ಧರ್ಮಸ್ಥಳ ಬುರುಡೆ ಕೇಸ್‌: ಬೆಳ್ತಂಗಡಿ ಕೋರ್ಟ್‌ಗೆ ಪ್ರದೀಪ್‌ ಸಾಕ್ಷ್ಯ ದಾಖಲು

Published : Sep 13, 2025, 01:09 AM IST
Dharmasthala Controversy

ಸಾರಾಂಶ

ಎಸ್‌ಐಟಿ ತನಿಖೆ ವೇಳೆಯೂ ಪ್ರದೀಪ್‌ನಿಂದ ಪ್ರಮುಖ ಮಾಹಿತಿ ಅಥವಾ ಘಟನೆಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಪಡೆಯಲಾಗಿತ್ತು. ಬಿಎನ್ಎಸ್‌ 183ರ ಅಡಿ ನ್ಯಾಯಾಧೀಶರ ಎದುರು ಪ್ರದೀಪ್ ಹೇಳಿಕೆ ದಾಖಲಿಸಲಾಗಿದೆ.

ಮಂಗಳೂರು/ ಬೆಳ್ತಂಗಡಿ (ಸೆ.13): ಧರ್ಮಸ್ಥಳ ಗ್ರಾಮದ ತಲೆಬುರುಡೆ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡ(ಎಸ್ಐಟಿ) ಬೆಳ್ತಂಗಡಿ ಕಚೇರಿಗೆ ಶುಕ್ರವಾರವೂ ಮೂರು ಮಂದಿ ಆಗಮಿಸಿ ವಿಚಾರಣೆ ಎದುರಿಸಿದ್ದಾರೆ. ಸೌಜನ್ಯ ಪರ ಹೋರಾಟಗಾರರಾದ ಗಿರೀಶ್‌ ಮಟ್ಟೆಣ್ಣವರ್‌, ಪ್ರದೀಪ್‌ ಮತ್ತು ಜಯಂತ್‌ ಬೆಳಗ್ಗೆ ಎಸ್ಐಟಿ ಕಚೇರಿಗೆ ಆಗಮಿಸಿ ಸಂಜೆ ವರೆಗೆ ವಿಚಾರಣೆ ಎದುರಿಸಿದರು. ಈ ನಡುವೆ ಪ್ರದೀಪ್‌ ಅವರನ್ನು ಎಸ್ಐಟಿ ಪೊಲೀಸರು ಬೆಳ್ತಂಗಡಿ ಕೋರ್ಟ್‌ಗೆ ಹಾಜರುಪಡಿಸಿ ತಲೆಬುರುಡೆ ಪತ್ತೆ ಪ್ರಕರಣದಲ್ಲಿ ಸಾಕ್ಷ್ಯವನ್ನಾಗಿ ಪರಿಗಣಿಸಲು ಹೇಳಿಕೆ ಪಡೆಯಲಾಗಿದೆ. ಇವರಲ್ಲಿ ಪ್ರದೀಪ್‌ಗೆ ಐದನೇ ದಿನ, ಗಿರೀಶ್‌ ಮಟ್ಟೆಣ್ಣವರ್‌ ಎಂಟನೇ ದಿನ ಹಾಗೂ ಜಯಂತ್‌ಗೆ ಒಂಭತ್ತನೇ ದಿನದ ವಿಚಾರಣೆಯಾಗಿದೆ.

ಪ್ರದೀಪ್‌ ಸಾಕ್ಷ್ಯ ದಾಖಲು: ಸೌಜನ್ಯ ಮಾವ ವಿಠಲ ಗೌಡನ ಆಪ್ತ ಪ್ರದೀಪ್‌ನ್ನು ಸಂಜೆ ಬೆಳ್ತಂಗಡಿ ಕೋರ್ಟ್‌ಗೆ ಎಸ್‌ಐಟಿ ಪೊಲೀಸರು ಹಾಜರುಪಡಿಸಿದ್ದಾರೆ. ತಲೆಬುರುಡೆ ಪತ್ತೆಗೆ ಸಂಬಂಧಿಸಿದ ಸಾಕ್ಷ್ಯ ಹೇಳಿಕೆ ದಾಖಲಿಸಲು ಪ್ರದೀಪ್‌ನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ಈ ಪ್ರಕರಣದಲ್ಲಿ ಬುರುಡೆ ತಂದುಕೊಟ್ಟವರು ವಿಠಲ ಗೌಡ ಎಂಬ ಸಂಗತಿ ಸಾಬೀತುಪಡಿಸಲು ಪ್ರದೀಪ್ ಹೇಳಿಕೆ ಅಗತ್ಯವಾಗಿದೆ. ಎಸ್‌ಐಟಿ ತನಿಖೆ ವೇಳೆಯೂ ಪ್ರದೀಪ್‌ನಿಂದ ಪ್ರಮುಖ ಮಾಹಿತಿ ಅಥವಾ ಘಟನೆಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಪಡೆಯಲಾಗಿತ್ತು. ಬಿಎನ್ಎಸ್‌ 183ರ ಅಡಿ ನ್ಯಾಯಾಧೀಶರ ಎದುರು ಪ್ರದೀಪ್ ಹೇಳಿಕೆ ದಾಖಲಿಸಲಾಗಿದೆ.

ಮ್ಯಾಜಿಸ್ಟ್ರೇಟ್ ಮುಂದೆ ಸಾಕ್ಷಿ ನೀಡುವ ಹೇಳಿಕೆ ಇದಾಗಿದ್ದು, ಇದರ ಆಧಾರದಲ್ಲಿ ವಿಠಲ ಗೌಡನ ಬಂಧನಕ್ಕೂ ಎಸ್‌ಐಟಿ ವಾರೆಂಟ್ ಪಡೆಯುವ ಅವಕಾಶ ಇದೆ. ಧರ್ಮಸ್ಥಳ ಗ್ರಾಮದ ಬುರುಡೆ ಕೇಸ್‌ನಲ್ಲಿ ಎಸ್‌ಐಟಿ ಬಂಗ್ಲೆಗುಡ್ಡೆ ರಹಸ್ಯದ ಪತ್ತೆಗೆ ಮುಂದಾಗಿದೆ. ಬಂಗ್ಲೆಗುಡ್ಡೆಯಲ್ಲಿ ಗುರುವಾರ ಸಂಜೆ ಗೌಪ್ಯವಾಗಿ ಪರಿಶೀಲನೆ ನಡೆಸಲಾಗಿದೆ. ಎಸ್‌ಐಟಿ ಎಸ್ಪಿ ಸೈಮನ್‌ ನೇತೃತ್ವದಲ್ಲಿ ತಂಡ ಬಂಗ್ಲೆಗುಡ್ಡೆಗೆ ತೆರಳಿ ವಿಠಲ ಗೌಡ ಆರೋಪಿಸಿದಂತೆ ಬೇರೆ ತಲೆಬುರುಡೆ, ಅಸ್ಥಿಪಂಜರ ಇದೆಯಾ ಎಂದು ಪರಿಶೀಲನೆ ನಡೆಸಿ ವಾಪಸಾಗಿದೆ.

ಸೆ.16 ರಂದು ಚಿನ್ನಯ್ಯನ ಜಾಮೀನು ತೀರ್ಪು

ಬುರುಡೆ ಕೇಸ್‌ನಲ್ಲಿ ಆರೋಪಿ ಚಿನ್ನಯ್ಯನ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಬೆಳ್ತಂಗಡಿ ನ್ಯಾಯಾಲಯ ಆದೇಶವನ್ನು ಕಾಯ್ದಿರಿಸಿದ್ದು, ಸೆ. 16ರಂದು ಪ್ರಕಟಿಸುವುದಾಗಿ ಹೇಳಿದೆ. ಆರೋಪಿ ಚಿನ್ನಯ್ಯ ಜೈಲು ಸೇರಿದ ಬೆನ್ನಲ್ಲೇ ಆತನ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಚಿನ್ನಯ್ಯ ಪರ ಜಿಲ್ಲಾ ಕಾನೂನು ಪ್ರಾಧಿಕಾರದ ವಕೀಲರು ಬೆಳ್ತಂಗಡಿಯ ಹೆಚ್ಚುವರಿ ವ್ಯಾವಹಾರಿಕ ಮತ್ತು ಪ್ರಥಮ ದರ್ಜೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಎಸ್ಐಟಿ ಪರ ವಕೀಲರು ಜಾಮೀನಿಗೆ ಆಕ್ಷೇಪಣೆ ಸಲ್ಲಿಸಿದ್ದರು. ಆಕ್ಷೇಪಣೆ ಸಲ್ಲಿಕೆ ಬಳಿಕ ಎರಡೂ ಕಡೆಯ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಸೆ.16ಕ್ಕೆ ಆದೇಶ ಕಾಯ್ದಿರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!