ಮೂರು ಸಾವಿರ ಮಠದ ಆಸ್ತಿ ವಿವಾದ: ದಿಂಗಾಲೇಶ್ವರ ಸ್ವಾಮೀಜಿ ಖಡಕ್ ಮಾತು

By Suvarna News  |  First Published Dec 23, 2020, 9:12 PM IST

ಹುಬ್ಬಳ್ಳಿಯ ಮೂರು ಸಾವಿರ ಮಠಕ್ಕೆ ಸೇರಿದ ಆಸ್ತಿ ವಿವಾದ ಮತ್ತೆ ಭುಗಿಲೆದ್ದಿದ್ದು, ಇದಕ್ಕೆ ದಿಂಗಾಲೇಶ್ವರ ಸ್ವಾಮೀಜಿ ಖಡಕ್ ಮಾತುಗಳನ್ನಾಡಿದ್ದಾರೆ.


ಹುಬ್ಬಳ್ಳಿ, (ಡಿ.22): ಮೂರು ಸಾವಿರ ಮಠಕ್ಕೆ ಸೇರಿದ 24.30 ಎಕರೆ ಭೂಮಿಯನ್ನು ಕೆಎಲ್​ಇ ಸಂಸ್ಥೆಗೆ ದಾನ ನೀಡುವುದಕ್ಕೆ ಬಾಲೆಹೊಸೂರು ದಿಂಗಾಲೇಶ್ವರ ಸ್ವಾಮೀಜಿ ವಿರೋಧ ವ್ಯಕ್ತಪಡಿಸಿದ್ದಾರೆ. 

ನನ್ನ ಜೀವ ಇರುವವರೆಗೆ ಮಠದ ಜಮೀನನ್ನು ಕಬಳಿಸಲು ಬೇರೆಯವರಿಗೆ ಅವಕಾಶ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Tap to resize

Latest Videos

ಮೂರು ಸಾವಿರ ಮಠಕ್ಕೆ ಸೇರಿದ ಜಮೀನಿನಲ್ಲಿ ನಾಳೆ ವೈದ್ಯಕೀಯ ಕಾಲೇಜು ಕಟ್ಟಡದ ಭೂಮಿ ಪೂಜೆ ಇದೆ. ವೈದ್ಯಕೀಯ ವಿದ್ಯಾಲಯ ನಿರ್ಮಾಣಕ್ಕೆ ಅಭ್ಯಂತರವಿಲ್ಲ. ಆದರೆ ಮಠದ ಜಾಗದಲ್ಲಿ ಇದು ಬೇಡ. ಮಠ‌ ಈಗಾಗಲೇ ಆರ್ಥಿಕ ಮುಗ್ಗಟ್ಟಿನಲ್ಲಿದ್ದು, ಅಭಿವೃದ್ಧಿ ಆಗಬೇಕಿದೆ. ಕಾಲೇಜು ಕಟ್ಟಲು ಭಿಕ್ಷೆ ಬೇಡಿ ಸಹಾಯ ಮಾಡುತ್ತೇನೆ. ಆದರೆ ಬೇರೆಯವರು ಮಠದ ಜಮೀನನ್ನು ಕಬಳಿಸಲು ನಾನು ಸಾಯುವವರೆಗೆ ಬಿಡುವುದಿಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ.

ಈ ಮಠಕ್ಕೆ ಬರುವ ಪೀಠಾದಿಪತಿಗಳು ಆಸ್ತಿಯನ್ನು ಪರಭಾರೆ ಮಾಡದಂತೆ 2009ರಲ್ಲಿ ನಿರ್ಬಂಧಿಸಲಾಗಿತ್ತು. 2012ರಲ್ಲಿ ಈ ನಿರ್ಬಂಧಕ್ಕೆ ತಿದ್ದುಪಡಿ ಮಾಡಿ ಆಸ್ತಿ ಪರಭಾರೆಗೆ ಅವಕಾಶ ನೀಡಲಾಗಿದೆ. ಆ ಮೂಲಕ ನೂರಾರು ಕೋಟಿ ರೂಪಾಯಿ ಬೆಲೆಬಾಳುವ ಆಸ್ತಿಯನ್ನು ಬೇರೆಯವರಿಗೆ ಉಚಿತವಾಗಿ ನೀಡಲಾಗುತ್ತಿದೆ ಎಂದು ಸ್ವಾಮಿಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಠದಲ್ಲಿ ಆಸ್ತಿ ಹೊಡೆಯಲು ಬಹಳ ಜನರು ಸೇರಿಕೊಂಡಿದ್ದಾರೆ. ಇದೀಗ ಭೂಮಿ ಪೂಜೆಗೆ ಯಾರೆಲ್ಲಾ ಮುಂದಾಗಿದ್ದಾರೋ ಅವರು ಕಾನೂನು ತೊಡಕುಗಳನ್ನು ಎದುರಿಸಬೇಕಾಗುತ್ತದೆ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಮಠವಿದು. ಮಠದ ಆಸ್ತಿ ಮಠಕ್ಕೆ ಇರಲಿ. ಈ ಪೈಕಿ ಹಲವು ವಿಚಾರಗಳು ನ್ಯಾಯಾಲಯದಲ್ಲಿವೆ. ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಸಮಸ್ಯೆಗಳಾಗುತ್ತವೆ ಎಂದರು.

click me!