
ಧಾರವಾಡ (ಡಿ.27): ರಾಜ್ಯದಲ್ಲಿ ಡಿಸೆಂಬರ್ ತಿಂಗಳು ಗಂಡಾಂತರಕಾರಿಯಾಗಿ ಪರಿಣಮಿಸಿದೆ. ಕಳೆದ ಒಂದು ವಾರದಿಂದ ಬಸ್, ಮನೆ, ಅನಿಲ ಸ್ಫೋಟ ಹೀಗೆ ಸಾಲು ಸಾಲು ಅಗ್ನಿ ಅವಘಡಗಳು ಸಂಭವಿಸುತ್ತಲೇ ಇವೆ. ಇಂದು ಈ ದುರಂತಗಳ ಸರಣಿಗೆ ಮತ್ತೊಂದು ಭೀಕರ ಘಟನೆ ಸೇರ್ಪಡೆಯಾಗಿದ್ದು, ಚಲಿಸುತ್ತಿದ್ದ ಕಾರು ಸುಟ್ಟು ಭಸ್ಮವಾಗಿದೆ.
ಧಾರವಾಡ ನಗರದ ಕೋರ್ಟ್ ವೃತ್ತದಿಂದ ಕೆಸಿಡಿ ಕಾಲೇಜಿನ ಕಡೆಗೆ ಹೊರಟಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ನಗರದ ಎಲ್ಐಸಿ ಕಚೇರಿ ಹತ್ತಿರವಿರುವ ಎಸ್‌ಬಿಐ ಬ್ಯಾಂಕ್ ಬಳಿ ತಲುಪುತ್ತಿದ್ದಂತೆ ಕಾರಿನ ಎಂಜಿನ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಹೊಗೆ ಕಾಣಿಸಿಕೊಂಡಿದೆ. ನೋಡನೋಡುತ್ತಿದ್ದಂತೆಯೇ ಬೆಂಕಿ ಕಾರಿನಾದ್ಯಂತ ವ್ಯಾಪಿಸಿದೆ.
ಅಗ್ನಿ ಅವಘಡಕ್ಕೀಡಾದ ಕಾರು ನಿಜಾಮುದ್ದಿನ ಎಂಬುವರಿಗೆ ಸೇರಿದ್ದಾಗಿದ್ದು, ಅದರ ನಂಬರ್ GA 06 D 3919 ಎಂದು ತಿಳಿದುಬಂದಿದೆ. ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ತಕ್ಷಣ ಕಾರಿನಲ್ಲಿದ್ದ ಇಬ್ಬರು ತಕ್ಷಣವೇ ಕೆಳಗಿಳಿದಿದ್ದಾರೆ. ಇದರಿಂದಾಗಿ ದೊಡ್ಡ ಮಟ್ಟದ ಜೀವಹಾನಿ ತಪ್ಪಿದಂತಾಗಿದ್ದು, ಇಬ್ಬರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಡಿಸೆಂಬರ್‌ನಲ್ಲಿ ಅವಘಡಗಳ ಸರಣಿ
ರಾಜ್ಯದಲ್ಲಿ ಕಳೆದ ವಾರದಿಂದ ಅಗ್ನಿ ಅವಘಡಗಳ ಸರಣಿಯೇ ಮುಂದುವರಿದಿದೆ. ಎಲ್ಲಿ ನೋಡಿದರೂ ಬೆಂಕಿ, ಸಾವು-ನೋವುಗಳ ಸುದ್ದಿಯೇ ಕೇಳಿಬರುತ್ತಿದೆ. ವರ್ಷದ ಕೊನೆಯ ತಿಂಗಳಾದ ಡಿಸೆಂಬರ್ ರಾಜ್ಯದ ಪಾಲಿಗೆ 'ಗಂಡಾಂತರ'ದ ತಿಂಗಳಾಗಿ ಮಾರ್ಪಟ್ಟಿದೆ. ಧಾರವಾಡ ಉಪನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ