ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿ ಸ್ವತಂತ್ರ ತನಿಖೆ, ಸರ್ಕಾರದ ಹಸ್ತಕ್ಷೇಪವಿಲ್ಲ: ಗೃಹಸಚಿವರ ಸ್ಪಷನೆ

Published : Aug 26, 2025, 01:45 PM IST
Karnataka Home Minister G Parameshwara (Photo/ANI)

ಸಾರಾಂಶ

ಧರ್ಮಸ್ಥಳ ಪ್ರಕರಣದ ತನಿಖೆಯ ಪ್ರಗತಿಯನ್ನು ಡಿಜಿಪಿ ಸಲೀಂ ಅವರು ಗೃಹ ಸಚಿವ ಪರಮೇಶ್ವರ್ ಅವರಿಗೆ ವಿವರಿಸಿದ್ದಾರೆ. ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದು, ಎಸ್ಐಟಿಗೆ ಸತ್ಯಾಸತ್ಯತೆ ಹೊರಗೆಡಹಲು ಜವಾಬ್ದಾರಿ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.  

ಬೆಂಗಳೂರು: ಧರ್ಮಸ್ಥಳ ಪ್ರಕರಣ ತನಿಖೆಯ ಪ್ರಗತಿ ಕುರಿತು ಡಿಜಿಪಿ ಸಲೀಂ ಅವರು ಶನಿವಾರ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿ ವಿವರ ನೀಡಿದ್ದಾರೆ. ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆದಿದ್ದು, ತನಿಖೆಯ ಪ್ರಸ್ತುತ ಹಂತದ ಮಾಹಿತಿ ಸಚಿವರಿಗೆ ಒದಗಿಸಲಾಗಿದೆ. ಇದಾದ ಬಳಿಕ ಗೃಹ ಸಚಿವ ಪರಮೇಶ್ವರ್ ಅವರು ಮಾಧ್ಯಮದೊಂದಿಗೆ ಮಾತನಾಡಿ, ಧರ್ಮಸ್ಥಳ ಪ್ರಕರಣವನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ತಿಳಿಸಿದ್ದಾರೆ. ಕೋಟ್ಯಾಂತರ ಭಕ್ತರು ಧರ್ಮಸ್ಥಳದ ಬಗ್ಗೆ ಆತಂಕ ವ್ಯಕ್ತಪಡಿಸಿರುವುದರಿಂದಲೇ ಸತ್ಯಾಸತ್ಯತೆ ಹೊರಬರಬೇಕೆಂಬ ಜವಾಬ್ದಾರಿಯನ್ನು ಎಸ್ಐಟಿಗೆ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಚಿನ್ನಯ್ಯ ಬಂಧನದ ಬಳಿಕ ಅದರ ಫಾಲೋಅಪ್ ಕ್ರಮಗಳು ಕೈಗೊಂಡಿವೆ. ತನಿಖೆ ಶೀಘ್ರವಾಗಿ ಮುಗಿದು ಸತ್ಯ ಹೊರಬರಲಿ ಎಂಬ ಪ್ರಯತ್ನವನ್ನು ಎಸ್ಐಟಿ ಮಾಡುತ್ತಿದೆ” ಎಂದು ಸಚಿವರು ತಿಳಿಸಿದರು.

ಎಸ್ಐಟಿ ಕಾರ್ಯವೈಖರಿ – ಸರ್ಕಾರದ ಹಸ್ತಕ್ಷೇಪವಿಲ್ಲ

ತಿಮರೋಡಿ ಮನೆಯ ಮೇಲಿನ ದಾಳಿ ಕುರಿತಂತೆ ಪ್ರತಿಕ್ರಿಯಿಸಿದ ಗೃಹ ಸಚಿವರು, “ಸರ್ಕಾರ ಎಸ್ಐಟಿಗೆ ಯಾವುದೇ ನಿರ್ದೇಶನ ನೀಡುವುದಿಲ್ಲ. ನಾವು ಕೇವಲ ಟರ್ಮ್ಸ್ ಆಫ್ ರೆಫರೆನ್ಸ್ ನೀಡಿದ್ದೇವೆ. ಯಾರನ್ನು ವಿಚಾರಣೆಗೊಳಪಡಿಸಬೇಕು, ಯಾರ ಮನೆ ಮೇಲೆ ಶೋಧ ನಡೆಸಬೇಕು ಎಂಬುದನ್ನು ಎಸ್ಐಟಿ ತನಿಖೆಯ ಆಧಾರದ ಮೇಲೆ ನಿರ್ಧರಿಸುತ್ತದೆ. ಅದರಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಎನ್‌ಐಎ ವಿಚಾರಣೆ ಬೇಡ

ಬಿಜೆಪಿಯವರು ಸರ್ಕಾರ ಕ್ಷಮೆ ಕೇಳಬೇಕು ಹಾಗೂ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಬೇಕು ಎಂದು ಆಗ್ರಹಿಸಿರುವ ಕುರಿತು ಮಾತನಾಡಿದ ಪರಮೇಶ್ವರ್, “ನಮ್ಮ ಎಸ್ಐಟಿ ಸಮರ್ಪಕವಾಗಿ ತನಿಖೆ ನಡೆಸುತ್ತಿದೆ. ವರದಿ ಬರುವ ಮುನ್ನವೇ ತನಿಖೆ ಸರಿಯಿಲ್ಲ ಎನ್ನುವುದು ತಾತ್ಸಾರ. ವರದಿ ಬಂದ ನಂತರ ಪರ–ವಿರೋಧ ಚರ್ಚೆ ನಡೆಯಬಹುದು. ಅದಾದ ಮೇಲೆ ಅಗತ್ಯ ತೀರ್ಮಾನಗಳನ್ನು ಸರ್ಕಾರ ಕೈಗೊಳ್ಳಲಿದೆ. ಈ ಹಂತದಲ್ಲಿ ಎನ್‌ಐಎಗೆ ಹಸ್ತಾಂತರಿಸುವ ಅಗತ್ಯವಿಲ್ಲ” ಎಂದು ಹೇಳಿದರು.

ಎಫ್‌ಎಸ್‌ಎಲ್ ವರದಿ ಕುರಿತು

ಧರ್ಮಸ್ಥಳ ಉತ್ಖನನ ಸಂಬಂಧ ಎಫ್‌ಎಸ್‌ಎಲ್ ವರದಿ ಯಾವಾಗ ಬರುತ್ತದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, “ನಾವು ವರದಿ ಬೇಗ ಬರಲಿ ಎಂದು ಸೂಚಿಸಿದ್ದೇವೆ. ಆದರೆ ರಾಸಾಯನಿಕ ವಿಶ್ಲೇಷಣೆಗೆ ಅನೇಕ ವಿಧಾನಗಳಿವೆ. ಶಾರ್ಟ್‌ಕಟ್‌ನಲ್ಲಿ ಮಾಡಲಾಗುವುದಿಲ್ಲ. ಆದಷ್ಟು ಬೇಗ ವರದಿ ಬರಲಿ ಎಂಬುದೇ ನಮ್ಮ ಮನವಿ” ಎಂದರು.

ಒಳ ಮೀಸಲಾತಿ ಜಾರಿಗೆ ಆದೇಶ

ಇದೇ ವೇಳೆ ಪರಮೇಶ್ವರ್ ಅವರು ಒಳ ಮೀಸಲಾತಿ ಕುರಿತಂತೆ ಸ್ಪಷ್ಟನೆ ನೀಡುತ್ತಾ, “ಇಂದಿನಿಂದಲೇ ಒಳ ಮೀಸಲಾತಿ ಜಾರಿಯಾಗುತ್ತದೆ. 6%, 6% ಮತ್ತು 5% ಮೀಸಲಾತಿ ಆದೇಶ ಹೊರಬಂದಿದೆ. ಅದರ ಪ್ರಕಾರವೇ ನೇಮಕಾತಿ ಪ್ರಕ್ರಿಯೆಗಳು ನಡೆಯಲಿವೆ” ಎಂದು ಹೇಳಿದರು.

ಧರ್ಮಸ್ಥಳ ಭೇಟಿಯ ರಾಜಕೀಯ ವಿವಾದ

ಕಾಂಗ್ರೆಸ್ ನಾಯಕರು ಧರ್ಮಸ್ಥಳಕ್ಕೆ ತೆರಳಿಲ್ಲ ಎಂಬ ಪ್ರಶ್ನೆಗೆ ಪರಮೇಶ್ವರ್ ತೀವ್ರವಾಗಿ ಪ್ರತಿಕ್ರಿಯಿಸಿ, “ನಮಗೆ ಅನಿಸಿದಾಗ ನಾವು ಹೋಗುತ್ತೇವೆ. ಮಂಜುನಾಥನ ದರ್ಶನ ಮಾಡಲು ಬಿಜೆಪಿ ನಾಯಕರ ಅನುಮತಿ ಬೇಕೆ? ನನ್ನ ಹೆಸರು ಪರಮೇಶ್ವರ, ಮಂಜುನಾಥ – ಎರಡೂ ಒಂದೇ ಅರ್ಥ. ಧರ್ಮಸ್ಥಳದ ಪ್ರಶ್ನೆಯನ್ನು ರಾಜಕೀಯವಾಗಿಸುವ ಅಗತ್ಯವಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌