
ಬೆಂಗಳೂರು(ಸೆ.05): ‘ಚುನಾವಣೆ ಖರ್ಚಿಗಾಗಿ ಬಾಗ್ಮನೆ ಡೆವಲಪರ್ಸ್ ಸಂಸ್ಥೆಯಿಂದ ಸಚಿವ ಎಂ.ಬಿ.ಪಾಟೀಲ್ ಅವರು 4 ಕೋಟಿ ರು. ಸಾಲ ಪಡೆದಿದ್ದಾರೆ’ ಎಂಬ ಬಗ್ಗೆ ಬಿಜೆಪಿ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿರುವ ಎಂ.ಬಿ. ಪಾಟೀಲ್, ವ್ಯವಹಾರದ ಉದ್ದೇಶಕ್ಕೆ ಬಾಗ್ಮನೆ ಸಂಸ್ಥೆಯಿಂದ 2001ರಲ್ಲಿ ಸಾಲ ಪಡೆದಿದ್ದೇನೆ. ಆದರೀಗ, ಬಿಜೆಪಿ ದುರುದ್ದೇಶದಿಂದ ಮತ್ತು ವಿವೇಚನೆ ಇಲ್ಲದೆ ಆರೋಪ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಆರೋಪಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಪಾಟೀಲ್, ಕರ್ನಾಟಕ ಬಿಜೆಪಿ ನಾಯಕರಿಗೆ ವಿವೇಚನೆ ಇಲ್ಲದಿರುವುದು ಮತ್ತೊಮ್ಮೆ ಸಾಬೀತಾಗಿದೆ. ಬಾಗ್ಮನೆ ಸಂಸ್ಥೆಯಿಂದ 2001ರಲ್ಲಿ ಸಾಲ ಪಡೆದಿದ್ದು, ಈಗ ಅದರ ಬಗ್ಗೆ ಬೊಬ್ಬೆ ಹೊಡೆಯುತ್ತಿದ್ದಾರೆ. ಆ ಹಣವನ್ನು ಚುನಾವಣಾ ಖರ್ಚಿಗಾಗಿ ಪಡೆದಿಲ್ಲ. ಅವೆಲ್ಲವೂ ನಮ್ಮ ಕೌಟುಂಬಿಕ ವ್ಯವಹಾರವಾಗಿದೆ. ಅನೇಕ ಬಾರಿ ಸಾಲ ಪಡೆದು, ವಾಪಸು ನೀಡಿದ್ದೇನೆ ಹಾಗೂ ಬಾಕಿಯೂ ಇದೆ. ಬಿಜೆಪಿ ಆರೋಪ ಸತ್ಯಕ್ಕೆ ದೂರವಾದದ್ದು ಹಾಗೂ ಕುಚೇಷ್ಟೆಯಿಂದ ಕೂಡಿದೆ ಎಂದಿದ್ದಾರೆ.
ಮುಖ್ಯಮಂತ್ರಿ ಆಗಬೇಕೆಂಬ ಹಗಲುಗನಸು ಬೇಡ: ಎಂ.ಬಿ. ಪಾಟೀಲ್
2021ರಲ್ಲಿ ಬಿಜೆಪಿ ಸರ್ಕಾರ ಮಾಡಿದ್ದ ಆದೇಶದಂತೆಯೇ ದರ ವಿಧಿಸಿ ಬಾಗ್ಮನೆ ಸಂಸ್ಥೆ ಪಾಲುದಾರ ಸಂಸ್ಥೆಗೆ ಭೂಮಿ ನೀಡಲಾಗಿದೆ. ಅದರಲ್ಲಿ ಯಾವುದೇ ರಿಯಾಯಿತಿ ನೀಡಿಲ್ಲ. ನಿವೇಶನ ಹಂಚಿಕೆ ವೇಳೆ ಎಲ್ಲ ಮಾನದಂಡವನ್ನು ಪರಿಗಣಿಸಲಾಗಿದೆ. ಅರ್ಹತೆ, ಸಾಮರ್ಥ್ಯ, ಅನುಭವ ಸೇರಿದಂತೆ ಇನ್ನಿತರ ಮಾನದಂಡದ ಆಧಾರದಲ್ಲಿ ಭೂಮಿ ನೀಡಲಾಗಿದೆ. ವಿವಿಧ ಇಲಾಖೆಗಳ ಉನ್ನತಾಧಿಕಾರಿಗಳನ್ನೊಳಗೊಂಡ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ನಿರ್ಧಾರದಂತೆ ಭೂಮಿ ನೀಡಲಾಗಿದ್ದು, ಅದರಲ್ಲಿ ನನ್ನ ವೈಯಕ್ತಿಕ ನಿರ್ಧಾರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ, ಬಾಗ್ಮನೆ ಸಂಸ್ಥೆಯೆ 2005, 2006 ಮತ್ತು 2009ರಲ್ಲೂ ವಿವಿಧೆಡೆ ಸರ್ಕಾರದಿಂದ ಕೈಗಾರಿಕಾ ಭೂಮಿ ನೀಡಲಾಗಿದೆ. 2009ರಲ್ಲಿ ಬಾಗ್ಮಾನೆ ಸಮೂಹದ ಚಂದ್ರಾ ಡೆವಲಪರ್ಸ್‌ಗೆ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಸಮೀಪ 25 ಎಕರೆ ಭೂಮಿ ನೀಡಿದ್ದಾಗ ಬಿಜೆಪಿ ಸರ್ಕಾರ ಇತ್ತಲ್ಲವೇ ಎಂದು ಸಚಿವರು ಖಾರವಾಗಿ ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ