
ಬೆಂಗಳೂರು: ಧರ್ಮಸ್ಥಳ ಷಡ್ಯಂತ್ರ ಆರೋಪದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಎಸ್‌ಐಟಿಗೆ ನೂರಾರು ಶವಗಳನ್ನು ಹೂತಿಟ್ಟಿರುವ ಬಗ್ಗೆ ದೂರು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸುಕುಧಾರಿ ಚಿನ್ನಯ್ಯನನ್ನು ಮಹಜರು ಪ್ರಕ್ರಿಯೆಗಾಗಿ ವಿಶೇಷ ರಕ್ಷಣೆಯಲ್ಲಿ ಬೆಂಗಳೂರಿಗೆ ಕರೆತಂದು ತನಿಖೆ ನಡೆಸಲಾಗಿದೆ. ಪೀಣ್ಯ ಮಿನಿ ಕಾಲೋನಿಯಲ್ಲಿರುವ ಜಯಂತ್ ಎಂಬಾತನ ನಿವಾಸದಲ್ಲಿ ಪೊಲೀಸರು ಮಹಜರು ಕಾರ್ಯಾಚರಣೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಚಿನ್ನಯ್ಯ, ಜಯಂತ್ ಬಳಿಯಿಂದ ಬುರುಡೆ ಪಡೆದುಕೊಂಡಿದ್ದಾನೆಂಬ ಮಾಹಿತಿಯ ಆಧಾರದ ಮೇಲೆ ಪೊಲೀಸರು ಮಹಜರು ನಡೆಸಿದರು. ಪ್ರಾಥಮಿಕ ತನಿಖೆಯ ಪ್ರಕಾರ, ಚಿನ್ನಯ್ಯ ಮೊದಲಿಗೆ ಪೀಣ್ಯ ಮಿನಿ ಕಾಲೋನಿಯಲ್ಲಿದ್ದ ಜಯಂತ್ ನಿವಾಸಕ್ಕೆ ಭೇಟಿ ನೀಡಿ ಆತನಿಂದ ಬುರುಡೆ ಪಡೆದಿದ್ದಾನೆ. ಈ ಕುರಿತು ದೃಢೀಕರಣಕ್ಕಾಗಿ ಪೊಲೀಸರು ಜಯಂತ್ ಮನೆಯಲ್ಲಿ ತನಿಖೆ ಕೈಗೊಂಡರು. ಮಹಜರು ಸಮಯದಲ್ಲಿ ಚಿನ್ನಯ್ಯ ಮುಖಕ್ಕೆ ಮಾಸ್ಕ್ ಹಾಕಲಾಗಿತ್ತು, ಆತನ ಚಲನೆ ಮತ್ತು ಹೇಳಿಕೆಗಳನ್ನೆಲ್ಲಾ ವಿಡಿಯೋ ಚಿತ್ರೀಕರಿಸಲಾಯಿತು. ಸಂಪೂರ್ಣ ಪ್ರಕ್ರಿಯೆಯನ್ನು ಸೋಕೋ (Scene of Crime Officers) ತಂಡ ಸೂಕ್ಷ್ಮವಾಗಿ ಪರಿಶೀಲಿಸಿ ದಾಖಲೆ ಮಾಡಿದೆ. ಈ ವೇಳೆ ಯಾವುದೇ ಅನಾಹುತ ಅಥವಾ ಅಶಾಂತಿ ಉಂಟಾಗದಂತೆ ಮಾಡಲು ಬಾಗಲಗುಂಟೆ ಪೊಲೀಸ್ ಠಾಣೆಯ ಸಿಬ್ಬಂದಿ ಭದ್ರತೆ ಒದಗಿಸಿದರು.
ಪೊಲೀಸ್ ಮೂಲಗಳ ಪ್ರಕಾರ, ಚಿನ್ನಯ್ಯ ಮತ್ತು ಜಯಂತ್ ನಡುವಿನ ಸಂಪರ್ಕಗಳು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಚಿನ್ನಯ್ಯನನ್ನು ಮುಂದಿನ ಮಹಜರು ಪ್ರಕ್ರಿಯೆಗಾಗಿ ಹುಟ್ಟೂರಾದ ತಮಿಳುನಾಡು ಮತ್ತು ಮಂಡ್ಯ ಭಾಗಗಳಿಗೆ ಕರೆದುಕೊಂಡು ಹೋಗಲು ನಿರ್ಧಿರಿಸಲಾಗಿದೆಯಂತೆ. ಪೊಲೀಸರು ಚಿನ್ನಯ್ಯನ ಹೇಳಿಕೆಗಳು ಮತ್ತು ಜಯಂತ್ ಮನೆಯಿಂದ ದೊರೆತ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ಹಂತದ ಕ್ರಮಗಳನ್ನು ಕೈಗೊಳ್ಳಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸದಿದ್ದರೂ, ಶೀಘ್ರದಲ್ಲೇ ಪ್ರಮುಖ ಬೆಳವಣಿಗೆಗಳು ನಡೆಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಇಷ್ಟು ದಿನ ಬೆಳ್ತಂಗಡಿಯಲ್ಲಿ ತನಿಖೆ ನಡೆಯುತ್ತಿತ್ತು. ಇದೀಗ ವಿಸ್ತರಣೆಯಾಗಿದ್ದು ಚಿನ್ನಯ್ಯ ಮತ್ತು ಬುರುಡೆ ಗ್ಯಾಂಗ್ ಏನೆಲ್ಲಾ ಈವರೆಗೆ ಷಡ್ಯಂತ್ರ ಮಾಡಿದೆಯೋ ಎಲ್ಲದರ ಬಗ್ಗೆ ಕೂಡ ತನಿಖೆ ನಡೆಯಲಿದೆ.
ಮಾಹಿತಿಯ ಪ್ರಕಾರ, ಚಿನ್ನಯ್ಯ ಪೀಣ್ಯ ಮಿನಿ ಕಾಲೋನಿಯಲ್ಲಿರುವ ಜಯಂತ್ ಮನೆಗೆ ಭೇಟಿ ನೀಡಿ ‘ಬುರುಡೆ’ ಪಡೆದುಕೊಂಡಿದ್ದಾನೆ ಎನ್ನುವ ಸುಳಿವಿನ ಆಧಾರದ ಮೇಲೆ ಪೊಲೀಸರು ಈ ಮಹಜರು ಕೈಗೊಂಡರು. ಜಯಂತ್ ಮನೆಗೆ ಚಿನ್ನಯ್ಯ ಭೇಟಿ ನೀಡಿದ್ದು, ಅಲ್ಲಿ ನಡೆದ ಚರ್ಚೆಗಳು ಮತ್ತು ಬುರುಡೆ ಹಸ್ತಾಂತರಕ್ಕೆ ಸಂಬಂಧಿಸಿದ ವಿವರಗಳನ್ನು ದೃಢೀಕರಿಸುವುದು ತನಿಖಾಧಿಕಾರಿಗಳ ಉದ್ದೇಶವಾಗಿತ್ತು. ಚಿನ್ನಯ್ಯನಿಗೆ ಬುರುಡೆ ಒದಗಿಸುವಲ್ಲಿ ಜಯಂತ್ ನ ಸಂಪೂರ್ಣ ಸಹಭಾಗಿತ್ವವಿದೆ ಎಂದು ಎಸ್ಐಟಿ ಶಂಕಿಸಿದೆ. ಜಯಂತ್ ಸ್ನೇಹಿತ ಅನಂತ್ ಹೇಳುವ ಪ್ರಕಾರ:
“ನಾನು ಆರ್‌ಎಸ್‌ಎಸ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಕಾರ್ಯಕ್ರಮಗಳಿಗೆ ಜಯಂತ್ ಅವರನ್ನು ಹಲವಾರು ಬಾರಿ ಆಹ್ವಾನಿಸಿದ್ದೆವು. ಅವರು ಕುಟುಂಬ ಸಮೇತ ಬಂದು ಭಾಗವಹಿಸುತ್ತಿದ್ದರು. ಅವರ ಮನೆಗೆ ನಾನು ಅನೇಕ ಬಾರಿ ಹೋಗಿದ್ದೇನೆ. ಜಯಂತ್ ಅವರ ಹೆಂಡತಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ,” ಎಂದು ಅನಂತ್ ಹೇಳಿಕೆ ನೀಡಿದ್ದಾರೆ.
ಅನಂತ್ ಮತ್ತಷ್ಟು ವಿವರಿಸುತ್ತಾ, “ನಾವು ಸ್ನೇಹಿತರೆಲ್ಲ ಸೇರಿ ಬ್ಲಡ್ ಬ್ಯಾಂಕ್ ವಾಟ್ಸಾಪ್ ಗ್ರೂಪ್ ಮಾಡಿದ್ದೆವು. ಅದರಲ್ಲಿ ಜಯಂತ್ ಧರ್ಮಸ್ಥಳಕ್ಕೆ ಸಂಬಂಧಿಸಿದ ವಿಡಿಯೋ ಹಾಗೂ ಸಂದೇಶಗಳನ್ನು ನಿರಂತರವಾಗಿ ಹಂಚುತ್ತಿದ್ದರು. ವಿಶೇಷವಾಗಿ ಸೌಜನ್ಯಗೆ ನ್ಯಾಯ ಸಿಗಬೇಕು ಎಂಬ ಉದ್ದೇಶದಿಂದ ಸಾಕಷ್ಟು ಮೆಸೇಜ್‌ಗಳನ್ನು ಪೋಸ್ಟ್ ಮಾಡುತ್ತಿದ್ದರು. ಆದರೆ ನಂತರ ಗ್ರೂಪ್ ಸದಸ್ಯರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು,” ಎಂದಿದ್ದಾರೆ.
ಜಯಂತ್ ಒಬ್ಬ ಆರ್‌ಟಿಇ ಕಾರ್ಯಕರ್ತನಂತೆ ಕೆಲಸ ಮಾಡುತ್ತಿದ್ದರು. ಜೊತೆಗೆ ಅವರು ತಮ್ಮ ಸ್ಥಳೀಯ ವ್ಯಾಪಾರವಾಗಿ ಆಯಿಲ್ ಅಂಗಡಿ ನಡೆಸುತ್ತಿದ್ದರು. ಅವರ ಸಾಮಾಜಿಕ ಚಟುವಟಿಕೆಗಳು ಹಾಗೂ ಧರ್ಮಸ್ಥಳಕ್ಕೆ ಸಂಬಂಧಿಸಿದ ಚರ್ಚೆಗಳು ಈಗ ತನಿಖೆಗೆ ಕೇಂದ್ರಬಿಂದುವಾಗಿವೆ.
ಚಿನ್ನಯ್ಯನನ್ನು ಎಸ್ಐಟಿ ಅಧಿಕಾರಿಗಳು ಮಲ್ಲಸಂದ್ರಕ್ಕೂ ಕರೆದುಕೊಂಡು ಹೋಗಿ ಮಹಜರು ನಡೆಸಿದ್ದಾರೆ. ಅಲ್ಲಿಯೇ ಜಯಂತ್ ಮತ್ತು ಚಿನ್ನಯ್ಯ ನಡುವೆ ಬುರುಡೆ ಸಂಬಂಧಿಸಿದ ಚರ್ಚೆ ನಡೆದಿತ್ತು ಎಂದು ತಿಳಿದುಬಂದಿದೆ. “ಈ ಮನೆಯಲ್ಲಿ ಬುರುಡೆ ನೀಡಲಾಗಿದೆ ಮತ್ತು ಆ ದಿನ ನಡೆದ ಚರ್ಚೆಗಳ ಬಗ್ಗೆ ಸಂಪೂರ್ಣ ವಿವರಗಳನ್ನು ಪಡೆಯಲಾಗುತ್ತಿದೆ,” ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
ಎಸ್ಪಿ ಸೈಮನ್ ಅವರ ನೇತೃತ್ವದ ತಂಡವು, ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಸುಳಿವುಗಳನ್ನು ಕ್ರಮಬದ್ಧವಾಗಿ ಪರಿಶೀಲಿಸುತ್ತಿದೆ. “ಯಾವೆಲ್ಲಾ ಸಾಕ್ಷ್ಯಗಳು ಸಿಗಬಹುದು ಎಂಬ ಬಗ್ಗೆ ನಾವು ಹುಡುಕುತ್ತಿದ್ದೇವೆ. ಜಯಂತ್ ಮನೆಯಲ್ಲಿ ನಡೆದ ಚರ್ಚೆಗಳು ಹಾಗೂ ಬುರುಡೆ ಹಸ್ತಾಂತರದ ವಿಚಾರದಲ್ಲಿ ಇನ್ನಷ್ಟು ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು,” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ