಣೆಯಾಗಿದೆ. ಲಕ್ಷಾಂತರ ಕುಟುಂಬಗಳಿಗೆ ಆಸರೆಯಾಗಿ ನಿಂತಿದೆ’ ಎಂದು ರಾಜೇಂದ್ರ ಕುಮಾರ್ ತಿಳಿಸಿದರು.
ದೇಶದ ಅಭಿವೃದ್ಧಿಗೆ ಮಹಿಳೆಯರು ಸಹಕಾರಿ: ಡಿಸಿಎಂ ಡಿ.ಕೆ.ಶಿವಕುಮಾರ್
ಡಾ.ಎಂಎನ್‌ಆರ್ ದಂಪತಿಗೆ ಸನ್ಮಾನ: ಸಮಾವೇಶದಲ್ಲಿ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮತ್ತು ಅರುಣಾ ರಾಜೇಂದ್ರ ಕುಮಾರ್ ದಂಪತಿಗೆ ನವೋದಯ ಸ್ವಸಹಾಯ ಗುಂಪಿನ ನವ ಮಹಿಳೆಯರು ಬೃಹತ್ ಹಾರ ಹಾಕಿ, ಸ್ಮರಣಿಕೆ ನೀಡಿ ಗೌರವಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ