
ದಕ್ಷಿಣ ಕನ್ನಡ (ಆ.21): ಮೈಸೂರು ಮುಡಾ ಕೇಸಿನಲ್ಲಿ ಸಿಎಂ ಸಿದ್ದರಾಮಯ್ಯಗೆ ಸಂಕಟ ತಂದಿದ್ದ ಸ್ನೇಹಮಯಿ ಕೃಷ್ಣ ಇದೀಗ ಧರ್ಮಸ್ಥಳದ ಕೇಸಿಗೂ ಎಂಟ್ರಿ ಕೊಟ್ಟಿದ್ದಾರೆ. ಧರ್ಮಸ್ಥಳ ಉಪ ಪೊಲೀಸ್ ಠಾಣೆಯಲ್ಲಿ ನಾಲ್ವರು ಜನರ ವಿರುದ್ಧ ದೂರು ಕೊಟ್ಟಿದ್ದು, ಕೂಡಲೇ ಎಫ್‌ಐಆರ್ ದಾಖಲಿಸಿ ಬಂಧನ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಆಗ್ರಹಿಸಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಿವೇಶನ ಹಂಚಿಕೆಯಲ್ಲಿ ಹಗರಣ ನಡೆದಿದೆ ಎಂದು ಸಿಎಂ ಸಿದ್ದರಾಮಯ್ಯ ಸೇರಿದಂತೆ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಹಾಗೂ ಸಿಎಂ ಭಾಮೈದ ಆಸ್ತಿ ಮಾರಿದ ದೇವರಾಜು ಸೇರಿದಂತೆ ನಾಲ್ಕೈದು ಜನರ ವಿರುದ್ಧ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ರಾಜಕೀಯ ಸಂಕಟ ಅನುಭವಿಸುವಂತಾಗಿತ್ತು. ಸಿಎಂ ಪತ್ನಿ ಪಾರ್ವತಿ ಹಾಗೂ ಸಿಎಂ ಭಾಮೈದನನ್ನೂ ಅವರನ್ನೂ ವಿಚಾರಣೆ ಮಾಡಲಾಗಿತ್ತು.
ಧರ್ಮಸ್ಥಳ ಧಾರ್ಮಿಕ ಕೇಂದ್ರ ಮತ್ತು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ಜನರ ನಂಬಿಕೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ, ಮತ್ತು ಎಂ.ಡಿ. ಸಮೀರ್ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಮೂವರನ್ನು ಕೂಡಲೇ ಬಂಧಿಸಿ ಸಮಾಜದ ಶಾಂತಿ ಕಾಪಾಡಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿದೆ. ಸದ್ಯ ಧರ್ಮಸ್ಥಳದ ಉಪ ಪೊಲೀಸ್ ನಿರೀಕ್ಷಕರು ದೂರು ಸ್ವೀಕರಿಸಿ, ಎನ್‌ಸಿಆರ್ (Non-Cognizable Report) ದಾಖಲಿಸಿಕೊಂಡಿದ್ದಾರೆ.
ಸುಳ್ಳು ಮಾಹಿತಿ ನೀಡಿ ಗೊಂದಲ ಸೃಷ್ಟಿಸಿದ ಆರೋಪ
ಈ ದೂರಿನಲ್ಲಿ, ಆರೋಪಿಗಳು ಸುಜಾತ ಭಟ್ ಎಂಬುವವರಿಗೆ ಅನನ್ಯ ಭಟ್ ಎಂಬ ಮಗಳು ಇಲ್ಲದಿದ್ದರೂ, ಸುಳ್ಳು ಕಥೆಗಳನ್ನು ಸೃಷ್ಟಿಸಿ ರಾಜ್ಯದ ಜನರಲ್ಲಿ ಗೊಂದಲ ಮೂಡಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಅನನ್ಯ ಭಟ್ ಎಂ.ಬಿ.ಬಿ.ಎಸ್. ಓದುತ್ತಿದ್ದು, ಧರ್ಮಸ್ಥಳದಲ್ಲಿ ಆಕೆಯ ಅಪಹರಣ, ಅತ್ಯಾ*ಚಾರ ಮತ್ತು ಕೊಲೆಯಾಗಿದೆ' ಎಂದು ಆರೋಪಿಸಲಾಗಿದೆ. ಅಲ್ಲದೆ, ಈ ಕೃತ್ಯದಲ್ಲಿ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮತ್ತು ಅವರ ತಮ್ಮ ಹರ್ಷೇಂದ್ರ ಹೆಗ್ಗಡೆಯವರು ಭಾಗಿಯಾಗಿದ್ದಾರೆ ಎಂಬ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ಅಪಪ್ರಚಾರ ಮಾಡಲಾಗಿದೆ ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.
ಮೃತ ಮಹಿಳೆಯ ಫೋಟೋ ದುರ್ಬಳಕೆ:
ಸ್ನೇಹಮಯಿ ಕೃಷ್ಣ ನೀಡಿದ ದೂರಿನ ಪ್ರಕಾರ, ಆರೋಪಿಗಳು 2007ರಲ್ಲಿ ಮೃತಪಟ್ಟ ಶ್ರೀಮತಿ ವಾಸಂತಿ ಎಂಬುವವರ ಫೋಟೋವನ್ನು ಅನನ್ಯ ಭಟ್ ಅವರದ್ದು ಎಂದು ಬಿಂಬಿಸಿದ್ದಾರೆ. ಇದೀಗ ಕೊನೆಗೆ ಅನನ್ಯ ಭಟ್ ಮೇಲೆ ಅತ್ಯಾ*ಚಾರ ಮತ್ತು ಕೊಲೆಯಾಗಿದೆ ಎಂಬಂತೆ ಸುಳ್ಳು ಹೇಳಿ, ಮೃತ ಮಹಿಳೆ ವಾಸಂತಿ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಎಲ್ಲಾ ಸುಳ್ಳು ಪ್ರಚಾರಗಳಿಂದ ರಾಜ್ಯದ ಲಕ್ಷಾಂತರ ಭಕ್ತರ ನಂಬಿಕೆ ಮತ್ತು ಗೌರವಕ್ಕೆ ದಕ್ಕೆ ತಂದಿದ್ದು, ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಹಾಗಾಗಿ, ಈ ಸುಳ್ಳು ಮಾಹಿತಿ ನೀಡಿ ಸಮಾಜದ ಸ್ವಾಸ್ಥ್ಯ ಕೆಡಿಸಿದ ಆರೋಪದ ಮೇಲೆ ಸುಜಾತ ಭಟ್, ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ, ಎಂ.ಡಿ. ಸಮೀರ್ ಮತ್ತು ಅವರೊಂದಿಗೆ ಶಾಮೀಲಾಗಿರುವ ಇತರರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಂಡು ಬಂಧಿಸಬೇಕು ಎಂದು ಸ್ನೇಹಮಯಿ ಕೃಷ್ಣ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಇದೀಗ ಮಹೇಶ್ ಶೆಟ್ಟಿ ತಿಮರೋಡಿಯನ್ನು ಉಡುಪಿ ಜಿಲ್ಲೆ ಬ್ರಹ್ಮಾವರ ಪೊಲೀಸರು ಬಂಧನ ಮಾಡಿದ್ದಾರೆ. ಕೆಲಹೊತ್ತು ವಿಚಾರಣೆ ಮಾಡಿ, ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ