
ಬೆಂಗಳೂರು (ಡಿ.3): ಮಂಗಳವಾರ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹೋದರರಂತೆಯೇ ಇದ್ದೇವೆ. ಡಿ.ಕೆ.ಶಿವಕುಮಾರ್ ಅವರು ಹೈಕಮಾಂಡ್ ಹೇಳಿದಾಗ ಮುಖ್ಯಮಂತ್ರಿ ಆಗುತ್ತಾರೆ’ ಎಂದು ಹೇಳಿದರು.
ಮತ್ತೊಂದು ಸಂದರ್ಭದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರೊಂದಿಗೆ ಅನೌಪಚಾರಿಕವಾಗಿ ಮಾತನಾಡಿ, ‘ರಾಜಕೀಯ ನಮ್ಮಪ್ಪನ ಆಸ್ತಿ ಅಲ್ಲ. ಏನು ಆಗುತ್ತೋ ಆಗಲಿ. ನನಗೆ ಯಾವತ್ತೂ ತುಂಬಾ ಯೋಚನೆ ಮಾಡಿ ಗೊತ್ತೇ ಇಲ್ಲ’ ಎಂದಿದ್ದಾರೆ.
ಮೊದಲಿಗೆ ಸದಾಶಿವನಗರದ ಡಿ.ಕೆ.ಶಿವಕುಮಾರ್ ಅವರ ನಿವಾಸದಲ್ಲಿ ಉಪಹಾರ ಸೇವಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ‘ಹೈಕಮಾಂಡ್ ನಿರ್ಧಾರದಂತೆ ನಡೆದುಕೊಳ್ಳುವುದಾಗಿ ಮೊದಲಿನಿಂದಲೂ ಹೇಳುತ್ತಿದ್ದೇನೆ. ನಾನು ಮತ್ತು ಡಿ.ಕೆ.ಶಿವಕುಮಾರ್ ಯಾವಾಗಲೂ ಒಟ್ಟಾಗಿದ್ದೇವೆ. ಇಂದು, ಮೊನ್ನೆ ಅಂತಲ್ಲ ಯಾವಾಗಲೂ ಜತೆಯಾಗಿ ಕೆಲಸ ಮಾಡುತ್ತಿದ್ದೇವೆ. ನಾವು ಎಂದಿಗೂ ಸಹೋದರರೇ. ಒಂದೇ ಪಕ್ಷ, ಒಂದೇ ಸಿದ್ಧಾಂತದ ಅಡಿ ಕೆಲಸ ಮಾಡುತ್ತಿದ್ದು, 2028ಕ್ಕೂ ಒಟ್ಟಿಗೆ ಕೆಲಸ ಮಾಡಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ’ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಯಾವಾಗ ಮುಖ್ಯಮಂತ್ರಿ ಆಗುತ್ತಾರೆ ಎಂಬ ಪ್ರಶ್ನೆಗೆ, ‘ಹೈಕಮಾಂಡ್ ಹೇಳಿದಾಗ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ’ ಎಂದ ಅವರು, ಸಂಪುಟ ಪುನರ್‌ರಚನೆ ಕುರಿತು ಪ್ರಶ್ನೆಗೂ ಇದೇ ಉತ್ತರ ನೀಡಿದರು.
ವಿಧಾನಸೌಧದಲ್ಲಿ ಬೇಳೂರು ಗೋಪಾಲಕೃಷ್ಣ ಅವರೊಂದಿಗೆ ಅನೌಪಚಾರಿಕವಾಗಿ ಮಾತನಾಡಿದ ಸಿದ್ದರಾಮಯ್ಯ, ‘ರಾಜಕೀಯ ನಮ್ಮಪ್ಪನ ಆಸ್ತಿ ಅಲ್ಲ. ಏನು ಆಗುತ್ತೋ ಆಗಲಿ. ನನಗೆ ಯಾವತ್ತೂ ಯೋಚನೆ ಮಾಡಿ ಗೊತ್ತೇ ಇಲ್ಲ’ ಎಂದು ಹೇಳಿದರು.
ಕೆಂಗಲ್ ಗೇಟ್ ಬಳಿ ಎದುರಾದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು, ‘ಏನು ಸರ್ ಬ್ರೇಕ್‌ಫಾಸ್ಟ್ ಹೇಗಿತ್ತು? ಖುಷಿಯಾಗಿದ್ದೀರಿ?’ ಎಂದು ಪ್ರಶ್ನಿಸಿದರು.
ಇದಕ್ಕೆ ಸಿದ್ದರಾಮಯ್ಯ ಅವರು, ‘ರಾಜಕೀಯ ಶಾಶ್ವತ ಅಲ್ಲ. ನಾನು ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ. ನನಗೆ ಯಾವತ್ತೂ ಯೋಚನೆ ಮಾಡಿ ಗೊತ್ತೇ ಇಲ್ಲ.’ ಎಂದಿರುವುದು ಮಾಧ್ಯಮಗಳ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ವೇಳೆ ಸುದ್ದಿಗಾರರು ಗೋಪಾಲಕೃಷ್ಣ ಅವರಿಗೆ ಏನೋ ಹೇಳುತ್ತಿದ್ದರಲ್ಲ ಸರ್... ಎಂದು ಪ್ರಶ್ನಿಸಿದ್ದಕ್ಕೆ, ‘ಏನು ಗೋಪಾಲ್ ಕಲರ್‌ಫುಲ್ ಆಗಿ ಬಂದಿದಿಯಾ ಎನ್ನುತ್ತಿದ್ದೆ ಅಷ್ಟೇ’ ಎಂದು ಸಿದ್ದರಾಮಯ್ಯ ಹೇಳಿದರು.
ಇದಕ್ಕೂ ಮೊದಲು ಬ್ರೇಕ್‌ಫಾಸ್ಟ್ ಸಭೆ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬ್ರೇಕ್‌ಫಾಸ್ಟ್ ಸಭೆಯಲ್ಲಿ ಡಿ.8 ರಿಂದ ಆರಂಭವಾಗುವ ವಿಧಾನಮಂಡಲ ಅಧಿವೇಶನದಲ್ಲಿ ವಿರೋಧ ಪಕ್ಷಗಳನ್ನು ಎದುರಿಸುವ ಕಾರ್ಯತಂತ್ರ ಬಗ್ಗೆ ಚರ್ಚೆ ಮಾಡಿದ್ದೇವೆ. ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುತ್ತೇವೆ ಎಂದು ಮಾಧ್ಯಮಗಳಲ್ಲಿ ಹೇಳಿದ್ದಾರೆ. ಅದನ್ನು ಸರ್ಕಾರ ಎದುರಿಸುತ್ತದೆ. ಅಲ್ಲದೆ, ಅಧಿವೇಶನದಲ್ಲಿ ರಾಜ್ಯದ ಸಮಸ್ಯೆಗಳ ನಿವಾರಣೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ತಿಳಿಸಲಾಗುತ್ತದೆ. ವಿರೋಧ ಪಕ್ಷಗಳ ಹೋರಾಟ, ಆರೋಪಗಳನ್ನು ಸರ್ಕಾರ ಆಕ್ರಮಣಕಾರಿಯಾಗಿ ಎದುರಿಸುತ್ತದೆ ಎಂದು ಹೇಳಿದರು.
ಇವರು ವೆಜ್, ನಾನು ನಾನ್‌ವೆಜ್:
ಉಪಹಾರದ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾನು ಮಾಂಸಾಹಾರಿ. ಆದರೂ ನನ್ನ ಮನೆಯಲ್ಲಿ ಶಿವಕುಮಾರ್ ಅವರಿಗೆ ಸಸ್ಯಹಾರಿ ಖಾದ್ಯ ಮಾಡಿಸಿದ್ದೆ. ಡಿ.ಕೆ.ಶಿವಕುಮಾರ್ ಸಸ್ಯಹಾರಿ. ನನಗಾಗಿ ಮಾಂಸಾಹಾರ ಮಾಡಿಸಿದ್ದರು. ಬೆಂಗಳೂರಿನಲ್ಲಿ ಸರಿಯಾಗಿ ನಾಟಿ ಕೋಳಿ ಸಿಗುವುದಿಲ್ಲ. ಹೀಗಾಗಿ ಹಳ್ಳಿಯಿಂದ ನಾಟಿಕೋಳಿ ತರಿಸುವಂತೆ ಹೇಳಿದ್ದೆ. ಅದಕ್ಕೆ ನಾಟಿಕೋಳಿ ತರಿಸಿ ಮೈಸೂರು ಶೈಲಿಯ ಖಾದ್ಯ ಸಿದ್ಧಪಡಿಸಿದ್ದರು ಎಂದು ವಿವರಿಸಿದರು.
ಸಿಎಲ್‌ಪಿ ಸಭೆಯಲ್ಲಿ ಶಾಸಕರ ಜತೆ ಊಟ:
ಶಾಸಕರಿಗೆ ಯಾವಾಗ ಉಪಹಾರ ಸಭೆ ನಡೆಸುತ್ತೀರಾ ಎಂಬ ಪ್ರಶ್ನೆಗೆ, ‘ಶಾಸಕಾಂಗ ಪಕ್ಷದ ಸಭೆ ಕರೆದಾಗ ಶಾಸಕರಿಗೆ ಉಪಹಾರ ಅಥವಾ ಊಟ ಹಾಕಿಸುತ್ತೇವೆ. ಎಲ್ಲರೂ ಒಟ್ಟಿಗೆ ಊಟ ಮಾಡುತ್ತೇವೆ’ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.==
ಡಿ.8ಕ್ಕೆ ಸರ್ವಪಕ್ಷ ಸಂಸದರ ಸಭೆ
ಕಬ್ಬು, ಮೆಕ್ಕಜೋಳ ಬೆಲೆ ಕುಸಿತ ಸೇರಿ ರಾಜ್ಯದ ನೀರಾವರಿ ಯೋಜನೆಗಳ ಕುರಿತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ರಾಜ್ಯದ ಸಂಸದರೊಂದಿಗೆ ಸಭೆ ನಡೆಸಲು ನಿರ್ಧರಿಸಿದ್ದೇವೆ. ಡಿ.8ರಂದು ದೆಹಲಿಗೆ ತೆರಳಿ ರಾಜ್ಯದ ಎಲ್ಲ ಸಂಸದರೊಂದಿಗೆ ಸಭೆ ನಡೆಸಲಾಗುತ್ತದೆ. ಈ ಬಗ್ಗೆಯೂ ಬ್ರೇಕ್‌ಫಾಸ್ಟ್ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಯಾವೆಲ್ಲ ವಿಚಾರಗಳನ್ನು ಸಂಸದರ ಸಭೆಯಲ್ಲಿ ಮಾತನಾಡಬೇಕು ಎಂಬ ಬಗ್ಗೆಯೂ ಚರ್ಚಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಕಬ್ಬು-ಮೆಕ್ಕೆಜೋಳ ಸಮಸ್ಯೆಗೆ ಪರಿಹಾರ: ಸಿಎಂ
ನಮ್ಮ ಸರ್ಕಾರ ರೈತರ ಪರವಾಗಿದೆ. ಕಬ್ಬಿನ ಬೆಲೆ ಹೆಚ್ಚಳಕ್ಕೆ ಸರ್ಕಾರ ನಿರ್ಧರಿಸಿ ಒಂದು ಟನ್ ಕಬ್ಬಿಗೆ ಸರ್ಕಾರದಿಂದ ಹೆಚ್ಚುವರಿಯಾಗಿ 50 ರು. ನೀಡಲಾಗುತ್ತಿದೆ. ಇದೀಗ ಬೆಲೆ ಕುಸಿದಿರುವ ಮೆಕ್ಕೆಜೋಳ ಬೆಳೆಗಾರರಿಗಾಗಿ ಡಿಸ್ಟಿಲರಿ ಕಾರ್ಖಾನೆ ಮಾಲೀಕರು, ಪಶು ಮತ್ತು ಕುಕ್ಕುಟ ಆಹಾರ ಉತ್ಪಾದಕರೊಂದಿಗೂ ಸಭೆ ನಡೆಸಲಾಗಿದೆ. ಎಲ್ಲರೂ ಎಂಎಸ್‌ಪಿ ದರದಲ್ಲಿಯೇ ರೈತರಿಂದ ಮೆಕ್ಕೆಜೋಳ ಖರೀದಿಗೆ ಸೂಚಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ