ಟೆರರ್‌ ಡಾಕ್ಟರ್‌ ಗೆಳೆಯರಿಂದ ‘ಐಸಿಸ್‌’ ಉಗ್ರರ ಸೇವೆ?

By Kannadaprabha NewsFirst Published Aug 26, 2020, 7:23 AM IST
Highlights

ಡಾಕ್ಟರ್‌ನೊಂದಿಗೆ ದುಬೈ ಮೂಲಕ ಸಿರಿಯಾ ದೇಶಕ್ಕೆ ಹೋಗಿದ್ದ ಇಬ್ಬರು ಸ್ನೇಹಿತರು, ಆದರೆ ಸಾಕ್ಷ್ಯಗಳ ಕೊರತೆ?| ಎಂಬಿಬಿಎಸ್‌ ಮುಗಿಸಿದ ಬಳಿಕ ಸಿರಿಯಾಗೆ ಡಾಕ್ಟರ್‌ ಪ್ರಯಾಣ| ದುಬೈಗೆ ತೆರಳುವಾಗ ಸ್ನೇಹಿತರನ್ನೂ ಕರೆದೊಯ್ದಿದ್ದ ಡಾಕ್ಟರ್‌| ಐಸಿಸ್‌ ಸಂಪರ್ಕ ಸಾಧಿಸಿ, ನಿಗೂಢವಾಗಿ ಸಿರಿಯಾಗೆ ಪ್ರಯಾಣ| ಸಿರಿಯಾ ಯುದ್ಧದಲ್ಲಿ ಗಾಯಗೊಂಡಿದ್ದ ಐಸಿಸ್‌ ಉಗ್ರರಿಗೆ ಸೇವೆ| 

ಬೆಂಗಳೂರು(ಆ.26):  ಭಯೋತ್ಪಾದಕ ಸಂಘಟನೆ ಐಸಿಸ್‌ಗೆ ವೈದ್ಯಕೀಯ ಸೇವೆ ಕಲ್ಪಿಸಲು ಹಾಗೂ ಶಸ್ತ್ರಾಸ್ತ್ರ ಪೂರೈಕೆ ಸಲುವಾಗಿ ಆನ್‌ಲೈನ್‌ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸುತ್ತಿದ್ದ ಆರೋಪದಡಿ ಇತ್ತೀಚೆಗೆ ಬಂಧಿತನಾಗಿರುವ ನೇತ್ರ ವೈದ್ಯ ಅಬ್ದುರ್‌ ರೆಹಮಾನ್‌ನ ಇಬ್ಬರು ಸ್ನೇಹಿತರ ಸಿರಿಯಾ ಪ್ರಯಾಣ ಮಾಡಿರುವುದು ರಾಷ್ಟ್ರೀಯ ತನಿಖಾ ದಳದ (ಎನ್‌ಐಎ)ತನಿಖೆಯಲ್ಲಿ ಸುಳಿವು ಸಿಕ್ಕಿದೆ.

ಈ ಮಾಹಿತಿ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ಪ್ರತಿದಿನ ಆ ಇಬ್ಬರನ್ನು ಕೇಂದ್ರ ಗುಪ್ತದಳ ಹಾಗೂ ಎನ್‌ಐಎ ಅಧಿಕಾರಿಗಳು ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದಾರೆ. ಆದರೆ ವೈದ್ಯನ ಜತೆ ಆತನ ಸ್ನೇಹಿತರು ಸಿರಿಯಾಗೆ ಹೋಗಿದ್ದ ಮಾಹಿತಿ ಇದೆ. ಅದಕ್ಕೆ ಪೂರಕವಾದ ಖಚಿತ ದಾಖಲೆಗಳು ಲಭ್ಯವಾಗಿಲ್ಲ ಎಂದು ತಿಳಿದು ಬಂದಿದೆ.

2013-14ರಲ್ಲಿ ಎಂಬಿಬಿಎಸ್‌ ಮುಗಿದ ನಂತರ ಅಬ್ದುರ್‌, ಐಸಿಸ್‌ ಮೇಲೆ ವಿಪರೀತ ಒಲವುಳ್ಳವನಾಗಿದ್ದ. ಈ ಪ್ರಭಾವದಿಂದ ಆತ, 2014ರಲ್ಲಿ ಆರು ತಿಂಗಳ ವೀಸಾ ಪಡೆದು ತನ್ನ ಇಬ್ಬರು ಸ್ನೇಹಿತರ ಜತೆ ದುಬೈಗೆ ತೆರಳಿದ್ದ. ಅಲ್ಲಿಂದ ರಹಸ್ಯವಾಗಿ ಐಸಿಸ್‌ ಸಂಪರ್ಕಕ್ಕೆ ಬಂದ ವೈದ್ಯ, ಬಳಿಕ ಇಬ್ಬರ ಗೆಳೆಯರ ಜೊತೆಯಲ್ಲೇ ಸಿರಿಯಾದಲ್ಲಿ ಐಸಿಸ್‌ ಕ್ಯಾಂಪ್‌ಗೆ ಹೋಗಿದ್ದ. ಅಲ್ಲಿ ಅಮೆರಿಕ ಸೇನೆಯೊಂದಿಗಿನ ಕಾದಾಟದಲ್ಲಿ ಗಾಯಗೊಂಡಿದ್ದ ಐಸಿಸ್‌ ಉಗ್ರರರಿಗೆ ವೈದ್ಯೋಪಾಚಾರ ಮಾಡಿ ಅಬ್ದುರ್‌ ಮರಳಿದ್ದ. ಆದರೆ ಈಗ ಅಬ್ದುರ್‌ ಗೆಳೆಯರು ದುಬೈಗೆ ಹೋಗಿರುವುದಕ್ಕೆ ದಾಖಲೆಗಳು ಪತ್ತೆಯಾಗಿವೆ. ಐಸಿಸ್‌ ಸಂಪರ್ಕದ ದೃಢೀಕರಿಸುವ ಖಚಿತ ಸಾಕ್ಷ್ಯಗಳು ಲಭಿಸಿಲ್ಲ ಎಂದು ಮೂಲಗಳು ಹೇಳಿವೆ.

ಐಸಿಸ್‌ ಉಗ್ರರ ಚಿಕಿತ್ಸೆಗಾಗಿ ಬೆಂಗ್ಳೂರು ಡಾಕ್ಟರ್‌ ಆ್ಯಪ್‌: ಶಸ್ತ್ರಾಸ್ತ್ರ ಪೂರೈಕೆಗೂ ಬಳಕೆ!

ಬೆಂಗಳೂರಿನಲ್ಲಿ ಆ.19ರಂದು ಅಬ್ದುರ್‌ ಬಂಧಿಸಿದ ಬಳಿಕ ಹೆಚ್ಚಿನ ತನಿಖೆಗೆ ಆತನನ್ನು ದೆಹಲಿಗೆ ಎನ್‌ಐಎ ತಂಡ ಕರೆದೊಯ್ದಿದೆ. ಅಂದೇ ಆತನ ಸ್ನೇಹಿತರನ್ನು ವಶಕ್ಕೆ ಪಡೆಯಲಾಯಿತು. ಈ ಪೈಕಿ ಒಬ್ಬಾತ ವೈದ್ಯಕೀಯ ವ್ಯಾಸಂಗ ಮಾಡಿದ್ದರೆ, ಮತ್ತೊಬ್ಬ ಇಂಜಿನಿಯರಿಂಗ್‌ ಓದಿದ್ದಾನೆ. ಇಬ್ಬರನ್ನು ಬೆಂಗಳೂರಿನಲ್ಲಿ ಕೇಂದ್ರ ಗುಪ್ತದಳ ಹಾಗೂ ಎನ್‌ಐಎ ವಿಚಾರಣೆ ನಡೆಸುತ್ತಿವೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಕೆಲ ತಿಂಗಳ ಹಿಂದೆ ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕತ್ವ ಕಾಯ್ದೆ (ಎನ್‌ಆರ್‌ಸಿ) ವಿರೋಧಿ ಹೋರಾಟದ ಸಂದರ್ಭದಲ್ಲಿ ವಿಧ್ವಂಸಕ ಕೃತ್ಯಕ್ಕೆ ಐಸಿಸ್‌ ಸಹೋದರ ಸಂಘಟನೆ ಇಸ್ಲಾಮಿಕ್‌ ಸ್ಟೇಟ್‌ ಖೋರಾಸಾನ್‌ ಪ್ರಾಂತ್ಯ (ಐಎಸ್‌ಕೆಪಿ) ಸಂಚು ರೂಪಿಸಿದ್ದು ಎನ್‌ಎಐ ತನಿಖೆಯಲ್ಲಿ ಬಯಲಾಗಿತ್ತು. ಇದೇ ಪ್ರಕರಣದ ಸಂಬಂಧ ಬೆಂಗಳೂರಿನ ವೈದ್ಯ ಅಬ್ದುರ್‌ ರೆಹಮಾನ್‌ ಬಂಧನವಾಗಿತ್ತು.

click me!