ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸಿದ್ದ ಹೋರಾಟಗಾರ ! ಜಮಖಂಡಿ ಅಖಾಡದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ! ತಮಟೆ ಬಾರಿಸುತ್ತಾ ಬಸ್ ನಿಲ್ದಾಣದಲ್ಲಿ ಮೌನ ಹೋರಾಟದೊಂದಿಗೆ ಏಕಾಂಗಿ ಪ್ರಚಾರ!ಪಕ್ಷೇತರ ಅಭ್ಯರ್ಥಿ ಅಂಬ್ರೋಸ್ ಡಿ ಮೆಲ್ಲೋ ವಿಭಿನ್ನ ಪ್ರಚಾರ! ಮೌನ ಹೋರಾಟಗಾರನ ಚಿನ್ಹೆ ಚಪ್ಪಲಿ ಆದ್ರೆ ಇವರು ಚಪ್ಪಲಿ ಹಾಕುವದಿಲ್ಲ! ನೋಟು ಅಮಾನ್ಯೀಕರಣ ವಿರೋಧಿಸಿ ಹಳೆ ನೋಟಿನೊಂದಿಗೆ ಮೌನ ಹೋರಾಟ
ಜಮಖಂಡಿ(ಅ.24): ಒಂದೆಡೆ ಜಮಖಂಡಿ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ -ಬಿಜೆಪಿ ಅಭ್ಯರ್ಥಿ ಗಳು ಗೆಲ್ಲಲು ಅಬ್ಬರ ಪ್ರಚಾರ ಮಾಡುತ್ತಿದ್ದಾರೆ. ಇತ್ತ ಪಕ್ಷೇತರ ಅಭ್ಯರ್ಥಿಯೊಬ್ಬರು ಬೀದಿ ಬದಿ ಬಸ್ ನಿಲ್ದಾಣದಲ್ಲಿ ಮೌನ ಹೋರಾಟದೊಂದಿಗೆ ಪ್ರಚಾರ ಮಾಡುತ್ತಾ ಗಮನಸೆಳೆದಿದ್ದಾರೆ.
ಬೆಂಗಳೂರಿನ ನಿವಾಸಿಯಾಗಿರುವ ಹೋರಾಟಗಾರ ಅಂಬ್ರೋಸ್ ಡಿ ಮೆಲ್ಲೊ 2014ರಲ್ಲಿ ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಿದ್ದರು. ಇದೀಗ ಜಮಖಂಡಿ ವಿಧಾನಸಭಾ ಉಪಚುನಾವಣೆಯಲ್ಲಿ ಕಳೆದ 16 ರಂದು ನಾಮಪತ್ರ ಸಲ್ಲಿಸಿ ಏಕಾಂಗಿಯಾಗಿ ವಿಭಿನ್ನ ಪ್ರಚಾರ ಮಾಡುತ್ತಿದ್ದಾರೆ.
ಚುನಾವಣೆಯಲ್ಲಿ ಚಪ್ಪಲಿ ಚಿಹ್ನೆಯನ್ನು ಗುರುತಾಗಿ ಪಡೆದಿರುವ ಅಂಬ್ರೋಸ್ 16 ವರ್ಷಗಳಿಂದ ಚಪ್ಪಲಿಯನ್ನೇ ಹಾಕೋದು ಬಿಟ್ಟಿದ್ದಾರೆ. ಇನ್ನು 14 ವರ್ಷಗಳಿಂದ ದೇಶವ್ಯಾಪಿ ಮೌನ ಹೋರಾಟವನ್ನು ಮಾಡ್ತಿದ್ದಾರೆ.
50 ವರ್ಷದ ಅಂಬ್ರೋಸ್ ಡಿ ಮೆಲ್ಲೋ ಈ ಹಿಂದೆ ಮೂರು ವಿಧಾನಸಭೆ, ನಾಲ್ಕು ಬಾರಿ ಬೇರೆ ಬೇರೆ ಲೋಕಸಭಾ ಚುನವಣೆಯಲ್ಲಿಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಮತದಾನ ಪದವನ್ನು ನಿಷೇಧಿಸಬೇಕು, ಜೊತೆಗೆ ಇಂದಿನ ರಾಜಕಾರಣಿಗಳು ರಾಜಕಾರಣವನ್ನು ಜೂಜಾಟ ಮಾಡಿಕೊಂಡಿದ್ದಾರೆ, ಧಾರ್ಮಿಕ ಭಾವನೆ ಕೆರಳಿಸಿ, ಹುಸಿ ಭರವಸೆ ನೀಡಿ ಮತಗಿಟ್ಟಿಸಿಕೊಳ್ತಾರೆ. ಅಭಿವೃದ್ಧಿ ಮಾಡೋದಿಲ್ಲ ಎಂದು ಮೌನಕ್ಕೆ ಜಾರಿದ್ದಾರೆ.
ಇನ್ನು ನೋಟು ಅಮಾನ್ಯೀಕರಣ ವಿರೋಧಿಸಿ, ಜಮಖಂಡಿಯಲ್ಲಿ ರದ್ದಾಗಿರುವ ನೋಟುಗಳೊಂದಿಗೆ ಮೌನ ಹೋರಾಟ ಮಾಡುತ್ತಿದ್ದಾರೆ. ಪುಸ್ತಕ ಮಾರಾಟ ಮಾಡಿ, ಹಳೆ ನೋಟು ಕೊಟ್ಟರೆ ಪಡೆದುಕೊಳ್ತಾರೆ. ಆದರೆ ಹೊಸ ನೋಟು ಸ್ವೀಕರಿಸೋದಿಲ್ಲ. ಇವರು ಬಸ್ ನಿಲ್ದಾಣದಲ್ಲಿ ತಮಟೆ ಬಾರಿಸುವ ಸದ್ದನ್ನು ಕೇಳಿ ಜನ ಅಂಬ್ರೋಸ್ ಬಳಿ ಜಮಾಯಿಸ್ತಾರೆ.
ಕುಡಿಯುವ ನೀರು ಮಾರುವ-ಖರೀದಿಸುವ ಸರಕು ಅನ್ನೋ ಬೋರ್ಡ ಗಮನಸೆಳೆಯುತ್ತಿದೆ. ಕುಡಿಯುವ ನೀರನ್ನು ಮಾರಾಟ ಮಾಡುವದನ್ನು ವಿರೋಧಿಸಿ ಶೌಚಾಲಯದಲ್ಲಿನ ನಲ್ಲಿ ನೀರು ಕುಡಿಯುತ್ತಿದ್ದಾರೆ. 2000ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಎಂಎ ಪದವಿ ಪಡೆದುಕೊಂಡಿದ್ದಾರೆ ಅಂಬ್ರೋಸ್.
ಇದೀಗ ಜಮಖಂಡಿ ವಿಧಾನಸಭಾ ಉಪಚುನಾವಣೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿ ಅಂಬ್ರೋಸ್ ಡಿ ಮೆಲ್ಲೊ ಎಷ್ಟು ಮತ ಪಡೆಯುತ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.