ಧರ್ಮಸ್ಥಳ ಮಸ್ತಕಾಭಿಷೇಕ ಯೋಧರಿಗೆ ಅರ್ಪಣೆ!

Published : Feb 19, 2019, 12:16 PM ISTUpdated : Feb 19, 2019, 02:57 PM IST
ಧರ್ಮಸ್ಥಳ ಮಸ್ತಕಾಭಿಷೇಕ ಯೋಧರಿಗೆ ಅರ್ಪಣೆ!

ಸಾರಾಂಶ

ಅಭಿಷೇಕದ ಫಲ ದೇಶಕ್ಕೆ ಸಿಗಲಿ ಎಂದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ | ವಿರಾಟ್‌ಮೂರ್ತಿಗೆ 3 ದಿನಗಳ ಮಹಾಮಜ್ಜನ ಸಮಾಪ್ತಿ

ಧರ್ಮಸ್ಥಳ[ಫೆ.19]: ಒಮ್ಮೆ ಕ್ಷೀರಸಾಗರ ವದನ, ಇನ್ನೊಮ್ಮೆ ಸ್ವರ್ಣಲೇಪಿತ ದೇದೀಪ್ಯಮಾನ, ಮತ್ತೊಮ್ಮೆ ಶ್ರೀಗಂಧದಿಂದ ತೇಯ್ದ ದಿವ್ಯತೇಜ, ಮಗದೊಮ್ಮೆ ಮೋಡದ ಮರೆಯಿಂದ ಪ್ರಕಾಶಿಸುವ ವೃಷಭಪುತ್ರ, ಆಗಾಗ ಒನಪು, ವಯ್ಯಾರಗಳಿಂದ ಕಂಗೊಳಿಸುತ್ತಾ ಕೇಸರಿ, ಚಂದನದ ಕಂಪನ್ನು ಬೀರಿ ಜಗದ್ವಂದ್ಯನಾದ ತ್ಯಾಗವೀರನಿಗೆ ಆಗಸದಿಂದ ಪುಷ್ಪವೃಷ್ಟಿಯ ಸುರಿಮಳೆ. ಅಭಿಷೇಕದ ಅಂತಿಮದಲ್ಲಿ, ಬೃಹತ್ ಹಾರದೊಂದಿಗೆ ರತ್ನಗಿರಿಯಲ್ಲಿ ವಿರಾಜಮಾನನಾದ ವಿರಾಟ್ ಮೂರ್ತಿಗೆ ಮಂಗಲಕರ ಮಹಾ ಆರತಿ

ಹೀಗೆ, ಕಳೆದ ಮೂವರು ದಿನಗಳ ಕಾಲ ಧರ್ಮಸ್ಥಳದಲ್ಲಿ ನಡೆದ ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕ ಮಹೋತ್ಸವ ಸೋಮವಾರ ಸಂಪನ್ನಗೊಂಡಿತು. ರತ್ನಗಿರಿಯಲ್ಲಿ ನೆರೆದಿದ್ದ ಜಿನಭಕ್ತ ಸ್ತೋಮ ಶಾಂತಿಮಂತ್ರ ಪಠಣಗೊಳ್ಳುತ್ತಿದ್ದಂತೆ ‘ಭಗವಾನ್ ಬಾಹುಬಲಿ ಮಹಾರಾಜ್ ಕೀ ಜೈ’ ಎಂದು ಘೋಷಣೆ ಮುಗಿಲು ಮುಟ್ಟಿತು.

ಮಸ್ತಕಾಭಿಷೇಕ ಫಲ ದೇಶಕ್ಕೆ:

ಈ ಮಹಾಮಸ್ತಕಾಭಿಷೇಕವನ್ನು ಕಾಶ್ಮೀರದ ವಿಧ್ವಂಸಕ ಕೃತ್ಯದಲ್ಲಿ ಅಗಲಿದ ವೀರಯೋಧ ಭಾರತೀಯ ಸೈನಿಕರಿಗೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅರ್ಪಿಸಿದರು. ಅಲ್ಲದೆ ಈ ಮಸ್ತಕಾಅಭಿಷೇಕದ ಫಲ ದೇಶಕ್ಕೆ ಸಿಗಲಿ. ಸೈನಿಕರ ದುಷ್ಟ ನಿಗ್ರಹಕ್ಕೆ ಶಕ್ತಿ ಸಿಗಲಿ. ದುಷ್ಟ ನಿಗ್ರಹದಿಂದ ದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಇದೇ ವೇಳೆ ಪ್ರಾರ್ಥಿಸಿದರು. ಇದರೊಂದಿಗೆ 37 ವರ್ಷಗಳಿಂದ ನಾಲ್ಕು ಬಾರಿ ಮಹಾ ಮಸ್ತಕಾಭಿಷೇಕ ನೆರವೇರಿಸಿದ ದಾಖಲೆ ಬಾಹುಬಲಿ ವಿಗ್ರಹ ಪ್ರತಿಷ್ಠಾಪಿಸಿದ ಡಾ.ಹೆಗ್ಗಡೆ ಅವರದಾಯಿತು.

ಅದ್ರೋದಕದ ವೈಭವ: ಧರ್ಮಸ್ಥಳದ ಮಟ್ಟಿಗೆ ಸೋಮವಾರ ಎಂದಿನಂತೆ ಇರಲಿಲ್ಲ. ಕಳೆದ ಒಂದು ವಾರದಿಂದ ತುಸು ಒಣ ಹವೆ ಕಂಡಿದ್ದ ಧರ್ಮಸ್ಥಳ ಪಾವನ ಪರಿಸರ ಸೋಮವಾರ ಮುಂಜಾನೆ ಚುಮುಚುಮು ಚಳಿಯ ಕಚಗುಳಿಯ ವಾತಾವರಣ ಅನುಭವಿಸಿತು. ಇದನ್ನು ಹೊಡೆದೋಡಿಸಲು ಮೂಡಣ ದಿಕ್ಕಿನಲ್ಲಿ ನೇಸರ ಮೂಡುತ್ತಿದ್ದಂತೆ ಧರ್ಮಸ್ಥಳ ಬೀಡಿನಿಂದ ಪವಿತ್ರ ಜಲದ ಅಗ್ರೋದಕ ಮೆರವಣಿಗೆ ಆರಂಭಗೊಂಡಿತು. ಬ್ಯಾಂಡ್, ವಾಲಗ, ಬಿರುದು ಬಾವಲಿ, ಛತ್ರ ಚಾಮರ. ರಾಜಗಾಂಭೀರ್ಯದ ಗಜರಾಜ, ಅಲಂಕಾರಗೊಂಡ ಬಸವನ ಜೊತೆಯಲ್ಲಿ ಕಲಶ ಕನ್ನಿಕೆಯರು, ಶ್ರಾವಕ, ಶ್ರಾವಕಿಯರು, ತೀರ್ಥಂಕರರ ಮೂರ್ತಿಯನ್ನು ಪಲ್ಲಕಿಯಲ್ಲಿ ಹೊತ್ತ ಪುರೋಹಿತರು ಹೆಜ್ಜೆ ಹಾಕಿದರು.

3ನೇ ದಿನವೂ ಅಭಿಷೇಕದ ಪುಳಕ:

ಮಹಾ ಮಸ್ತಕಾಭಿಷೇಕದ ಮೂರನೇ ದಿನವೂ ಬೆಳಗ್ಗೆ 8.25ರ ಸುಮಾರಿಗೆ ಬೆಂಗಳೂರಿನ ಅತುಲ್ ಜೈನ್ ಅವರು ಪ್ರಥಮವಾಗಿ ಕಲಶಾಭಿಷೇಕ ನೆರವೇರಿಸಿದರು. ಮನಸ್ಸಿನ ಕೊಳೆ ಯನ್ನು ತೊಳೆಯುವ ಉದ್ದೇಶದ 2008 ಕಲಶಾಭಿಷೇಕವನ್ನು ಜಿನಭಕ್ತರು ವ್ಯಕ್ತಿಗತವಾಗಿ ಸೇವೆ ಸಮರ್ಪಿಸಿದರು. ದ್ರವ್ಯ, ಶ್ರದ್ಧಾ ಹಾಗೂ ಜನಮಂಗಲ ಎಂದು ಮೂರು ರೀತಿಯಲ್ಲಿ ಜಿನದೇವನಿಗೆ ಕಲಶಾಭಿಷೇಕ ನೆರವೇರಿತು.

ದೇಶದ ಪವಿತ್ರ ನದಿಗಳ ನೀರನ್ನು ಆವಾಹಿಸಿ ಶುದ್ಧಿ ಕಲಶವನ್ನು ಅಭಿಷೇಕಕ್ಕೆ ಸಲ್ಲಿಸಲಾಯಿತು. ಮನದೊಳಗಿನ ಕ್ಲೇಶ ನಿವಾರಣೆಯ ಸಂಕೇತವಾಗಿ ಎಳನೀರಿನ ಅಭಿಷೇಕ ನಡೆಯಿತು. ನಾರಿಕೇಳ ಅಭಿಷೇಕದ ಸಿಹಿ ನೀರು ಜಲಧಾರೆಯಾಗಿ ಶಿರದಿಂದ ಅಡಿವರೆಗೆ ಹರಿದು ಬಾಹುಬಲಿ ಸ್ವಾಮಿಯನ್ನು ತೋಯಿಸಿತು. ನಂತರ ಭುಜಬಲಿಗೆ ಇಕ್ಷುರಸದ ಅಭಿಷೇಕ ನೆರವೇರಿತು. ಕಬ್ಬಿನ ರಸದ ಅಭಿಷೇಕ ಬಾಹುಬಲಿಯ ಶಿರದಿಂದ ಪಾದ ಸೇರುತ್ತಿದ್ದಂತೆ ಜಿನಭಕ್ತರ ಮುಖದಲ್ಲಿ ಸಂತಸದ ಕಾಣಿಸಿತು.

ಧರೆಗವತರಣದ ಮೂರ್ತಿ:

ತರ ಕ್ಷೀರಾಭಿಷೇಕ ನಡೆಯುತ್ತಿದ್ದಂತೆ ಶಿಲಾ ಮೂರ್ತಿ ಬೆಳ್ಳಿಮೂರ್ತಿಯಾಗಿ ಪರಿವರ್ತನೆಯಾದಂತೆ ಭಾಸವಾಯಿತು. ಮುಸಲ ಧಾರೆಯಂತೆ ವಿರಾಗಿಯ ಶಿರದಿಂದ ಅಮೃತ ಧಾರೆ ಯಾಗಿ ಧರೆಗೆ ಅವತರಿಸಿದಂತೆ ಕಂಡುಬಂತು. ಜೈ ಭಗವಾನ್ ಘೋಷಣೆ ಮಧ್ಯೆ ಭಕ್ತರು, ಡಾ.ಹೆಗ್ಗಡೆ ಕುಟುಂಬಸ್ಥರು ಭಾವಪರವಶರಾಗಿ ನರ್ತಿಸಿ ಸಂಭ್ರಮಿಸಿದರು. ಬಳಿಕ ಕಲ್ಕ ಚೂರ್ಣದ ಅಭಿಷೇಕ. ಅಕ್ಕಿಹಿಟ್ಟಿನಲ್ಲಿ ಮಿಂದ ಬಾಹುಬಲಿಮೂರ್ತಿ ಮೋಡದ ಮರೆಯಿಂದ ಉದಯಿಸಿದಂತೆ ಶುಭ್ರವಾಗಿ ಕಂಡಾಗ ಭಕ್ತರು ಜೈಕಾರವನ್ನು ಕೂಗಿದರು.

ದ್ರವ್ಯಗಳ ರಂಗಿನಾಟ:

ಬಾಹುಬಲಿ ಮೂರ್ತಿಗೆ ರಂಗು ರಂಗಿನ ರಂಗಾಟ ನಡೆದದ್ದು ಅರಿಶಿಣ, ಶ್ರೀಗಂಧ, ಚಂದನ, ಕೇಸರಿ, ಅಷ್ಟಗಂಧ ಅಭಿಷೇಕಗಳು ನಡೆದಾಗ. ಒಂದೊಂದು ದ್ರವ್ಯಗಳ ಅಭಿಷೇಕ ನಡೆ ದಾಗಲೂ ವೈರಾಗ್ಯ ಮೂರ್ತಿ ರಂಗುರಂಗುಗಳಿಂದ ಕಂಗೊಳಿಸಿದಂತೆ, ನಲಿದಾಡಿದಂತೆ ಭಕ್ತ ಸಮೂಹವನ್ನು ಬೆರಗು ಮೂಡಿಸುತ್ತಿತ್ತು. ಈ ಮಧ್ಯೆ ನಾನಾ ಬಗೆಯ ಕಷಾಯಗಳ ಅಭಿಷೇಕವೂ ನೆರವೇರಿತು. ನಾಲ್ಕು ದಿಕ್ಕುಗಳಿಗೆ ಚತುಷ್ಕೋನ ಅಭಿಷೇಕದಿಂದ ಜಲಸಿಂಚನಗೈಯಲಾಯಿತು.

ನಂತರ ನಡೆದದ್ದು ಸ್ವರ್ಣ ನಾಣ್ಯ ಅಭಿಷೇಕ, ಕೊನೆಯಲ್ಲಿ ಪೂರ್ಣಕುಂಭಾಭಿಷೇಕ, ಬೃಹತ್ ಹಾರ ಸಮರ್ಪಣೆ ನಡೆಯಿತು. ಮಹಾ ಆರತಿಯನ್ನು ಬೆಳಗಿಸಿ, ಶಾಂತಿ ಮಂತ್ರವನ್ನು ಪಠಿಸಲಾಯಿತು. ಸೋಮವಾರ ಸಂಜೆ ವೇಳೆ ರತ್ನಗಿರಿ ಬೆಟ್ಟದಲ್ಲಿ ಧ್ವಜಾವರೋಹಣ, ಕುಂಕುಮೋತ್ಸವ, ಕಂಕಣ ವಿಸರ್ಜನೆ ಹಾಗೂ ತೋರಣ ವಿಸರ್ಜನೆ ನಡೆಯುವುದರೊಂದಿಗೆ ೧೦ ದಿನಗಳ ಕಾಲ ನಡೆದ ಧರ್ಮಸ್ಥಳ ಮಹಾಮಸ್ತಕಾಭಿಷೇಕ ಮಹೋತ್ಸವ ಮುಕ್ತಾಯಗೊಂಡಿತು.

-ಆತ್ಮಭೂಷಣ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೂರುವರೆ ದಶಕಗಳಿಂದ ಇದ್ದ ಒಳ ಮೀಸಲಾತಿಗಾಗಿ ಹೋರಾಟಕ್ಕೆ ಜಯ ಸಿಕ್ಕಿದೆ: ಸಚಿವ ಮುನಿಯಪ್ಪ
ಮೈಸೂರು ಸಿಲಿಂಡರ್ ಸ್ಫೋಟದ ಬಗ್ಗೆ ತನಿಖೆಗೆ ಸೂಚಿಸಿದ್ದೇನೆ: ಗೃಹ ಸಚಿವ ಪರಮೇಶ್ವರ್