
ಬೆಂಗಳೂರು: ಮುಖ್ಯಮಂತ್ರಿ ಅವರ ಆದೇಶದ ಮೇರೆಗೆ ತಾವು ಹಾಗೂ ಕೈಗಾರಿಕಾ ಸಚಿವ ಎಂಬಿ ಪಾಟೀಲ್, ಶಾಸಕ ಎನ್.ಎ. ಹ್ಯಾರಿಸ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಸೇರಿದಂತೆ ಹಿರಿಯ ಅಧಿಕಾರಿಗಳ ತಂಡ ಸ್ವಿಟ್ಜರ್ಲ್ಯಾಂಡ್‌ನ ದಾವೋಸ್‌ಗೆ ಭೇಟಿ ನೀಡಿ, ವರ್ಲ್ಡ್ ಎಕನಾಮಿಕ್ ಫೋರಂ (WEF)ನ 56ನೇ ವಾರ್ಷಿಕ ಸಭೆಯಲ್ಲಿ ಭಾಗವಹಿಸಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ದಾವೋಸ್‌ಗೆ ಹೋಗಿದ್ದು ನಮಗೆಲ್ಲ ಮೊದಲ ಅನುಭವ. ಕಳೆದ ವರ್ಷ ಹೋಗಲು ಪ್ರಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ಈ ಬಾರಿ ಸರ್ಕಾರದ ನಿರ್ಧಾರ ಹಾಗೂ ನಮ್ಮ ನಾಯಕರು ಮತ್ತು ವಿರೋಧ ಪಕ್ಷಗಳ ಸಲಹೆಯ ಮೇರೆಗೆ ದಾವೋಸ್‌ಗೆ ತೆರಳಿದೆವು” ಎಂದು ಹೇಳಿದರು.
“ದಾವೋಸ್ ಒಂದು ಚಿಕ್ಕ ಪ್ರದೇಶ. ನಮ್ಮ ಸದಾಶಿವನಗರಕ್ಕಿಂತ ಸ್ವಲ್ಪ ದೊಡ್ಡದಷ್ಟೇ. ಅಲ್ಲಿ ವಿಮಾನ ನಿಲ್ದಾಣವೂ ಸುಮಾರು 250 ಕಿಲೋಮೀಟರ್ ದೂರದಲ್ಲಿದೆ. ಎಲ್ಲವೂ ನನಗೆ ಹೊಸ ಅನುಭವವಾಗಿತ್ತು. ಮೊದಲಿಗೆ ಹೋಗೋದು ಬೇಡ ಎಂಬ ನಿರ್ಧಾರದಲ್ಲಿದ್ದೆ, ಆದರೆ ರಾಜ್ಯದ ಹಿತದೃಷ್ಟಿಯಿಂದ ಭಾಗವಹಿಸಿದೆ” ಎಂದು ಡಿಕೆಶಿ ಹೇಳಿದರು.
ದಾವೋಸ್‌ನಲ್ಲಿ 64 ದೇಶಗಳ ಪ್ರಮುಖ ಉದ್ಯಮಿಗಳು, ಜಾಗತಿಕ ನಾಯಕರ ಭಾಗವಹಿಸಿದ್ದರು. ಸುಮಾರು 100ಕ್ಕೂ ಹೆಚ್ಚು ಸಮಿತಿಗಳು, ಸಭೆಗಳು ನಡೆದಿದ್ದು, ಗವರ್ನೆನ್ಸ್, ಹೊಸ ನೀತಿಗಳು, ಆರ್ಥಿಕ ಅಭಿವೃದ್ಧಿ ಕುರಿತ ಚರ್ಚೆಗಳು ನಡೆದವು. ಭಾರತಕ್ಕಾಗಿಯೇ ಪ್ರತ್ಯೇಕ ಪೆವಿಲಿಯನ್ ಇತ್ತು. ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಪ್ರತಿನಿಧಿಗಳು ಸಭೆಗಳಲ್ಲಿ ಪಾಲ್ಗೊಂಡಿದ್ದರು ಎಂದು ವಿವರಿಸಿದರು.
“ಭಾರತವನ್ನು ಬೆಳೆಯುತ್ತಿರುವ ದೇಶವೆಂದು ಜಗತ್ತು ನೋಡುತ್ತಿದೆ. ನಮ್ಮ ಯುವಶಕ್ತಿಯ ಬಗ್ಗೆ ಜಾಗತಿಕ ಮಟ್ಟದಲ್ಲಿ ಅಪಾರ ವಿಶ್ವಾಸವಿದೆ. ವಿಶೇಷವಾಗಿ ಭಾರತವನ್ನು ಬೆಂಗಳೂರು ಮುಖಾಂತರವೇ ಜಗತ್ತು ನೋಡುತ್ತಿದೆ ಎಂಬುದು ನನಗೆ ಸ್ಪಷ್ಟವಾಗಿ ಗೊತ್ತಾಯಿತು. ಈಗಾಗಲೇ ಅನೇಕ ಬಹುರಾಷ್ಟ್ರೀಯ ಕಂಪನಿಗಳು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿವೆ” ಎಂದು ಡಿಕೆಶಿ ಹೇಳಿದರು.
ಗ್ಲೋಬಲ್ ಕ್ಯಾಪ್ಟಿವ್ ಸೆಂಟರ್‌ಗಳು (GCC), ಆಹಾರ ಮತ್ತು ಪಾನೀಯ ಕ್ಷೇತ್ರ, ಏರೋಸ್ಪೇಸ್, ಕ್ಲೀನ್ ಎನರ್ಜಿ, ಎಲೆಕ್ಟ್ರಿಕ್ ವಾಹನ (EV) ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೂಡಿಕೆದಾರರು ಕರ್ನಾಟಕದ ಮೇಲೆ ಆಸಕ್ತಿ ತೋರಿದ್ದಾರೆ. ಸುಮಾರು 45 ಕಂಪನಿಗಳು ರಾಜ್ಯದೊಂದಿಗೆ ಚರ್ಚೆ ನಡೆಸಿವೆ. ಎಲೆಕ್ಟ್ರಾನಿಕ್ಸ್, ನ್ಯಾನೋ ಟೆಕ್ನಾಲಜಿ, ಕೃತಕ ಬುದ್ಧಿಮತ್ತೆ (AI), ಬ್ಯಾಟರಿ ತಂತ್ರಜ್ಞಾನ ಕ್ಷೇತ್ರದ ಕಂಪನಿಗಳು ರಾಜ್ಯಕ್ಕೆ ಬರಲು ಸಿದ್ಧತೆ ತೋರಿವೆ ಎಂದು ಹೇಳಿದರು. ಈ ಬಾರಿ ದಾವೋಸ್‌ನಲ್ಲೇ MoUಗಳಿಗೆ ಸಹಿ ಮಾಡುವುದಿಲ್ಲ ಎಂದು ನಿರ್ಧರಿಸಿದ್ದೇವೆ. ಹೂಡಿಕೆದಾರರು ಕರ್ನಾಟಕಕ್ಕೆ ಬಂದು ಸ್ಥಳ ಪರಿಶೀಲನೆ ಮಾಡಿದ ಬಳಿಕವೇ ಒಪ್ಪಂದ ಮಾಡಿಕೊಳ್ಳಲಿ ಎಂಬುದು ನಮ್ಮ ನಿಲುವು” ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು.
ದಾವೋಸ್‌ನಲ್ಲಿ ವಿಶ್ವಬ್ಯಾಂಕ್ ಅಧ್ಯಕ್ಷರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದು, ಕರ್ನಾಟಕಕ್ಕೆ ಅವರು ಈಗಾಗಲೇ ಸಾಕಷ್ಟು ನೆರವು ನೀಡಿದ್ದಾರೆ. ಮುಂದೆಯೂ ಸಹಾಯ ಮುಂದುವರಿಸುವ ಭರವಸೆಯನ್ನು ನೀಡಿದ್ದಾರೆ ಎಂದು ಡಿಕೆಶಿ ಹೇಳಿದರು. ಜೊತೆಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಚಿವರನ್ನು ಭೇಟಿ ಮಾಡುವ ಅವಕಾಶವೂ ಲಭಿಸಿದೆ ಎಂದು ತಿಳಿಸಿದರು.
ದಾವೋಸ್‌ನಲ್ಲಿನ ಶಿಸ್ತು, ಟ್ರಾಫಿಕ್ ನಿಯಮಗಳ ಪಾಲನೆ, ಕಾನೂನಿಗೆ ಜನರು ನೀಡುವ ಗೌರವ ನಮ್ಮ ದೇಶಕ್ಕೂ ಮಾದರಿಯಾಗಬೇಕು ಎಂದು ಡಿಕೆಶಿ ಅಭಿಪ್ರಾಯಪಟ್ಟರು. “ಒಂದು ವಾಹನ ಕೂಡ ಓವರ್‌ಟೇಕ್ ಮಾಡುವುದಿಲ್ಲ. ಜಗತ್ತಿನ ದೊಡ್ಡ ಉದ್ಯಮಿಗಳು ಸಹ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಾರೆ. ಇಂತಹ ಶಿಸ್ತು ನಮಗೂ ಬೇಕು” ಎಂದರು. ಅಲ್ಲಿನ ಟನಲ್ ವ್ಯವಸ್ಥೆ, ನಗರ ಯೋಜನೆಗಳನ್ನು ಗಮನಿಸಿದ್ದೇನೆ. ಮಹಾರಾಷ್ಟ್ರದಲ್ಲಿಯೂ ಇದೇ ಮಾದರಿಯ ಟನಲ್ ನಿರ್ಮಾಣ ನಡೆಯುತ್ತಿದೆ. ನಾನು ಸ್ವತಃ ಅಧಿಕಾರಿಗಳ ತಂಡದೊಂದಿಗೆ ಅಲ್ಲಿಗೆ ಭೇಟಿ ನೀಡಿ ಅಧ್ಯಯನ ಮಾಡುವುದಾಗಿ ಒಪ್ಪಿಕೊಂಡಿದ್ದೇನೆ ಎಂದು ಹೇಳಿದರು.
ರಾಜ್ಯದಲ್ಲಿ 2ನೇ ಮತ್ತು 3ನೇ ಹಂತದ ನಗರಗಳ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಲಾಗುತ್ತಿದೆ. ಮುಂದಿನ 25 ವರ್ಷಗಳ ದೃಷ್ಟಿಯಿಂದ ಪ್ರತಿಯೊಂದು ಪಟ್ಟಣಕ್ಕೂ ಮೊಬಿಲಿಟಿ ಪ್ಲಾನ್ ರೂಪಿಸಬೇಕು. ರಿಂಗ್‌ರೋಡ್, ಪಾರ್ಕಿಂಗ್ ವ್ಯವಸ್ಥೆ, ಸ್ಲಂ ಡೆವಲಪ್ಮೆಂಟ್, ಲೇಔಟ್ ನಿಯಮಗಳ ಬಗ್ಗೆ ಹೊಸ ನೀತಿಗಳನ್ನು ತರಲು ಚಿಂತನೆ ನಡೆದಿದೆ ಎಂದು ತಿಳಿಸಿದರು. ಟೈಮ್ ಇಸ್ ಮನಿ. ಜನರ ಸಮಯ ವ್ಯರ್ಥವಾಗಬಾರದು. ಶೀಘ್ರದಲ್ಲೇ ಸಭೆ ನಡೆಸಿ ಟೌನ್ ಪ್ಲಾನಿಂಗ್ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳುತ್ತೇವೆ” ಎಂದು ಹೇಳಿದರು.
ಬಿಡದಿಯಲ್ಲಿ ಇಂಟಿಗ್ರೇಟೆಡ್ ಟೌನ್‌ಶಿಪ್ ನಿರ್ಮಾಣಕ್ಕೆ ಹಲವರು ಆಸಕ್ತಿ ತೋರಿದ್ದಾರೆ. ಈ ವಿಚಾರದಲ್ಲಿ ರಾಜಕೀಯ ಆರೋಪಗಳು ಬರಬಹುದು. ಆದರೆ ರೈತರ ಹಿತವನ್ನು ಕಾಪಾಡಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತದೆ. ಯಾರ ಮೇಲೂ ಆರೋಪ ಮಾಡುವ ಉದ್ದೇಶ ನನಗಿಲ್ಲ ಎಂದು ಡಿಕೆಶಿ ಹೇಳಿದರು.
ದಾವೋಸ್‌ನಲ್ಲಿ ಭಾರತ ಕುರಿತು ನೀಡಿದ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, “ನನಗೆ ಸಾಕಷ್ಟು ರಾಜಕೀಯ ಅನುಭವವಿದೆ. ನಾನು ಯಾವ ದೇಶಕ್ಕೂ ಹೋಗಿ ನಮ್ಮ ದೇಶಕ್ಕೆ ಧಕ್ಕೆ ತರುವ ಕೆಲಸ ಮಾಡುವುದಿಲ್ಲ. ಭಾರತ ನಮ್ಮದು. ಸಂವಿಧಾನವನ್ನು ಇಡೀ ಜಗತ್ತು ಒಪ್ಪಿಕೊಂಡಿದೆ. ದೇಶದ ಧ್ವಜವನ್ನು ಹಿಡಿದು ಹೋಗಿ ದೇಶದ ವಿರುದ್ಧ ಮಾತನಾಡಲು ಸಾಧ್ಯವೇ?” ಎಂದು ಪ್ರಶ್ನಿಸಿದರು. ರಾಹುಲ್ ಗಾಂಧಿ ಹೇಳಿಕೆಗಳ ಕುರಿತು, “ಅವರು ಯಾವ ಅರ್ಥದಲ್ಲಿ ಹೇಳಿದ್ರೋ ನನಗೆ ಗೊತ್ತಿಲ್ಲ. ಆದರೆ ಭಾರತವನ್ನು ರಾಜಕೀಯಕ್ಕಾಗಿ ದುರುಪಯೋಗ ಮಾಡಿಕೊಳ್ಳುವುದಕ್ಕೆ ನಾನು ಹೋಗುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
“ಈ ತಂಡ ಬಹಳ ಚೆನ್ನಾಗಿ ಕೆಲಸ ಮಾಡಿದೆ. ರಾಜ್ಯಕ್ಕೆ ಇದು ಒಳ್ಳೆಯ ಅನುಭವ. ಯುವಕರಿಗೆ ಉದ್ಯೋಗ ಸೃಷ್ಟಿಸಲು ಇಂತಹ ಜಾಗತಿಕ ವೇದಿಕೆಗಳು ಅತ್ಯಂತ ಮುಖ್ಯ” ಎಂದು ಡಿಕೆ ಶಿವಕುಮಾರ್ ಹೇಳಿದರು. ಈ ಸುದ್ದಿಗೋಷ್ಠಿಯಲ್ಲಿ ಶಾಸಕ ಎನ್.ಎ. ಹ್ಯಾರಿಸ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎಎಸ್ ತುಷಾರ್ ಗಿರಿನಾಥ್, ರಾಜೇಂದ್ರ ಚೋಳನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ