ಪರಿಹಾರ ಸಾಮಗ್ರಿ ಮೇಲೆ ಬಿಜೆಪಿಗರ ಚಿತ್ರ: ಡಿಕೆಶಿ ಕಿಡಿ

By Kannadaprabha NewsFirst Published Apr 9, 2020, 7:59 AM IST
Highlights

ಪರಿಹಾರ ಸಾಮಗ್ರಿ ಮೇಲೆ ಬಿಜೆಪಿಗರ ಚಿತ್ರ: ಡಿಕೆಶಿ ಕಿಡಿ| ಕೊರೋನಾ ಪರಿಹಾರದ ಮೇಲೇಕೆ ಪಕ್ಷದ ನಾಯಕರ ಚಿತ್ರ?

ಬೆಂಗಳೂರು(ಏ.09): ಕೊರೋನಾ ವೈರಸ್‌ ಪರಿಹಾರಕ್ಕಾಗಿ ಬಡಜನರಿಗೆ ಸರ್ಕಾರ ಒದಗಿಸುತ್ತಿರುವ ದಿನಸಿ, ಆಹಾರ ಪದಾರ್ಥಗಳ ಪೆಟ್ಟಿಗೆ ಮೇಲೆ ತಮ್ಮ ಪಕ್ಷದ ನಾಯಕರ ಭಾವಚಿತ್ರ ಅಂಟಿಸಿ ದುರುಪಯೋಗ ಪಡಿಸಿಕೊಳ್ಳುತ್ತಿರುವ ಬಿಜೆಪಿ ಮುಖಂಡರ ವಿರುದ್ಧ ಕ್ರಮಕೈಗೊಳ್ಳುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಒತ್ತಾಯಿಸಿದ್ದಾರೆ.

ಬುಧವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾಗಿರುವ ಜನಸಾಮಾನ್ಯರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಣದಿಂದ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ. ಆದರೆ ಮಹಾದೇವಪುರ ಕ್ಷೇತ್ರ ವ್ಯಾಪ್ತಿಯ ಹಗದೂರು ವಾರ್ಡ್‌ 84ರಲ್ಲಿ ಬಡ ಜನರಿಗೆ ಸರ್ಕಾರ ವಿತರಿಸಲು ನೀಡಿರುವ ದಿನಸಿ, ಆಹಾರ ಪದಾರ್ಥಗಳ ಪೆಟ್ಟಿಗೆಗಳ ಮೇಲೆ ಬಿಜೆಪಿ ನಾಯಕರು, ಮುಖಂಡರ ಭಾವಚಿತ್ರ ಅಂಟಿಸಲಾಗಿದೆ. ಜತೆಗೆ ಬಿಜೆಪಿ ನಾಯಕರೇ ದಿನಸಿಯನ್ನು ಬಡವರಿಗೆ ವಿತರಿಸುತ್ತಿದ್ದಾರೆ ಎಂದು ಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಕೊರೋನಾಗೆ ಇಂದಿಗೆ 1 ತಿಂಗಳು: ದೇಶದಲ್ಲೇ ನಂ.3 ಆಗಿದ್ದ ರಾಜ್ಯ ಈಗ ನಂ.11!

ಸರ್ಕಾರದ ಪರಿಹಾರ ಸಾಮಗ್ರಿಗಳ ದುರ್ಬಳಕೆ ಪ್ರಶ್ನಿಸಿದ ಪಾಲಿಕೆ ಸದಸ್ಯ ಉದಯ ಕುಮಾರ್‌ ಹಾಗೂ ಸ್ಥಳೀಯರಿಗೆ ಬಿಜೆಪಿ ಮುಖಂಡರು ಧಮಕಿ ಹಾಕುತ್ತಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ಭಾಗಿಯಾಗಿರುವ ಬಿಜೆಪಿ ನಾಯಕರು, ಕಾರ್ಯಕರ್ತರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ಕ್ರಮ ಜರುಗಿಸುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಹಾಗೆಯೇ ಸರ್ಕಾರದ ಸೌಲಭ್ಯಗಳು ಜನ ಸಾಮಾನ್ಯರಿಗೆ ಸರ್ಕಾರದ ವತಿಯಿಂದಲೇ ವಿತರಣೆಯಾಗಬೇಕು. ಅರ್ಹ ಫಲಾನುಭವಿಗಳಿಗೆ ಸಿಗಬೇಕಾದ ಸವಲತ್ತುಗಳನ್ನು ದುರ್ಬಳಕೆ ಮಾಡಿಕೊಳ್ಳದಂತೆ ಸರ್ಕಾರ ಕ್ರಮ ಜರುಗಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

"

click me!