
ಬೆಳ್ತಂಗಡಿ: ಧರ್ಮಸ್ಥಳದ ಅಸ್ಥಿಪಂಜರ ಪ್ರಕರಣ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಸದನದಲ್ಲಿ ನಡೆದ ಗಂಭೀರ ಚರ್ಚೆಯ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ಸಹೋದ್ಯೋಗಿಗಳಿಗೆ ಪ್ರಮುಖ ಸೂಚನೆ ನೀಡಿದ್ದಾರೆ. ಸಿಎಂ ಅವರು, "ಯಾವುದೇ ಸಚಿವರು ಅನಗತ್ಯ ಹೇಳಿಕೆ ನೀಡಬಾರದು. ತಮ್ಮ ವೈಯಕ್ತಿಕ ಅಭಿಪ್ರಾಯ ಮತ್ತು ಸಚಿವರ ಅಭಿಪ್ರಾಯದ ನಡುವೆ ವ್ಯತ್ಯಾಸವಿದೆ ಎಂಬುದನ್ನು ಗಮನದಲ್ಲಿರಿಸಿಕೊಳ್ಳಬೇಕು. ಸರ್ಕಾರದ ನಿಲುವು ವಿಧಾನಸೌಧದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಗೃಹ ಸಚಿವ ಪರಮೇಶ್ವರ್ ಈ ವಿಷಯದಲ್ಲಿ ಮುಂಚೂಣಿ ವಹಿಸಿ ಉತ್ತರಿಸಬೇಕು, ಉಳಿದ ಸಚಿವರು ಹೇಳಿಕೆ ನೀಡುವುದನ್ನು ದೂರವಿರಬೇಕು" ಎಂದು ಎಚ್ಚರಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಸಚಿವೆಯಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಧರ್ಮಸ್ಥಳ ಪ್ರಕರಣಕ್ಕೆ ಯಾವುದೇ ಕಳಂಕ ಬಾರದಂತೆ ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು. ಅವರು, "ಗೃಹ ಸಚಿವರು ಈಗಾಗಲೇ ಉತ್ತರ ನೀಡಿದ್ದಾರೆ. ಶೀಘ್ರದಲ್ಲೇ ಸತ್ಯ ಹೊರಬರಲಿದೆ. ಧರ್ಮಸ್ಥಳದ ಹೆಸರಿನಲ್ಲಿ ಯಾರೂ ರಾಜಕೀಯ ಮಾಡುವಂತಿಲ್ಲ. ನಮ್ಮ ಸರ್ಕಾರ ಈ ವಿಷಯದಲ್ಲಿ ಗಂಭೀರವಾಗಿದೆ" ಎಂದರು.
ಇದೇ ವೇಳೆ, ಜನಾರ್ದನ ರೆಡ್ಡಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿ, "ರೆಡ್ಡಿ ಅವರು ಸಂಶೋಧನೆ ಮಾಡಿರಬಹುದು. ಆದರೆ ಅನಾಮಿಕ ವ್ಯಕ್ತಿ ಅಗೆಸುತ್ತಿದ್ದಾನೆ ಎಂದು ಪ್ರಶ್ನೆ ಮಾಡುವುದರಿಂದ ಸತ್ಯ ಬದಲಾಗುವುದಿಲ್ಲ. ನಮ್ಮ ಸಮಾಜದ ಪರವಾಗಿ ನಾವೆಲ್ಲರೂ ಸೇರಿ ಚರ್ಚಿಸುತ್ತಿದ್ದೇವೆ" ಎಂದು ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು ನೀಡಿದರು.
ಧರ್ಮಸ್ಥಳದ ವಿಷಯ ರಾಜ್ಯವ್ಯಾಪಿ ಚರ್ಚೆಯಲ್ಲಿರುವ ಹಿನ್ನೆಲೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಪ್ರತಿಕ್ರಿಯಿಸಿ, "ಧರ್ಮಸ್ಥಳದ ವಿಚಾರದಲ್ಲಿ ಎಲ್ಲರೂ ಎಸ್‌ಐಟಿ ತನಿಖೆಯನ್ನು ಒಪ್ಪಿಕೊಂಡಿದ್ದಾರೆ. ವೀರೇಂದ್ರ ಹೆಗ್ಗಡೆ ಅವರೂ ತನಿಖೆಗೆ ಬೆಂಬಲ ನೀಡಿದ್ದಾರೆ. ಆದರೆ ಬಿಜೆಪಿಯವರು ಇದನ್ನು ರಾಜಕೀಯ ಮಾಡಲು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಒಳಗೆ ಷಡ್ಯಂತ್ರ ನಡೆದಿದೆ ಎಂದು ಆರೋಪಿಸುವುದು ಸುಳ್ಳು. ನಾವು ಕೂಡ ಧರ್ಮಸ್ಥಳ ಪರವಾಗಿ ಇದ್ದೇವೆ ಮತ್ತು ಸತ್ಯ ಹೊರಬರುವಂತೆ ಬಯಸುತ್ತೇವೆ" ಎಂದು ಹೇಳಿದರು.
"ಸೌಜನ್ಯ ಪ್ರಕರಣದಲ್ಲಿಯೂ ಇದೇ ರೀತಿಯಾಗಿ ರಾಜಕೀಯ ಮಾಡಲಾಗುತ್ತಿದೆ. ದಾಖಲೆಗಳಿದ್ದರೆ ಬಂದು ಮಂಡಿಸಬಹುದು. ಪಾಕಿಸ್ತಾನದ ಟಿವಿಯಲ್ಲಿ ಪ್ರಸಾರವಾದ ವಿಷಯಗಳನ್ನು ಉಲ್ಲೇಖಿಸುವುದರಿಂದ ಏನೂ ಪ್ರಯೋಜನ ಇಲ್ಲ. ಮಾನ್ಯ ಗೃಹ ಸಚಿವರು ಸದನದಲ್ಲಿ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ತನಿಖೆಯ ಮೂಲಕ ಎಲ್ಲವೂ ಬಹಿರಂಗವಾಗಲಿದೆ" ಎಂದು ಹೇಳಿದರು.
ಧರ್ಮಸ್ಥಳದ ಪ್ರಕರಣ ಬೆಳಕಿಗೆ ಬಂದ ನಂತರ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ತೀವ್ರ ಆರೋಪಗಳನ್ನು ಮಾಡುತ್ತಿರುವುದನ್ನು ಕಾಂಗ್ರೆಸ್ ಶಾಸಕ ಗೋಪಾಲಕೃಷ್ಣ ಗಂಭೀರವಾಗಿ ಟೀಕಿಸಿದರು. "ಎಸ್‌ಐಟಿ ತನಿಖೆ ನಡೆಯುತ್ತಿರುವಾಗ ಮೌನವಾಗಿದ್ದ ಬಿಜೆಪಿ ನಾಯಕರು, ಈಗ ರಾಜಕೀಯ ಲಾಭಕ್ಕಾಗಿ ವಿಷಯವನ್ನು ಬೇರೆ ದಾರಿಗೆ ತಿರುಗಿಸಲು ಯತ್ನಿಸುತ್ತಿದ್ದಾರೆ. ಧರ್ಮಸ್ಥಳ ಪ್ರಕರಣದ ಬಗ್ಗೆ ಸರ್ಕಾರ ಗಂಭೀರವಾಗಿದ್ದು, ತನಿಖೆ ಸತ್ಯವನ್ನು ಹೊರಹಾಕಲಿದೆ" ಎಂದು ಅವರು ಸ್ಪಷ್ಟಪಡಿಸಿದರು.
ಧರ್ಮಸ್ಥಳ ಅಸ್ಥಿಪಂಜರ ಪ್ರಕರಣ ರಾಜ್ಯ ರಾಜಕೀಯದಲ್ಲಿ ಸಂವೇದನಾಶೀಲ ವಿಷಯವಾಗಿ ಹೊರಹೊಮ್ಮಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಹಿಡಿದು ಸಚಿವರು ಹಾಗೂ ಶಾಸಕರವರೆಗೂ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಸರ್ಕಾರ ಧರ್ಮಸ್ಥಳದ ಗೌರವವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದು, ಈ ಪ್ರಕರಣದ ಬಗ್ಗೆ ಅಂತಿಮ ಸತ್ಯವು ಶೀಘ್ರದಲ್ಲೇ ತನಿಖೆಯ ಮೂಲಕ ಹೊರಬರುವ ನಿರೀಕ್ಷೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ