ಧಾರವಾಡದಲ್ಲಿ ಪಿಒಪಿ ಗಣೇಶ ವಿಗ್ರಹಗಳಿಗೆ ಕಟ್ಟುನಿಟ್ಟಿನ ನಿಷೇಧ: ಜಿಲ್ಲಾಧಿಕಾರಿ ದಿವ್ಯ ಪ್ರಭು ಎಚ್ಚರಿಕೆ

Published : Aug 02, 2025, 09:46 PM IST
Divya Prabhu

ಸಾರಾಂಶ

ಗಣಪತಿ ವಿಗ್ರಹ ಮಾರಾಟಗಾರರು ಪರಿಸರಸ್ನೇಹಿ ಮಣ್ಣಿನ ಗಣಪತಿಗಳನ್ನು ಮಾತ್ರ ಮಾರಾಟ ಮಾಡಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.

ವರದಿ: ಪರಮೇಶ್ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ

ಧಾರವಾಡ (ಆ.02): ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಪಿ.ಓ.ಪಿ. ವಿಗ್ರಹಗಳನ್ನು ಮಾರಾಟ ಮಾಡಲು ಅವಕಾಶವಿಲ್ಲ. ಇದು ಕಾನೂನುಬಾಹಿರ. ಅಧಿಕಾರಿಗಳು ನಗರದಾದ್ಯಂತ ದಿಢೀರ ದಾಳಿ ನಡೆಸಿ, ಅಂತಹ ವಿಗ್ರಹಗಳು ಸಿಕ್ಕರೆ ತಕ್ಷಣ ವಶಪಡಿಸಿಕೊಳ್ಳಬೇಕು ಮತ್ತು ಮಾರಾಟಗಾರರ ಮೇಲೆ ದಂಡ ವಿಧಿಸಬೇಕು ಗಣಪತಿ ವಿಗ್ರಹ ಮಾರಾಟಗಾರರು ಪರಿಸರಸ್ನೇಹಿ ಮಣ್ಣಿನ ಗಣಪತಿಗಳನ್ನು ಮಾತ್ರ ಮಾರಾಟ ಮಾಡಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.

ಅವರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಭವನದಲ್ಲಿ ಪಿಓಪಿ ಗಣೇಶ ವಿಗ್ರಹಗಳ ನಿಷೇಧ ಹಾಗೂ ನಿಯಂತ್ರಿಸುವ ಕುರಿತು ಜಲಮಾಲಿನ್ಯ ತಡೆ ಕಾರ್ಯಪಡೆ ಸಭೆ ಜರುಗಿಸಿ, ಮಾತನಾಡಿದರು ನಮ್ಮ ಶ್ರದ್ಧೆ ಪರಿಸರಕ್ಕೆ ಮಾರಕವಾಗಬಾರದು ನಮ್ಮ ಪೂಜೆ ಮುಂದಿನ ಪೀಳಿಗೆಗೆ ಶಾಪವಾಗಬಾರದು ಈ ನಿಟ್ಟಿನಲ್ಲಿ ಎಲ್ಲರೂ ಜವಾಬ್ದಾರಿಯಿಂದ ಕೆಲಸ ಮಾಡಿ ಎಂದು ತಿಳಿಸಿದರು. ಬೇರೆ ಜಿಲ್ಲೆಗಳಿಂದ ನಮ್ಮ ನಗರ ಮತ್ತು ಪಟ್ಟಣಕ್ಕೆ ಪಿ.ಓ.ಪಿ. ವಿಗ್ರಹಗಳು ಬರದಂತೆ ತಡೆಯಲು ಜಿಲ್ಲೆಯ ಗಡಿ ಭಾಗಗಳಲ್ಲಿ ಹಾಗೂ ಮಹಾನಗರದ ಗಡಿಯಲ್ಲಿ ಚೆಕ್ ಪೋಸ್ಟಗಳನ್ನ ಸ್ಥಾಪಿಸಿ ಕಟ್ಟುನಿಟ್ಟಿನ ತಪಾಸಣೆ ನಡೆಸಬೇಕು.

ಚೆಕ್‍ಪೋಸ್ಟ್‍ದಲ್ಲಿ ಪೊಲೀಸ್ ಸಿಬ್ಬಂದಿಯೊಂದಿಗೆ ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳು ಕಾರ್ಯನಿರ್ವಹಿಸಬೇಕು ನಿಯಮ ಉಲ್ಲಂಘಿಸಿ ಸಾಗಾಟ ಮಾಡುವ ವಾಹನಗಳನ್ನು ಮತ್ತು ಪಿಓಪಿ ವಿಗ್ರಹಗಳನ್ನು ವಶಪಡಿಸಿಕೊಳ್ಳಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಪಿಓಪಿ ಗಣೇಶ ವಿಗ್ರಹಗಳ ತಪಾಸಣೆ ವಶಪಡಿಸಿಕೊಳ್ಳುವಲ್ಲಿ ಪೊಲಿಸರು ನಿರ್ಲಕ್ಷ್ಯ ವಹಿಸಬಾರದು ನಿಯಮ ಪಾಲನೆಯಲ್ಲಿ ಯಾವುದೇ ಪೋಲಿಸ್ ಅಧಿಕಾರಿ ನಿರ್ಲಕ್ಷ್ಯ ತೋರಿದ್ದು ಕಂಡುಬಂದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಪಿಓಪಿ ಗಣೇಶ ಮೂರ್ತಿಗಳ ಬಳಕೆಯನ್ನು ನಿಷೇಧಿಸುವ ಕುರಿತು ಕರ್ನಾಟಕ ಹೈಕೋರ್ಟ್ ಸ್ಪಷ್ಟ ನಿರ್ದೇಶನಗಳನ್ನು ನೀಡಿದೆ ಪಿಓಪಿ ವಿಗ್ರಹಗಳು ನೀರಿನಲ್ಲಿ ಕರಗುವುದಿಲ್ಲ ಮತ್ತು ಅದರಲ್ಲಿರುವ ವಿಷಕಾರಿ ರಾಸಾಯನಿಕಗಳು ಜಲಮೂಲಗಳಾದ ಕೆರೆ, ಬಾವಿ, ಹಳ್ಳ, ನದಿ ಸೇರಿ ನೀರನ್ನು ಕಲುಷಿತಗೊಳಿಸುತ್ತವೆ ಇದು ಜಲಚರಗಳಿಗೆ ಮತ್ತು ಮಾನವನ ಆರೋಗ್ಯಕ್ಕೆ ಅತ್ಯಂತ ಹಾನಿಕಾರಕವಾಗುವುದರಿಂದ ಹೈಕೋರ್ಟ್ ಈ ಕಠಿಣ ನಿಲುವನ್ನು ತೆಗೆದುಕೊಂಡಿದೆ. ಪೊಲೀಸ್, ಪರಿಸರ ಮಾಲಿನ್ಯ ಮಹಾನಗರ ಪಾಲಿಕೆ ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಹೈಕೋರ್ಟ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.

ಪಿಓಪಿ ಮಾಹಿತಿಗಾಗಿ ಸಹಾಯವಾಣಿ: ಜಿಲ್ಲೆಯಲ್ಲಿ ಪಿಓಪಿ ವಿಗ್ರಹಗಳು ಮಾರಾಟವಾಗದಂತೆ ಮತ್ತು ಸಾರ್ವಜನಿಕರು ಬಳಸದಂತೆ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಣ್ಣಿನ ಗಣಪತಿಗಳ ತಯಾರಿಕೆ ಹಾಗೂ ಮಾರಾಟಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಆದಾಗ್ಯೂ ಜಿಲ್ಲೆಯ ಯಾವುದೇ ನಗರ, ತಾಲೂಕು ಹಾಗೂ ಇತರ ಪ್ರದೇಶಗಳಲ್ಲಿ ಪಿಓಪಿ ಗಣಪತಿ ವಿಗ್ರಹಗಳುಮಾರಾಟವಾಗುವುದು ಕಂಡು ಬಂದಲ್ಲಿ ಪರಿಸರ ಪ್ರೀಯರು, ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಹಾಗೂ ತಾಲೂಕಾಡಳಿತ ಮತ್ತು ಮಹಾನಗರ ಪಾಲಿಕೆಗೆ ಮಾಹಿತಿ ನೀಡಲು ಅನುಕೂಲವಾಗುವಂತೆ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲಾಗಿದೆ.

ಸಾರ್ವಜನಿಕರು ಪಿಓಪಿ ಸಾಗಾಣಿಕೆ, ದಾಸ್ತಾನು, ಮಾರಾಟ ಹಾಗೂ ತಯಾರಿಕೆ ಕಂಡು ಬಂದಲ್ಲಿ ಸಹಾಯವಾಣಿಗೆ ಕರೆ ಮಾಡಿ ಅಥವಾ ವಾಟ್ಸಪ್ ಮೂಲಕವು ಮಾಹಿತಿ ನೀಡಬಹುದಾಗಿದೆ. ಮಾಹಿತಿದಾರರ ಪರಿಚಯವನ್ನು ಗೌಪ್ಯವಾಗಿ ಇಡಲಾಗುವುದು. ಸಹಾಯವಾಣಿ : ಧಾರವಾಡ ಜಿಲ್ಲಾಧಿಕಾರಿಗಳ ಕಾರ್ಯಾಲಯ 0836-2445508 ಟೋಲ್ ಫ್ರೀ ನಂಬರ:1077, ಧಾರವಾಡ ಉಪ ವಿಭಾಗಾಧಿಕಾರಿ ಕಚೇರಿ: 0836-2233860, ಧಾರವಾಡ ತಹಶೀಲ್ದಾರ ಕಚೇರಿ: 0836-2233822, ಅಳ್ಳಾವರ ತಹಶೀಲ್ದಾರ ಕಚೇರಿ: 0836-2385544, ಹುಬ್ಬಳ್ಳಿ ನಗರ: 0836-2358035, ಹುಬ್ಬಳ್ಳಿ: 0836-2233844, ಕಲಘಟಗಿ: 08370-284535, ನವಲಗುಂದ: 08380-229240, ಅಣ್ಣಿಗೇರಿ: 8618442759, ಕುಂದಗೋಳ:8304290239 ಮತ್ತು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 0836-2213888, 0836-2213889, 0836-2213869 ಹಾಗೂ ವಾಟ್ಸ್‍ಪ ಸಂಖ್ಯೆ: 8277803778 ಗೆ ಕರೆ ಮಾಡಿ ತಿಳಿಸಬಹುದು ಎಂದು ಅವರು ಹೇಳಿದರು.

ತಾಲೂಕು ಕಾರ್ಯಪಡೆ ಕ್ರಿಯಾಶೀಲವಾಗಲಿ: ಪಿಓಪಿ ಗಣಪತಿ ವಿಗ್ರಹಗಳ ಸಾಗಾಣಿಕೆ, ದಾಸ್ತಾನು ಮತ್ತು ಮಾರಾಟವನ್ನು ತಡೆಗಟ್ಟಲು ಈಗಾಗಲೇ ಜಿಲ್ಲಾ ಹಾಗೂ ತಾಲೂಕು ಮಟ್ಟದ ಕಾರ್ಯಪಡೆಗಳನ್ನು ರಚಿಸಿ, ಆದೇಶಿಸಲಾಗಿದೆ. ತಹಶೀಲ್ದಾರ ನೇತೃತ್ವದ ಹಾಗೂ ಜಿಲ್ಲಾ ಕಾರ್ಯಪಡೆ ಕ್ರಿಯಾಶೀಲವಾಗಿ ಕೆಲಸಮಾಡಬೇಕು. ಚೆಕ್‍ಪೋಸ್ಟ್, ದಾಸ್ತಾನು ಮಳಿಗೆ, ಮಾರಾಟಾ ಸ್ಥಳಗಳಿಗೆ ಅನೀರಿಕ್ಷಿತ ಬೇಟಿ ನೀಡಿ, ಪರಿಶೀಲಿಸಬೇಕು. ಪಿಓಪಿ ವಿಗ್ರಹಗಳು ಪತ್ತೆಯಾದಲ್ಲಿ ಕಠಿಣವಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು. ನಗರದ ಪ್ರದೇಶದಲ್ಲಿ ಯಾರಾದರೂ ಪಿಓಪಿ ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದರೆ, ತಕ್ಷಣ ಸ್ಥಳೀಯ ನಗರಸಭೆ, ಬಿಬಿಎಂಪಿ ಅಥವಾ ಮಾಲಿನ್ಯ ನಿಯಂತ್ರಣ ಮಂಡಳಿಯ ಗಮನಕ್ಕೆ ತರಬೇಕು ಅಥವಾ ಹೆಲ್ಪ್ ಲೈನ್ ನಂಬರಿಗೆ ಫೋನ್ ಕರೆಗಳನ್ನು ಮಾಡಿ ತಿಳಿಸಬೇಕು ಎಂದು ಅವರು ಹೇಳಿದರು.

ಪಟಾಕಿ ಮಾರಾಟ: ಗಣೇಶ ಚತುರ್ಥಿ ನಿಮಿತ್ಯ ಪಟಾಕಿ ಹಾಗೂ ಸಿಡಿಮದ್ದುಗಳನ್ನು ಮಾರಾಟ ಮಾಡಲು ಸ್ಥಳ ನಿಗದಿಪಡಿಸಲಾಗಿದೆ. ಮಾರಾಟಗಾರರು ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದು, ತಹಶೀಲ್ದಾರ ಹಾಗೂ ಪೊಲೀಸ್, ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಖುದ್ದು ಸ್ಥಳ ಪರಿಶೀಲನೆ ಮಾಡಿ, ನಿಯಮಾನುಸಾರ ಕ್ರಮಕೈಗೊಳ್ಳಬೇಕು. ಯಾವುದೇ ಹಾನಿ, ಅವಘಡ ಉಂಟಾದಲ್ಲಿ ಪಟಾಕಿ ಅಂಗಡಿಗಳ ಮಾಲೀಕರು ನೇರಹೊಣೆ ಆಗುತ್ತಾರೆ. ತಹಶೀಲ್ದಾರ ನೀಡುವ ವರದಿ ಆದಾರದ ಮೇಲೆ ಕ್ರಮಕೈಗೊಳ್ಳಲಾಗುವುದು. ಧಾರವಾಡ ನಗರದ ಕಲಾಭವನವನ ಮತ್ತು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಪಟಾಕಿ ಮಾರಾಟಕ್ಕೆ ಅನುಮತಿ ನೀಡಲಾಗುವುದು. ನವಲಗುಂದ ಪಟ್ಟಣದಲ್ಲಿ ಮಾರಾಟ ಕೇಂದ್ರಕ್ಕೆ ಸೂಕ್ತ ಸ್ಥಳ ಗುರುತಿಸಿ, ಶಿಫಾರಸ್ಸು ಮಾಡುವಂತೆ ನವಲಗುಂದ ತಹಶೀಲ್ದಾರರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಸಾಂಪ್ರದಾಯಿಕವಾಗಿ ತಯಾರಿಸುವ ಮಣ್ಣಿನ ಗಣೇಶ ಮೂರ್ತಿಗಳನ್ನು ಮಾಡಿ, ಪೂಜಿಸಿ ಮತ್ತು ಮೂರ್ತಿ ವಿಸರ್ಜನೆಯನ್ನು ಮನೆಯಲ್ಲಿ ಒಂದು ಬಕೆಟ್ ನೀರಿನಲ್ಲಿ ಮಾಡುವ ಬಗ್ಗೆ ಹಾಗೂ ಆ ಮಣ್ಣಿನಿಂದ ಗಿಡಗಳನ್ನು, ಸಸಿಗಳನ್ನು ಬೆಳೆಸುವುದ ಕುರಿತು ಜನ ಸಾಮಾನ್ಯರಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು. ಮಹಾನಗರ ಪಾಲಿಕೆ ಏಕ ಗವಾಕ್ಷಿ (ಸಿಂಗಲ್ ವಿಂಡೋ) ಮೂಲಕ ಗಣೇಶ ಮಹಾಮಂಡಳಗಳಿಗೆ ಸಾರ್ವಜನಿಕ ಗಣೇಶ ವಿಗ್ರಹಗಳನ್ನು ಸ್ಥಾಪಿಸಲು ಅನುಮತಿ ನೀಡಬೇಕು. ವಿಶೇಷವಾಗಿ ಮಣ್ಣಿನ ಗಣಪತಿಗಳ ಸ್ಥಾಪನೆಗೆ ಪ್ರೋತ್ಸಾಹಿಸಬೇಕೆಂದು ಅವರು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಗರೀಮಾ ಪವಾರ, ಉಪಪೊಲೀಸ್ ಆಯುಕ್ತ ಮಹಾನಿಂಗ ನಂದಗಾವಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಡಾ. ರುದ್ರೇಶ ಘಾಳಿ ಅವರು ವೇದಿಕೆಯಲ್ಲಿ ಇದ್ದರು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ಜಗದೀಶ ಐ.ಎಚ್.ಅವರು ಸ್ವಾಗತಿಸಿ, ಸಭೆ ನಿರ್ವಹಿಸಿದರು.

ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ತಹಶೀಲ್ದಾರರಾದ ಡಾ.ಡಿ.ಎಚ್.ಹೂಗಾರ, ಬಸವರಾಜ ಬೆಣ್ಣೆಶಿರೂರ, ಜೆ.ಬಿ.ಮಜ್ಜಗಿ, ಸುಧೀರ ಸಾವುಕಾರ, ಎಮ್.ಜಿ.ದಾಸಪ್ಪನವರ, ರಾಜು ಮಾವರಕರ, ಮಹೇಶ ಗಸ್ತೆ ಹಾಗೂ ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ ಸಿದ್ದನಗೌಡರ, ಮಹಾನಗರ ಪಾಲಿಕೆಯ ಅಧೀಕ್ಷಕ ಅಭಿಯಂತರ ವಿಜಯಕುಮಾರ ಹಾಗೂ ಗಣೇಶ ಮೂರ್ತಿ ತಯಾರಿಕರು ಹಾಗೂ ಗಣೇಶ ಮೂರ್ತಿ ಮಾರಾಟಗಾರರು, ಪಟಾಕಿ ಮಾರಾಟಗಾರರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ
ಚುಂಚ ಶ್ರೀ ಬಳಿ ಕೈ ಮುಗಿದು ಎಚ್‌ಡಿಕೆ ಕ್ಷಮೆ