
ಬೆಳ್ತಂಗಡಿ (ಆ.17) ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತು ಹಾಕಿದ್ದಾಗಿ ಆರೋಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಯಾವುದೇ ಶೋಧ, ಉತ್ಖನನ ನಡೆದಿಲ್ಲ. ಭಾನುವಾರ ತಂಡಕ್ಕೆ ರಜಾದಿನವಾಗಿದ್ದು ಶೋಧ ನಡೆಯುವುದಿಲ್ಲ. ಜೊತೆಗೆ ಸೋಮವಾರ ಉತ್ಖನನ ಕಾರ್ಯ ಮುಂದುವರಿಕೆ ಕುರಿತು ಎಸ್‌ಐಟಿ ಯಾವುದೇ ಮಾಹಿತಿ ನೀಡಿಲ್ಲ. ಇದು ಉತ್ಖನನಕ್ಕೆ ಬ್ರೇಕ್ ಬಿದ್ದಿದೆಯೇ ಎಂಬ ಕುತೂಹಲಕ್ಕೆ ಕಾರಣವಾಗಿದೆ.ಈ ನಡುವೆ ಅಸ್ಥಿ ಪತ್ತೆಗಾಗಿ ಗುಂಡಿ ಅಗೆದ ಕಾರ್ಮಿಕರನ್ನು ಎಸ್‌ಐಟಿ ಅಧಿಕಾರಿಗಳು ಠಾಣೆಗೆ ಕರೆಸಿಕೊಂಡು ಅವರಿಂದ ದಾಖಲೆ ಸಂಗ್ರಹಿಸಿದ್ದಾರೆ. ಜೊತೆಗೆ ದೂರುದಾರನನ್ನೂ 4 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಾಹಿತಿ ಸಂಗ್ರಹ:
ಅನಾಮಿಕ ದೂರುದಾರದ ಆರೋಪದ ಹಿನ್ನೆಲೆಯಲ್ಲಿ ಧರ್ಮಸ್ಥಳ ಗ್ರಾಮದಲ್ಲಿ ಎಸ್ಐಟಿ ತಂಡ ಕಳೆದ 20 ದಿನಗಳಿಂದ ತನಿಖೆ, ಶೋಧ ಕಾರ್ಯ ನಡೆಸಿದ ಎಸ್‌ಐಟಿ, ಶೋಧ ಕಾರ್ಯದಲ್ಲಿ ಸಹಕರಿಸಿದ ಕಾರ್ಮಿಕರನ್ನು ಕೂಡ ಠಾಣೆಗೆ ಕರೆಸಿ ಅವರಿಂದ ಮಾಹಿತಿ ಸಂಗ್ರಹಿಸಿದೆ. ಜೊತೆಗೆ ದೂರುದಾರನನ್ನು ಶನಿವಾರ ಸುಮಾರು ನಾಲ್ಕು ತಾಸಿಗೂ ಅಧಿಕ ಕಾಲ ವಿಚಾರಣೆ ನಡೆಸಲಾಗಿದೆ. ಅನಾಮಿಕ ದೂರುದಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ತಲೆಬುರುಡೆ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದ್ದು ಕೆಲವೊಂದು ವಿಚಾರಗಳಿಗೆ ದೂರುದಾರ ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದಾನೆ. ಇದರ ಜೊತೆಗೆ ಶೋಧ ಕಾರ್ಯ ನಡೆದ ಬೊಳಿಯಾರಿನ ಸ್ಥಳ ಸಂಖ್ಯೆ 15ಕ್ಕೆ ಸಂಬಂಧಪಟ್ಟಂತೆ ಇತರ ಕೆಲವರನ್ನು ವಿಚಾರಣೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.
ಮತ್ತೊಂದು ದೂರು:
ಈ ಹಿಂದೆ ಧರ್ಮಸ್ಥಳ ಗ್ರಾಮದಲ್ಲಿ 13-15 ವರ್ಷದ ಬಾಲಕಿಯ ಶವವನ್ನು ಯಾವುದೇ ಮಹಜರು ನಡೆಸದೆ ವಿಲೇವಾರಿ ಮಾಡಲಾಗಿದೆ ಎಂದು ದೂರು ನೀಡಿದ್ದ ಇಚ್ಲಂಪಾಡಿಯ ಜಯಂತ ಟಿ. ಶನಿವಾರ ಮತ್ತೆ ಎಸ್ಐಟಿ ಠಾಣೆಗೆ ಆಗಮಿಸಿದ್ದರು. ಈ ಬಾರಿ, 15 ವರ್ಷದ ಹಿಂದೆ ಗ್ರಾಮದ ವಸತಿಗೃಹ ಒಂದರಲ್ಲಿ 35-40 ವರ್ಷದ ಮಹಿಳೆಯ ಕೊಲೆಯಾಗಿದ್ದು ಪ್ರಕರಣವನ್ನು ತರಾತುರಿಯಲ್ಲಿ ಮುಗಿಸಲಾಗಿದೆ .ಇದು ಕೊಲೆ ಮತ್ತು ಸಾಕ್ಷಿ ನಾಶದ ಪ್ರಕರಣವಾಗಿದೆ ಎಂದು ಆರೋಪಿಸಿದ್ದಾರೆ.
ಇದಲ್ಲದೆ ಇಲ್ಲಿ ಹಲವು ಮಹಿಳೆಯರ ಸಾವಿನ ಕುರಿತು ತಿಳಿದು ಬಂದಿದೆ. ಈ ಬಗ್ಗೆ ಮಾಹಿತಿ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದೇನೆ. ಇಂತಹ ಪ್ರಕರಣಗಳನ್ನು ಮುಚ್ಚಿ ಹಾಕಿರುವ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಕ್ರಮಗೊಳ್ಳಬೇಕು ಎಂದು ತಿಳಿಸಿದ ಅವರು ಸೋಮವಾರ ಎಸ್‌ಐಟಿ ಅಧಿಕಾರಿಗಳು ಠಾಣೆಗೆ ಬರುವಂತೆ ಹೇಳಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ