
ಉಡುಪಿಯ ಪರಿಕಾ ಪ್ರದೇಶದಲ್ಲಿರುವ ಜಮೀನಿನ ಬಗ್ಗೆ ಸುಜಾತಾ ಭಟ್ ಮಾಡಿರುವ ಹಕ್ಕುಹೊಂದಿಕೆ ಕುರಿತು ಮಾಜಿ ನಗರಸಭಾ ಸದಸ್ಯ ಹಾಗೂ ಸ್ಥಳೀಯ ನಾಯಕ ಮಹೇಶ್ ಠಾಕೂರ್ ತಮ್ಮ ಸ್ಪಷ್ಟನೆ ನೀಡಿದ್ದಾರೆ. ಸುಜಾತಾ ಭಟ್ ಅವರು ಪರಿಕಾದಲ್ಲಿ ಇರುವ ಜಮೀನು ತಮಗೆ ಸೇರಿದ್ದಾಗಿದೆ ಎಂದು ಹೇಳಿಕೆ ನೀಡಿದ್ದರು. ಧರ್ಮಸ್ಥಳ ಕ್ಷೇತ್ರದೊಂದಿಗೆ ಈ ಜಮೀನಿಗಾಗಿ ಅವರು ಹೋರಾಟ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ಮಹೇಶ್ ಠಾಕೂರ್ ನೀಡಿದ ವಿವರ ಪ್ರಕಾರ, ಪರಿಕಾ ಅರಮನೆ ಮತ್ತು ಸಂಬಂಧಿತ ಜಮೀನುಗಳು ಮೂಲತಃ ಸಿಂಗಾರಮ್ಮ ಅವರಿಗೆ ಸೇರಿದವು. ಸಿಂಗಾರಮ್ಮ ಅವರು ಅರಮನೆಯ ಕೊನೆಯ ಒಡೆಯರಾಗಿದ್ದರು. ಅವರು ಅಣ್ಣಯ್ಯ ಭಟ್ಟರನ್ನು ದೇವಸ್ಥಾನ ಪೂಜೆಯ ಜವಾಬ್ದಾರಿಯೊಂದಿಗೆ ನೇಮಿಸಿ, ಸುಮಾರು ಮೂರುವರೆ ಎಕರೆ ಜಮೀನನ್ನು ಅವರ ಕುಟುಂಬಕ್ಕೆ ಬಿಟ್ಟುಕೊಟ್ಟಿದ್ದರು. ಅದರ ಬಳಿಕ ಅಣ್ಣಯ್ಯ ಭಟ್ಟರಿಂದ ಬಂದ ಎಲ್ಲಾ ಜಮೀನನ್ನು ಅವರ ಪುತ್ರ ನಾರಾಯಣ ಭಟ್ ಖರೀದಿ ಮಾಡಿ ಸ್ವಾಧೀನಪಡಿಸಿಕೊಂಡರು. ನಾರಾಯಣ ಭಟ್ ದೇವಸ್ಥಾನ ಮತ್ತು ಜಮೀನನ್ನು ಜೀರ್ಣೋದ್ಧಾರ ಮಾಡಿ, ಪುನಃ ಗೌರವವನ್ನು ತಂದುಕೊಟ್ಟರು.
ಪವರ್ ಆಫ್ ಅಟಾರ್ನಿ ಸಹ ನಾರಾಯಣ ಭಟ್ ಅವರ ಹೆಸರಲ್ಲಿ ಇತ್ತು. ಅವರು ತಮ್ಮ ತಂದೆ ಹಾಗೂ ಎಂಟು ಮಂದಿ ಸಹೋದರ-ಸಹೋದರಿಯರಿಗೆ ತಲಾ 50 ಸಾವಿರ ರೂಪಾಯಿಗಳನ್ನು ನೀಡಿ ಹಂಚಿಕೆ ಮಾಡಿದರು. ನಂತರ ನಾರಾಯಣ ಭಟ್ ಆ ಜಮೀನನ್ನು ಧರ್ಮಸ್ಥಳ ಕ್ಷೇತ್ರಕ್ಕೆ ದಾನ ಮಾಡಿದರು.
ಮಹೇಶ್ ಠಾಕೂರ್ ಪ್ರಕಾರ, ಸುಜಾತಾ ಭಟ್ ಅವರ ತಂದೆ ಗುರುರಾಜ್ ಭಟ್ ಅವರಿಗೆ ತಕ್ಕ ಪ್ರಮಾಣದ ಹಣವನ್ನು ನೀಡಲಾಗಿತ್ತು. ಎಲ್ಲಾ ಆಸ್ತಿಯ ಸೈನಿಂಗ್ ಅಥಾರಿಟಿ ನಾರಾಯಣ ಭಟ್ ಅವರ ಬಳಿಯೇ ಇತ್ತು. ಆದ್ದರಿಂದ ಈಗ ಸುಜಾತಾ ಭಟ್ ಜಮೀನಿನಲ್ಲಿ ಪಾಲು ಕೇಳುವ ಹಕ್ಕು ಇಲ್ಲ ಎಂದು ಅವರು ಹೇಳಿದ್ದಾರೆ. ಸುಜಾತಾ ಭಟ್ ಪಾಲು ಕೇಳಬೇಕೆಂದಿದ್ದರೆ ತಮ್ಮ ಅಜ್ಜ, ತಂದೆ ಅಥವಾ ಚಿಕ್ಕಪ್ಪರ ಸಮಯದಲ್ಲಿ ಕೇಳಬೇಕಾಗಿತ್ತು. ಈಗ, 2005 ರವರೆಗೆ ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಕಾನೂನುಬದ್ಧ ಹಕ್ಕಿರಲಿಲ್ಲ. ಹೀಗಾಗಿ ಇಂದಿನ ದಿನದಲ್ಲಿ ಆಸ್ತಿಯಲ್ಲಿ ಪಾಲು ಕೇಳುವುದು ಯಾವುದೇ ಅರ್ಥ ಹೊಂದಿಲ್ಲ ಎಂದು ಹೇಳಿದ್ದಾರೆ. ಈ ಕುರಿತು ಈಗಾಗಲೇ ವಿಶೇಷ ತನಿಖಾ ದಳ (ಎಸ್ಐಟಿ) ತನಿಖೆ ಕೈಗೊಂಡಿದ್ದು, ಸುಜಾತಾ ಭಟ್ ಅವರ ದೂರಿನ ನಿಜಾಸತ್ಯವನ್ನು ಪರಿಶೀಲಿಸುತ್ತಿದೆ.
ಸುಜಾತಾ ಭಟ್ ಅವರ ಆಸ್ತಿ ವಿವಾದ ಹೊಸ ತಿರುವು ಪಡೆದಿದೆ. ಆಸ್ತಿಯನ್ನು ಪಡೆಯುವ ಹೋರಾಟವೇ ಅನನ್ಯ ಭಟ್ ಎಂಬ ಪಾತ್ರವನ್ನು ಸೃಷ್ಟಿಸುವಂತೆ ಮಾಡಿತೇ ಎಂಬ ಪ್ರಶ್ನೆಯೂ ಇದೀಗ ಎದ್ದಿದೆ. ಈ ಸಂಬಂಧ ವಿಶೇಷ ತನಿಖಾ ದಳ (ಎಸ್ಐಟಿ) ತನಿಖೆಯನ್ನು ಗಂಭೀರವಾಗಿ ಮುಂದುವರೆಸಿದ್ದು, ಸುಜಾತಾ ಭಟ್ ನೀಡಿದ ದೂರಿನ ನಿಜಾಂಶವನ್ನು ಪರಿಶೀಲಿಸುತ್ತಿದೆ.
ಎಸ್ಐಟಿ ಮೂಲಗಳ ಪ್ರಕಾರ, ಅನನ್ಯ ಭಟ್ ಎನ್ನುವ ವ್ಯಕ್ತಿಯ ಕುರಿತಂತೆ ಸುಜಾತಾ ಭಟ್ ಹಲವು ಹೇಳಿಕೆಗಳನ್ನು ನೀಡಿದ್ದರೂ, ಅದರ ನಿಖರ ದಾಖಲೆಗಳು ಇನ್ನೂ ಲಭ್ಯವಾಗಿಲ್ಲ. ಅನನ್ಯ ಭಟ್ ಜೀವಂತವಾಗಿದ್ದನ್ನು ಸಾಬೀತುಪಡಿಸುವ ದಾಖಲೆಗಳನ್ನು ತರುವುದಾಗಿ ಸುಜಾತಾ ಭಟ್ ಹೇಳಿದ್ದಾರೆ. ಇದನ್ನು ತಕ್ಷಣವೇ ಹಾಜರುಪಡಿಸಲು ಎಸ್ಐಟಿ ಸೂಚನೆ ನೀಡಿದೆ.
ತನ್ನ ದೂರನ್ನು ದೃಢಪಡಿಸಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಹಾಜರುಪಡಿಸುವಂತೆ ಸುಜಾತಾ ಭಟ್‌ಗೆ ಎಸ್ಐಟಿ ನೋಟಿಸ್ ನೀಡಿದೆ. ಧರ್ಮಸ್ಥಳದೊಂದಿಗೆ ಇರುವ ಆಸ್ತಿ ವಿವಾದವೇ ಈ ರಂಪಾಟಕ್ಕೆ ಕಾರಣ ಎಂಬ ಅಂದಾಜು ವ್ಯಕ್ತವಾಗಿದೆ. ಆಸ್ತಿಯ ಸ್ವಾಮ್ಯ ಹಕ್ಕುಗಳನ್ನು ಸಾಬೀತುಪಡಿಸುವ ಪ್ರಯತ್ನದಲ್ಲಿರುವ ಸುಜಾತಾ, ತನಿಖೆಯಲ್ಲಿ ತಾನು ಜಯಗಳಿಸುವುದಾಗಿ ನಂಬಿಕೆ ವ್ಯಕ್ತಪಡಿಸಿದ್ದಾರೆ.
ಇತ್ತ, ವೈಯಕ್ತಿಕ ಬದುಕಿನಲ್ಲೂ ಸುಜಾತಾ ಭಟ್ ಏಕಾಂಗಿ ಸ್ಥಿತಿಯಲ್ಲಿದ್ದಾರೆ. ಈ ಹಿಂದೆ ತಿಮರೋಡಿ ಮನೆಯಲ್ಲಿ ಆಶ್ರಯ ಪಡೆದಿದ್ದ ಅವರು, ಈಗ ಅಲ್ಲಿಗೆ ಹೋಗದೇ ನೇರವಾಗಿ ಎಸ್ಐಟಿಯ ಎದುರು ಹಾಜರಾಗಿದ್ದಾರೆ. ತಿಮರೋಡಿ ಬಳಗವೇ ಈಗ ಸುಜಾತಾ ಭಟ್‌ನಿಂದ ಅಂತರ ಕಾಯ್ದುಕೊಂಡಿರುವುದು ಗಮನಾರ್ಹ.
“ಸುಜಾತಾ ಅವರ ಸುಳ್ಳು ಕಥೆಗಳನ್ನು ನಂಬಿ ನಾವು ಮೋಸಹೋದೆವು” ಎಂದು ಜಯಂತ್ ಟಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಅವರು ಸುಜಾತಾರನ್ನು ದೆಹಲಿವರೆಗೆ ಕರೆದೊಯ್ದ ಘಟನೆ ಕೂಡಾ ಸುದ್ದಿಯಾಗಿತ್ತು.
ಸುಜಾತಾ ಭಟ್ ಅವರ ಕಟ್ಟುಕತೆಗಳ ಪರಿಣಾಮವಾಗಿ ತಿಮರೋಡಿ ಬಳಗ ತೀವ್ರ ಮುಜುಗರಕ್ಕೆ ಒಳಗಾಗಿದೆ. ಹಿಂದೆ ಅವರ ಹೋರಾಟದಲ್ಲಿ ಬೆಂಬಲ ನೀಡಿದ್ದ ಬಳಗ, ಈಗ ಸಂಪೂರ್ಣವಾಗಿ ದೂರ ಉಳಿಯಲು ನಿರ್ಧರಿಸಿದೆ. ಇದರಿಂದ ಸುಜಾತಾ ಭಟ್ ಸಂಪೂರ್ಣ ಏಕಾಂಗಿಯಾಗಿ ಎಸ್ಐಟಿ ವಿಚಾರಣೆಗೆ ಒಳಗಾಗಿರುವುದು ಸ್ಪಷ್ಟವಾಗಿದೆ.
ಪರಿಕದ ಆಸ್ತಿ ವಿವಾದದ ನಿಜಾಸತ್ಯ ಪತ್ತೆಹಚ್ಚಲು ಎಸ್ಐಟಿ ಪೊಲೀಸರು ಶ್ರಮಿಸುತ್ತಿದ್ದಾರೆ. ಸುಜಾತಾ ಭಟ್ ನೀಡಿರುವ ದೂರುಗಳ ಸತ್ಯಾಸತ್ಯತೆ ಹಾಗೂ ಅನನ್ಯ ಭಟ್ ಎಂಬ ಪಾತ್ರದ ಅಸ್ತಿತ್ವದ ಬಗ್ಗೆ ಎಸ್ಐಟಿ ಶೀಘ್ರದಲ್ಲೇ ಅಂತಿಮ ನಿರ್ಧಾರಕ್ಕೆ ಬರಲಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ