ಸಿದ್ದರಾಮಯ್ಯ ವಿರುದ್ಧವೇ ತಿರುಗಿ ಬಿದ್ದರಾ ಡಿಕೆಶಿ..?

By Web DeskFirst Published Jul 15, 2018, 7:47 AM IST
Highlights

ವೈದ್ಯಕೀಯ ಶಿಕ್ಷಣ ಸಚಿವರಾದ ಡಿ.ಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಪರ ಬ್ಯಾಟಿಂಗ್ ಮಾಡಿದ್ದು, ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ.

ಬೆಂಗಳೂರು: ಅನ್ನಭಾಗ್ಯ ಅಕ್ಕಿ ವಿಚಾರದಲ್ಲಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರುವುದಕ್ಕೂ ಒಂದು ಮಿತಿ ಇರುತ್ತದೆ. ಕುಮಾರಸ್ವಾಮಿ ಅವರು ಪ್ರತಿ ವ್ಯಕ್ತಿಗೆ 7 ಕೆ.ಜಿ. ಅಕ್ಕಿ ನೀಡಿದರೆ 2500 ಕೋಟಿ ರು. ಹೊರೆ ಉಂಟಾಗುತ್ತದೆ ಎಂದು ಈಗಾಗಲೇ  ಸ್ಪಷ್ಟಪಡಿಸಿದ್ದಾರೆ. ಹೀಗಿದ್ದರೂ ಒತ್ತಡ ಹೇರುವುದು ಸರಿಯಲ್ಲ ಎಂದು ಜಲಸಂಪನ್ಮೂಲ ಸಚಿವ ಮತ್ತು ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ. 

ಈ ಮೂಲಕ ಸಿಎಂ ಕುಮಾರಸ್ವಾಮಿ ಪರ ನಿಂತಿರುವ ಅವರು ಪತ್ರ ಬರೆದು ಒತ್ತಡ ಹಾಕಿದ್ದ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ. ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಶಿವಕುಮಾರ್ ಅವರು, ಕೆಲವರು 7 ಕೆ.ಜಿ. ಅಕ್ಕಿ ಕೇಳಿದ್ದಾರೆ, ಕೆಲವರು ಪ್ರತಿ ವ್ಯಕ್ತಿಗೆ 7 ಕೆ.ಜಿ. ನೀಡಿದರೆ ಅಕ್ಕಿ ದುರ್ಬಳಕೆಯಾಗುತ್ತದೆ, ಹೀಗಾಗಿ 5 ಕೆ.ಜಿ. ನೀಡಿದರೆ ಸಾಕು ಎಂದು ಹೇಳಿದ್ದಾರೆ. ಈ ಬಗ್ಗೆ ಹಲವು ದ್ವಂದ್ವಗಳಿದ್ದು, ಸದ್ಯದಲ್ಲೇ ಬಗೆಯರಿಯುವ ವಿಶ್ವಾಸವಿದೆ. 

ಇನ್ನು ಸಿದ್ದರಾಮಯ್ಯ ಅವರು ತಮ್ಮ ಪತ್ರದ ಮುಖೇನ 7 ಕೆ.ಜಿ. ನೀಡು ವಂತೆ ಹೇಳಿದ್ದಾರೆ. ಒಬ್ಬೊಬ್ಬರು ಒಂದೊಂದು ಅಭಿಪ್ರಾಯ ಹೇಳುತ್ತಾರೆ. ಆದರೆ, ಒತ್ತಡ ಹಾಕುವುದಕ್ಕೂ ಒಂದು ಮಿತಿ ಇರಬೇಕು ಎಂದು ಹೇಳಿದರು.  ಕೆಲವರು ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂದಿದ್ದಾರೆ. ಹಾಗಂತ ಉತ್ತರ ಕರ್ನಾಟಕ ನಿರ್ಲಕ್ಷ್ಯ ಆಗಿದೆಯೇ? ನೀರಾವರಿ ಇಲಾಖೆಯಲ್ಲಿ 2.5  ಕೋಟಿ ರು. ಮಾತ್ರ ಕಾವೇರಿ ಪ್ರದೇಶಾಭಿವೃದ್ಧಿಗೆ ನೀಡಲಾಗಿದೆ. ಉಳಿದದ್ದು ಉತ್ತರ ಕರ್ನಾಟಕಕ್ಕೆ ನೀಡಲಾಗಿದೆ. 

371 -ಜೆ ಅಡಿ ಹಣವನ್ನು ಬೇರೆ ಕಡೆ ಖರ್ಚು ಮಾಡಲು ಆಗುತ್ತದೆಯೇ? ಸಲಹೆ ಕೊಡುವುದು ತಪ್ಪಲ್ಲ. ಇದರಲ್ಲಿ ರಾಜಕಾರಣ ಸೃಷ್ಟಿ ಮಾಡುವುದು ಸರಿಯಲ್ಲ ಎಂದು ಈ ಕುರಿತು ಪತ್ರಗಳನ್ನು ಬರೆದಿದ್ದ ಕಾಂಗ್ರೆಸ್ ನಾಯಕ ಎಚ್.ಕೆ. ಪಾಟೀಲ್ ಮತ್ತಿತರರ ಬಗ್ಗೆಯೂ ಪರೋಕ್ಷವಾಗಿ ಆಕ್ಷೇಪ ವ್ಯಕ್ತಪಡಿಸಿದರು. 

click me!