ಡಬಲ್‌ ರೂಪಾಂತರಿ ವೈರಸ್‌ : 2 ತಿಂಗಳು ಬಹಳ ಎಚ್ಚರಿಕೆ ವಹಿಸಿ

By Kannadaprabha NewsFirst Published Mar 26, 2021, 8:10 AM IST
Highlights

ರಾಜ್ಯದಲ್ಲಿ ಇದೀಗ ಮತ್ತೊಂದು ಭೀತಿ ಎದುರಾಗಿದೆ. ಈ ನಿಟ್ಟಿನಲ್ಲಿ ಜನರು ಇನ್ನೆರಡು ತಿಂಗಳು ಅತ್ಯಂತ ಜಾಗರೂಕರಾಗಿ ಇರಬೇಕು ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. 

ಬೆಂಗಳೂರು (ಮಾ.26):  ರಾಜ್ಯಕ್ಕೂ ಡಬಲ್‌ ಮ್ಯುಟೆಂಟ್‌ (ರೂಪಾಂತರಿ) ಕೊರೋನಾ ವೈರಸ್‌ ಭೀತಿಯಿದ್ದು, ಜನರು ಎಚ್ಚರಿಕೆ ವಹಿಸುವಂತೆ ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌ ಕರೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೂಪಾಂತರಿ ಕೊರೋನಾಕ್ಕೆ ವೇಗವಾಗಿ ಹರಡುವ ಸಾಮರ್ಥ್ಯವಿದೆ. ಆದ್ದರಿಂದ ನಾವು ಗರಿಷ್ಠ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕಿದೆ. ರಾಜ್ಯದಲ್ಲಿ ಡಬಲ್‌ ರೂಪಾಂತರಿ ವೈರಸ್‌ ಈವರೆಗೆ ಪತ್ತೆಯಾಗಿಲ್ಲ. ಆದರೆ, ನೆರೆ ರಾಜ್ಯಗಳಲ್ಲಿ ವಿಪರೀತ ಹಾವಳಿ ಮಾಡುತ್ತಿದ್ದು, ರಾಜ್ಯಕ್ಕೂ ವಕ್ಕರಿಸುವ ಭೀತಿಯಿದೆ ಎಂದು ಹೇಳಿದರು.

ಮುಂದಿನ ಎರಡು ತಿಂಗಳು ಜನರು ಬಹಳ ಎಚ್ಚರಿಕೆಯಿಂದ ಇರಬೇಕು. ನೆಗಡಿ, ಕೆಮ್ಮು ಬಂದರೆ ನಿರ್ಲಕ್ಷ್ಯ ಮಾಡದೇ ಕೋವಿಡ್‌ ಪರೀಕ್ಷೆಗೆ ಒಳಪಡಬೇಕು. ಕೋವಿಡ್‌ನಿಂದ ಸಂಭವಿಸುವ ಮರಣವನ್ನು ತಪ್ಪಿಸುವುದು ನಮ್ಮ ಆದ್ಯತೆಯಾಗಿದೆ ಎಂದು ತಿಳಿಸಿದರು.

ಕೊರೋನಾ ಸೋಂಕಿತರ ಕೈಗೆ ಮತ್ತೆ ಸೀಲ್‌: ಸಚಿವ ಸುಧಾಕರ್‌ ..

ರಾಜ್ಯಕ್ಕೆ ಬುಧವಾರ ತಡರಾತ್ರಿ 4 ಲಕ್ಷ ಡೋಸ್‌ ಕೋವಿಡ್‌ ಲಸಿಕೆ ಬಂದಿದೆ. ಇನ್ನು ಕೆಲವೇ ದಿನಗಳಲ್ಲಿ ಮತ್ತೆ 12 ಲಕ್ಷ ಡೋಸ್‌ ಲಸಿಕೆ ಬರಲಿದೆ. ರಾಜ್ಯದಲ್ಲಿ ಲಸಿಕೆಯ ಕೊರತೆಯಿಲ್ಲ. ಇನ್ನು ನಾಲ್ಕೈದು ದಿನದಲ್ಲಿ 12 ಲಕ್ಷ ಡೋಸ್‌ ಲಸಿಕೆ ರಾಜ್ಯದ ಕೈ ಸೇರಲಿದೆ. ಅರ್ಹ ಫಲಾನುಭವಿಗಳು ಯಾವುದೇ ಹಿಂಜರಿಕೆ ತೋರದೆ ಕೋವಿಡ್‌ ಲಸಿಕೆ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಕೋವಿಡ್‌ನ ಮೊದಲ ಅಲೆ ಅಪ್ಪಳಿಸಿದಾಗ ಲಸಿಕೆ ಎಂಬುದು ಆಶಾಕಿರಣವಾಗಿತ್ತು. ಆದರೆ ಈಗ ವಾಸ್ತವವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಬೇಕು. ಲಸಿಕೆ ಪಡೆಯಲು ಆರ್ಹರಿಗೆ ಅರಿವು ಮೂಡಿಸಬೇಕು ಎಂದು ಸುಧಾಕರ್‌ ಹೇಳಿದರು.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್‌ ರೋಗಿಗಳಿಗೆ 400 ಹಾಸಿಗೆ ಮೀಸಲಿರಿಸಲಾಗಿದೆ. ಪ್ರಕರಣ ಹೆಚ್ಚಿದರೆ ಹಾಸಿಗೆ ಸಂಖ್ಯೆ ಹೆಚ್ಚಿಸಲಾಗುವುದು. ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆ, ಬೌರಿಂಗ್‌ ಆಸ್ಪತ್ರೆ, ಚರಕ ಆಸ್ಪತ್ರೆಗಳನ್ನೂ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.

click me!