ದೇಗುಲ ನಿರ್ವಹಣೆ ಭಕ್ತರಿಗೆ ಕೊಟ್ಟರೆ ಅರ್ಚಕರ ಬದುಕಿಗೆ ತೊಂದರೆ: ದಿನೇಶ್‌

By Kannadaprabha News  |  First Published Oct 18, 2021, 7:27 AM IST
  • ಮುಜರಾಯಿ ದೇವಸ್ಥಾನಗಳನ್ನು ಭಕ್ತರ ಸುಪರ್ದಿಗೆ ನೀಡಬೇಕು ಎಂದ ವಿಚಾರ
  •  ಶಾಸಕ ದಿನೇಶ್‌ ಗುಂಡೂರಾವ್‌ ವಿರೋಧ ವ್ಯಕ್ತಪಡಿಸಿದ್ದಾರೆ

 ಬೆಂಗಳೂರು (ಅ.18):  ಮುಜರಾಯಿ ದೇವಸ್ಥಾನಗಳನ್ನು (Temple) ಭಕ್ತರ ಸುಪರ್ದಿಗೆ ನೀಡಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್‌ ಭಾಗವತ್‌ (Mohan Bhagwat) ಅವರು ನೀಡಿರುವ ಹೇಳಿಕೆಗೆ ಅಖಿಲ ಕರ್ನಾಟಕ (Karnataka) ಮುಜರಾಯಿ ದೇವಾಲಯಗಳ ಅರ್ಚಕರ (Priest), ಆಗಮಿಕರ ಹಾಗೂ ಉಪಾಧಿವಂತರ ಒಕ್ಕೂಟದ ರಾಜ್ಯಾಧ್ಯಕ್ಷರೂ ಆಗಿರುವ ಶಾಸಕ ದಿನೇಶ್‌ ಗುಂಡೂರಾವ್‌ (Dinesh Gundurao) ವಿರೋಧ ವ್ಯಕ್ತಪಡಿಸಿದ್ದಾರೆ. 

ದೇವಸ್ಥಾನಗಳನ್ನು ಭಕ್ತರ (Devotees) ಸುಪರ್ದಿಗೆ ನೀಡಿದರೆ ಪೂಜಾ ವೃತ್ತಿಯನ್ನು ನಂಬಿರುವ ಅಸಂಖ್ಯ ಅರ್ಚಕ ಸಮುದಾಯದ ಬದುಕಿನ ಮೇಲೆ ಪರಿಣಾಮ ಬೀರಲಿದೆ. ಖಾಸಗಿ ವ್ಯಕ್ತಿಗಳಿಗೆ (Private Party) ದೇಗುಲ ನಿರ್ವಹಣೆ ನೀಡಿದರೆ ಅರ್ಚಕರ ಬದುಕಿಗೆ ಭದ್ರತೆ ಒದಗಿಸುವವರು ಯಾರು ಎಂದು ಅವರು ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ಎಬಿಸಿ (ABC) ಕೆಟಗರಿಯ 36 ಸಾವಿರ ದೇವಸ್ಥಾನಗಳಿವೆ. ಇವುಗಳ ಆಸ್ತಿ ಮೌಲ್ಯ ಸುಮಾರು 10 ಲಕ್ಷ ಕೋಟಿ ರುಪಾಯಿಯಾಗಿದೆ. ಈ ದೇವಸ್ಥಾನಗಳ ಸುಪರ್ದಿ ಖಾಸಗಿ ವ್ಯಕ್ತಿಗಳ ಪಾಲಾದರೆ ದೇಗುಲದ ಆಸ್ತಿಗಳ ರಕ್ಷಣೆಯ ಹೊಣೆ ಯಾರದ್ದು? ಎಂದಿದ್ದಾರೆ.

Tap to resize

Latest Videos

ಸವದತ್ತಿ ಯಲ್ಲಮ್ಮ ದೇಗುಳ ಅಭಿವೃದ್ಧಿಗೆ ಮುಜರಾಯಿ ಸಚಿವೆ ಆದೇಶ

ಇದು ಭೂ ಅವ್ಯವಹಾರಕ್ಕೆ ಆಸ್ಪದ ನೀಡಿದಂತಲ್ಲವೆ. ಹಾಗಾಗಿ ದೇಗುಲಗಳ ನಿರ್ವಹಣೆ ಸರ್ಕಾರದ ಬಳಿಯೇ ಇರುವುದು ಸಮಂಜಸವಾಗಿದೆ ಎಂದು ಅವರು ಟ್ವೀಟ್‌ನಲ್ಲಿ (tweet) ಹೇಳಿದ್ದಾರೆ.

ಅರ್ಚಕ ವೃತ್ತಿ ಲಾಭದಾಯಕವಲ್ಲ. ಅರ್ಚಕರಿಗೆ ಸಂಭಾವನೆಯೂ ಇಲ್ಲ. ಮೋಹನ್‌ ಭಾಗವತ್‌ರ ಹೇಳಿಕೆ ಅರ್ಚಕರಷ್ಟೇ ಅಲ್ಲದೆ, ದೇವಸ್ಥಾನಕ್ಕೆ ಸಂಬಂಧಪಟ್ಟಲಕ್ಷಾಂತರ ಹೊರಾಂಗಣ ನೌಕರರ ಬದುಕಿಗೂ ಕೊಳ್ಳಿ ಇಡಲಿದೆ ಎಂದು ದಿನೇಶ್‌ ಗುಂಡೂರಾವ್‌ ಪ್ರತಿಕ್ರಿಯಿಸಿದ್ದಾರೆ.

ದೇಗುಲಗಳಿಗೆ ಹಿಂದೂ ಆಡಳಿತ

 ದೇಶದ ಹಲವು ರಾಜ್ಯಗಳಲ್ಲಿ ಹಿಂದೂ ದೇಗುಲಗಳ(Hindu Temples) ಪರಿಸ್ಥಿತಿ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಆರ್‌ಎಸ್‌ಎಸ್‌(RSS) ಮುಖ್ಯಸ್ಥ ಮೋಹನ್‌ ಭಾಗವತ್‌(Mohan Bhagwat), ದೇಶದಲ್ಲಿನ ಎಲ್ಲಾ ಹಿಂದೂ ದೇಗುಲಗಳನ್ನು ಹಿಂದೂಗಳ ವಶಕ್ಕೆ ಒಪ್ಪಿಸಬೇಕು. ದೇಗುಲಗಳಲ್ಲಿ ಸಂಗ್ರಹವಾಗುವ ಹಣವನ್ನು ಹಿಂದೂಗಳ ಅಭಿವೃದ್ಧಿಗೆ ಮಾತ್ರ ಬಳಸಬೇಕು ಎಂದು ಆಗ್ರಹ ಮಾಡಿದ್ದಾರೆ.

ವಿಜಯದಶಮಿ(Vijayadashami) ಪ್ರಯುಕ್ತ ನಾಗ್ಪುರದ ರೇಶಿಮ್‌ಬಾಘ್‌ ಮೈದಾನದಲ್ಲಿ ಮಾತನಾಡಿದ ಮೋಹನ್‌ ಭಾಗವತ್‌, ‘ದಕ್ಷಿಣದ ರಾಜ್ಯಗಳಲ್ಲಿ ದೇಗುಲಗಳು ಪೂರ್ಣವಾಗಿ ಸರ್ಕಾರದ ನಿಯಂತ್ರಣದಲ್ಲಿವೆ. ದೇಶದ ಉಳಿದೆಡೆ ಕೆಲವನ್ನು ಸರ್ಕಾರಗಳು ನಿಯಂತ್ರಿಸುತ್ತಿದ್ದರೆ, ಕೆಲವನ್ನು ಭಕ್ತರು ನಿರ್ವಹಿಸುತ್ತಿದ್ದಾರೆ. ಎಲ್ಲಿ ಆಡಳಿತ ಸರಿ ಇಲ್ಲವೋ ಅಲ್ಲಿ ದೇಗುಲಗಳ ಆಸ್ತಿ ಲೂಟಿಯಾಗುತ್ತಿದೆ. ಕೆಲವೊಂದು ದೇಗುಲಗಳಲ್ಲಂತೂ ಆಡಳಿತದ ಯಾವುದೇ ವ್ಯವಸ್ಥೆಗಳೇ ಇಲ್ಲ. ಅಂಥ ಕಡೆ ಚರ ಮತ್ತು ಸ್ಥಿರಾಸ್ತಿಗಳನ್ನು ಲೂಟಿ ಮಾಡಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಭಕ್ತರೇ ನಿರ್ವಹಿಸಿ ಅತ್ಯುತ್ತಮವಾಗಿ ನಿರ್ವಹಿಸುತ್ತಿರುವ ದೇಗುಲಗಳಿಗೆ ಜಮ್ಮುವಿನ ಮಾತಾ ವೈಷ್ಣೋದೇವಿ, ಮಹಾರಾಷ್ಟ್ರದ ಬುಲ್ಡಾನಾದಲ್ಲಿರುವ ಗಜಾನನ ಮಹಾರಾಜ್‌ ದೇಗುಲ, ದೆಹಲಿ ಜ್ಞಾನದೇವಾಲಯ ಮೊದಲಾದ ದೇಗುಲಗಳು ಉದಾಹರಣೆಯಾಗಿವೆ. ಹೀಗಾಗಿ ಎಲ್ಲಾ ಹಿಂದೂ ದೇಗುಲಗಳ ಹಕ್ಕನ್ನು ಹಿಂದೂಗಳಿಗೆ ನೀಡಬೇಕು’ ಎಂದು ಭಾಗವತ್‌ ಆಗ್ರಹಿಸಿದರು.

click me!