Breaking: ಸಿಎಂ ಕುರ್ಚಿ ಕಾಳಗದ ನಡುವೆ ಅಮೆರಿಕದಲ್ಲಿ ರಾಹುಲ್‌ ಗಾಂಧಿ ಭೇಟಿಯಾದ ಡಿಕೆಶಿ!

By Santosh Naik  |  First Published Sep 10, 2024, 10:08 PM IST

ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಕೇಸ್ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನಕ್ಕೆ ಲಾಬಿ ಆರಂಭವಾಗಿದೆ. ಈ ನಡುವೆ ಅಮೆರಿಕದಲ್ಲಿ ಡಿಕೆ ಶಿವಕುಮಾರ್‌ ರಾಹುಲ್ ಗಾಂಧಿಯನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.


ವಾಷಿಂಗ್ಟನ್‌ (ಸೆ.10): ರಾಜ್ಯದಲ್ಲಿ ಸಿಎಂ ಬದಲಾಗ್ತಾರಾ? ಈ ಪ್ರಶ್ನೆಗೆ ಉತ್ತರ ಸಿಗುವ ದಿನ ದೂರವಿಲ್ಲ ಎಂದು ಕಾಣುತ್ತಿದೆ. ಒಂದೆಡೆ ಸಿಎಂ ಸಿದ್ಧರಾಮಯ್ಯ ವಿರುದ್ಧ ಮುಡಾ ಕೇಸ್‌ನಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಇದರ ವಿರುದ್ಧ ಸಿದ್ಧರಾಮಯ್ಯ ಹೈಕೋರ್ಟ್‌ಗೆ ರಿಟ್‌ ಅರ್ಜಿಯನ್ನೂ ಸಲ್ಲಿಕೆ ಮಾಡಿದ್ದು, ಅದರ ವಿಚಾರಣೆ ನಡೆಯುತ್ತಿದೆ. ಈ ನಡುವೆ ಕಾಂಗ್ರೆಸ್‌ನ ಹಿರಿಯ ನಾಯಕರೆಲ್ಲರೂ ಸಿಎಂ ಕುರ್ಚಿಗೆ ಟವಲ್‌ ಹಾಸಲು ಆರಂಭಿಸಿದ್ದಾರೆ. ಎಂಬಿ ಪಾಟೀಲ್‌, ಆರ್‌ವಿ ದೇಶಪಾಂಡೆ, ಸತೀಶ್‌ ಜಾರಕಿಹೊಳಿ ಸೇರಿದಂತೆ ಹಲವು ನಾಯಕರು ಸಿಎಂ ಆಗುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಹಾಗೇನಾದರೂ ಸಿದ್ಧರಾಮಯ್ಯ ಸಿಎಂ ಸ್ಥಾನ ಬಿಟ್ಟಲ್ಲಿ ಇದಕ್ಕೆ ಪ್ರಬಲ ಆಕಾಂಕ್ಷಿಯಾಗಿರುವ ಡಿಸಿಎಂ ಡಿಕೆ ಶಿವಕುಮಾರ್‌ ಕೆಲ ದಿನಗಳ ಕಾಲ ಅಮೆರಿಕಕ್ಕೆ ವೈಯಕ್ತಿಕ ಭೇಟಿಗೆ ಹೋಗಿದ್ದಾರೆ. ಇದೇ ವೇಳೆ ಅಮೆರಿಕ ಪ್ರವಾಸದಲ್ಲಿರುವ ಲೋಕಸಭೆಯ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿಯನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯೇ ಈಗ ಕುತೂಹಲಕ್ಕೆ ಕಾರಣವಾಗಿದೆ. 

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ವಾಷಿಂಗ್ಟನ್‌ನಲ್ಲಿ ಡಿಕೆ ಶಿವಕುಮಾರ್‌ ಭೇಟಿ ಮಾಡಿದ್ದಾರೆ. ಸಿಎಂ ಕುರ್ಚಿ ಕಾಳಗ ತಾರಕಕ್ಕೆ ಏರಿರುವ ನಡುವೆಯೇ ಈ ನಾಯಕರ ಭೇಟಿ ಕುತೂಹಲ ಕೆರಳಿಸಿದೆ. ಡಿಕೆಶಿ ಹಾಗೂ ಅವರ ಪತ್ನಿ ರಾಹುಲ್‌ ಗಾಂಧಿಯನ್ನು ಭೇಟಿ ಮಾಡಿದ್ದಾರೆ.

click me!