ಧರ್ಮಸ್ಥಳ ಪ್ರಕರಣದಲ್ಲಿ ಹೊಸ ತಿರುವು: ಬಂಗ್ಲೆಗುಡ್ಡೆಯ 5 ಕಡೆ 5 ತಲೆಬುರುಡೆ, 100 ಮೂಳೆ ಪತ್ತೆ

Published : Sep 18, 2025, 05:55 AM IST
dharmasthala burude case

ಸಾರಾಂಶ

ಬಂಗ್ಲೆಗುಡ್ಡೆ ತಲೆಬುರುಡೆ ರಹಸ್ಯದ ಬಗ್ಗೆ ಹೈಕೋರ್ಟ್ ರಿಟ್ ಅರ್ಜಿಯಲ್ಲಿ ಸೌಜನ್ಯ ಮಾವ ವಿಠಲಗೌಡನ ಸಹೋದರ ಪುರಂದರಗೌಡ ಉಲ್ಲೇಖಿಸಿದ ಹಿನ್ನೆಲೆಯಲ್ಲಿ ಎಸ್‌ಐಟಿ ತಂಡ ತರಾತುರಿಯಲ್ಲಿ ಒಂದೇ ದಿನದಲ್ಲಿ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಸ್ಥಿಪಂಜರ ಅವಶೇಷಗಳ ಮಹಜರು ಪ್ರಕ್ರಿಯೆ ನಡೆಸಲು ಉದ್ದೇಶಿಸಿತ್ತು.

ಮಂಗಳೂರು/ ಬೆಳ್ತಂಗಡಿ (ಸೆ.18): ಧರ್ಮಸ್ಥಳ ಗ್ರಾಮದ ಬುರುಡೆ ಕೇಸ್‌ ಈಗ ಮತ್ತೊಂದು ಮಜಲು ಪಡೆದುಕೊಳ್ಳುತ್ತಿದೆ. ಸೌಜನ್ಯಾ ಮಾವ ವಿಠಲಗೌಡ ಹೇಳಿದಂತೆ ಬಂಗ್ಲೆಗುಡ್ಡೆಯಲ್ಲಿ ಬುಧವಾರ ಎಸ್‌ಐಟಿ ಶೋಧ ನಡೆಸಿದಾಗ ಭೂಮಿಯ ಮೇಲೆಯೇ ಮಾನವನ 5 ತಲೆ ಬುರುಡೆ, 100 ಮೂಳೆಗಳು ಪತ್ತೆ ಆಗಿವೆ. ವಿಠಲಗೌಡನ ಸಹೋದರ ಪುರಂದರಗೌಡ ಬಂಗ್ಲೆಗುಡ್ಡೆ ಬುರುಡೆ ರಹಸ್ಯ ಭೇದಿಸುವ ಸಂಬಂಧ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸೆ.19ಕ್ಕೆ ವಿಚಾರಣೆಗೆ ಬರಲಿದೆ. ಹಾಗಾಗಿ ಎಸ್‌ಐಟಿ ಶೋಧ ಕೈಗೊಂಡಿದ್ದು, ಶೋಧದ ಫಲಿತಾಂಶ ಕುರಿತಂತೆ ಹೈಕೋರ್ಟ್‌ಗೆ ವರದಿ ನೀಡುವ ಸಾಧ್ಯತೆ ಇದೆ.

5 ಸ್ಥಳದಲ್ಲಿ ಅಸ್ಥಿ ಪಂಚರ ಪತ್ತೆ

ಬಂಗ್ಲೆಗುಡ್ಡೆಯ ಐದು ಜಾಗಗಳಲ್ಲಿ ಬುಧವಾರ ಮಾನವ ಅಸ್ಥಿಪಂಜರ ಅವಶೇಷಗಳು ಪತ್ತೆಯಾಗಿದೆ. 5 ಮಾನವನ ತಲೆಬುರುಡೆ ಮತ್ತು 100 ಮೂಳೆಗಳ ಪತ್ತೆ ಆಗಿದ್ದು, ಅವುಗಳನ್ನು ಸುಕೊ ತಂಡದ ಸಹಾಯದಿಂದ ಎಸ್‌ಐಟಿ ಸಂಗ್ರಹಿಸಿದೆ. ವಿಶೇಷ ತನಿಖಾ ತಂಡ(ಎಸ್‌ಐಟಿ) ಪ್ರತ್ಯೇಕ ಮೂರು ತಂಡಗಳಾಗಿ ಶೋಧ ಕಾರ್ಯ ನಡೆಸಿತು. ದಿನಪೂರ್ತಿ ಶೋಧ ಕಾರ್ಯಾಚರಣೆ ನಡೆಸಿದ್ದು, ಇದು ಮರುದಿನ ಗುರುವಾರವೂ ಮುಂದುವರಿಯಲಿದೆ.

ಈ ಎಲ್ಲ ಅಸ್ಥಿಪಂಜರಗಳ ಅವಶೇಷಗಳು ಭೂಮಿಯ ಮೇಲ್ಭಾಗದಲ್ಲಿ ಪತ್ತೆಯಾಗಿದೆ. ದೊರೆತ ಮೂಳೆಗಳನ್ನು ಸೋಕೋ ತಂಡ ಸಂಗ್ರಹಿಸಿದೆ. ಅಲ್ಲಿ ಮಾನವ ದೇಹದ ಕೆಲವು ಭಾಗಗಳ ಅವಶೇಷಗಳು, ಬಟ್ಟೆಗಳ ತುಂಡು ಪತ್ತೆಯಾಗಿದೆ. ಸಂಜೆ ವೇಳೆ ಅಂಗಿ, ಪ್ಯಾಂಟ್‌, ಸೀರೆ, ಊರುಗೋಲು ಹಾಗೂ ಲೈಸೆನ್ಸ್‌ ಪತ್ತೆಯಾಗಿದ್ದು, ಅವುಗಳ ಮಹಜರು ಪ್ರಕ್ರಿಯೆ ನಡೆಸಲಾಗಿದೆ. ಸೌಜನ್ಯಾ ಮಾವ ವಿಠಲಗೌಡ ಎಸ್‌ಐಟಿ ತಂಡಕ್ಕೆ ವಿಚಾರಣೆ ವೇಳೆ ನೀಡಿದ ಮಾಹಿತಿಯಂತೆ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ದಿನಪೂರ್ತಿ ಈ ಮಹಜರು ಕಾರ್ಯ ನಡೆಸಲಾಗಿದೆ.

ಬಂಗ್ಲೆಗುಡ್ಡೆಯೊಳಗೆ ಪ್ಲಾಸ್ಟಿಕ್ ಪೈಪ್, ಉಪ್ಪು, ಪ್ಲಾಸ್ಟಿಕ್ ಬಾಕ್ಸ್‌ಗಳು, ಸೀಲ್ ಮಾಡುವ ಬಟ್ಟೆಗಳು, ಸೀಲ್ ಹಾಕುವ ಮೇಣದ ಜೊತೆ ಸೋಕೋ ಸಿಬ್ಬಂದಿ ತೆರಳಿದ್ದು, ಮಹಜರು ಕಾರ್ಯಕ್ಕೆ ಬಳಸುತ್ತಿದ್ದಾರೆ. ಎಸ್‌ಐಟಿ ತನಿಖಾಧಿಕಾರಿ ಎಸ್ಪಿ ಜಿತೇಂದ್ರ ದಯಾಮ ನೇತೃತ್ವದಲ್ಲಿ ಸೋಕೋ ತಂಡ, ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ, ಮೆಟಲ್ ಡಿಟೆಕ್ಟರ್ ತಂಡ ಸಾಥ್ ನೀಡುತ್ತಿದೆ. ಅರಣ್ಯ ಇಲಾಖೆ ಅನುಮತಿ ಪಡೆದು ಎಸ್‌ಐಟಿ ತಂಡ ನೇತ್ರಾವತಿ ಸ್ನಾನಘಟ್ಟದ ಬಳಿಯ ಅರಣ್ಯ ಪ್ರವೇಶದಿಂದಲೇ ಶೋಧ ಆರಂಭಿಸಿದೆ. ಸುಮಾರು 12 ಎಕರೆ ವಿಸ್ತೀರ್ಣದಲ್ಲಿರುವ ಬಂಗ್ಲೆಗುಡ್ಡೆ ಅರಣ್ಯವನ್ನು ಎಸ್ಐಟಿ ಪೂರ್ತಿ ಶೋಧಿಸಲಿದೆ.

ಶೋಧ ಪೂರ್ಣ ಬಳಿಕ ಹೈಕೋರ್ಟ್‌ಗೆ ವರದಿ?

ಬಂಗ್ಲೆಗುಡ್ಡೆ ತಲೆಬುರುಡೆ ರಹಸ್ಯದ ಬಗ್ಗೆ ಹೈಕೋರ್ಟ್ ರಿಟ್ ಅರ್ಜಿಯಲ್ಲಿ ಸೌಜನ್ಯ ಮಾವ ವಿಠಲಗೌಡನ ಸಹೋದರ ಪುರಂದರಗೌಡ ಉಲ್ಲೇಖಿಸಿದ ಹಿನ್ನೆಲೆಯಲ್ಲಿ ಎಸ್‌ಐಟಿ ತಂಡ ತರಾತುರಿಯಲ್ಲಿ ಒಂದೇ ದಿನದಲ್ಲಿ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಸ್ಥಿಪಂಜರ ಅವಶೇಷಗಳ ಮಹಜರು ಪ್ರಕ್ರಿಯೆ ನಡೆಸಲು ಉದ್ದೇಶಿಸಿತ್ತು. ಆದರೆ ಇಡೀ ಕಾಡಿನಲ್ಲಿ ಶೋಧ ಕಾರ್ಯ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ 2ನೇ ದಿನವೂ ಮುಂದುವರಿಸುವುದು ಅನಿವಾರ್ಯವಾಗಿದೆ.

ಬಂಗ್ಲೆಗುಡ್ಡೆ ತಲೆಬುರುಡೆ ರಹಸ್ಯ ಪತ್ತೆಗೆ ಇನ್ನೂ ಯಾವುದೇ ನಿರ್ದಿಷ್ಟ ಕ್ರಮ ಕೈಗೊಂಡಿಲ್ಲ ಎಂದು ಈ ಹಿಂದೆ ಪುರಂದರಗೌಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ಎಸ್ಐಟಿಗೆ ನೋಟಿಸ್ ಜಾರಿಗೊಳಿಸಿತ್ತು. ಹೈಕೋರ್ಟ್ ನೋಟಿಸ್ ಬೆನ್ನಲ್ಲೇ ಎಸ್‌ಐಟಿ ಬಂಗ್ಲೆಗುಡ್ಡೆ ಅಸ್ಥಿಪಂಜರ ಶೋಧಕ್ಕಿಳಿದಿದೆ. ಸೆ.18ರಂದು ಹೈಕೋರ್ಟ್‌ಗೆ ವರದಿ ಸಲ್ಲಿಸಬೇಕಾದ ಹಿನ್ನೆಲೆಯಲ್ಲಿ ಬಂಗ್ಲೆಗುಡ್ಡೆ ಅಸ್ಥಿಪಂಜರ ಶೋಧ ಕಾರ್ಯಾಚರಣೆಯನ್ನು ಬಿಗಿಗೊಳಿಸಲಾಗಿತ್ತು. ಶೋಧ ಕಾರ್ಯ ಪೂರ್ಣಗೊಂಡ ಬಳಿಕವೇ ಹೈಕೋರ್ಟ್‌ಗೆ ವರದಿ ಸಲ್ಲಿಸುವ ಸಾಧ್ಯತೆ ಇದೆ. ಹೈಕೋರ್ಟ್‌ಗೆ ಪುರಂದರಗೌಡ ಸಲ್ಲಿಸಿದ ರಿಟ್‌ ಅರ್ಜಿಯಲ್ಲಿ ಬಂಗ್ಲೆಗುಡ್ಡೆ ರಹಸ್ಯದ ಬಗ್ಗೆ ಹಲವು ವಿಚಾರಗಳನ್ನು ಉಲ್ಲೇಖಿಸಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ
'ನೀನೇ ಹಿಂದಿಯಲ್ಲಿ ಮಾತಾಡು..' ಕನ್ನಡದಲ್ಲಿ ಮಾತಾಡು ಎಂದ ಗ್ರಾಹಕನಿಗೆ ಹಿಂದಿವಾಲಾನ ದುರಹಂಕಾರ ನೋಡಿ ಹೇಗಿದೆ!