ಧರ್ಮಸ್ಥಳ ಶೋಧಕಾರ್ಯ ವೇಳೆ ಗೊಂದಲ: ಎಸಿ ಸ್ಟೆಲ್ಲಾ ವರ್ಗೀಸ್ ನಡೆಗೆ ಎಸ್ಐಟಿ ಅಸಮಾಧಾನ

Published : Aug 05, 2025, 11:57 AM IST
DHARMASTALA SIT INVSTIGATION 02

ಸಾರಾಂಶ

ಧರ್ಮಸ್ಥಳದಲ್ಲಿ ನಡೆಯುತ್ತಿರುವ ಶವಗಳ ಶೋಧ ಕಾರ್ಯ ಹೊಸ ತಿರುವು ಪಡೆದುಕೊಂಡಿದೆ. ನಿಗದಿತ ಸ್ಥಳ ಬಿಟ್ಟು ಬೇರೆಡೆ ಮಹಜರು ನಡೆಸಿದ ಎಸಿ ಸ್ಟೆಲ್ಲಾ ವರ್ಗೀಸ್ ಕ್ರಮಕ್ಕೆ ಎಸ್ಐಟಿ ಅಸಮಾಧಾನ ವ್ಯಕ್ತಪಡಿಸಿದೆ. ಒಂದೂವರೆ ವರ್ಷ ಹಿಂದಿನ ಪುರುಷನ ಅಸ್ಥಿಪಂಜರ ಪತ್ತೆಯಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.

ಬೆಳ್ತಂಗಡಿ: ಬಹುಚರ್ಚಿತ ಧರ್ಮಸ್ಥಳ ಶವಗಳನ್ನು ಹೂತಿಟ್ಟ ಶೋಧಕಾರ್ಯ ಪ್ರಕರಣದಲ್ಲಿ ಸಹಾಯಕ ಆಯುಕ್ತೆ (ಎಸಿ) ಸ್ಟೆಲ್ಲಾ ವರ್ಗೀಸ್ ಹಾಗೂ ವಿಶೇಷ ತನಿಖಾ ತಂಡ (ಎಸ್ಐಟಿ) ನಡುವಿನ ಗೊಂದಲ ಮತ್ತೊಮ್ಮೆ ಬೆಳಕಿಗೆ ಬಂದಿದೆ. ನಿನ್ನೆ ಶೋಧಕಾರ್ಯಕ್ಕಾಗಿ ನಿಗದಿಪಡಿಸಿದ 11ನೇ ಪಾಯಿಂಟ್ ಬಿಟ್ಟು, ಪುತ್ತೂರು ಉಪ ವಿಭಾಗ ಎಸಿ ಸ್ಟೆಲ್ಲಾ ವರ್ಗೀಸ್ ಹೊಸ ಸ್ಥಳದಲ್ಲಿ ಮಹಜರು ನಡೆಸಲು ಸೂಚಿಸಿದ ಕ್ರಮಕ್ಕೆ ಎಸ್ಐಟಿ ಅಸಮಾಧಾನ ವ್ಯಕ್ತಪಡಿಸಿದೆ.

ಈ ಹೊಸ ಸ್ಥಳದಲ್ಲಿ ಭೂಮಿಯ ಮೇಲ್ಮೈಯಲ್ಲೇ ಒಬ್ಬ ಪುರುಷನ ಸಂಪೂರ್ಣ ಅಸ್ಥಿಪಂಜರ ಪತ್ತೆಯಾಗಿದೆ. ಫಾರೆನ್ಸಿಕ್ ತಂಡದ ಪ್ರಾಥಮಿಕ ಅಂದಾಜಿನ ಪ್ರಕಾರ, ಮೃತ ವ್ಯಕ್ತಿ ಒಂದೂವರೆ ವರ್ಷಗಳ ಹಿಂದೆ ಸಾವನ್ನಪ್ಪಿರಬಹುದಾಗಿದೆ. ಅಸ್ಥಿಪಂಜರದ ಜೊತೆಗೆ ಪುರುಷನ ಉಡುಪು ಮತ್ತು ಹಗ್ಗ ಪತ್ತೆಯಾಗಿದ್ದು, ಆತ್ಮ1ಹತ್ಯೆಯ ಶಂಕೆ ವ್ಯಕ್ತವಾಗಿದೆ.

ಈ ಸಂಬಂಧ ಎಸ್ಐಟಿ, ಇದು ಧರ್ಮಸ್ಥಳ ಪೊಲೀಸ್ ಠಾಣೆಯ ವ್ಯಾಪ್ತಿಗೆ ಸೇರಿದ ‘ಅನಾಮಿಕ ಸಾವು’ (UDR) ಪ್ರಕರಣವಾಗಿದ್ದು,  ಕಾರ್ಯಾಚರಣೆ ನಿಯಮಗಳಡಿ ಬರುವುದಿಲ್ಲ ಎಂಬ ವಾದಿಸಿದೆ. ಭೂಮಿಯ ಮೇಲ್ಭಾಗದಲ್ಲೇ ಪತ್ತೆಯಾದ ಈ ಅಸ್ಥಿಪಂಜರವನ್ನೂ ಸ್ಥಳೀಯ ಪೊಲೀಸ್ ಠಾಣೆಯೇ ಕಾನೂನಿನ ಪ್ರಕಾರ ನಿರ್ವಹಿಸಬೇಕಾಗಿತ್ತು. ಮೃತನ ಗುರುತು ಹಾಗೂ ಸಾವಿನ ಕಾರಣ ಪತ್ತೆಹಚ್ಚಿ, ಅಗತ್ಯ ಕಾನೂನು ಕ್ರಮ ಕೈಗೊಳ್ಳುವ ಜವಾಬ್ದಾರಿ ಧರ್ಮಸ್ಥಳ ಪೊಲೀಸ್ ಠಾಣೆಯದ್ದಾಗಿದೆ.

ಆದರೆ, ಅನಾಮಿಕ ದೂರುದಾರ ಈ ಸ್ಥಳವನ್ನು ತೋರಿಸಿದ್ದರಿಂದ, ಎಸಿ ಸ್ಟೆಲ್ಲಾ ವರ್ಗೀಸ್ ಅವರ ಸೂಚನೆಯ ಮೇರೆಗೆ ಮಹಜರು ನಡೆಸಲಾಯಿತು. ಈ ಕ್ರಮದ ವೇಳೆ ಎಸ್ಐಟಿ ಮತ್ತು ಎಸಿ ಸ್ಟೆಲ್ಲಾ ವರ್ಗೀಸ್ ನಡುವಿನ ಗೊಂದಲ ಕೆಲವು ಕಾಲ ಮುಂದುವರೆಯಿತು. ಅಂತಿಮವಾಗಿ ಎಸಿ ಸ್ಟೆಲ್ಲಾ ವರ್ಗೀಸ್ ಸೂಚನೆಯಂತೆ ಅಸ್ಥಿಪಂಜರವನ್ನು ವಶಕ್ಕೆ ಪಡೆದು ಅಗತ್ಯ ದಾಖಲೆ ಪ್ರಕ್ರಿಯೆಗಳು ಪೂರ್ಣಗೊಳಿಸಲಾಯಿತು.

ಅನಾಮಿಕ ದೂರುದಾರನ ಪ್ರಕಾರ, 1998 ರಿಂದ 2014 ರವರೆಗೆ ಧರ್ಮಸ್ಥಳದ ಕಾಡಿನಲ್ಲಿ ಹೂತಿಟ್ಟ ಶವಗಳ ಶೋಧಕಾರ್ಯ ಕಾರ್ಯ ನಡೆಯುತ್ತಿದೆ. ಆದರೆ, ಒಂದೂವರೆ ವರ್ಷಗಳ ಹಿಂದೆ ಮೃತಪಟ್ಟ ಈ ಪುರುಷನ ದೇಹವೂ ಎಸ್ಐಟಿ ವಶಕ್ಕೆ ಬಂದಿದ್ದು, ಅದರೊಂದಿಗೆ ಕೆಲ ಕೊಳೆತ ದೇಹ ಭಾಗಗಳೂ ಪತ್ತೆಯಾಗಿವೆ. ಸದ್ಯ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಧರ್ಮಸ್ಥಳ ಪೊಲೀಸರು ಹಾಗೂ ಎಸ್ಐಟಿ ಮುಂದಿನ ಹಂತದ ತನಿಖೆಯನ್ನು ಮುಂದುವರೆಸಲಿದ್ದಾರೆ.

ಕೆಂಪು ಬಣ್ಣದ ಸೀರೆ ಪತ್ತೆ

ಇನ್ನು ಧರ್ಮಸ್ಥಳದಲ್ಲಿ ಆಗಸ್ಟ್ 4 ರಂದು ನಡೆದ ಆರನೇ ದಿನದ ಶೋಧಕಾರ್ಯ ಕಾರ್ಯಾಚರಣೆಯು ಹಲವಾರು ರಹಸ್ಯ ಪತ್ತೆಗಳೊಂದಿಗೆ ಚರ್ಚೆಗೆ ಕಾರಣವಾಯಿತು. ಆತ್ಮ1ಹತ್ಯೆಗೆ ಬಳಸಲಾಗಿದೆ ಎಂದು ಶಂಕಿಸಲಾಗಿರುವ ಕೆಂಪು ಬಣ್ಣದ ಸೀರೆ ಒಂದು ಮರದಲ್ಲಿ ಪತ್ತೆಯಾಗಿದೆ. ಇದಲ್ಲದೆ, ಮಣ್ಣಿನೊಳಗೆ ಹೂತು ಹಾಕಲಾಗಿದ್ದ ಗಂಡಸಿನ ಬಟ್ಟೆಗಳು ತುಂಡು-ತುಂಡಾಗಿ ಪತ್ತೆಯಾಗಿವೆ.

ಅದೇ ವೇಳೆ, ಯಾವುದೇ ಹಾನಿಯಾಗದ ಗಂಡಸಿನ ತಲೆ ಬುರುಡೆ ಹಾಗೂ ಸಂಪೂರ್ಣ ಬೆನ್ನು ಮೂಳೆ ಪತ್ತೆಯಾಗಿದೆ. ಸ್ಥಳದಿಂದ ಒಟ್ಟು 140 ಕ್ಕೂ ಹೆಚ್ಚು ಕಳೇಬರದ ಅವಶೇಷಗಳನ್ನು ಬಿಡಿಬಿಡಿಯಾಗಿ ಸಂಗ್ರಹಿಸಲಾಗಿದೆ. ಪತ್ತೆಯಾದ ಎಲ್ಲಾ ಮೂಳೆ ಭಾಗಗಳಿಗೆ ಉಪ್ಪು ಹಾಕಿ ಶೇಖರಣೆ ಮಾಡಲಾಗಿದ್ದು, ನಂತರ ಅವನ್ನು ಮಣಿಪಾಲ ಕೆಎಂಸಿ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ.

ನಿನ್ನೆ ಪತ್ತೆಯಾದ ಸ್ಥಳವನ್ನು ಪಾಯಿಂಟ್ ನಂ. 14 ಎಂದು ಗುರುತಿಸಲಾಗಿದೆ. ಇಂದಿನ ಕಾರ್ಯಾಚರಣೆಗೆ ಎಸ್ಐಟಿ ಪಾಯಿಂಟ್ ನಂ. 11 ರಿಂದ ಪ್ರಾರಂಭಿಸಲು ಯೋಜನೆ ಹಾಕಿಕೊಂಡಿದ್ದರೂ, ಕೊನೆಯ ಕ್ಷಣದಲ್ಲಿ ಸ್ಥಳ ಬದಲಾವಣೆ ನಡೆಯಬಹುದೇ ಎಂಬ ಕುತೂಹಲ ಸೃಷ್ಠಿಯಾಗಿದೆ. ಶೋಧಕಾರ್ಯ ಕಾರ್ಯಾಚರಣೆಯ ಪ್ರತಿದಿನವೂ ಹೊಸ ಬೆಳವಣಿಗೆಗಳು ಹೊರಬರುತ್ತಿರುವುದರಿಂದ, ಮುಂದಿನ ಹಂತದಲ್ಲಿ ಇನ್ನೂ ಎಷ್ಟು ಪ್ರಮುಖ ಪತ್ತೆಗಳು ನಡೆಯಲಿವೆ ಎಂಬುದನ್ನು ಕಾದು ನೋಡಬೇಕಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌