ಕನ್ನಡ ಸಾಹಿತ್ಯ ಲೋಕದ ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ ಇನ್ನಿಲ್ಲ!

Published : Apr 19, 2021, 07:43 AM ISTUpdated : Apr 19, 2021, 10:37 AM IST
ಕನ್ನಡ ಸಾಹಿತ್ಯ ಲೋಕದ ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ ಇನ್ನಿಲ್ಲ!

ಸಾರಾಂಶ

ಮರೆಯಾಯ್ತು ಕನ್ನಡದ ಮತ್ತೊಂದು ಅಮೂಲ್ಯ ರತ್ನ| ನಿಘಂಟು ತಜ್ಞ ಪ್ರೊ.‌ ಜಿ ವೆಂಕಟಸುಬ್ಬಯ್ಯ ವಿಧಿವಶ| ಜಯನಗರದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದ ಪದ್ಮಶ್ರೀ ಪ್ರೊ. ವೆಂಕಟಸುಬ್ಬಯ್ಯ| ಕನ್ನಡದ ಏಳಿಗೆಗಾಗಿ ದುಡಿದವರು ಪ್ರೊ. ಜೀವಿ

ಬೆಂಗಳೂರು(ಏ.19) ಕನ್ನಡದ ನಿಘಂಟು ತಜ್ಞರೆಂದೇ ಪ್ರಸಿದ್ಧಿ ಹೊಂದಿರುವ ಕನ್ನಡ ಭಾಷಾಶಾಸ್ತ್ರಜ್ಞ, ಸಾಹಿತ್ಯ ಪ್ರೇಮಿ ನಾಡೋಜ ಪ್ರೊ. ಜಿ.ವೆಂಕಟಸುಬ್ಬಯ್ಯ(108), ಏಪ್ರಿಲ್ 19 ತಡರಾತ್ರಿ 1.15ಕ್ಕೆ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಿಘಂಟು ತಜ್ಞ ಶತಯಾಯುಷಿ ವೆಂಕಟಸುಬ್ಬಯ್ಯ ತಮ್ಮ ಪ್ರೀತಿ ಪಾತ್ರರನ್ನು ಅಗಲಿದ್ದಾರೆ.

"

ಅಲರ್: ಕನ್ನಡ ಪದಗಳ ಹುಡುಕಾಟಕ್ಕೊಂದು ಆನ್‌ಲೈನ್ ತಾಣ..!

ಒಂದು ವಾರದ ಹಿಂದೆ ಮೂತ್ರನಾಳದ ಸೋಂಕಿಗೆ ಒಳಗಾಗಿದ್ದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚೇತರಿಸಿಕೊಳ್ಳುತ್ತಿದ್ದ ಅವರು ಶೀಘ್ರದಲ್ಲೇ ಆಸ್ಪತ್ರೆಯಿಂದ ಬಿಡುಗಡೆಯಾಗುವುದಕ್ಕಿದ್ದರು. ಆದರೆ ರಾತ್ರಿ ವೇಳೆ ಮತ್ತೆ ಅಸ್ವಸ್ಥಗೊಂಡು ಕೊನೆಯುಸಿರೆಳೆದಿದ್ದಾರೆ. ಜಯನಗರದ 7ನೇ ಬ್ಲಾಕ್‌ನ ನಿವಾಸದಲ್ಲಿ ಅಂತಿಮ‌ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಚಾಮರಾಜಪೇಟೆಯ ಚಿತಾಗಾರದಲ್ಲಿ ಮಧ್ಯಾಹ್ನ 12.30ಗೆ ಅಂತ್ಯಕ್ರಿಯೆ ನಡೆಯಲಿದೆ. 

ಕನ್ನಡ ಭಾಷೆಯ ವ್ಯಾಕರಣಕ್ಕೆ ಸಂಬಂಧಿಸಿ ವೆಂಕಟಸುಬ್ಬಯ್ಯ ಅನೇಕ ಕೃತಿಗಳನ್ನು ರಚಿಸಿದ್ದರು.‌ ಕನ್ನಡ  ಭಾಷೆ ಅಥವಾ ಪದಗಳ ಅರ್ಥವಿವರಣೆಗೆ ಹಾಗೂ ಭಾಷೆಗೆ ಸಂಬಂಧಿಸಿದ ಗೊಂದಲಗಳ ನಿವಾರಣೆಗೆ ಇಂದಿಗೂ ವೆಂಕಟಸುಬ್ಬಯ್ಯ ರಚಿಸಿದ ಕೃತಿಗಳನ್ನೇ ಆಧಾರವಾಗಿ ಬಳಸಲಾಗುತ್ತದೆ. ಭಾಷೆಗೆ ನೀಡಿದ ಕೊಡುಗೆಗಾಗಿ ಅವರು ಪದ್ಮಶ್ರೀ ಪ್ರಶಸ್ತಿಗೂ ಭಾಜನರಾಗಿದ್ದರು.

ಹೆಗ್ಗಡೆ, ಜಿವಿ, ಜೆಪಿ ಶೆಟ್ಟಿಗೆ ಪ್ರೆಸ್‌ಕ್ಲಬ್‌ ಪ್ರಶಸ್ತಿ

ಮರೆಯಾಯ್ತು ಕನ್ನಡದ ಮತ್ತೊಂದು ಅಮೂಲ್ಯ ರತ್ನ

* ಪ್ರೊ.ಜಿ.ವೆಂಕಟಸುಬ್ಬಯ್ಯ 1913ರ ಆಗಸ್ಟ್ 13ರಂದು ಮೈಸೂರಿನ ಗಂಜಾಂನಲ್ಲಿ ಜನಿಸಿದ್ದ ಅವರು ಭಾಷಾ ತಜ್ಞ, ಸಂಶೋಧಕ, ಬರಹಗಾರ, ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದ ನಿಘಂಟು ಶಾಸ್ತ್ರ, ಪ್ರಾಚೀನ ಸಾಹಿತ್ಯ ಅಧ್ಯಯನ, ಅನುವಾದ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ.

* ‘ಇಗೋ ಕನ್ನಡ’ ಅಂಕಣದ ಮೂಲಕ ಕನ್ನಡ ಪದಗಳ ಶೋಧವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದರು. ಈ ಅಂಕಣ ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಅಪಾರ ಜನಪ್ರಿಯತೆ ಪಡೆದಿತ್ತು. ಯಾವುದೇ ಪದಗಳ ಅರ್ಥ ನಿಷ್ಕರ್ಷೆಯಲ್ಲಿ ಅನುಮಾನಗಳು ಮೂಡಿದರೆ ನೇರವಾಗಿ ಜಿವಿ ಅವರಿಗೆ ವಿದ್ಯಾರ್ಥಿ-ಶಿಕ್ಷರು ಪತ್ರ ಬರೆಯುತ್ತಿದ್ದರು. ಇಂಥ ಪತ್ರಗಳಿಗೆ ಜಿವಿ ತಾಳ್ಮೆಯಿಂದ ಉತ್ತರಿಸುತ್ತಿದ್ದುದಲ್ಲದೆ, ತಮ್ಮ ಅಂಕಣದಲ್ಲಿಯೂ ಪ್ರಸ್ತಾಪಿಸುತ್ತಿದ್ದರು. ಜಿವಿ ಅವರ ಇಗೋ ಕನ್ನಡ ಪುಸ್ತಕ ಕನ್ನಡ ಭಾಷಾಶಾಸ್ತ್ರಕ್ಕೆ ಸಿಕ್ಕ ದೊಡ್ಡ ಕೊಡುಗೆಯಾಗಿದೆ.

ಇವರ ಭಾಷಾ ಸಾಹಿತ್ಯ ಸಾಧನೆಗೆ ಹಂಪಿ ವಿಶ್ವವಿದ್ಯಾಲಯ ಪ್ರತಿಷ್ಠಿತ ನಾಡೋಜ ಪ್ರಶಸ್ತಿಯನ್ನಿತ್ತು ಗೌರವಿಸಿದೆ. ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ, ಪಂಪ ಪ್ರಶಸ್ತಿ, ಸೇಡಿಯಾಪು ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಭಾಷಾ ಸಮ್ಮಾನ್‌, ಗೋಕಾಕ್‌ ಪ್ರಶಸ್ತಿ, ಅನಕೃ ನಿರ್ಮಾಣ್‌ ಸ್ವರ್ಣ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಪ್ರೊ. ವೆಂಕಟಸುಬ್ಬಯ್ಯ ಅವರ ಮುಡಿಗೇರಿವೆ. ಬೆಂಗಳೂರಿನಲ್ಲಿ ನಡೆದ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!
New Hate-Speech Law: ದ್ವೇಷ ಭಾಷಣ ತಡೆಗೆ ಹೊಸ ಕಾನೂನು: ಈ ಕಾಯ್ದೆ ತರ್ತಿರೋ ಟಾರ್ಗೆಟ್ ನಾನೇ ಎಂದ ಯತ್ನಾಳ್!