ಗ್ರೇಟರ್ ಬೆಂಗಳೂರು ಅಧಿಕಾರಿಗಳೊಂದಿಗೆ ದೆಹಲಿ ಪಾಲಿಕೆಯ ತ್ಯಾಜ್ಯ ಘಟಕಕ್ಕೆ ಡಿಕೆಶಿ ಭೇಟಿ

Published : Jun 10, 2025, 07:27 AM IST
DK Shivakumar

ಸಾರಾಂಶ

ಕರ್ನಾಟಕ ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿ ಮಹಾನಗರ ಪಾಲಿಕೆ ಭೇಟಿ ನೀಡಿ ನಗರ ಆಡಳಿತ, ಪಟ್ಟಣ ಯೋಜನೆ ಮತ್ತು ಘನತ್ಯಾಜ್ಯ ನಿರ್ವಹಣೆ ಕುರಿತು ಚರ್ಚಿಸಿದರು. 

ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಕರ್ನಾಟಕ ಡಿಸಿಎಂ ಡಿ.ಕೆ. ಶಿವಕುಮಾರ್ ಸೋಮವಾರ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಅಧಿಕಾರಿಗಳೊಂದಿಗೆ ದೆಹಲಿಯ ಮಹಾನಗರ ಪಾಲಿಕೆ ಭೇಟಿ ನೀಡಿದರು. ಈ ವೇಳೆ ಅವರು, ‘ನಗರಗಳು ಯೋಜನಾಬದ್ಧ ಆಗಿರದಿದ್ದರೆ ಉತ್ತಮ ಕಾರ್ಯನಿರ್ವಹಣೆ ಸಾಧ್ಯವಿಲ್ಲ. ಬೆಂಗಳೂರು, ದೆಹಲಿಯಲ್ಲಿ ಒಂದೇ ರೀತಿ ಸಮಸ್ಯೆಯಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಡಿಕೆಶಿ ದೆಹಲಿ ಮಹಾನಗರ ಪಾಲಿಕೆ ಮೇಯರ್‌ ಇಕ್ಬಾಲ್ ಸಿಂಗ್ ಅವರನ್ನು ಭೇಟಿ ಮಾಡಿ 2041ರವರೆಗಿನ ದೆಹಲಿಯ ನಾಗರಿಕರ ಕಾರ್ಯತಂತ್ರಗಳ ಕುರಿತು ಚರ್ಚಿಸಿದರು. ಈ ವೇಳೆ ನಗರ ಆಡಳಿತ, ಪಟ್ಟಣ ಯೋಜನೆ ಮತ್ತು ಘನತ್ಯಾಜ್ಯ ನಿರ್ವಹಣೆ ಕುರಿತು ಸಮಾಲೋಚನೆ ನಡೆಸಿ, ಮಹಾನಗರ ಪಾಲಿಕೆ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ದಿಲ್ಲಿ, ಬೆಂಗ್ಳೂರಲ್ಲಿ ಒಂದೇ ಸಮಸ್ಯೆ:

ಸಭೆಯಲ್ಲಿ ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಮಾತನಾಡಿದ ಡಿಸಿಎಂ ‘ದೆಹಲಿ ಐತಿಹಾಸಿಕ ಮತ್ತು ದೊಡ್ಡ ಯೋಜಿತ ನಗರ. ಬೆಂಗಳೂರಿನ ಜನಸಂಖ್ಯೆಗಿಂತ ದುಪ್ಪಟ್ಟು ಜನಸಂಖ್ಯೆ ಹೊಂದಿದೆ. ಪಟ್ಟಣ ಯೋಜನೆ, ನಗರೀಕರಣ, ಘನತ್ಯಾಜ್ಯ ನಿರ್ವಹಣೆ ಇಲ್ಲಿನ ಪ್ರಮುಖ ಮೂರು ಸವಾಲುಗಳು. ಇವೆಲ್ಲವನ್ನೂ ನಾವು ಬೆಂಗಳೂರಿನಲ್ಲಿಯೂ ಎದುರಿಸುತ್ತಿದ್ದೇವೆ. ಬೆಂಗಳೂರಿನಲ್ಲಿ ನಾವು ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವಲ್ಲಿ ವಿಫಲರಾಗಿದ್ದೇವೆ. ಈ ವಿಷಯದಲ್ಲಿ ದೆಹಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಬೆಂಗಳೂರಿನ ಅಭಿವೃದ್ಧಿಗೆ ಸಹಾಯ ಮಾಡುವ ವಿಷಯಗಳನ್ನು ತಿಳಿಯಲು, ಕಲಿಯಲು ಬಯಸುತ್ತೇನೆ’ ಎಂದು ಹೇಳಿದರು.

‘ಸರಿಯಾದ ಯೋಜನೆಯಿಲ್ಲದೆ ಯಾವುದೇ ನಗರವು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಒಂದು ನಗರವು ಯೋಜಿತ ನಗರವಾಗಿಲ್ಲದಿದ್ದರೆ ಅದು ಕೆಲಸ ಮಾಡುವುದಿಲ್ಲ. ನಾವು ಈಗ ಯಾರಾದರೂ ಯಾವುದೇ ವಾಹನವನ್ನು ಖರೀದಿಸಲು ಅವಕಾಶ ನೀಡುತ್ತೇವೆ. ಆದರೆ ನಾವು ರಸ್ತೆ ಅಗಲೀಕರಣ ಮುಂದುವರೆಸಲು ಸಾಧ್ಯವಿಲ್ಲ. ಇಂದು ವಾಹನಗಳ ಸಂಖ್ಯೆ ಮನೆಗಳ ಸಂಖ್ಯೆಯನ್ನೂ ಮೀರಿದೆ’ ಎಂದರು.

ದೆಹಲಿ ಮಹಾನಗರ ಪಾಲಿಕೆ ಕಾರ್ಯವೈಖರಿ ಶ್ಲಾಘಿಸಿದ ಕೆಪಿಸಿಸಿ ಅಧ್ಯಕ್ಷ, ‘ಈ ಹಿಂದೆ ಹೈದರಾಬಾದ್ ಮತ್ತು ಚೆನ್ನೈಗೆ ಭೇಟಿ ನೀಡಿದ್ದರೂ ದೆಹಲಿಯ ಹೊಸ ನೀತಿಗಳನ್ನು ಅರ್ಥಮಾಡಿಕೊಳ್ಳುವುದು ಮೌಲ್ಯಯುತವಾಗಿದೆ’ ಎಂದರು.

ಇನ್ನು ಡಿಕೆಶಿ ದೆಹಲಿ ಘನತ್ಯಾಜ್ಯವನ್ನು ಹೇಗೆ ಸಂಸ್ಕರಿಸುತ್ತಿದೆ ಮತ್ತು ಜೈವಿಕ ಅನಿಲದಂತಹ ಸಂಪನ್ಮೂಲಗಳನ್ನು ಹೇಗೆ ಉತ್ಪಾದಿಸುತ್ತಿದೆ ಎಂಬುದನ್ನು ಅಧ್ಯಯನ ಮಾಡಲು ಓಖ್ಲಾ ತ್ಯಾಜ್ಯ ಸಂಸ್ಕರಣಾ ಕೇಂದ್ರಕ್ಕೂ ಭೇಟಿ ನೀಡಲಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!