ಧರ್ಮಸ್ಥಳ ತಲೆಬುರುಡೆ ಕೇಸ್‌: 15 ದಿನದ ಕಾರ್ಯಾಚರಣೆಗೆ ಖರ್ಚಾಗಿದ್ದು ಅರ್ಧ ಕೋಟಿ, ಸಿಕ್ಕಿದ್ದೇನು?

Kannadaprabha News, Ravi Janekal |   | Kannada Prabha
Published : Aug 14, 2025, 08:03 AM IST
Dharmasthala Case 13th Point Water

ಸಾರಾಂಶ

ಧರ್ಮಸ್ಥಳದಲ್ಲಿ ನಡೆದ 15 ದಿನಗಳ ತಲೆಬುರುಡೆ ಪತ್ತೆ ಕಾರ್ಯಾಚರಣೆಗೆ ₹50 ಲಕ್ಷಕ್ಕೂ ಹೆಚ್ಚು ವೆಚ್ಚವಾಗಿದೆ. ಜುಲೈ 28 ರಿಂದ ಆಗಸ್ಟ್ 13 ರವರೆಗೆ ನಡೆದ ಈ ಕಾರ್ಯಾಚರಣೆಯಲ್ಲಿ ಒಂದು ತಲೆಬುರುಡೆ ಮತ್ತು ಕೆಲವು ಮೂಳೆಗಳು ಪತ್ತೆಯಾಗಿವೆ.

ಮಂಗಳೂರು (ಆ.14): ಧರ್ಮಸ್ಥಳ ಗ್ರಾಮದಲ್ಲಿ ತಲೆಬುರುಡೆ ಪತ್ತೆ ಕಾರ್ಯಾಚರಣೆ ಜುಲೈ 28ರಿಂದ ಆಗಸ್ಟ್ 13ರ ವರೆಗೆ ಹಲವು ಹಂತಗಳಲ್ಲಿ ನಡೆದಿದೆ. ಈ 15 ದಿನಗಳ ಕಾರ್ಯಾಚರಣೆಗೆ ಬರೋಬ್ಬರಿ ಅರ್ಧ ಕೋಟಿಗೂ (₹50 ಲಕ್ಷ) ಅಧಿಕ ವೆಚ್ಚ ವ್ಯಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಲೆ ಬುರುಡೆ ಪತ್ತೆ ಕಾರ್ಯಕ್ಕೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್ಐಟಿ) ನೇಮಕ ಮಾಡಿತ್ತು. ಈ ತಂಡಕ್ಕೆ ಮುಖ್ಯಸ್ಥರು ಸೇರಿದಂತೆ ಇನ್‌ಸ್ಪೆಕ್ಟರ್‌ ಹಾಗೂ ಸಿಬ್ಬಂದಿಯನ್ನು ನೇಮಿಸಲಾಗಿದೆ. ಸುಮಾರು 20ಕ್ಕೂ ಅಧಿಕ ಮಂದಿ ಈ ತಂಡದಲ್ಲಿದ್ದಾರೆ. ಪುತ್ತೂರಿನ ಸಹಾಯಕ ಕಮಿಷನರ್, ಬೆಳ್ತಂಗಡಿ ತಹಸೀಲ್ದಾರ್ ಹಾಗೂ ಕಂದಾಯ, ಆರೋಗ್ಯ, ಪೋಲಿಸ್ ಅಧಿಕಾರಿಗಳ ದಂಡೇ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ. ಕಾರ್ಯಾಚರಣೆಗೆ ಜೆಸಿಬಿ ಹಾಗೂ ಕಾರ್ಮಿಕರನ್ನು ಬಳಸಿಕೊಳ್ಳಲಾಗಿದೆ. ಇವೆಲ್ಲದರ ದಿನದ ವೆಚ್ಚವೇ ಸುಮಾರು ₹1.50 ಲಕ್ಷದಿಂದ ₹2 ಲಕ್ಷ ಎಂದು ಸರ್ಕಾರವೇ ಹೇಳಿತ್ತು.

ಸರ್ಕಾರದ ಮೂಲಗಳ ಪ್ರಕಾರ, ಪ್ರತಿ ದಿನಕ್ಕೆ ₹1.50 ಲಕ್ಷದಿಂದ ₹2 ಲಕ್ಷಗಳಂತೆ 15 ದಿನಕ್ಕೆ ಒಟ್ಟು ₹30 ಲಕ್ಷ ಹಾಗೂ ಎರಡು ದಿನ ರಾಡಾರ್ ಬಳಕೆ ಮಾಡಿದ ಬಾಡಿಗೆ ವೆಚ್ಚ ಸುಮಾರು ₹18 ಲಕ್ಷ ಸೇರಿ ಇಡೀ 15 ದಿನಗಳ ಕಾರ್ಯಾಚರಣೆಯ ಒಟ್ಟು ವೆಚ್ಚ 48 ರಿಂದ 50 ಲಕ್ಷ ರು. ಎಂದು ಅಂದಾಜಿಸಲಾಗಿದೆ.

ಕಾರ್ಯಾಚರಣೆಯ ಟೈಮ್ ಲೈನ್: ಜುಲೈ 28, 2025

• ​ಸ್ಥಳ ಮಹಜರು ಆರಂಭ: ತನಿಖಾಧಿಕಾರಿಗಳು ಮತ್ತು ದೂರುದಾರನಾದ ಮಾಸ್ಕ್ ಮ್ಯಾನ್ ಜೊತೆಗೂಡಿ ಸ್ಥಳ ಮಹಜರು ಪ್ರಕ್ರಿಯೆ ಆರಂಭವಾಯಿತು. ನೇತ್ರಾವತಿ ಸ್ನಾನಘಟ್ಟದ ಸಮೀಪ ಮೊದಲ ಸ್ಥಳವನ್ನು ಗುರುತಿಸಲಾಯಿತು.

• ​13 ಸ್ಥಳಗಳ ಗುರುತು: ದೂರುದಾರನು ಒಟ್ಟು 13 ಸ್ಥಳಗಳನ್ನು ಗುರುತಿಸಿದ್ದು, ಈ ಸ್ಥಳಗಳಲ್ಲಿ ಮೃತದೇಹಗಳನ್ನು ಹೂತಿಡಲಾಗಿದೆ ಎಂದು ಹೇಳಿಕೆ ನೀಡಿದ್ದ.

• ​ತನಿಖಾ ತಂಡದ ಭಾಗವಹಿಸುವಿಕೆ: ಈ ಕಾರ್ಯಾಚರಣೆಯಲ್ಲಿ ಎಸ್.ಐ.ಟಿ., ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಜುಲೈ 29ರಿಂದ ಆಗಸ್ಟ್ ಆರಂಭದವರೆಗೆ

• ​ಶೋಧ ಕಾರ್ಯ ಮುಂದುವರಿಕೆ: ಮೊದಲ ಕೆಲವು ದಿನಗಳಲ್ಲಿ ಉತ್ಖನನ ನಡೆಸಿದರೂ ಯಾವುದೇ ಮೃತದೇಹದ ಕುರುಹು ಸಿಗಲಿಲ್ಲ.

• ​ಮಹತ್ವದ ಬೆಳವಣಿಗೆ: ಜುಲೈ 31ರಂದು 6ನೇ ಸ್ಥಳದಲ್ಲಿ ಉತ್ಖನನ ನಡೆಸಿದಾಗ, ಮಾನವ ತಲೆಬುರುಡೆ ಮತ್ತು ಕೆಲವು ಮೂಳೆಗಳು ಪತ್ತೆಯಾದವು. ಇದು ಪ್ರಕರಣದ ತನಿಖೆಗೆ ದೊಡ್ಡ ತಿರುವು ನೀಡಿತು.

• ​ವೈಜ್ಞಾನಿಕ ತನಿಖೆ: ಪತ್ತೆಯಾದ ಅವಶೇಷಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ, ವೈಜ್ಞಾನಿಕವಾಗಿ ಪರೀಕ್ಷೆಗೆ ಒಳಪಡಿಸಲಾಯಿತು.

ಆಗಸ್ಟ್ ಆರಂಭದಿಂದ ಆಗಸ್ಟ್ 13ರವರೆಗೆ:

• ​13 ಸ್ಥಳಗಳಲ್ಲಿ ಶೋಧ ಪೂರ್ಣ: ದೂರುದಾರ ಗುರುತಿಸಿದ್ದ 13 ಸ್ಥಳಗಳಲ್ಲಿ ಈಗಾಗಲೇ ಶೋಧಕಾರ್ಯ ಪೂರ್ಣಗೊಂಡಿದೆ.

• ​13ನೇ ಸ್ಥಳದ ಮೇಲೆ ಹೆಚ್ಚಿನ ಗಮನ: ಈ ಸ್ಥಳದಲ್ಲಿಯೇ ಹತ್ತಕ್ಕೂ ಹೆಚ್ಚು ಶವಗಳನ್ನು ಹೂತಿಡಲಾಗಿದೆ ಎಂದು ದೂರುದಾರ ಹೇಳಿದ ಕಾರಣ, ಇದು ತನಿಖಾ ತಂಡದ ಪ್ರಮುಖ ಆದ್ಯತೆಯಾಗಿತ್ತು.

• ​ಜಿಪಿಆರ್ ತಂತ್ರಜ್ಞಾನ ಬಳಕೆ: 13ನೇ ಸ್ಥಳದಲ್ಲಿ ಡ್ರೋನ್‌ ಮೌಂಟೆಡ್‌ ಜಿಪಿಆರ್ (ಗ್ರೌಂಡ್‌ ಪೆನೆಟ್ರೇಟಿಂಗ್‌ ರಾಡಾರ್‌) ಯಂತ್ರ ಬಳಸಿ ಭೂಮಿಯೊಳಗಿನ ರಚನೆಯನ್ನು ಸ್ಕ್ಯಾನ್ ಮಾಡಲಾಯಿತು.

• ​ಶೋಧ ಕಾರ್ಯದಲ್ಲಿ ಸವಾಲುಗಳು: ತೀವ್ರ ಮಳೆಯ ಕಾರಣದಿಂದ ಶೋಧ ಕಾರ್ಯಕ್ಕೆ ಅಡಚಣೆಯಾಯಿತು. ಹಿಟಾಚಿ ಬಳಸಿ ಆಳವಾಗಿ ಅಗೆದರೂ, ಈ ಸ್ಥಳದಲ್ಲಿ ಯಾವುದೇ ಕುರುಹು ಪತ್ತೆಯಾಗಿಲ್ಲ.

• ​ಹೊಸ ಸಾಕ್ಷಿದಾರರ ಪ್ರತ್ಯಕ್ಷ: ಆಗಸ್ಟ್ 13ರಂದು ಮತ್ತೆ ಇಬ್ಬರು ಸಾಕ್ಷಿದಾರರು ಎಸ್ಐಟಿ ಮುಂದೆ ಹಾಜರಾಗಿದ್ದು, ಪ್ರಕರಣಕ್ಕೆ ಮತ್ತೊಂದು ಆಯಾಮ ದೊರಕಿತ್ತು.

ಒಟ್ಟಾರೆಯಾಗಿ, ಜುಲೈ 28ರಂದು ಆರಂಭವಾದ ಈ ಕಾರ್ಯಾಚರಣೆಯು 13 ಸ್ಥಳಗಳ ಶೋಧದ ಮೇಲೆ ಕೇಂದ್ರೀಕೃತವಾಗಿತ್ತು. ಇದರಲ್ಲಿ 6ನೇ ಸ್ಥಳದಲ್ಲಿ ಮಾತ್ರ ತಲೆಬುರುಡೆ ಮತ್ತು ಮೂಳೆಗಳು ಪತ್ತೆಯಾಗಿದ್ದು, ಉಳಿದ ಸ್ಥಳಗಳಲ್ಲಿ ಯಾವುದೇ ಕುರುಹು ಸಿಕ್ಕಿಲ್ಲ. ಸದ್ಯ ತನಿಖೆ ಮುಂದುವರೆದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Justice for Bongo: ಮಗು ಹುಟ್ಟಿದ್ದಕ್ಕೆ ಸಾಕಿ ಸಲುಹಿದ ಶ್ವಾನ ಕೊಂದ್ರಾ ಪಾಪಿಗಳು? ಸಿಲಿಕಾನ್ ಸಿಟಿಯಲ್ಲಿ 'ಬೋಂಗೋ' ಸಾವಿನ ರೋಚಕ ಕಹಾನಿ!
ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ