
ಬೆಳ್ತಂಗಡಿ: ನೂರಾರು ಶವ ಹೂತ ಪ್ರಕರಣ ಈಗ ಮತ್ತಷ್ಟು ಕುತೂಹಲ ಕೆರಳಿಸಿದ್ದು, ಪ್ರಕರಣದಲ್ಲಿ ಮತ್ತೊಂದು ಹೊಸ ಟ್ವಿಸ್ಟ್ ಎದುರಾಗಿದೆ. ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರ ವಿರುದ್ಧವೂ ಅಕ್ರಮವಾಗಿ ಶವ ಹೂತ ಆರೋಪ ಹೊರಿಸಲಾಗಿದೆ. ಭಾಸ್ಕರ್ ನಾಯ್ಕ್ ಎಂಬವರು ಬೆಳ್ತಂಗಡಿಯ ಎಸ್ಐಟಿ ಕಚೇರಿಗೆ ಬಂದು ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಹೊಸ ದೂರು ಸಲ್ಲಿಸಿದ್ದು, ಈ ಪ್ರಕರಣವು ಮತ್ತಷ್ಟು ತೀವ್ರತೆ ಪಡೆದುಕೊಂಡಿದೆ.
ದೂರುದಾರರ ಭಾಸ್ಕರ್ ನಾಯ್ಕ್ ಎಂಬವರ ಪ್ರಕಾರ, 2018ರಲ್ಲಿ ಉಜಿರೆಯ ಬಿಲ್ಲರೋಡಿ ಎಂಬಲ್ಲಿ ಅಕ್ರಮವಾಗಿ ಶವ ಹೂತಿರುವ ಕುರಿತು ಶಂಕೆ ವ್ಯಕ್ತವಾಗಿದೆ. ಸೋಂಪ ಅಂದರೆ ಬಾಲಕೃಷ್ಣ ಗೌಡ ಎಂಬ ವ್ಯಕ್ತಿಯ ಶವವನ್ನು ಜೇಸಿಬಿ ಯಂತ್ರದ ಮೂಲಕ ಮಣ್ಣಿನಡಿ ಹೂತಿರುವ ಅನುಮಾನ ವ್ಯಕ್ತವಾಗಿದ್ದು, ಈ ಕುರಿತು ತನಿಖೆ ನಡೆಸುವಂತೆ ದೂರುದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ದೂರುದಾರ ಭಾಸ್ಕರ್ ನಾಯ್ಕ್ ಅವರು, ಈ ಪ್ರಕರಣಕ್ಕೆ ಸಂಬಂಧಿಸಿದ ಸೂಕ್ತ ಸಾಕ್ಷ್ಯಗಳನ್ನು ನಾನು ತನಿಖಾ ಸಮಯದಲ್ಲಿ ಎಸ್ಐಟಿಗೆ ಒದಗಿಸುತ್ತೇನೆ. ಘಟನೆಯ ಸಮಯದಲ್ಲಿ ನಡೆದಿದ್ದ ಅಕ್ರಮ ಚಟುವಟಿಕೆಗಳ ಬಗ್ಗೆ ಸಾಕ್ಷ್ಯಾಧಾರಗಳಿವೆ ಎಂದು ತಿಳಿಸಿದ್ದಾರೆ. ಮಹೇಶ್ ಶೆಟ್ಟಿ ತಿಮರೋಡಿ ಅವರು ಸರ್ಕಾರಿ ಜಾಗದಲ್ಲಿ ಮರಗಳನ್ನು ಕಡಿದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯನ್ನು ಮಣ್ಣಿನಡಿಗೆ ಹಾಕಿ ಹೂತಿದ್ದಾರೆ ಎಂಬ ಗಂಭೀರ ಆರೋಪವೂ ದೂರುದಲ್ಲಿ ಪ್ರಸ್ತಾಪವಾಗಿದೆ. ಈ ಘಟನೆಯನ್ನು ಸ್ಥಳೀಯ ಕೆಲವು ಮಂದಿ ತಮ್ಮ ಕಣ್ಣುಗಳ ಮುಂದೆ ಕಂಡಿರುವುದಾಗಿ ದೂರುದಾರರು ಎಸ್ಐಟಿಗೆ ತಿಳಿಸಿರುವುದಾಗಿ ವರದಿಯಾಗಿದೆ.
ಬಿಲ್ಲರೋಡಿ ಎಂಬ ಪ್ರದೇಶದಲ್ಲಿ ಉತ್ಖನನ ನಡೆಸಿದರೆ ಶವ ಹೊರ ಬರುವ ಸಾಧ್ಯತೆ ಇದೆ. ಆದ್ದರಿಂದ ತಕ್ಷಣ ಕ್ರಮ ಕೈಗೊಂಡು ನಿಜಾಸತ್ಯ ಹೊರತರುವಂತೆ ವಿನಂತಿಸುತ್ತೇವೆ” ಎಂದು ದೂರುದಾರರು ಎಸ್ಐಟಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಪ್ರಕರಣವು ಈಗ ಸಾರ್ವಜನಿಕ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದ್ದು, ಎಸ್ಐಟಿ ಅಧಿಕಾರಿಗಳು ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂಬ ಒತ್ತಾಯವು ಹೆಚ್ಚುತ್ತಿದೆ. ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಹೊರಸಲಾಗಿರುವ ಈ ಹೊಸ ದೂರು ನೂರಾರು ಶವ ಹೂತ ಪ್ರಕರಣಕ್ಕೆ ಹೊಸ ತಿರುವು ನೀಡುವ ಸಾಧ್ಯತೆ ಕಂಡುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ